Delay in Recruitment Part-4 | ಒಳಮೀಸಲಾತಿ ಜಾರಿಯಾದರೂ ಸಮನ್ವಯದ ಕೊರತೆಯಿಂದ ನೇಮಕಾತಿ ಆಮೆಗತಿ !
x

Delay in Recruitment Part-4 | ಒಳಮೀಸಲಾತಿ ಜಾರಿಯಾದರೂ ಸಮನ್ವಯದ ಕೊರತೆಯಿಂದ ನೇಮಕಾತಿ ಆಮೆಗತಿ !

ಡಿಪಿಎಆರ್‌ ಎಲ್ಲಾ ಇಲಾಖೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಸೂಚನೆ ನೀಡಿದರೂ ಇಲಾಖೆಗಳಲ್ಲಿ ಸಮನ್ವಯ ಕೊರತೆಯಿಂದಾಗಿ ನೇಮಕ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳೇ ಗೋಚರವಾಗುತ್ತಿಲ್ಲ.


Click the Play button to hear this message in audio format

ವಯೋನಿವೃತ್ತಿ, ಸ್ವಯಂ ನಿವೃತ್ತಿ, ರಾಜೀನಾಮೆ, ನಿಧನ ಮತ್ತಿತರ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳಿಗೆ ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಕಳೆದ ಒಂದು ವರ್ಷದಿಂದ ನೇಮಕಾತಿ ಪ್ರಕ್ರಿಯೆಗೆ ಒಳ ಮೀಸಲಾತಿ ತೊಡಕಾಗಿ, ಈಗ ಜಾರಿಯಾದರೂ ನೇಮಕಾತಿ ಮಾತ್ರ ಆಮೆಗತಿಯಲ್ಲಿದೆ.

ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್‌) ಎಲ್ಲಾ ಇಲಾಖೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಆದೇಶಿಸಿದರೂ ಸಮನ್ವಯದ ಕೊರತೆಯಿಂದಾಗಿ ವಿಳಂಬವಾಗುತ್ತಿದೆ.

ವಿವಿಧ ಸರ್ಕಾರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಹಾಗೂ ಪೊಲೀಸ್ ನೇಮಕಾತಿ ಪ್ರಾಧಿಕಾರಗಳು ನೇಮಕಾತಿ ಮಾಡಿಕೊಳ್ಳುತ್ತವೆ. ಖಾಲಿ ಹುದ್ದೆಯನ್ನು ಭರ್ತಿ ಮಾಡುವುದು ಈ ಸಂಸ್ಥೆಗಳ ಜವಾಬ್ದಾರಿ ಕೂಡ. ಆದರೆ, ಇಲಾಖೆಗಳು ತಮ್ಮಲ್ಲಿರುವ ಖಾಲಿ ಹುದ್ದೆಗಳ ಮಾಹಿತಿಯನ್ನು ಕೆಪಿಎಸ್‌ಸಿಗೆ ನೀಡಬೇಕು. ಆದರೆ, ಇಲಾಖೆಗಳು ಮತ್ತು ಕೆಪಿಎಸ್‌ಸಿ ನಡುವೆ ಸಮನ್ವಯತೆ ಕೊರತೆಯಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಇತ್ತೀಚಿನ ವರ್ಷದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದಲೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೂ ಕೆಪಿಎಸ್‌ಸಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಮಾತೃ ಸಂಸ್ಥೆಯಾಗಿದೆ.

ರಾಜ್ಯದಲ್ಲಿ ಒಟ್ಟು 42 ಇಲಾಖೆಗಳಿದ್ದು, ತಮ್ಮಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಮೀಸಲಾತಿ, ಒಳಮೀಸಲಾತಿ ಸೇರಿದಂತೆ ಇತರೆ ಸಂಪೂರ್ಣ ವಿವರಗಳನ್ನು ಕೆಪಿಎಸ್‌ಸಿಗೆ ಕಳುಹಿಸಿಕೊಡಬೇಕು. ಒಳಮೀಸಲಾತಿ ಜಾರಿಯಾಗಿ ಡಿಪಿಎಆರ್‌ ಸಹ ಎಲ್ಲಾ ಇಲಾಖೆಗಳಿಗೂ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ. ಆದರೂ ಇಲಾಖೆಗಳು ಮಾತ್ರ ಡಿಪಿಎಆರ್‌ ಸೂಚನೆಗೆ ಸೊಪ್ಪು ಹಾಕುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಇಲಾಖೆಗಳು ಏನು ಮಾಡಬೇಕು?

