ಗಾರ್ಮೆಂಟ್ಸ್‌, ಐಟಿ ಸೇರಿದಂತೆ ಎಲ್ಲಾ ವಲಯಗಳ ಮಹಿಳಾ ನೌಕರರಿಗೆ ʼಋತುಚಕ್ರ ರಜೆʼ: ನಾಳೆ ನಿರ್ಧಾರ?

ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿಗಳು, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನಿರೀಕ್ಷೆಯಿದೆ.

Update: 2025-10-08 14:35 GMT

ಮಹಿಳೆಯರ ಆರೋಗ್ಯ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದ “ಋತುಚಕ್ರ ರಜೆ” ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತೀವ್ರ ಚರ್ಚೆ ನಡೆಸುತ್ತಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದೆ. 

ಸರ್ಕಾರಿ, ಖಾಸಗಿ ಕಂಪನಿ ಸೇರಿದಂತೆ ಉದ್ಯೋಗ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಋತು ಚಕ್ರ ರಜೆ ನೀಡಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಒಂದು ದಿನ ವೇತನ ಸಹಿತ ರಜೆ ನೀಡಲು ಸರ್ಕಾರ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗುವುದು.  ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿಗಳು, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ನಿಯಮವನ್ನು ಅನುಷ್ಠಾನಗೊಳಿಸುವ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವ ನಿರೀಕ್ಷೆ ಇದೆ. 

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಋತು ಚಕ್ರ ರಜೆ ನೀಡುವ ಸಂಬಂಧ  ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಮುಖ್ಯಸ್ಥೆ ಸಪ್ನಾ ಎಸ್ ಅವರ ಅಧ್ಯಕ್ಷತೆಯ 18 ಸದಸ್ಯರ ಸಮಿತಿ ಶಿಫಾರಸು ಮಾಡಿತ್ತು. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ಹೇಗೆ ವಿವಿಧ ಶಾರೀರಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಉದ್ಯೋಗಸ್ಥ ಮಹಿಳೆಯರು ಅನುಭವಿಸುವ ಸಂಕಷ್ಟ, ಸವಾಲುಗಳು, ಕೆಲಸ ಮಾಡುವ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಅನುಸರಿಸಬೇಕಾದ ನಿಯಮಗಳು, ವಿಶ್ರಾಂತಿಯ ಅಗತ್ಯತೆ ಕುರಿತು ಸಮಿತಿಯ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಈ ವರದಿ ಆಧಾರದ ಮೇಲೆ ರಜೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ. 

ಮುಟ್ಟಿನ ರಜೆ ನೀತಿ ಈಗಾಗಲೇ ಬಿಹಾರ, ಕೇರಳ ಮತ್ತು ಒಡಿಶಾದಲ್ಲಿದೆ. ಆ ರಾಜ್ಯಗಳು ಅನುಸರಿಸುತ್ತಿರುವ ನೀತಿಗಳೂ ಸೇರಿದಂತೆ ಮಹಿಳಾಸ್ನೇಹಿ ನಿಯಮ ರೂಪಿಸಲು ಅಗತ್ಯವಾದ ಮಾಹಿತಿ ಸಂಗ್ರಹಿಸಲಾಗಿದೆ. ವಿವಿಧ ಸಂಘಟನೆಗಳು, ವಲಯಗಳ ಅಭಿಪ್ರಾಯ ಸಂಗ್ರಹಿಸುವ ಜತೆಗೆ, ಸರ್ಕಾರದ ಎಲ್ಲ ಇಲಾಖೆಗಳು ಹಾಗೂ ಖಾಸಗಿ ಕಂಪನಿ, ಕೈಗಾರಿಕೆಗಳ ಜತೆಗೂ ಸರ್ಕಾರ ಮಾತುಕತೆ ನಡೆಸಿದೆ. ರಜೆ ನೀಡುವುದರಿಂದ ಗಾರ್ಮೆಂಟ್ಸ್ ಸೇರಿದಂತೆ ಮಹಿಳಾ ಅವಲಂಬಿತ ಉದ್ಯಮಗಳ ಮೇಲಾಗುವ ಸಾಧಕ-ಬಾಧಕಗಳ ಕುರಿತು ಪರಿಶೀಲಿಸಲಾಗಿದೆ. ಎಲ್ಲರ ಅಭಿಪ್ರಾಯ ಕಲೆಹಾಕಿ, ಸಿದ್ಧತೆ ಪೂರ್ಣಗೊಂಡ ನಂತರ ಆರ್ಥಿಕ ಇಲಾಖೆಯ ಒಪ್ಪಿಗೆಗೆ ಕಳುಹಿಸಿ ನೀತಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. 

ಬಿಹಾರ ರಾಜ್ಯವು ಈಗಾಗಲೇ ತನ್ನ ಮಹಿಳಾ ನೌಕರರಿಗೆ ತಿಂಗಳಿಗೆ ಎರಡು ದಿನಗಳ ರಜೆ ನೀಡುತ್ತಿದೆ. ಓಡಿಶಾ ರಾಜ್ಯವು ಆಗಸ್ಟ್‌ನಲ್ಲಿ ಈ ಕುರಿತ ಹೊಸ ನೀತಿ ಪ್ರಕಟಿಸಿ, ಮಹಿಳಾ ಸರ್ಕಾರಿ ನೌಕರರಿಗೆ ತಿಂಗಳಲ್ಲಿ ಒಂದು ದಿನ ಪಾವತಿ ರಜೆ ನೀಡಲು ಅನುಮತಿ ನೀಡಿದೆ. ಇದೇ ವೇಳೆ ಕೇರಳ ರಾಜ್ಯವು ವಿದ್ಯಾರ್ಥಿನಿಯರಿಗೆ ಹಾಜರಾತಿ ವಿನಾಯಿತಿ ನೀಡುವ ವ್ಯವಸ್ಥೆಯನ್ನು ಆರಂಭಿಸಿದೆ.

ಆರು ದಿನಗಳ ರಜೆ?

ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ನೀತಿಯ ಕುರಿತಂತೆ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಗಳು ಮತ್ತು ಸಾರ್ವಜನಿಕರಿಂದ ಸಲಹೆ- ಸೂಚನೆ- ಆಕ್ಷೇಪಣೆ- ಅಭಿಪ್ರಾಯಗಳನ್ನು ಕಾರ್ಮಿಕ ಇಲಾಖೆ ಪಡೆದುಕೊಂಡಿತ್ತು.

ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಘಟನೆಗಳು, ಕಾರ್ಮಿಕ ಪ್ರತಿನಿಧಿಗಳು, ಆಡಳಿತ ವರ್ಗಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು  ಒದಗಿಸಿದ್ದರು.

ಸರ್ಕಾರಿ ಮತ್ತು ಖಾಸಗಿ ಮಹಿಳಾ ಉದ್ಯೋಗಿಗಳಿಗೆ ವಾರ್ಷಿಕ 6 ದಿನಗಳ ವೇತನ ಸಹಿತ ಮುಟ್ಟಿನ ರಜೆ ನೀಡುವ ಬಗ್ಗೆ ನೀತಿ ರೂಪಿಸುವ ಸಂಬಂಧ ಮುಟ್ಟಿನ ರಜೆ ಸಾದ್ಯಾಸಾಧ್ಯತೆ ಪರಿಶೀಲಿಸಲು ಕ್ರೈಸ್ಟ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಲಾ, ಪ್ರೊಫೆಸರ್ ಹಾಗೂ ಎಚ್‌ಓಡಿ ಡಾ.ಸಪ್ನ ಮೋಹನ್ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು.

Tags:    

Similar News