ವನ್ಯಜೀವಿ ಹಂತಕರ ವಿರುದ್ಧ ಕಠಿಣ ಕ್ರಮ; ಸಿಎಂ ಖಡಕ್ ಎಚ್ಚರಿಕೆ
ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆಯಾದಷ್ಟೂ ಮನುಷ್ಯ, ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಅರಣ್ಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಅರಣ್ಯದಲ್ಲಿ ಹುಲಿಗಳ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಕು ಹಸುಗಳನ್ನು ಕೊಂದಿದೆ ಎಂಬ ಕಾರಣಕ್ಕೆ ಹುಲಿಗಳಿಗೆ ವಿಷವುಣಿಸುವುದನ್ನು ಸರ್ಕಾರ ಸಹಿಸಲ್ಲ. ಯಾರೇ ಆಗಲಿ ಅರಣ್ಯ ಮತ್ತು ಪ್ರಾಣಿ ಸಂಪತ್ತನ್ನು ಕೊಲ್ಲಲು ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪರಿಸರ, ಅರಣ್ಯ ಸಂರಕ್ಷಕರಿಗೆ ಮುಖ್ಯಮಂತ್ರಿ ಪದಕ ವಿತರಿಸಿ ಮಾತನಾಡಿದರು. ಪ್ರಾಣಿ ಸಂಪತ್ತನ್ನು ಕೊಂದವರು ಎಷ್ಟೇ ದೊಡ್ಡವರಾಗಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಲೆ ಮಹದೇಶ್ವರ ಘಟನೆ ಉಲ್ಲೇಖಿಸಿ ಕಠಿಣ ಸಂದೇಶ ರವಾನಿಸಿದರು.
ಪ್ರಾಣಿಗಳಿಲ್ಲದೇ ಅರಣ್ಯವಿಲ್ಲ
ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ. ಮಾನವ - ವನ್ಯಜೀವಿ ಸಹಬಾಳ್ವೆಯ ಪರಿಸರ ಪೂರಕವಾದ ಆಶಯ ಮತ್ತು ಉದ್ದೇಶಕ್ಕಾಗಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ. ಅರಣ್ಯ ಪರಿಸರ ಆರೋಗ್ಯಕರವಾಗಿ ವಿಸ್ತರಣೆ ಆದಷ್ಟೂ ಮನುಷ್ಯ, ಪರಿಸರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಅರಣ್ಯದ ಉಳಿವು ಭೂಮಿಯ ಉಳಿವು ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಆನೆ ಸಂಪತ್ತಿನಲ್ಲಿ ರಾಜ್ಯ ಪ್ರಥಮ
ಆನೆ ಮತ್ತು ಹುಲಿ ಸಂಪತ್ತಿನಲ್ಲಿ ನಮ್ಮ ರಾಜ್ಯ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಇದರ ಜೊತೆಗೆ ಪ್ರಾಣಿ ಮತ್ತು ಮನುಷ್ಯರ ಸಂಘರ್ಷ ತಪ್ಪಿ ಸಹಬಾಳ್ವೆ ಏರ್ಪಡಬೇಕು. ಇದಕ್ಕಾಗಿ ಪ್ರಾಣಿಗಳು ಕಾಡು ಬಿಟ್ಟು ಹೊರಗೆ ಏಕೆ ಬರುತ್ತಿವೆ ಎನ್ನುವ ಬಗ್ಗೆ ಅಧ್ಯಯನಗಳು ನಡೆದು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಿದೆ. ಹುಲಿ, ಆನೆಗಳ ಹತ್ಯೆ ಪ್ರಕರಣಗಳ ಬಗ್ಗೆ ಅರಣ್ಯಾಧಿಕಾರಿಗಳು ಹೆಚ್ಚು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಉಳಿದರೆ ಮನುಷ್ಯ ಉಳಿವು
ದಿನೇ ದಿನೇ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದರೆ ಮನುಷ್ಯ ಕುಲ ಉಳಿಯಲು ಸಾಧ್ಯವಿಲ್ಲ. ಆದ್ದರಿಂದ ಅರಣ್ಯದ ಉಳಿವು ಮನುಷ್ಯನ ಉಳಿವು ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳ ಕಷ್ಟಸಾಧ್ಯವಾಗಿದೆ. ಅರಣ್ಯ ಒತ್ತುವರಿಯಾಗದಂತೆ ಕಾಪಾಡುವುದು ಎಲ್ಲರ ಹೊಣೆಯಾಗಿದೆ. ಈ ಕರ್ತವ್ಯವನ್ನು ಅರಣ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಿಂದ ಪ್ರಕೃತಿಯ ಮೇಲೆ ದುಷ್ಪರಿಣಾಮ ಆಗುತ್ತಿದ್ದು, ಪ್ರಕೃತಿ ಪರಿಸರ ಉಳಿಸಲು ಎಲ್ಲರೂ ಮುಂದಾಗಬೇಕು ಎಂದರು.