ಪ್ರತಿ ಇಲಾಖೆಗಳು ತಮ್ಮಲ್ಲಿರುವ ಬಿ, ಸಿ ಮತ್ತು ಡಿ ಗ್ರೂಪ್‌ಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿಯನ್ನು ಕ್ರೋಢೀಕರಿಸಬೇಕು. ಬಳಿಕ ಆ ಹುದ್ದೆಗಳಿಗೆ ಮೀಸಲಾತಿ ಮತ್ತು ಒಳಮೀಸಲಾತಿಯನ್ನು ಗುರುತಿಸಬೇಕು. ಪ್ರತಿ ಇಲಾಖೆಯು ಈ ಮಾಹಿತಿಯನ್ನು ಸಂಗ್ರಹಿಸಿ ಕೆಪಿಎಸ್‌ಸಿ ಮತ್ತು ಕೆಇಎಗೆ ಒದಗಿಸಬೇಕು. ಅಲ್ಲದೇ, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಬೇಕು. ಇಲಾಖೆಗಳು ಸಲ್ಲಿಸುವ ಪ್ರಸ್ತಾವನೆಗಳು ಮೀಸಲಾತಿ ನಿಯಮದಡಿ ಇದೆಯೋ? ಇಲ್ಲವೋ? ಎಂಬುದನ್ನು ಕೆಪಿಎಸ್ ಸಿ ಗಮನಿಸಲಿದೆ. ಎಲ್ಲದರ ಮಾಹಿತಿ ಕ್ರೋಢೀಕರಿಸಿ ನಂತರ ಅರ್ಜಿ ಆಹ್ವಾನಿಸಲಿದೆ. ಆದರೆ, ಇಲಾಖೆಗಳು ಪ್ರಾಥಮಿಕ ಹಂತದ ಕಾರ್ಯಗಳನ್ನು ಸಹ ಕೈಗೊಂಡಿಲ್ಲ ಎನ್ನಲಾಗಿದೆ.

ತಮ್ಮ ವ್ಯಾಪ್ತಿಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ಕಲೆಹಾಕುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಂಡಿಲ್ಲ. ಪ್ರಸ್ತಾವನೆ ಸಿದ್ದಪಡಿಸುವ ಕಾರ್ಯ ಮಾಡಿಲ್ಲ. ಇಲಾಖೆಯ ಮುಖ್ಯಸ್ಥರು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸದಿರುವುದೇ ಮುಂದಿನ ಹಂತಕ್ಕೆ ಹೋಗದಿರಲು ಕಾರಣ ಎಂದು ಹೇಳಲಾಗಿದೆ.

ರಾಜ್ಯದಲ್ಲಿ 2.76 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ

ರಾಜ್ಯ ಸರ್ಕಾರದಲ್ಲಿ ಸುಮಾರು 2.76 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತವೆ. ಬಹುತೇಕ ಇಲಾಖೆಗಳಲ್ಲೂ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾದ ಒತ್ತಡದಲ್ಲಿ ನೌಕರರಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಲೇ ಬಂದಿದೆ. ರಾಜ್ಯದಲ್ಲಿ ಎ ದರ್ಜೆಯ 16,017 ಹುದ್ದೆಗಳು ಖಾಲಿ ಇವೆ. ಬಿ ದರ್ಜೆಯ 16,734 ಹುದ್ದೆಗಳು ಖಾಲಿ ಇವೆ. ಸಿ ದರ್ಜೆಯ 1,66,021 ಹುದ್ದೆಗಳು ಖಾಲಿ ಇವೆ. ಡಿ ದರ್ಜೆಯ 77,614 ಹುದ್ದೆಗಳು ಖಾಲಿ ಇವೆ.

