
Delay in Recruitment Part-5 | ಉಪಜಾತಿ ಉಲ್ಲೇಖಿಸದವರಿಗೆ ಜಾತಿ ಪ್ರಮಾಣ ಪತ್ರ ಇಲ್ಲ; ಕಗ್ಗಂಟಾದ ನೇಮಕಾತಿ ಪ್ರಕ್ರಿಯೆ, ಸಂಪುಟ ಸಭೆಯತ್ತ ಎಲ್ಲರ ಚಿತ್ತ..!
ಪರಿಶಿಷ್ಟ ಜಾತಿಯ ಪ್ರವರ್ಗ ಎ, ಬಿ, ಸಿ ಗುಂಪುಗಳೊಟ್ಟಿಗೆ ಸೇರಿಸಿರುವ ಎಡಗೈ ಮತ್ತು ಬಲಗೈ ಸಮುದಾಯದ ಉಪಜಾತಿ ಉಲ್ಲೇಖಿಸದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿಗಳು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂಬ ಗೊಂದಲದಲ್ಲಿವೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸಿದ ನಂತರ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಹೊಸ ನೇಮಕಾತಿ ಪ್ರಕ್ರಿಯೆಗಳಿಗೆ ಹಸಿರುನಿಶಾನೆ ತೋರಿದೆ. ಆದರೆ, ಒಳ ಮೀಸಲಾತಿಯಲ್ಲಿ ಸೃಜಿಸಿದ ಮೂರು ಪ್ರವರ್ಗಗಳಿಗೆ (ಎ,ಬಿ,ಸಿ) ಅನುಗುಣವಾಗಿ ಜಾತಿ ಪ್ರಮಾಣ ಪತ್ರ ನೀಡಲು ಕಂದಾಯ ಇಲಾಖೆ ಯಾವುದೇ ಸಿದ್ಧತೆ ಕೈಗೊಳ್ಳದಿರುವುದು ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ.
ಪರಿಶಿಷ್ಟ ಜಾತಿಯ ಪ್ರವರ್ಗ ಎ, ಬಿ, ಸಿ ಗುಂಪುಗಳೊಟ್ಟಿಗೆ ಸೇರಿಸಿರುವ ಎಡಗೈ ಮತ್ತು ಬಲಗೈ ಸಮುದಾಯದ ಉಪಜಾತಿ ಉಲ್ಲೇಖಿಸದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿಗಳು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂಬ ಗೊಂದಲದಲ್ಲಿವೆ. ಜಾತಿ ಪ್ರಮಾಣ ಪತ್ರಕ್ಕೆ ಆನ್‌ಲೈನ್‌ನಲ್ಲಿ ಯಾವ ಪ್ರವರ್ಗ ಆಯ್ಕೆ ಮಾಡಬೇಕು ಎಂಬುದನ್ನು ನಿರ್ದಿಷ್ಟವಾಗಿ ಸೂಚಿಸಿಲ್ಲ. ಹಾಗಾಗಿ ಉದ್ಯೋಗ ನೇಮಕಾತಿ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.
ಒಳ ಮೀಸಲಾತಿಯ ಹೊಸ ಪ್ರವರ್ಗಗಳಿಗೆ ಅನುಸಾರವಾಗಿ ಆನ್‌ಲೈನ್ ತಂತ್ರಾಂಶ ಉನ್ನತೀಕರಿಸಿಲ್ಲ. ಇದರಿಂದ ಜಾತಿ ಪ್ರಮಾಣ ಪತ್ರ ಪಡೆಯಲು ಆಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಜಾತಿ ಪ್ರಮಾಣ ಪತ್ರ ವಿತರಣೆ ವಿಳಂಬ
ಕಂದಾಯ ಇಲಾಖೆಯು ಆನ್‌ಲೈನ್ ತಂತ್ರಾಂಶ ಉನ್ನತೀಕರಿಸದ ಕಾರಣ ಜಾತಿ ಪ್ರಮಾಣ ಪತ್ರ ಲಭ್ಯವಾಗುತ್ತಿಲ್ಲ. ತಂತ್ರಾಂಶ ಅಭಿವೃದ್ಧಿ ಹಾಗೂ ಉನ್ನತೀಕರಣಕ್ಕೆ ಇಲಾಖಾ ಅಧಿಕಾರಿಗಳು ಇನ್ನೂ ಮುಂದಾಗದಿರುವುದು ವಿಳಂಬವಾಗುವ ಆತಂಕ ತಂದಿದೆ. ಜಾತಿ ಪ್ರಮಾಣ ಪತ್ರ ಗೊಂದಲ ಬಗೆಹರಿಸುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರೂ ಇನ್ನೂ ಪರಿಷ್ಕರಣೆ ಆಗದಿರುವುದು ನೇಮಕಾತಿ ವಿಳಂಬಕ್ಕೆ ಕಾರಣವಾಗುತ್ತಿದೆ.
