ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ: ಗುರುವಾರ ಸರ್ಕಾರ ನಿರ್ಧಾರ?
1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು, ಸಿಸಿ-ಒಸಿ ಇಲ್ಲದೆ ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚು ಕಟ್ಟಡಗಳನ್ನು ಒಡೆಯುವುದು ಸರಿಯಲ್ಲ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.
ಸ್ವಾಧೀನಾನುಭವ ಪತ್ರ (ಸಿಸಿ-Completion Certificate) ಮತ್ತು ಕಟ್ಟಡ ಪ್ರಾರಂಭಿಕ ಪ್ರಮಾಣಪತ್ರ (ಒಸಿ-Occupancy Certificate) ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರಕ್ಕೆ ತಲೆಬಿಸಿಯಾಗಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿನ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಿಸಿ, ಒಸಿ ಸಮಸ್ಯೆ ಕುರಿತು ಚರ್ಚೆ ನಡೆಸಲಾಯಿತು. ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಕಾನೂನು ಚೌಕಟ್ಟಿನಲ್ಲಿಯೇ ಯಾವ ರೀತಿಯಲ್ಲಿ ಸರ್ಕಾರ ಸಹಾಯ ಮಾಡಬಹುದು ಎಂಬುದರ ಕುರಿತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಎಚ್.ಕೆ.ಪಾಟೀಲ್, ಇಂಧನ ಸಚಿವ ಕೆ ಜೆ ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಸಭೆಯು ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರ್ಧಾರ ಕೈಗೊಂಡು ಸಭೆಯನ್ನು ಮುಕ್ತಾಯಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.
ಸರ್ಕಾರವು ಕಾನೂನು ಕಟ್ಟಳೆ ಮೀರದೆ ಸಿಸಿ, ಒಸಿ ಇಲ್ಲದ ಮನೆಗಳಿಗೆ ಯಾವ ರೀತಿಯಲ್ಲಿ ಮೂಲಸೌಲಭ್ಯ ಕಲ್ಪಿಸಬೇಕೆಂಬ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸರ್ಕಾರದ ಮುಂದಿನ ನಡೆಯ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ.
ರಾಜ್ಯದಲ್ಲಿ 1,200 ಚದರ ಅಡಿ ಮತ್ತು ಅದಕ್ಕಿಂತ ಮೇಲ್ಪಟ್ಟು, ಸಿಸಿ-ಒಸಿ ಇಲ್ಲದೆ ನಿರ್ಮಿಸಿರುವ 4.30 ಲಕ್ಷಕ್ಕೂ ಹೆಚ್ಚು ಕಟ್ಟಡಗಳನ್ನು ಒಡೆಯುವುದು ಸರಿಯಲ್ಲ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಹೀಗಾಗಿ, ಒಂದು ಬಾರಿ ಸಿಸಿ, ಒಸಿ ಇಲ್ಲದ ಕಟ್ಟಡಗಳಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ, ಸುಪ್ರೀಂಕೋರ್ಟ್‌ನ ಆದೇಶವು ಸರ್ಕಾರದ ಕೈಕಟ್ಟಿ ಹಾಕಿದೆ. ಈ ಹಿನ್ನೆಲೆಯಲ್ಲಿ, ಕಾನೂನಿನ ವ್ಯಾಪ್ತಿಯಲ್ಲಿಯೇ ಒಂದು ಬಾರಿಗೆ ಅವಕಾಶ ಕಲ್ಪಿಸಲು ಸಾಧ್ಯವೇ ಎಂಬುದರ ಕುರಿತು ಗಂಭೀರ ಚರ್ಚೆ ನಡೆಸಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ, ಕಾನೂನು ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಲು ಕಾನೂನು ತಜ್ಞರ ಸಲಹೆ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಲಾಗುತ್ತಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಒಸಿ ಮತ್ತು ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರು ಸಂಪರ್ಕ ಕಲ್ಪಿಸುವ ಸಂಬಂಧ ಸಭೆ ನಡೆಸಲಾಗಿದೆ. ಕಾನೂನು ತೊಡಕಿನ ಕುರಿತು ಸಮಾಲೋಚನೆ ನಡೆಸಲಾಗಿದೆ. 1200 ವಿಸ್ತೀರ್ಣದವರೆಗೆ ಒಸಿ, ಸಿಸಿ ನೀಡಲು ಸಮಸ್ಯೆಯಾಗುವುದಿಲ್ಲ. ಆದರೆ, ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳಿಗೆ ನೀಡಲು ಕಷ್ಟಕರವಾಗುತ್ತದೆ. ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಹೆಚ್ಚಾಗಿದೆ. ನಗರದಲ್ಲಿ ಶೇ. 70ರಷ್ಟು ಕಟ್ಟಡ ನಿರ್ಮಾಣ ಅಕ್ರಮವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ರಾಜ್ಯ ಮಾತ್ರವಲ್ಲದೆ, ದೇಶದಲ್ಲಿಯೂ ಈ ಸಮಸ್ಯೆ ಇದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ನಕ್ಷೆ ಮಂಜೂರಾತಿ ಪ್ರಕಾರ ಕಟ್ಟಡ ನಿರ್ಮಿಸಿ, ವಾಸ ಯೋಗ್ಯ ಪ್ರಮಾಣ ಪತ್ರ ಪಡೆಯಬೇಕು. ಒಸಿ ಇಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ನೀಡಬಾರದು ಎಂದು ಹೇಳಿದೆ. ಹೀಗಾಗಿ ಕಾನೂನು ಸರ್ಕಾರದ ಕೈಕಟ್ಟಿಹಾಕುವಂತೆ ಮಾಡಿದೆ ಎಂದು ಹೇಳಲಾಗಿದೆ.