ಗೃಹ ಇಲಾಖೆಯಲ್ಲಿ 26,168, ಕಂದಾಯ ಇಲಾಖೆಯಲ್ಲಿ11,145, ಪಶು ಸಂಗೋಪನೆ ಇಲಾಖೆಯಲ್ಲಿ 10,755, ಸಮಾಜ ಕಲ್ಯಾಣ ಇಲಾಖೆಯಲ್ಲಿ 9,980, ಆರ್ಥಿಕ ಇಲಾಖೆ 9,536, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,334, ಕಾನೂನು ಇಲಾಖೆಯಲ್ಲಿ 7,853, ಕೃಷಿ ಇಲಾಖೆಯಲ್ಲಿ 6,773, ಅರಣ್ಯ ಇಲಾಖೆಯಲ್ಲಿ 6,337 ಸೇರಿದಂತೆ ವಿವಿಧ ಇಲಾಖೆಯಲ್ಲಿ 2.76 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ಮಾಡಿದ್ದ ಶಿಫಾರಸು ಅನ್ವಯ ಐದು ಪ್ರವರ್ಗಗಳ ಮೂರು ವರ್ಗಗಳಾಗಿ ವರ್ಗೀಕರಿಸಿ, ಶೇ.17 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ. ರಾಜ್ಯದಲ್ಲಿ ರಾಜ್ಯ ಸರ್ಕಾರಿ ನೌಕರರ ನೇಮಕಾತಿ ಪ್ರಕ್ರಿಯೆ ಮತ್ತೆ ಶುರುವಾಗಲಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಂಬಂಧ ನಿಯಮಾವಳಿ ಸಿದ್ದಪಡಿಸಬೇಕಾಗಿದೆ. ಇದಾದ ಬಳಿಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತೆ ಹೊಸ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸರ್ಕಾರಿ ನೌಕರರ ಮೂಲಗಳು ಹೇಳಿವೆ.

ಯಾವ್ಯಾವ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಯಾವ ಹಂತದಲ್ಲಿದೆ?

* ಭೂ ಮಾಪನ ಇಲಾಖೆಯು 650 ಭೂಮಾಪಕ ನೇಮಕಕ್ಕೆ ಕೆಪಿಎಸ್‌ಸಿ ಮೂಲಕ ಅಧಿಸೂಚನೆ ಹೊರಡಿಸಬೇಕಿದೆ.

* ಕೆಪಿಎಸ್‌ಸಿ ನಡೆಸುತ್ತಿರುವ 247 ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ

* ಗ್ರಾಮ ಪಂಚಾಯಿತಿ ಕಾರ್ಯದರ್ಶಿ(ಗ್ರೇಡ್-1) ವೃಂದದ ಕರಡು ಜೇಷ್ಠತಾ ಪಟ್ಟಿ ಪ್ರಕಟ, ಆಕ್ಷೇಪಣೆ ಪರಿಶೀಲನಾ ಹಂತದಲ್ಲಿದೆ.

* ಆರ್‌ಡಿಪಿಆರ್ ಇಲಾಖೆಯಿಂದ 212 ಗ್ರಾಮ ಪಂಚಾಯಿತಿ ಕಾರ್ಯದರ್ಶಿ, 298 ಗ್ರಾ.ಪಂ. ಕಾರ್ಯರ್ಶಿ ಗ್ರೇಡ್-2, 87 ಎಸ್‌ಡಿಎ ನೇಮಕಕ್ಕೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

* ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಪ್ರಾಥಮಿಕ ಶಾಲೆಗಳ 4,882 ಹಾಗೂ ಪ್ರೌಢಶಾಲೆಗಳ 385 ಹುದ್ದೆ ಸೇರಿ 5,267 ಹುದ್ದೆ ಭರ್ತಿ ಪ್ರಕ್ರಿಯೆ ಮುಂದುವರಿಸಬೇಕಿದೆ.