"ಕಳೆದ ಮೂರು ವರ್ಷಗಳಿಂದ ಧಾರವಾಡದಲ್ಲಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ. ಆದರೆ, ಕೋವಿಡ್ ಹಾಗೂ ಒಳಮೀಸಲಾತಿ ಕಾರಣದಿಂದ ಸರ್ಕಾರ ನೇಮಕಾತಿ ಅಧಿಸೂಚನೆ ಹೊರಡಿಸಿರಲಿಲ್ಲ. ಈಗ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಆದರೆ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ ಮಾತ್ರ ಬಗೆಹರಿದಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಶೀಘ್ರವೇ ಸಮಸ್ಯೆ ಇತ್ಯರ್ಥ ಮಾಡಬೇಕು. ತಪ್ಪಿದಲ್ಲಿ ಇತ್ತೀಚೆಗೆ ಧಾರವಾಡದಲ್ಲಿ ನಡೆದ ಹೋರಾಟದಂತೆ ಮತ್ತೊಂದು ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮೊಳಕಾಲ್ಮೂರಿನ ಎಸ್. ತಿಪ್ಪೇಸ್ವಾಮಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಗ್ರೂಪ್ ಸಿ ಉದ್ಯೋಗಾಕಾಂಕ್ಷಿ ಮಂಜುನಾಥ್ ದಂಡಿಕೆರೆ 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆದರೆ ಅದೇ ಕಾರಣಕ್ಕೆ ಕಳೆದೊಂದು ವರ್ಷದಿಂದ ಸರ್ಕಾರ ಯಾವುದೇ ನೇಮಕಾತಿ ಅಧಿಸೂಚನೆ ಮಾಡಿಲ್ಲ. ಈಗ ಒಳ ಮೀಸಲಾತಿ ನೀಡಿ ಆದೇಶ ಹೊರಡಿಸಿದರೂ ಇದುವರೆಗೂ ಜಾತಿ ಪ್ರಮಾಣ ಪತ್ರ ವಿತರಣೆ ಮಾಡಿಲ್ಲ. ಸರ್ಕಾರ ಆದಷ್ಟು ಶೀಘ್ರವಾಗಿ ಪ್ರಮಾಣ ಪತ್ರ ವಿತರಣೆ ಮಾಡಬೇಕು. ಇದೇ ನೆಪದಲ್ಲಿ ಸರ್ಕಾರ ನೇಮಕಾತಿ ಅಧಿಸೂಚನೆ ವಿಳಂಬ ಮಾಡಬಾರದು ಎಂದು ಆಗ್ರಹಿಸಿದರು.
ಸಮಾಜ ಕಲ್ಯಾಣ ಸಚಿವರಿಗೆ ಪತ್ರ
ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಪಡೆಯುವಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಮಾಡುವಂತೆ ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಅಕ್ಸರಾ ಸಂಘಟನೆಯ ಸಂತೋಷ್ ಮರೂರ್ ಪತ್ರ ಬರೆದಿದ್ದರು.
