Delay in Recruitment Part -2 | ಉದ್ಯೋಗಾಕಾಂಕ್ಷಿಗಳಿಗೆ ಚುನಾವಣೆ ಭೀತಿ; ಮೀಸಲಾತಿಗೆ ತಡೆ ಬಂದರೆ ನೇಮಕಾತಿ ಪ್ರಕ್ರಿಯೆಗೆ ಮತ್ತೆ ಗ್ರಹಣ
x

Delay in Recruitment Part -2 | ಉದ್ಯೋಗಾಕಾಂಕ್ಷಿಗಳಿಗೆ ಚುನಾವಣೆ ಭೀತಿ; ಮೀಸಲಾತಿಗೆ ತಡೆ ಬಂದರೆ ನೇಮಕಾತಿ ಪ್ರಕ್ರಿಯೆಗೆ ಮತ್ತೆ ಗ್ರಹಣ

ಕಳೆದ 10 ತಿಂಗಳಿನಿಂದ ಸ್ಥಗಿತವಾಗಿದ್ದ ಹೊಸ ನೇಮಕಾತಿಗಳಿಗೆ ಚಾಲನೆ ಸಿಕ್ಕಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದರೆ ನೇಮಕಾತಿ ಪ್ರಕ್ರಿಯೆ ನಡೆಯುವುದು ಅನುಮಾನ ಎಂಬುದು ಮನೆ ಮಾಡಿದೆ.


Click the Play button to hear this message in audio format

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವ ಮೂಲಕ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಉದ್ಯೋಗ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಒಂದೆಡೆ ಒಳ ಮೀಸಲಾತಿ ಪ್ರಶ್ನಿಸಿ ಅಲೆಮಾರಿ ಸಮುದಾಯ ಹೈಕೋರ್ಟ್‌ ಮೊರೆ ಹೋದರೆ, ಮತ್ತೊಂದೆಡೆ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಗೆ ಸಿದ್ಧತೆ ನಡೆಸಿರುವುರಿಂದ ನೇಮಕಾತಿ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.

ಒಳಮೀಸಲಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಮಾರು 80 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ರದ್ದುಪಡಿಸಿತ್ತು. ಒಳಮೀಸಲಾತಿ ಜಾರಿಯ ಬಳಿಕ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದೆ. ಈ ಹಿಂದೆ ರದ್ದುಪಡಿಸಿದ ಹುದ್ದೆಗಳು ಸೇರಿದಂತೆ ಹೊಸ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಸನ್ನದ್ಧವಾಗಿದೆ. ಆದಾಗ್ಯೂ, ಕೆಲ ಅಡ್ಡಿ ಆತಂಕಗಳು ಮುಂದುವರಿದಿವೆ.

ಸ್ಥಳೀಯ ಸಂಸ್ಥೆ ಚುನಾವಣೆ ಆತಂಕ

ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಜಿಬಿಎ (ಗ್ರೇಟರ್‌ ಬೆಂಗಳೂರು ಪ್ರಾಧಿಕಾರ) ಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ಒಂದು ವೇಳೆ ಚುನಾವಣೆ ಘೋಷಣೆಯಾದರೆ ನೇಮಕಾತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ಉದ್ಯೋಗಾಕಾಂಕ್ಷಿಗಳಲ್ಲಿ ಮನೆ ಮಾಡಿದೆ.

ರಾಜ್ಯ ಸರ್ಕಾರ ಒಂದೆಡೆ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಹಸಿರು ನಿಶಾನೆ ತೋರಿದೆ. ಇನ್ನೊಂದೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಯನ್ನೂ ಕೈಗೊಂಡಿದೆ. ಚುನಾವಣೆ ಘೋಷಣೆಗೆ ಮುನ್ನ ನೇಮಕಾತಿಗೆ ಅಧಿಸೂಚನೆ ಹೊರಡಿಸದೇ ಹೋದರೆ ಮತ್ತೆ ನೇಮಕಾತಿ ಪ್ರಕ್ರಿಯೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಮೀಸಲು ಪಟ್ಟಿ ಒದಗಿಸುತ್ತಿದ್ದಂತೆ ಆಯೋಗವು ಚುನಾವಣೆ ಘೋಷಣೆ ಮಾಡಲಿದೆ. ಆಗ ನೀತಿ ಸಂಹಿತೆ ಜಾರಿಯಾಗಲಿದ್ದು, ನೇಮಕಾತಿ ಪ್ರಕ್ರಿಯೆಗೆ ತಡೆಯಾಗಲಿದೆ ಎನ್ನಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆದಿರಲಿಲ್ಲ. ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಚುನಾವಣೆ ಆಯೋಗಕ್ಕೆ ಮತಪಟ್ಟಿ ಸಿದ್ದಪಡಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಅಲ್ಲದೇ, ಬ್ಯಾಲೆಟ್‌ ಪೇಪರ್‌ ಬಳಕೆಗೆ ಅನುಮತಿ ನೀಡಿದೆ. ಈಗ ಮತಪತ್ರಗಳ ಬಳಕೆಗಾಗಿ ವಿಧೇಯಕಕ್ಕೆ ತಿದ್ದುಪಡಿ ತರಬೇಕಿದೆ. ಚಳಿಗಾಲ ಅಧಿವೇಶನ ಡಿಸೆಂಬರ್‌ನಲ್ಲಿ ನಡೆಯುವುದರಿಂದ ಸುಗ್ರೀವಾಜ್ಞೆ ಹೊರಡಿಸಬೇಕಿದೆ. ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಬಳಿಕ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಲಿದೆ. ಬಳಿಕ ನೀತಿಸಂಹಿತೆ ಜಾರಿಯಾಗಲಿದ್ದು, ಯಾವುದೇ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.