* ಸರ್ಕಾರಿ ಪಿಯು ಕಾಲೇಜುಗಳ 814 ಉಪನ್ಯಾಸಕರ ಹುದ್ದೆ ಭರ್ತಿಗೆ ಮೀಸಲಾತಿ ನಿಗದಿಪಡಿಸಬೇಕು.

ನೇಮಕಾತಿಗೆ ವಿಳಂಬ ಧೋರಣೆ : ಅಸಮಾಧಾನ

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವರ್ಷದಿಂದ ವರ್ಷಕ್ಕೆ ವಿಳಂಬವಾಗುತ್ತಿರುವುದು ಈಗ ದೊಡ್ಡ ವಿವಾದವಾಗಿ ಪರಿಣಮಿಸಿದೆ. ವಿವಿಧ ಇಲಾಖೆಗಳಲ್ಲಿನ ಸಾವಿರಾರು ಹುದ್ದೆಗಳು ಖಾಲಿಯಾಗಿದ್ದರೂ, ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಅಥವಾ ಪೂರ್ಣಗೊಳಿಸಲು ತಡ ಮಾಡುತ್ತಿರುವುದು ಉದ್ಯೋಗಾಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಯುವಕರು ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರ್ಕಾರದ ವಿಳಂಬ ಧೋರಣೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಇಲಾಖೆಗಳಲ್ಲಿ ನೇಮಕಾತಿ ಪ್ರಕಟಣೆ ಹೊರಬಿದ್ದರೂ ಪರೀಕ್ಷೆ, ಫಲಿತಾಂಶ ಮತ್ತು ಆಯ್ಕೆ ಆದೇಶಗಳ ನಡುವೆ ವರ್ಷಗಟ್ಟಲೆ ತಡವಾಗುತ್ತಿರುವುದು ಅಸಹನೆ ಉಂಟು ಮಾಡಿದೆ.

ಪಿಎಸ್‌ಐ ಉದ್ಯೋಗಾಕಾಂಕ್ಷಿ ಸಿ.ಎನ್‌.ಮಂಜುನಾಥ್‌ ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿ, ಸರ್ಕಾರದಿಂದ ಬಜೆಟ್ ಅನುಮೋದನೆ, ಆಡಳಿತಾತ್ಮಕ ಕ್ರಮಗಳು, ಮತ್ತು ನ್ಯಾಯಾಂಗ ವ್ಯಾಜ್ಯಗಳಂತಹ ಕಾರಣಗಳನ್ನು ಉಲ್ಲೇಖಿಸಿ ನೇಮಕಾತಿ ತಡವಾಗುತ್ತಿದೆ. ಆದರೆ ಈ ಕಾರಣಗಳು ವರ್ಷದಿಂದ ವರ್ಷಕ್ಕೆ ಮುಂದುವರಿಯುತ್ತಿದೆ. ಸರ್ಕಾರವು ಉದ್ದೇಶಪೂರ್ವಕ ನಿರ್ಲಕ್ಷ್ಯ ತೋರುತ್ತಿದೆ. ಸರ್ಕಾರ ಖಾಲಿ ಹುದ್ದೆಗಳನ್ನು ಉದ್ದೇಶಪೂರ್ವಕವಾಗಿ ಭರ್ತಿ ಮಾಡದೆ ನಿರುದ್ಯೋಗವನ್ನು ಹೆಚ್ಚಿಸುತ್ತಿದೆ. ಯುವಕರ ಕನಸುಗಳಿಗೆ ಸರ್ಕಾರವೇ ತಡೆಗೋಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವರ್ಷಗಟ್ಟಲೆ ಸಿದ್ಧತೆ ನಡೆಸುವ ಯುವಕರು ನೇಮಕಾತಿ ಪ್ರಕ್ರಿಯೆಯ ನಿಧಾನಗತಿ ಸರಿಯಲ್ಲ. ಕೆಲವರು ಪರೀಕ್ಷೆ ಬರೆದು ಫಲಿತಾಂಶಕ್ಕೂ ಕಾಯುತ್ತಾ ವಯಸ್ಸಿನ ಮಿತಿಯನ್ನು ದಾಟುತ್ತಿರುವ ಸ್ಥಿತಿಯೂ ಇದೆ. ನೇಮಕಾತಿಯ ವಿಳಂಬವು ಕೇವಲ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರವಲ್ಲ, ರಾಜ್ಯದ ಆಡಳಿತದ ಮೇಲೆಯೂ ಪರಿಣಾಮ ಬೀರಲಿದೆ ಎಂದು ಹೇಳಿದರು.