ಪರಿಶಿಷ್ಟ ಜಾತಿಗಳಲ್ಲಿರುವ ಮೂರು ಪ್ರವರ್ಗಗಳಿಗೆ ಇದುವರೆಗೂ ಕಂದಾಯ ಇಲಾಖೆ ಹೊಸ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ತಹಶೀಲ್ದಾರ್‌ಗಳಿಗೆ ಈ ಕುರಿತು ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ), ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ನೇಮಕಾತಿ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿವೆ. ಆದರೆ, ಇದುವರೆಗೂ ನಾಡಕಚೇರಿಗಳಲ್ಲಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿಲ್ಲ,ಈಗಿರುವ ತಂತ್ರಾಂಶವನ್ನು ಉನ್ನತೀಕರಿಸಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ಪರಿಶಿಷ್ಟ ಜಾತಿಯ ಒಳ ಪಂಗಡಗಳಲ್ಲಿರುವ ಗೊಂದಲ ನಿವಾರಣೆ ಮಾಡಬೇಕು. ವಿದ್ಯಾರ್ಥಿಗಳಿಂದ ಬರುವ ದೂರುಗಳಿಗೆ ಸ್ಪಂದಿಸಲು ಸಮಾಜ ಕಲ್ಯಾಣ ಇಲಾಖೆಯು ಸಹಾಯವಾಣಿ ಅಥವಾ ವಿಶೇಷ ಕೋಶ ರಚಿಸಬೇಕು. ಜಾತಿ ಪ್ರಮಾಣ ಪತ್ರಕ್ಕೆ ಸಲ್ಲಿಸಿದ ಅರ್ಜಿಯ ಸ್ವೀಕೃತಿಯನ್ನೇ ತಾತ್ಕಾಲಿಕ ದಾಖಲೆಯಾಗಿ ಪರಿಗಣಿಸಲು ಕೆಇಎ, ಕೆಪಿಎಸ್ಸಿ ಮತ್ತು ಇತರೆ ನೇಮಕಾತಿ ಪ್ರಾಧಿಕಾರಗಳಿಗೆ ಸೂಚಿಸಬೇಕು. ದಾಖಲೆ ಪರಿಶೀಲನೆ ಹಂತದಲ್ಲಿ ಮೂಲ ಪ್ರಮಾಣ ಪತ್ರ ಹಾಜರುಪಡಿಸಲು ಅವಕಾಶ ನೀಡಬೇಕು ಒತ್ತಾಯಿಸಲಾಗಿತ್ತು.
ಅ.9 ರಂದು ಸಂಪುಟ ಸಭೆಯಲ್ಲಿ ಇತ್ಯರ್ಥ ಸಾಧ್ಯತೆ
ಜಾತಿ ಪ್ರಮಾಣ ಪತ್ರ ಕುರಿತಂತೆ ಉಂಟಾಗಿರುವ ಗೊಂದಲವು ಅ.9 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಇತ್ಯರ್ಥವಾಗುವ ಸಾಧ್ಯತೆ ಇದೆ. ಉಪ ಜಾತಿ ಹೊಂದಿರುವ ಆದಿ ಕರ್ನಾಟಕ(ಎಕೆ), ಆದಿ ದ್ರಾವಿಡ (ಎಡಿ) ಹಾಗೂ ಆದಿ ಆಂಧ್ರದ(ಎಎ) ಜಾತಿಗಳಿಗೆ ಮಾತ್ರ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸ್ವಾಭಿಮಾನಿ ಮಾದಿಗ ಸಮುದಾಯಗಳ ಒಕ್ಕೂಟದ ಸಂಚಾಲಕ ಕೇಶವ ಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯಲ್ಲಿ ಸುಮಾರು 4.5 ಲಕ್ಷ ಜನರು ಉಪಜಾತಿ ನಮೂದಿಸಿರಲಿಲ್ಲ. ಅಂತವರಿಗೆ ಈಗ ಮೀಸಲಾತಿ ಹಾಗೂ ಜಾತಿ ಪ್ರಮಾಣ ಪತ್ರ ಪಡೆಯಲು ಕಷ್ಟವಾಗಬಹುದು. ಅವನ್ನು ಅಧಿಕೃವಾಗಿ ಜಾತಿಪಟ್ಟಿಗೆ ಸೇರಿಸಿ ಮಾನ್ಯತೆ ನೀಡಬೇಕಾದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಆದರೆ, ಈಗ ಉಪಜಾತಿ ಇಲ್ಲದೇ ಜಾತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅಂತಹ ಜಾತಿಗಳು ಜಾತಿ ಪ್ರಮಾಣ ಪತ್ರ ಪಡೆದರೆ ಅವು ನಕಲಿಯಾಗಿರಲಿವೆ ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ನೇಮಕಾತಿಗೆ ದಾಖಲೆಗಳ ಪರಿಶೀಲನೆ ವೇಳೆ ಕಡ್ಡಾಯವಾಗಿ ಉಪ ಜಾತಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಉದ್ಯೋಗ ಪಡೆಯಲು ಸಮಸ್ಯೆಯಾಗಲಿದೆ ಎಂದು ಹೇಳಿದರು.
ಜಾತಿ ಕೋಡ್ ಆಧಾರದಲ್ಲಿ ಜಾತಿ ಪ್ರಮಾಣಕ್ಕೆ ಅವಕಾಶ?
