ಜಾಲಿವುಡ್‌ಗಷ್ಟೇ ನೋಟಿಸ್|ಬಿಗ್‌ಬಾಸ್‌ಗೂ, ನಮಗೂ ಸಂಬಂಧವಿಲ್ಲ; ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟನೆ
ಜಾಲಿವುಡ್ ಸಂಸ್ಥೆಯು ಅಗತ್ಯ ಪರವಾನಗಿ (consent) ಪಡೆಯದೇ ಕಾರ್ಯಾಚರಣೆ ಮುಂದುವರಿಸಿದ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು.
ಸಾಂದರ್ಭಿಕ ಚಿತ್ರ
ಒಪ್ಪಿತ ಪರವಾನಗಿ ಪಡೆಯದೇ ಕಾರ್ಯಚಟುವಟಿಕೆ ಮುಂದುವರಿಸಿದ್ದರಿಂದ ಜಾಲಿವುಡ್‌ಗೆ ನೋಟಿಸ್ ಜಾರಿ ಮಾಡಿ, ಬೀಗ ಹಾಕಲಾಗಿದೆ. ನೋಟಿಸ್‌ಗೂ, ಬಿಗ್ ಬಾಸ್ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.
30 ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದೆ. ಜಾಲಿವುಡ್ ಅಮ್ಯೂಸ್‌ಮೆಂಟ್ ಪಾರ್ಕ್ ವ್ಯಾಪ್ತಿಯಲ್ಲಿ ಬಿಗ್ ಬಾಸ್ ಶೂಟಿಂಗ್ ಸ್ಥಳ ಕೇವಲ ಒಂದೂವರೆ ಎಕರೆ ಮಾತ್ರ ಇದೆ. ಮಂಡಳಿಗೂ, ಬಿಗ್‌ಬಾಸ್ ರಿಯಶಲಿಟಿ ಶೋಗೂ ಸಂಬಂಧವಿಲ್ಲ. ಮಂಡಳಿಯ 26 ಸದಸ್ಯರ ನಿರ್ಣಯದ ಆಧಾರದ ಮೇಲೆ ಜಾಲಿವುಡ್‌ಗೆ ನಿಯಮ ಉಲ್ಲಂಘನೆ ನೋಟಿಸ್ ನೀಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ ಎಂದು ಹೇಳಿದೆ.
ಜಾಲಿವುಡ್ ಸಂಸ್ಥೆಯು ಅಗತ್ಯ ಪರವಾನಗಿ (consent) ಪಡೆಯದೇ ಕಾರ್ಯಾಚರಣೆ ಮುಂದುವರಿಸುತ್ತಿದ್ದ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆಯೇ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದ ಬಳಿಕ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಲಾವಕಾಶ ಕೂಡ ನೀಡಲಾಗಿತ್ತು. ಆಗಸ್ಟ್ ತಿಂಗಳಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂದಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದೆ. ಜಾಲಿವುಡ್‌ಗೆ ಈಗಾಗಲೇ ಮೂರು ನೋಟಿಸ್ ನೀಡಲಾಗಿದೆ. ನಾವು ಸ್ಥಳ ಪರಿಶೀಲನೆ (ಮಹಜರು) ಮಾಡುವ ಸಂದರ್ಭ ಬಿಗ್‌ಬಾಸ್ ಚಿತ್ರೀಕರಣ ನಡೆಯುತ್ತಿರಲಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.
“ಡಿಸಿಎಂ ಡಿ.ಕೆ. ಶಿವಕುಮಾರ್ ಹತ್ತು ದಿನಗಳ ಕಾಲಾವಕಾಶ ನೀಡಬಹುದು ಎಂದಿದ್ದಾರೆ. ಆದರೆ ಜಾಲಿವುಡ್‌ನಿಂದ ಈವರೆಗೆ ಯಾವುದೇ ಮನವಿ ಬಂದಿಲ್ಲ. ಅವರು ಮನವಿ ಮಾಡಿದರೆ ಕಾನೂನು ರೀತಿ ಪರಿಗಣಿಸಬಹುದು,” ಎಂದು ಸ್ಪಷ್ಟನೆ ನೀಡಿದರು.
ಶಾಲಾ ಕಾಲೇಜುಗಳಲ್ಲಿ ಜಾಗೃತಿ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ತನ್ನ ಸ್ಥಾಪನೆಯ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮ ಆಚರಿಸಲು ಸಜ್ಜಾಗಿದೆ. ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕನಸಿನ ಕೂಸು. ಸುವರ್ಣ ಸಂಭ್ರಮದ ಅಂಗವಾಗಿ ಅವರ ಕೊಡುಗೆ ಸ್ಮರಿಸುವಂತಹ ಕಾರ್ಯಕ್ರಮಗಳು ರಾಜ್ಯದಾದ್ಯಂತ ನಡೆಯಲಿವೆ.
ಅ.10 ರಿಂದ ಬಳ್ಳಾರಿಯಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ನಂತರದ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಪರಿಸರ ಜಾಗೃತಿ ಚಿತ್ರಗಳಿಗೆ ಪ್ರಶಸ್ತಿ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನದಂದು (ನ.19)ರಂದು ಬೆಂಗಳೂರಿನಲ್ಲಿ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಚಿತ್ರಕಲೆ, ಕಿರುಚಿತ್ರ, ರೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಉತ್ತಮ ರೀಲ್ಸ್‌ಗಳಿಗೆ ಪ್ರಥಮ 50 ಸಾವಿರ ರೂ. ದ್ವಿತೀಯ 25 ಸಾವಿರ ರೂ, ಮತ್ತು ತೃತೀಯ ಸ್ಥಾನಕ್ಕೆ10 ಸಾವಿರ ರೂ. ಬಹುಮಾನ ನೀಡಲಾಗುವುದು. ಪರಿಸರ ಸಂರಕ್ಷಣೆಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ "ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ" ಪ್ರದಾನ ಮಾಡಲಾಗುವುದು ಎಂದರು.
ಖಾಲಿ ಹುದ್ದೆ ಭರ್ತಿಗೆ ಸಿಎಂ ಒಪ್ಪಿಗೆ
ಮಂಡಳಿಯ ದಿನ ನಿತ್ಯದ ಕಾರ್ಯನಿರ್ವಹಣೆಗೆ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿದ್ದು, ಮಂಜೂರಾದ ಹುದ್ದೆಗಳ ಪೈಕಿ ಶೇ. 40 ಸಿಬ್ಬಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿಗಳು ಈಗಾಗಲೇ ಒಪ್ಪಿದ್ದಾರೆ. ಮೂರು ತಿಂಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಮಂಡಳಿಯ ಕಾಯ್ದೆಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಭರವಸೆ ನೀಡಲಾಗುವುದು ಎಂದು ಹೇಳಿದರು.