The Federal Karnataka Impact| ಜಾತಿ ಪ್ರಮಾಣ ಪತ್ರ ಗೊಂದಲಕ್ಕೆ ತೆರೆ ; ಮೂಲ ಜಾತಿ, ಪ್ರವರ್ಗದಡಿ ದಾಖಲೆ ವಿತರಿಸಲು ಆದೇಶ
ʼದ ಫೆಡರಲ್ ಕರ್ನಾಟಕʼ ಸರಣಿ ವರದಿ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ವಿಳಂಬ, ನೇಮಕಾತಿಗೆ ಅಡ್ಡಿಯಾಗಿರುವ ಅಂಶಗಳು, ಜಾತಿ ಪ್ರಮಾಣ ಪತ್ರ ಗೊಂದಲ ಇತ್ಯಾದಿ ವಿಚಾರಗಳನ್ನು ವಿಸ್ತೃತವಾಗಿ ಪ್ರಕಟಿಸಿತ್ತು.
ಸಾಂದರ್ಭಿಕ ಚಿತ್ರ
ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಲ್ಲಿ ಮೂಡಿದ್ದ ಜಾತಿ ಪ್ರಮಾಣ ಪತ್ರದ ಗೊಂದಲಗಳಿಗೆ ರಾಜ್ಯ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಈ ಬಗ್ಗೆ ದ ಫೆಡರಲ್ ಕರ್ನಾಟಕ ವರದಿಗೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದಂತಾಗಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಂವಿಧಾನದ ಅನುಚ್ಛೇಧ 15 ಮತ್ತು 16 ರ ಅನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ಕಲ್ಪಿಸಲು ಪ್ರವರ್ಗ- ಎ ರಲ್ಲಿ 16 ಜಾತಿಗಳು, ಪ್ರವರ್ಗ-ಬಿ ರಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ರಲ್ಲಿ 63 ಜಾತಿಗಳನ್ನು ಸೇರಿಸಿ ಮೂರು ಪ್ರವರ್ಗಗಳಾಗಿ ವರ್ಗೀಕರಿಸಲಾಗಿದೆ.
ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳಿಗೆ ಪ್ರವರ್ಗ- ಎ ಮತ್ತು ಪ್ರವರ್ಗ ಬಿನಲ್ಲಿ ಮೀಸಲಾತಿ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯ ಹೊರತುಪಡಿಸಿ ಉಳಿದ 98 ಜಾತಿಗಳು ಈಗಾಗಲೇ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಈ 98 ಜಾತಿಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ನಮೂದಿಸಿ ಜಾತಿ ಪ್ರಮಾಣ ಪತ್ರ ಪಡೆದಿವೆ. ಸಂಬಂಧಪಟ್ಟ ಜಾತಿಗಳು ಆಯಾ ಪ್ರವರ್ಗದಡಿ ಹೊಸದಾಗಿ ಜಾತಿ ಪ್ರಮಾಣ ಪತ್ರದೊಂದಿಗೆ ಮೀಸಲಾತಿ ಸೌಲಭ್ಯ ಪಡೆಯಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಾತಿ ಪ್ರಮಾಣ ಪತ್ರಗಳನ್ನು ಆಯಾ ಜಾತಿಗಳಿಗೆ ಸಂಬಂಧಿಸಿದ ಪ್ರವರ್ಗದಡಿಯಲ್ಲೇ ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ತಿಳಿಸಿದೆ.
ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುವವರು ಪ್ರವರ್ಗ ʼಎʼ ಅಥವಾ ಪ್ರವರ್ಗ ʼಬಿʼ ರಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದರೆ ತಮ್ಮ ಮೂಲ ಜಾತಿ ಹಾಗೂ ಪ್ರವರ್ಗವನ್ನು ʼಅರ್ಜಿ ನಮೂನೆ -1ʼ ರಲ್ಲಿ ನಮೂದಿಸಿ, ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಂತೆ ಆನ್‌ಲೈನ್ ಮೂಲಕ ಜಾತಿ ಪ್ರಮಾಣ ಪತ್ರ ಪಡೆಯಬೇಕು.
ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು, ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದವುಗಳ ಮೀಸಲಾತಿ) ಅಧಿನಿಯಮ 1990 ರ ತಿದ್ದುಪಡಿ ಅಧಿನಿಯಮ 2024ರಂತೆ ನಿಯಮಗಳನ್ನು ಪರಿಶೀಲಿಸಬೇಕು. ಅಭ್ಯರ್ಥಿಗಳ ಮೂಲ ಜಾತಿ ಕುರಿತು ಸ್ಥಳೀಯವಾಗಿ ವಿಚಾರಣೆ ನಡೆಸಿ, ಖಾತರಿಪಡಿಸಿಕೊಳ್ಳಬೇಕು. ಇದರ ಆಧಾರದ ಮೇಲೆ ಪ್ರವರ್ಗ ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶಿಸಲಾಗಿದೆ.
ಉದಾಹರಣೆಗೆ ಯಾವುದೇ ಒಬ್ಬ ಅಭ್ಯರ್ಥಿಯು ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಮೂಲ ಜಾತಿ ಹೊಲೆಯ ಎಂದು ಇದ್ದಲ್ಲಿ ಹೊಸದಾಗಿ ಪಡೆಯುವ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಹೊಲೆಯ, ಪ್ರವರ್ಗ-ಬಿ) ಎಂದು ಉಲ್ಲೇಖಿಸಿ, ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕಲಾವತಿ ಎಸ್.ವಿ ಆದೇಶಿಸಿದ್ದಾರೆ.
ಪ್ರವರ್ಗ ವಿಂಗಡಣೆ ಹೇಗೆ?
ಅಭ್ಯರ್ಥಿಯು ಕೊರಚ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ನಾಡಕಚೇರಿ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರದವರು ಸರ್ಕಾರದ ಆದೇಶದಂತೆ ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ (ಪ್ರವರ್ಗ-ಸಿ) ಎಂದು ದಾಖಲೆ ನೀಡಬೇಕು. ಒಂದು ವೇಳೆ ಅಭ್ಯರ್ಥಿಯು ಪರೆಯನ್, ಪರೆಯ ಎಂಬ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಜಾತಿ ಪ್ರಮಾಣ ಪತ್ರವನ್ನು ಪರೆಯನ್, ಪರೆಯ (ಪ್ರವರ್ಗ-ಬಿ) ಎಂದು ನೀಡಲು ತಂತ್ರಾಂಶವನ್ನು ಉನ್ನತೀಕರಿಸಬೇಕು ಎಂದು ತಿಳಿಸಿದೆ.
ಜಾತಿ ಪ್ರಮಾಣಪತ್ರ ನೀಡುವಲ್ಲಿ ಉಂಟಾಗಿದ್ದ ಗೊಂದಲಗಳ ಬಗ್ಗೆ ಪರಿಶಿಷ್ಟ ಸಮುದಾಯಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದರಿಂದ ವಿವಿಧ ನೇಮಕ ಪ್ರಾಧಿಕಾರಗಳು ಅಧಿಸೂಚನೆ ಹೊರಡಿಸಿದರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿ ಸಂಘಟನೆ ʼಅಕ್ಸರಾʼ ಆರೋಪಿಸಿತ್ತು. ದಲಿತಪರ ಸಂಘಟನೆಗಳು ಹಾಗೂ ಪರಿಶಿಷ್ಟ ಜಾತಿ ಸಮುದಾಯದ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜಾತಿ ಪ್ರಮಾಣಪತ್ರದಲ್ಲಿನ ಗೊಂದಲ ಬಗೆಹರಿಸುವಂತೆ ಮನವಿ ಮಾಡಿದ್ದರು.
ʼದ ಫೆಡರಲ್ ಕರ್ನಾಟಕʼ ಪ್ರಕಟಿಸಿದ ವಿಶೇಷ ಲೇಖನಗಳ ಲಿಂಕ್ ಇಲ್ಲಿವೆ
Delay in Recruitment Part -3 | ನೇಮಕಾತಿಗೆ ಸರ್ಕಾರ ವಿಳಂಬ; ಸ್ಪರ್ಧಾರ್ಥಿಗಳಲ್ಲಿ ವಯೋಮಿತಿ ಮೀರುವ ಆತಂಕ!
Delay in Recruitment Part-4 | ಒಳ ಮೀಸಲಾತಿ ಜಾರಿಯಾದರೂ ಸಮನ್ವಯದ ಕೊರತೆಯಿಂದ ನೇಮಕಾತಿ ಆಮೆಗತಿ !