BBK 12| ಜಾಲಿವುಡ್‌ಗೆ ರಿಲೀಫ್‌; 10 ದಿನ ಕಾಲಾವಕಾಶ ಕೊಟ್ಟ ಜಿಲ್ಲಾಧಿಕಾರಿ, ಬಿಗ್‌ಬಾಸ್‌ ಚಿತ್ರೀಕರಣ ಮತ್ತೆ ಆರಂಭ?

ಬಿಗ್‌ಬಾಸ್‌ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಗೆ ರಿಯಾಲಿಟಿ ಶೋ ಮುಂದುವರಿಕೆಗೆ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಅಷ್ಟರಲ್ಲಿ ಸಂಬಂಧಪಟ್ಟ ಪರವಾನಗಿಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.

Update: 2025-10-08 10:05 GMT

ಬಿಗ್‌ ಬಾಸ್‌

ತ್ಯಾಜ್ಯ ನೀರು ಸಂಸ್ಕರಿಸದೇ ಹೊರಬಿಡುತ್ತಿದ್ದ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪರವಾನಗಿ ಪಡೆಯದೇ ಕಾರ್ಯ ನಿರ್ವಹಿಸುತ್ತಿದ್ದ ಜಾಲಿವುಡ್‌ಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಕೊಂಚ ರಿಲೀಫ್‌ ನೀಡಿದೆ.

ಪರವಾನಗಿಗೆ ಸಂಬಂಧಿಸಿದ ದಾಖಲೆ ಸಲ್ಲಿಕೆಗೆ ಜಾಲಿವುಡ್‌ ಸ್ಟುಡಿಯೋದ ಮಾತೃಸಂಸ್ಥೆ ವೇಲ್ಸ್‌ ಸ್ಟುಡಿಯೋಸ್‌ ಕಾಲಾವಕಾಶ ಕೋರಿದ್ದರಿಂದ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ಮಂಜೂರು ಮಾಡಿದ್ದಾರೆ. ಪರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್‌ಬಾಸ್‌ ಚಿತ್ರೀಕರಣ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ  ಮಂಗಳವಾರ ಅಧಿಕಾರಿಗಳು ಬೀಗ ಹಾಕಿದ್ದರು. ಇದರಿಂದ ಬಿಗ್‌ಬಾಸ್‌ ರಿಯಾಲಿಟಿ ಶೋ ಚಿತ್ರೀಕರಣ ಸ್ಥಗಿತವಾಗಿತ್ತು. 

ಜಾಲಿವುಡ್​​ನ​ ಮಾತೃಸಂಸ್ಥೆ ವೇಲ್ಸ್ ಸ್ಟುಡಿಯೋಸ್ ವತಿಯಿಂದ ಬುಧವಾರ ತಾತ್ಕಾಲಿಕ ಅನುಮತಿ ಕೋರಿ ರಾಮನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. "ನಾವು ಸ್ಟುಡಿಯೋ ನಡೆಸಲು ಪರವಾನಗಿ ಪಡೆದಿದ್ದೇವೆ, ಆದರೆ, ಕೆಲ ಮಾಲಿನ್ಯ ನಿಯಂತ್ರಣ ನಿಯಮ ಪಾಲಿಸಲು ವಿಳಂಬವಾಗಿದೆ. ಕೆಎಸ್‌ಪಿಬಿ (ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ) ನಿಯಮಗಳನ್ನು ಸಂಪೂರ್ಣ ಪಾಲಿಸುತ್ತೇವೆ. ಅಗತ್ಯ ದಾಖಲೆಗಳನ್ನು ಶೀಘ್ರ ಸಲ್ಲಿಸುತ್ತೇವೆ. ನಮಗೆ 15 ದಿನಗಳ ಕಾಲಾವಕಾಶ ನೀಡಿದರೆ ಎಲ್ಲವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಹತ್ತು ದಿನಗಳ ಕಾಲಾವಕಾಶ ನೀಡಿದ್ದಾರೆ. ಇಂದಿನಿಂದಲೇ ಬಿಗ್​​ಬಾಸ್ ರಿಯಾಲಿಟಿ ಶೋ ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. 

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಆರಂಭವಾದ ಹತ್ತು ದಿನಗಳಲ್ಲೇ ಜಾಲಿವುಡ್‌ ನಿರ್ಲಕ್ಷ್ಯದಿಂದಾಗಿ ಸ್ಥಗಿತವಾಗಿತ್ತು. ಜಾಲಿವುಡ್‌ನಲ್ಲಿ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ನೀರು ಬಳಸಲಾಗುತ್ತಿದೆ. ಆದರೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕೆಲಸ ಮಾಡುತ್ತಿಲ್ಲ. ಕೊಳಚೆ ನೀರನ್ನು ಸಂಸ್ಕರಿಸದೇ ಹರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ನೋಟಿಸ್‌ಗೆ ಜಾಲಿವುಡ್‌ ಸಂಸ್ಥೆಯವರು ಯಾವುದೇ ಉತ್ತರ ನೀಡಿರಲಿಲ್ಲ. ಹಾಗಾಗಿ ಜಾಲಿವುಡ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿತ್ತು.  

Tags:    

Similar News