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಉಪ ಜಾತಿ ನಮೂದಿಸದ ಅಭ್ಯರ್ಥಿಗಳಿಗೆ ನ್ಯಾ.ನಾಗಮೋಹನ್ ದಾಸ್ ಸಮೀಕ್ಷೆ ಅಥವಾ ಈಗಿನ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಒದಗಿಸಿರುವ ಜಾತಿ ಕೋಡ್ ಆಧಾರದ ಮೇಲೆ ಜಾತಿ ಪ್ರಮಾಣ ಪತ್ರ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಪ್ರವರ್ಗ ಎ ಹಾಗೂ ಬಿ ಗುಂಪಿನೊಂದಿಗೆ ಉಪಜಾತಿ ನಮೂದಿಸದ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಜಾತಿಯ 4.5 ಲಕ್ಷ ಜಾತಿಗಳನ್ನು ಸಮನಾಗಿ ಹಂಚಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾತಿ ಪ್ರಮಾಣ ಪತ್ರ ವಿತರಿಸುವ ಕುರಿತಂತೆ ವಿವಿಧ ದಲಿತ ಸಂಘಟನೆಗಳ ಅಭಿಪ್ರಾಯ ಆಲಿಸಿದೆ. ದಲಿತ ಸಮುದಾಯಗಳು ನೀಡಿರುವ ಸಲಹೆ ಆಧರಿಸಿ ಅ.9 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ಆದೇಶ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.
ಆದಿ ಕರ್ನಾಟಕ, ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳು ಉಪಜಾತಿಯನ್ನು ಗುರುತಿಸಿದರೆ ಅವರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಉದ್ದೇಶಿಸಲಾಗಿದೆ. ಉಪ ಜಾತಿ ನಮೂದಿಸುವುದು ಅವರವರಿಗೆ ಬಿಟ್ಟ ವಿಚಾರ ಎಂದು ಹೇಳಲಾಗಿದೆ.
ಮಾದಿಗ ಕ್ರೈಸ್ತರಿಗೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೀಸಲಾತಿ ಒದಗಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸ್ವಾಭಿಮಾನಿ ಮಾದಿಗ ಸಮುದಾಯಗಳ ಒಕ್ಕೂಟದ ಸಂಚಾಲಕ ಕೇಶವ ಮೂರ್ತಿʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಸುಳ್ಳು ಜಾತಿ ಪ್ರಮಾಣ ಪತ್ರಗಳಿಗೂ ಕಡಿವಾಣ
ರಾಜ್ಯದಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಹಾಗೂ ಸರ್ಕಾರದ ಸೌಲಭ್ಯ ಪಡೆದಿರುವ ಆರೋಪ ಕುರಿತು ಅರ್ಜಿ ವಿಚಾರ ಹೈಕೋರ್ಟ್‌ನಲ್ಲಿದೆ. ರಾಜ್ಯದಲ್ಲಿ ಅಂದಾಜು 30 ಸಾವಿರ ಜನರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಮಾಹಿತಿಯನ್ನುವಕೀಲರಾದ ಅಶ್ವಿನಿ ಒಬಳೇಶ್ 2024 ಆಗಸ್ಟ್ ತಿಂಗಳಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅದರಲ್ಲಿ 10 ಸಾವಿರ ಜಾತಿ ಪ್ರಮಾಣ ಪತ್ರಗಳನ್ನು ಸರ್ಕಾರದ ವಿಶೇಷ ವಕೀಲರಿಗೆ ಒದಗಿಸಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಜಾತಿ ಪ್ರಮಾಣಪತ್ರಗಳನ್ನು ಕೊಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ನ್ಯಾಯಾಲಯಕ್ಕೆ ದಾಖಲೆ ತೋರಿಸಲು 50-100 ಮಂದಿಗಷ್ಟೇ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದ್ದರು.
ಯಾದಗಿರಿ ಜಿಲ್ಲೆಯ ಎಸ್ಸಿ-ಎಸ್ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿತ್ತು. ಜಾತಿ ಪ್ರಮಾಣ ಪತ್ರ ನೀಡುವುದು ಸರ್ಕಾರದ ಕೆಲಸ, ಪ್ರಕರಣ ಈಗ ಸರ್ಕಾರದ ಅಂಗಳದಲ್ಲಿದೆ. ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕುಎ ಎಂದು ಒತ್ತಾಯಿಸಿದ್ದರು.