ಡಿಪಿಎಆರ್‌ ಆದೇಶವೇನು?

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಅಧ್ಯಕ್ಷತೆಯ ಆಯೋಗವು ಒಳ ಮೀಸಲಾತಿ ವರದಿ ನೀಡಿತ್ತು. ಆಯೋಗ ನೀಡಿದ್ದ ವರದಿಯನ್ನು ಕೆಲ ಬದಲಾವಣೆಗಳೊಂದಿಗೆ ಅಂಗೀಕರಿಸಿದ್ದ ಸರ್ಕಾರ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಶೇ 17 ಮೀಸಲಾತಿಯನ್ನು ಪ್ರವರ್ಗವಾರು ವಿಂಗಡಿಸಿ ಹಂಚಿಕೆ ಮಾಡಿತ್ತು. ಒಳ ಮೀಸಲಾತಿ ನಿಗದಿಪಡಿಸಿ 'ಪರಿಷ್ಕೃತ ಮೀಸಲಾತಿ ರೋಸ್ಟರ್" ಪ್ರಕಟಿಸಿದೆ.

ಒಳ ಮೀಸಲಾತಿ ಜಾರಿಗೆ ಬಂದಿರುವುದರಿಂದ ಎಲ್ಲ ಇಲಾಖೆಗಳು ಮತ್ತು ನೇಮಕಾತಿ ಪ್ರಾಧಿಕಾರಗಳು ನೇರ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ(ಡಿಪಿಎಆರ್‌) ಅಧಿಸೂಚನೆಯಲ್ಲಿ ತಿಳಿಸಿದೆ.

ಆದರೆ, ಇಲಾಖಾವಾರು ಹುದ್ದೆಗಳ ಮಂಜೂರಾತಿ, ಅಗತ್ಯತೆ ಹಾಗೂ ಲಭ್ಯತೆ ಕುರಿತು ಪಟ್ಟಿ ತಯಾರಿಸಿ ಆದೇಶ ಹೊರಡಿಸದ ಕಾರಣ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಡಿಸೆಂಬರ್‌ಗೆ ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯ

ಡಿಸೆಂಬರ್‌ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾಯಿತ ಮಂಡಳಿ ಅಧಿಕಾರ ಮುಕ್ತಾಯವಾಗಲಿದೆ. ಈ ಮೂಲಕ ರಾಜ್ಯದ ಎಲ್ಲಾ ಸ್ಥಳೀಯಾಡಳಿತಗಳು ಜನಪ್ರತಿನಿಧಿಗಳಿಲ್ಲದೆ ಸೊರಗುವ ಸಾಧ್ಯತೆ ಇದೆ. ಡಿಸೆಂಬರ್‌ಗೆ ಎಲ್ಲಾ5,958 ಗ್ರಾಪಂಗಳ ಚುನಾವಣೆ ನಡೆಯಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಲ್ಲಿ ಅಧಿಕಾರಿಗಳ ದರ್ಬಾರ್‌ ಇರುವಂತೆಯೇ ಗ್ರಾಮ ಪಂಚಾಯತ್‌ನಲ್ಲಿಯೂ ಅಧಿಕಾರಿಗಳ ಕಾರುಬಾರು ನಡೆಯಲಿದೆ.

ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆ ನಡೆಸಲು ಮುಂದಾಗಿರುವ ಸರ್ಕಾರ, ಗ್ರಾಮ ಪಂಚಾಯತ್‌ ಚುನಾವಣೆ ನಡೆಸುವ ನಿರೀಕ್ಷೆ ಇದೆ. ಒಂದು ವೇಳೆ ಜಿಲ್ಲಾ, ತಾಲೂಕು ಪಂಚಾಯತ್‌ ಚುನಾವಣೆ ಜತೆಗೆ ಗ್ರಾಮ ಪಂಚಾಯತ್‌ ಚುನಾವಣೆಯೂ ಬಂದರೆ ನೀತಿ ಸಂಹಿತೆ ಬರಲಿದ್ದು, ನೇಮಕಾತಿಗೆ ತೊಡಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರ್ಥಿಕ ಸಮಸ್ಯೆಯಿಂದ ಪ್ರಕ್ರಿಯೆಗೆ ಹಿನ್ನೆಡೆ

ಒಳಮೀಸಲಾತಿ ಜಾರಿಗೊಳಿಸಿದರೂ ನೇಮಕಾತಿ ಪ್ರಕ್ರಿಯೆಗೆ ಹಣಕಾಸಿನ ಅಗತ್ಯತೆ ಇದೆ. ಆದರೆ, ನೇಮಕಾತಿ ಪ್ರಕ್ರಿಯೆ ನಡೆಸಲು ಹಣಕಾಸಿನ ಕೊರತೆ ಇದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆಗಳು ಸದ್ಯಕ್ಕೆ ನಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ. ನೇಮಕಾತಿ ಪ್ರಕ್ರಿಯೆಗೆ ಕೋಟ್ಯಂತರ ರೂ. ಅಗತ್ಯ ಇರುವ ಕಾರಣ ಅಷ್ಟೊಂದು ಅನುದಾನ ಸರ್ಕಾರದ ಬಳಿ ಇಲ್ಲ ಎಂದು ಹೇಳಲಾಗಿದೆ.

ಬಜೆಟ್‌ನಲ್ಲಿ ಇದಕ್ಕೆ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಹೀಗಾಗಿ ಆರ್ಥಿಕ ಇಲಾಖೆಯು ಸಹ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗಿದೆ. ಇದು ಸಹ ಉದ್ಯೋಗಾಕಾಂಕ್ಷಿಗಳಿಗೆ ಪೆಟ್ಟು ನೀಡಿದೆ.

ಚುನಾವಣೆಗೂ ಮುನ್ನ ಅಧಿಸೂಚನೆಗೆ ಒತ್ತಾಯ

ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದರೆ ಸರ್ಕಾರವು ನೇಮಕಾತಿ ಹೊರಡಿಸುವ ಆದೇಶಕ್ಕೆ ತಡೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಚುನಾವಣೆ ಘೋಷಣೆಗೂ ಮುನ್ನ ನೇಮಕಾತಿ ಅಧಿಸೂಚನೆಯನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ಸರ್ಕಾರ ಹೊರಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼದ ಜತೆ ಮಾತನಾಡಿದ ಕರ್ನಾಟಕ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಸಂಘದ (ಅಕ್ಷರ) ಅಧ್ಯಕ್ಷ ಸಂತೋಷ್‌ ಮರೂರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದರೆ ನೇಮಕಾತಿ ಪ್ರಕ್ರಿಯೆ ಸಹಜವಾಗಿ ಮುಂದೂಡಿಕೆಯಾಗಲಿದೆ. ಇದು ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಮತ್ತೊಂದು ರೀತಿಯಲ್ಲಿ ನೀಡುವ ಪೆಟ್ಟಾಗಿರುತ್ತದೆ. ಒಳ ಮೀಸಲಾತಿ ಜಾರಿ ಮಾಡುವುದಕ್ಕಾಗಿ ನೇಮಕಾತಿ ಪ್ರಕ್ರಿಯೆ ರದ್ದು ಮಾಡಲಾಗಿತ್ತು. ಪರಿಣಾಮ ಸಾವಿರಾರು ಹುದ್ದೆಗಳ ನೇಮಕ ಮಾಡಲು ಸಾಧ್ಯವಾಗಲಿಲ್ಲ. ಹೆಚ್ಚು ಕಡಿಮೆ ವರ್ಷವೇ ಕಳೆದಿದ್ದು, ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹಲವು ವರ್ಷಗಳಿಂದ ಸರ್ಕಾರಿ ನೌಕರಿಗಾಗಿ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಕಾಯುತ್ತಿದ್ದಾರೆ. ಈಗಾಗಲೇ ಬಹಳಷ್ಟು ಉದ್ಯೋಗಾಕಾಂಕ್ಷಿಗಳು ವಯೋಮಿತಿ ಮೀರುವ ಹಂತದಲ್ಲಿದ್ದಾರೆ. ಸರ್ಕಾರ ಹೀಗೆ ಒಂದಲ್ಲ ಒಂದು ಕಾರಣಕ್ಕಾಗಿ ನೇಮಕಾತಿ ಪ್ರಕ್ರಿಯೆ ಮುಂದುವರಿದರೆ ಉದ್ಯೋಗಾಕಾಂಕ್ಷಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.