ಎಂಎಂ ಹಿಲ್ಸ್‌ನಲ್ಲಿ 6 ಹುಲಿ ಸಾವು
ಸಸ್ಯ, ಪ್ರಾಣಿ, ಕೀಟ ಸಂಕುಲಗಳಿಂದ ಕೂಡಿದ ಪಶ್ಚಿಮಘಟ್ಟವು ರಾಜ್ಯದ 10 ಜಿಲ್ಲೆಗಳಲ್ಲಿ ಹಬ್ಬಿದೆ. ಜೀವವೈವಿಧ್ಯತೆಯ ಅದ್ಭುತ ತಾಣವಾಗಿದೆ. ಇಷ್ಟು ಸಮೃದ್ಧ ಕಾನನ ಹೊಂದಿರುವ ನಾವು ಅದೃಷ್ಟವಂತರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅರಣ್ಯ ಸಂರಕ್ಷಣಾ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತಂದ ಪರಿಣಾಮ ದೇಶದಲ್ಲಿ ಅರಣ್ಯ ಸಂಪತ್ತು ಉಳಿದಿದೆ. ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮದಲ್ಲಿ ಕಳೆದ ಜೂನ್ ತಿಂಗಳಲ್ಲಿ ಐದು ಹುಲಿಗಳ ಹತ್ಯೆಯಾಗಿತ್ತು. ಇತ್ತೀಚೆಗೆ ಮತ್ತೊಂದು ಹುಲಿ ಸಾವಿಗೀಡಾಗಿದೆ. ಇದು ಹಸುವನ್ನು ಕೊಂದ ವನ್ಯಜೀವಿ ವಿರುದ್ಧದ ಪ್ರತೀಕಾರದ ಕ್ರಮವಾಗಿದ್ದು, ಇದು ಅತ್ಯಂತ ನೋವಿನ ಸಂಗತಿ. ಈ ನಿಟ್ಟಿನಲ್ಲಿ ಅರಣ್ಯದೊಳಗಿನ ಹಾಗೂ ಅರಣ್ಯದಂಚಿನ ಜನರಿಗೆ ಜಾಗೃತಿ ಮೂಡಿಸಲು ಜನಸಂಪರ್ಕ ಸಭೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜೈವಿಕ ಉದ್ಯಾನ ನಿರ್ಮಾಣ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 15 ಸಾವಿರ ಎಕರೆ ಪ್ರದೇಶವನ್ನು ಹೊಸದಾಗಿ ಅರಣ್ಯ ಎಂದು ಅಧಿಸೂಚನೆ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ 250 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ ಪೀಳಿಗೆಗೆ ಹಸಿರು ಹೊದಿಕೆ ಉಳಿಸುವ ಮತ್ತು ಶ್ವಾಸತಾಣಗಳನ್ನು ಸಂರಕ್ಷಿಸುವ ಸಲುವಾಗಿ ಬೆಂಗಳೂರು ಹೆಸರುಘಟ್ಟ ಕೆರೆ ಬಳಿಯ 5,678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ. ಜೊತೆಗೆ ಯಲಹಂಕ ಸಮೀಪದ ಮಾದಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 1 ಮೆಗಾವ್ಯಾಟ್ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗುತ್ತಿದ್ದು, ಉದ್ಯಾನದ ಇಂದಿನ ಮತ್ತು ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್ ನಿಂದಲೇ ಪೂರೈಸಲು ತೀರ್ಮಾನಿಸಲಾಗಿದೆ. ದೇಶದಲ್ಲೇ ಪ್ರಥಮ ಪರಿಸರ ಸ್ನೇಹಿ ವಿದ್ಯುತ್ ಸೌಲಭ್ಯದ ಜೈವಿಕ ಉದ್ಯಾನಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
514 ಗಸ್ತು ವನಪಾಲಕರ ಆಯ್ಕೆ ಪಟ್ಟಿ ಬಿಡುಗಡೆ
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 540 ಗಸ್ತು ವನಪಾಲಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಪೈಕಿ ಆಯ್ಕೆಯಾಗಿರುವ 514 ಗಸ್ತು ವನಪಾಲಕರ ಆಯ್ಕೆ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.