ಸಿಜೆಐ ಮೇಲೆ ಶೂ ಎಸೆತ ಪ್ರಕರಣ| ಸಾಹಿತಿಗಳು, ವಕೀಲರ ಸಂಘದಿಂದ ಪ್ರತಿಭಟನೆ
ಸಂವಿಧಾನದ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ನಾವೆಲ್ಲ ನಮ್ಮ ಸಣ್ಣ ಸಣ್ಣ ಅಭಿಪ್ರಾಯ ಭೇದಗಳನ್ನು ಮರೆತು ಸಂಘಟಿತರಾಗಬೇಕಾಗಿದೆ. ಸಂವಿಧಾನ ದುರ್ಬಲವಾದರೆ ನಾವೆಲ್ಲರೂ ನಾಶವಾಗುವುದು ಖಂಡಿತ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮಾತನಾಡಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿಯವರ ಮೇಲೆ ವಕೀಲನೊಬ್ಬ ಶೂ ಎಸೆದ ಪ್ರಕರಣವನ್ನು ಖಂಡಿಸಿ ರಾಜ್ಯಾದ್ಯಂತ ವಿವಿಧ ವಕೀಲರು, ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬುಧವಾರ (ಅ.8) ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, "ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಪ್ರಕರಣ ಅತ್ಯಂತ ಹೇಯವಾದುದು. ಮಾನ್ಯ ನ್ಯಾಯಮೂರ್ತಿಗಳು ಘನತೆಯಿಂದಲೇ ಉತ್ತರ ನೀಡಿದ್ದಾರೆ. ಅತ್ಯುನ್ನತ ಸ್ಥಳದಲ್ಲಿ ಇರುವವರ ಮೇಲೆಯೇ ಇಂತಹ ಹಲ್ಲೆಗಳಾದರೆ ಇನ್ನು ಸಾಮಾನ್ಯ ಜನರ ಪಾಡೇನು? ನ್ಯಾಯಾಂಗದ ಘನತೆ ಮಣ್ಣುಪಾಲಾಗದಿರಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಸಂವಿಧಾನದ ವಿರುದ್ಧ ಹೋರಾಟ ತೀವ್ರಗೊಳ್ಳುತ್ತಿದೆ. ನಾವೆಲ್ಲ ನಮ್ಮ ಸಣ್ಣ ಸಣ್ಣ ಅಭಿಪ್ರಾಯ ಭೇದಗಳನ್ನು ಮರೆತು ಸಂಘಟಿತರಾಗಬೇಕಾಗಿದೆ. ಸಂವಿಧಾನ ದುರ್ಬಲವಾದರೆ ನಾವೆಲ್ಲರೂ ನಾಶವಾಗುವುದು ಖಂಡಿತ ಎಂದರು. ಈ ವೇಳೆ ಕವಿ ಡಾ. ಅರವಿಂದ ಮಾಲಗತ್ತಿಯವರ ಕವನದ ಸಾಲು 'ಬರ್ತಾವು ಬರ್ತಾವು. ನಾವು ಹೊಲ್ದ ಚರ್ಮದ ಕಾಲ್ಮರಿ ನಮ್ಮ ಕೇರಿಗೆ ಬರ್ತಾವು. ಸಮಗಾರರು ಮಿರಿ ಮಿರಿ ಹೊಳೆಯುವ ಚಪ್ಪಲಿ ಮಾಡ್ತಾರೆ, ಅದನ್ನು ಹಾಕಿಕೊಂಡ ಶೋಷಕರು ಅದೇ ಕೇರಿಗೆ ಬಂದು ಶೋಷಣೆ ಮಾಡ್ತಾರೆ!ʼ ಎಂಬ ಸಾಲುಗಳನ್ನು ಹೇಳುವ ಮೂಲಕ ಪ್ರತಿಭಟನೆಯನ್ನು ದಾಖಲಿಸಿದರು.
ದೇಶ ಕಟ್ಟಿದವರು ದೇಶದ್ರೋಹಿಗಳಾಗುತ್ತಿರುವ ಹೊತ್ತಲ್ಲಿ ಸಂಘಟನೆ, ಶಿಕ್ಷಣ, ಹೋರಾಟ ನಮ್ಮನ್ನು ಉಳಿಸೀತು ಎಂದು ತಿಳಿಸಿದರು.