ಮೊದಲಿಗೆ ನೇಮಕಾತಿ ಕುರಿತು ಅಧಿಸೂಚನೆ ಪ್ರಕಟಿಸಿದರೆ ನಂತರ ಚುನಾವಣೆ ಘೋಷಣೆಯಾದರೂ ಯಾವುದೇ ಸಮಸ್ಯೆ ಇರುವುದಿಲ್ಲ. ನೇಮಕಾತಿ ಪ್ರಕ್ರಿಯೆ ನಿರಾತಂಕವಾಗಿ ನಡೆಯಲಿದೆ. ಹಾಗಾಗಿ ಸರ್ಕಾರವು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಹಿತದೃಷ್ಟಿಯಿಂದ ಅದಷ್ಟು ಬೇಗ ನೇಮಕಾತಿಗೆ ಇಲಾಖಾವಾರು ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ನೌಕರಿ ಪಡೆಯಲು ಸಿದ್ಧತೆ ಕೈಗೊಂಡಿರುವ ಉದ್ಯೋಗಾಕಾಂಕ್ಷಿ ರಂಜಿತ್ ಕುಮಾರ್‌ ʼದ ಫೆಡರಲ್‌ ಕರ್ನಾಟಕʼದ ಮಾತನಾಡಿ, ಸರ್ಕಾರಿ ನೌಕರಿ ಪಡೆಯಲು ಸಿದ್ಧತೆ ನಡೆಸಲಾಗುತ್ತಿದೆ. ಸರ್ಕಾರಿ ನೌಕರಿ ಪಡೆಯುವ ಕನಸು ಕಮರದಂತೆ ಸರ್ಕಾರ ಎಚ್ಚರ ವಹಿಸಬೇಕು. ಸರ್ಕಾರಿ ನೌಕರಿಗೆ ಅರ್ಜಿ ಆಹ್ವಾನಿಸದೆ ಇರುವುದರಿಂದ ಉದ್ಯೋಗಾಕಾಂಕ್ಷಿಗಳ ಪಟ್ಟಿ ಹೆಚ್ಚಳವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆಯುವುದು ಸುಲಭವಲ್ಲ. ಖಾಸಗಿ ಕೆಲಸ ತೊರೆದು ಪರೀಕ್ಷೆಗೆ ಸಿದ್ಧತೆ ನಡಲಾಗುತ್ತದೆ. ಚುನಾವಣೆಗಳು ಎದುರಾದರೆ ನೇಮಕಾತಿ ಪ್ರಕ್ರಿಯೆ ಮತ್ತೆ ನನೆಗುದಿಗೆ ಬೀಳಲಿದ್ದು, ಉದ್ಯೋಗಾಕಾಂಕ್ಷಿಗಳ ಬದುಕು ಅತಂತ್ರವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಚುನಾವಣೆ ಘೋಷಣೆಗೂ ಮುನ್ನ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಅತಂತ್ರ ಬದುಕು ಎದುರಿಸುವ ಬದಲು ಸಾಕಷ್ಟು ಯುವಜನಾಂಗವು ಆತ್ಮಹತ್ಯೆಯತ್ತ ಹೆಜ್ಜೆ ಇಡಬೇಕಾಗುತ್ತದೆ ಎಂದು ನುಡಿದರು.

ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋದ ಅಲೆಮಾರಿಗಳು

ಒಳ ಮೀಸಲಾತಿ ಜಾರಿಯ ವೇಳೆ ಅಲೆಮಾರಿ ಸಮುದಾಯಗಳನ್ನು ಪ್ರಬಲ ಸ್ಪೃಶ್ಯ ಜಾತಿಗಳೊಂದಿಗೆ ಸೇರಿಸಿರುವುದನ್ನು ಪ್ರಶ್ನಿಸಿ ಅಲೆಮಾರಿ ಸಮುದಾಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ಹೈಕೋರ್ಟ್‌ ವಿಚಾರಣೆಗೆ ಪುರಸ್ಕರಿಸಿದೆ. ಹೈಕೋರ್ಟ್‌ಗೆ ದಸರಾ ರಜೆ ಇರುವುದರಿಂದ ಶೀಘ್ರವೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಒಂದು ವೇಳೆ ಒಳ ಮೀಸಲಾತಿ ಜಾರಿಗೆ ಹೈಕೋರ್ಟ್‌ ತಡೆ ನೀಡಿದರೆ ಮತ್ತೆ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಲಿವೆ ಎಂಬ ಭೀತಿಯೂ ಆಕಾಂಕ್ಷಿಗಳನ್ನು ಕಾಡುತ್ತಿದೆ.

Read More
Next Story