ಕಲ್ಯಾಣ ಕರ್ನಾಟಕದ ರೈಲ್ವೆ 'ಬವಣೆ' ನೀಗಿಸಿ: ಲೋಕಸಭೆಯಲ್ಲಿ ದನಿ ಎತ್ತಿದ ರಾಯಚೂರು ಸಂಸದ!
ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಗಳನ್ನು ಸಂಸದರು ಪಟ್ಟಿ ಮಾಡಿ ಸದನದಲ್ಲಿ ಮಂಡಿಸಿದರು. ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ವೇಗದ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ಸೇವೆಗಳನ್ನು ಹೆಚ್ಚಿಸಬೇಕು ಎಂದು ಸಂಸದ ಕುಮಾರ ನಾಯ್ಕ ತಿಳಿಸಿದ್ದಾರೆ.
ಸಂಸತ್‌ನಲ್ಲಿ ಸಂಸದ ಜಿ. ಕುಮಾರ ನಾಯ್ಕ ಮಾತನಾಡಿದರು.
ದಶಕಗಳಿಂದಲೂ ರೈಲ್ವೆ ಸಂಪರ್ಕದಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ರಾಯಚೂರು ಸಂಸದ ಜಿ. ಕುಮಾರ ನಾಯ್ಕ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸೋಮವಾರ ಲೋಕಸಭೆಯ ಕಲಾಪದಲ್ಲಿ ನಿಯಮ 377ರ ಅಡಿಯಲ್ಲಿ (Rule 377) ವಿಷಯ ಪ್ರಸ್ತಾಪಿಸಿದ ಅವರು, ರಾಯಚೂರು, ಕಲಬುರಗಿ ಮತ್ತು ಉತ್ತರ ಭಾರತದ ರಾಜ್ಯಗಳ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುವ ತುರ್ತು ಅಗತ್ಯದ ಬಗ್ಗೆ ಸದನದ ಗಮನ ಸೆಳೆದರು
ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಗಳನ್ನು ಪಟ್ಟಿ ಮಾಡಿ ಸದನದಲ್ಲಿ ಮಂಡಿಸಿದರು. ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ವೇಗದ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ಸೇವೆಗಳನ್ನು ಹೆಚ್ಚಿಸಬೇಕು. ನೆರೆಯ ಮಹಾನಗರ ಹೈದರಾಬಾದ್‌ಗೆ ಪ್ರತಿದಿನ ಸಂಚರಿಸುವ ರೈಲುಗಳ ವ್ಯವಸ್ಥೆಯಾಗಬೇಕು. ರಾಯಚೂರಿನಿಂದ ವಿಶಾಖಪಟ್ಟಣಕ್ಕೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ರೈಲುಗಳು ಕೇವಲ ಪ್ರಯಾಣಿಕರ ಅನುಕೂಲಕ್ಕಷ್ಟೇ ಅಲ್ಲ; ದಕ್ಷಿಣ ಭಾರತದ ವಿವಿಧೆಡೆ ಇರುವ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಉದ್ಯೋಗ ಸ್ಥಳಗಳಿಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಕಾರ್ಮಿಕರಿಗೆ ಇದು ಜೀವನಾಡಿಯಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಐತಿಹಾಸಿಕ ನಿರ್ಲಕ್ಷ್ಯ ಸರಿಪಡಿಸಿ
ಕರ್ನಾಟಕವು ಐತಿಹಾಸಿಕವಾಗಿಯೇ ದೇಶದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ರೈಲು ಸಾಂದ್ರತೆಯನ್ನು ಹೊಂದಿದೆ. ಈ ಅಸಮತೋಲನವನ್ನು ಸರಿಪಡಿಸಲು ಇದು ಸಕಾಲ. ರೈಲ್ವೆ ಸಚಿವಾಲಯವು ದೀರ್ಘಕಾಲದಿಂದ ನೆನಗುದಿಗೆ ಬಿದ್ದಿರುವ ಈ ಬೇಡಿಕೆಗಳನ್ನು ಈಡೇರಿಸುವ ಮೂಲಕ ಕಲ್ಯಾಣ ಕರ್ನಾಟಕದ ಜನರಿಗೆ ನ್ಯಾಯಸಮ್ಮತವಾದ ಸಂಪರ್ಕವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಯ ಅನುಭವ, ಸಂಸದನ ಕಾಳಜಿ
ರಾಯಚೂರು ಸಂಸದರು ಈ ಹಿಂದೆ ಐಎಎಸ್ ಅಧಿಕಾರಿಯಾಗಿ, ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ವಿಶೇಷವೆಂದರೆ, 1999ರಿಂದ 2002ರವರೆಗೆ ರಾಯಚೂರು ಜಿಲ್ಲಾಧಿಕಾರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.