ವಕೀಲರ ಸಂಘದಿಂದ ಖಂಡನೆ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲನೇ ʼಶೂʼ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರು ಹೈಕೋರ್ಟ್ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ಸಿಜೆಐ ಮೇಲೆ ನಡೆದ ದಾಳಿಯಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ದಾಳಿಯಾಗಿದೆ. ತಪ್ಪತಸ್ಥರನ್ನು ಸಿಜೆಐ ಕ್ಷಮಿಸಿರಬಹುದು. ಆದರೆ ಇಂತಹ ಮನಸ್ಥಿತಿಯವರ ವಿರುದ್ದ ನಾವು ಹೋರಾಡುತ್ತೇವೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಸಿಜೆಐ ಬಿ.ಆರ್. ಗವಾಯಿ ಗುರಿಯಾಗಿಸಿಕೊಂಡು ಶೂ ಎಸೆದಿರುವ ಪ್ರಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಟೀಕಿಸಿದ್ದರು. ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ, ಸಾಮಾಜಿಕ ಜಾಲಾತಾಣದಲ್ಲಿ ವಕೀಲ ರಾಕೇಶ್ ಕಿಶೋರ್ ಬೆಂಬಲಿಸಿ ಹಲವರು ಬಿಜೆಪಿಯ ಹಲವು ನಾಯಕರು, ಮುಖಂಡರು ಸಂದೇಶ ಹಂಚಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.
ಫೇಸ್‌ಬುಕ್‌ನಲ್ಲಿ ವಕೀಲನ ಸಂದರ್ಶನ ಉಲ್ಲೇಖಿಸಿ ಬಳಕೆದಾರರೊಬ್ಬರು, "ಮಾತು ಕೂಡ ಚಪ್ಪಲಿಯಲ್ಲಿ ಹೊಡೆದ ಹಾಗಿದೆ"ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಅವರು ನ್ಯಾಯಾಮೂರ್ತಿಗಳೇ ಇರಬಹುದು. ಒಂದು ಧರ್ಮಕ್ಕೆ ಅಪಮಾನ ಮಾಡುವ ಹಕ್ಕು, ನೈತಿಕತೆ ಅವರಿಗಿಲ್ಲ. ಧರ್ಮದ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ಅಧಿಕಾರವಿದೆ ಎಂದ ಮಾತ್ರಕ್ಕೆ ಅವಹೇಳನ ಮಾಡುವ ಹಕ್ಕಿದೆ ಎಂದಲ್ಲ". ಎಂದಿದ್ದಾರೆ.
ಏನಿದು ಪ್ರಕರಣ ?
ಸಿಜೆಐ ಬಿ.ಆರ್. ಗವಾಯಿ ನೇತೃತ್ವದ ಸಾಂವಿಧಾನಿಕ ಪೀಠವು ಪ್ರಕರಣಗಳ ವಿಚಾರಣೆ ನಡೆಸುತ್ತಿತ್ತು. ಈ ವೇಳೆ, 71 ವರ್ಷದ ಹಿರಿಯ ವಕೀಲ ರಾಕೇಶ್ ಕಿಶೋರ್ ಎಂಬುವವರು ನ್ಯಾಯಮೂರ್ತಿಗಳ ವೇದಿಕೆಯ ಬಳಿ ಬಂದು, ತಮ್ಮ ಕಾಲಿನ ಶೂ ಕಳಚಿ, ಸಿಜೆಐ ಗವಾಯಿ ಅವರನ್ನು ಗುರಿಯಾಗಿಸಿ ಎಸೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ, ವಕೀಲನನ್ನು ವಶಕ್ಕೆ ಪಡೆದರು. ಈ ವೇಳೆ, "ಸನಾತನ ಧರ್ಮಕ್ಕೆ ಆದ ಅವಮಾನ ಸಹಿಸುವುದಿಲ್ಲ" ಎಂದು ವಕೀಲರು ಕೂಗಾಡಿದ್ದರು.
ಈ ಅನಿರೀಕ್ಷಿತ ಘಟನೆಯಿಂದ ಸ್ವಲ್ಪವೂ ವಿಚಲಿತರಾಗದ ಸಿಜೆಐ ಗವಾಯಿ ಅವರು, ತಮ್ಮ ಆಸನದಲ್ಲಿ ಶಾಂತವಾಗಿ ಕುಳಿತು, "ಇಂತಹ ಘಟನೆಗಳಿಂದ ನೀವು ವಿಚಲಿತರಾಗಬೇಡಿ. ನಾನು ವಿಚಲಿತಗೊಳ್ಳುವುದಿಲ್ಲ. ಇದ್ಯಾವುದು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ," ಎಂದು ಅಲ್ಲಿದ್ದ ಇತರ ವಕೀಲರಿಗೆ ತಿಳಿಸಿ, ಕಲಾಪ ಮುಂದುವರೆಸಿದರು.