BBK 12| ತಾತ್ಕಾಲಿಕ ಅನುಮತಿ ಕೋರಿ ವೇಲ್ಸ್‌ ಸ್ಟುಡಿಯೋಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ

ಕೆಲ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಲು ವಿಳಂಬವಾಗಿದೆ. ಕೆಎಸ್‌ಪಿಬಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ ಎಂದು ವೇಲ್ಸ್‌ ಸ್ಟೂಡಿಯೋಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Update: 2025-10-08 08:53 GMT

ಬಿಗ್‌ಬಾಸ್ ಶೋ ಸ್ಥಗಿತ

Click the Play button to listen to article

ಪರಿಸರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಿಗ್‌ಬಾಸ್‌ ಚಿತ್ರೀಕರಣ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಇದೀಗ ಜಾಲಿವುಡ್​​ ಸ್ಟುಡಿಯೋಸ್​​ನ ಮಾತೃಸಂಸ್ಥೆ ವೇಲ್ಸ್ ಸ್ಟುಡಿಯೋಸ್ ವತಿಯಿಂದ ತಾತ್ಕಾಲಿಕ ಅನುಮತಿ ಕೋರಿ ರಾಮನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

"ನಾವು ಸ್ಟುಡಿಯೋ ನಡೆಸಲು ಪರವಾನಗಿ ಪಡೆದಿದ್ದೇವೆ, ಆದರೆ. ಕೆಲ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಲು ವಿಳಂಬವಾಗಿದೆ. ಕೆಎಸ್‌ಪಿಬಿ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ. ಅಗತ್ಯ ದಾಖಲೆಗಳನ್ನು ಶೀಘ್ರದಲ್ಲೇ ಸಲ್ಲಿಸುತ್ತೇವೆ. ನಮಗೆ 15 ದಿನಗಳ ಅವಧಿ ನೀಡಿದರೆ ಎಲ್ಲವನ್ನೂ ಸರಿಪಡಿಸುತ್ತೇವೆ. ತಾತ್ಕಾಲಿಕ ಅನುಮತಿ ನೀಡಿ ಮನರಂಜನಾ ಚಟುವಟಿಕೆ ಮುಂದುವರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. 

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಆರಂಭವಾದ ಸೀಸನ್ -12ಕ್ಕೆ ವಾರ ಕಳೆಯುವುದರೊಳಗೆ ಬೀಗ ಹಾಕಲಾಗಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಜಾಲಿವುಡ್​​ ಸ್ಟುಡಿಯೋಸ್‌ನಲ್ಲಿ ಬಿಗ್‌ಬಾಸ್ ಚಿತ್ರೀಕರಣ ನಡೆಯುತ್ತಿತ್ತು. ಆದರೆ ಇಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರನ್ನು ಬಳಸುತ್ತಿದ್ದರೂ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸದ ಕಾರಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಕಠಿಣ ಕ್ರಮಕ್ಕೆ ಮುಂದಾಗಿದೆ.

ರಾತ್ರೋರಾತ್ರಿ ಸ್ಪರ್ಧಿಗಳು, ತಂತ್ರಜ್ಞರನ್ನು ಮನೆಯಿಂದ ಹೊರಕರೆದು, ಶೋ ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಎಲ್ಲಾ ಸ್ಪರ್ಧಿಗಳನ್ನು ಸಮೀಪದ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.  ಈ ಬೆಳವಣಿಗೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು, ಬಿಗ್ ಬಾಸ್ ಶೋ ನಡೆಯುತ್ತಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ಮಾಧ್ಯಮದಿಂದ ತಿಳಿಯಿತು. ಆದರೆ, ಮಾಹಿತಿ ಪಡೆದು ನೋಡಿದಾಗ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ನಿಯಮ ಪಾಲನೆ ಆಗದ ಕಾರಣ ಈಗ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಎಸ್.ಟಿ.ಪಿ. ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತಾಜ್ಯ ವಿಲೇವಾರಿ ಆಗುತ್ತಿಲ್ಲ, ಜನರೇಟರ್ ಸೆಟ್ ಗಳಿದ್ದು ಅದಕ್ಕೂ ಅನುಮತಿ ಪಡೆದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ ಮಂಡಳಿ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Full View
Tags:    

Similar News