ಕೆಲಸದ ಪ್ರಗತಿಗೆ ಅಡ್ಡಿ

ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಅಭಾವ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಕಾರಣಗಳು ಸರ್ಕಾರಿ ಕೆಲಸಗಳ ಪ್ರಗತಿಗೆ ಅಡ್ಡಿಯಾಗಿವೆ. ಹುದ್ದೆಗಳ ಖಾಲಿಯಿಂದಾಗಿ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು ಅಭಿವೃದ್ಧಿ ವೇಗ ಕುಂದಿದೆ. ರಾಜ್ಯದ ಅಭಿವೃದ್ಧಿಯ ವೇಗ ಕಾಯ್ದುಕೊಳ್ಳಲು ಮತ್ತು ನಿರುದ್ಯೋಗ ತಡೆಗಟ್ಟಲು ಸರ್ಕಾರವು ತಕ್ಷಣ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸುವ ಅಗತ್ಯವಿದೆ.

67 ಅಧಿಸೂಚನೆಗಳ ಪ್ರಕಟ

ಕಳೆದ ಐದು ವರ್ಷಗಳಲ್ಲಿ ಕೆಪಿಎಸ್‌ಸಿ ಖಾಲಿ ಇರುವ ವಿವಿಧ ವೃಂದಗಳ 9,467 ಹುದ್ದೆಗಳಿಗೆ ನೇಮಕಾತಿಗಾಗಿ 67 ಅಧಿಸೂಚನೆಗಳನ್ನು ಹೊರಡಿಸಿದೆ. ಅದರಲ್ಲಿ 6,055 ಹುದ್ದೆಗಳು ಲಿಖಿತ ಪರೀಕ್ಷೆ, ಮೌಖಿಕ ಸಂದರ್ಶನ ಪೂರ್ಣಗೊಂಡಿವೆ. 2,850 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಬಾಕಿಯಿದೆ. ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಡುವಂತೆ ನೇಮಕಾತಿ ಪ್ರಾಧಿಕಾರಿಗಳಿಗೆ ಪ್ರಸ್ತಾವಗಳನ್ನು ಕಳುಹಿಸಿದರೂ ಅಧಿಸೂಚನೆ ಹೊರಡಿಸುವುದು, ಲಿಖಿತ ಪರೀಕ್ಷೆ, ಸಂದರ್ಶನ ಮತ್ತಿತರ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ಹುದ್ದೆಗಳ ಭರ್ತಿಗೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿದೆ ಎನ್ನುವ ಆರೋಪಗಳು ಸಹ ಕೇಳಿ ಬಂದಿವೆ.

ಆರ್ಥಿಕ ಮಿತವ್ಯಯ ಜಾರಿಯಲ್ಲಿದ್ದರೂ ನೇರ ನೇಮಕಾತಿ ಹುದ್ದೆಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಂದ ಸ್ವೀಕೃತವಾಗುವ ಪ್ರಸ್ತಾವಗಳನ್ನು ಪರಿಶೀಲಿಸಿ, ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ಮತ್ತು ಇಲಾಖೆಗೆ ನಿಗದಿಪಡಿಸಿರುವ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಅಗತ್ಯಕ್ಕನುಗುಣವಾಗಿ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಾಗುತ್ತಿದೆ ಎಂದು ಆರ್ಥಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

Read More
Next Story