
ಪರಿಹಾರ ಸಿಗದ ಅಸಮಾಧಾನ : ಅರಣ್ಯಾಧಿಕಾರಿಗಳ ಮೇಲಿನ ಕೋಪಕ್ಕೆ ಹುಲಿಗಳ ಮಾರಣಹೋಮ?
ಕಾಡುಪ್ರಾಣಿಗಳ ದಾಳಿ, ಪರಿಹಾರ ವಿತರಣೆ ವಿಳಂಬ, ಅರಣ್ಯ ಇಲಾಖೆ ಅಧಿಕಾರಿಗಳ ನಿರಾಸಕ್ತಿ ಸೇರಿ ಹಲವು ಕಾರಣದಿಂದ ಸ್ಥಳೀಯರು ಮತ್ತುಅಧಿಕಾರಿಗಳ ನಡುವೆ ಕಂದಕ ಹೆಚ್ಚಿಸುತ್ತಿದ್ದು, ಹತ್ಯೆಗೆ ಕಾರಣವಾಗುತ್ತಿದೆ.
ರಾಜ್ಯದಲ್ಲಿಯೇ ಅತ್ಯಧಿಕ ಹುಲಿಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿಗಳ ಸರಣಿ ಸಾವು ಸಂಭವಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದ್ದು, ಇದು ಮಾನವ ಮತ್ತು ಪ್ರಾಣಿ ಸಂಘರ್ಷದ ತೀವ್ರತೆಗೆ ಹಿಡಿದ ಕೈಗನ್ನಡಿಯಾಗಿದೆ. ಕಾಡಂಚಿನ ರೈತರ ಜಾನುವಾರು ಮತ್ತು ಬೆಳೆಗಳ ಮೇಲೆ ಕಾಡುಪ್ರಾಣಿಗಳ ದಾಳಿ, ಬೆಳೆನಷ್ಟ ಪರಿಹಾರ ವಿತರಣೆಯಲ್ಲಿನ ವಿಳಂಬ, ಹಾಗೂ ವನ್ಯಜೀವಿಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳ ನಿರಾಸಕ್ತಿ ಸೇರಿದಂತೆ ಹಲವು ಕಾರಣಗಳು, ಸ್ಥಳೀಯರು ಹಾಗೂ ಅಧಿಕಾರಿಗಳ ನಡುವಿನ ಕಂದಕವನ್ನು ಹೆಚ್ಚಿಸುತ್ತಿವೆ. ಇದು, ಅಮಾಯಕ ಪ್ರಾಣಿಗಳ ಹತ್ಯೆಗೆ ಕಾರಣವಾಗುತ್ತಿದೆ.
ಚಾಮರಾಜನಗರದ ಮಲೆ ಮಹದೇಶ್ವರಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ, 12 ವರ್ಷದ ಹುಲಿಯೊಂದನ್ನು ಮೂರು ಭಾಗಗಳಾಗಿ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿಷ ಹಾಕಿ ಹತ್ಯೆ ಮಾಡಲಾಗಿದೆ ಎಂಬ ಶಂಕೆ ಇದ್ದು, ದೇಹದಲ್ಲಿ ಪತ್ತೆಯಾದ ಅಂಶಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳ ನಡೆಯೇ ಹುಲಿಯ ಸಾವಿಗೆ ಕಾರಣವಾಗಿರಬಹುದು ಎಂದೂ ಹೇಳಲಾಗುತ್ತಿದೆ.
ಅರಣ್ಯ ಪ್ರದೇಶದಲ್ಲಿ ನೆಲೆಸಿರುವ ಗ್ರಾಮಸ್ಥರ ಸಮಸ್ಯೆಗಳಿಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಇಲ್ಲದ ಕಾರಣ, ಇಂತಹ ಘಟನೆಗಳು ನಡೆಯುತ್ತಿವೆ. ಗ್ರಾಮಸ್ಥರ ಜಾನುವಾರುಗಳು ವನ್ಯಜೀವಿಗಳಿಗೆ ಆಹಾರವಾದಾಗ, ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಸರ್ಕಾರದ ಭರವಸೆಗಳು ಕೇವಲ ಕಾಗದಪತ್ರದಲ್ಲಿಯೇ ಉಳಿದು, ಅರಣ್ಯ ಪ್ರದೇಶದ ಗ್ರಾಮಸ್ಥರಿಗೆ ಪರಿಹಾರವು ಸಕಾಲಕ್ಕೆ ತಲುಪುವುದಿಲ್ಲ. ಇದು ಸರ್ಕಾರದ ಮೇಲೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ವಿರುದ್ಧ ಕುಪಿತಗೊಂಡ ಗ್ರಾಮಸ್ಥರು, ಅರಣ್ಯಾಧಿಕಾರಿಗಳ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುವ ಕೆಲಸ ಮಾಡುತ್ತಾರೆ. ವನ್ಯಜೀವಿಗಳ ಹತ್ಯೆಯಾದಾಗ, ಸಹಜವಾಗಿ ಸರ್ಕಾರವು ಆಯಾ ವ್ಯಾಪ್ತಿಯ ಅರಣ್ಯಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಶಿಸ್ತು ಕ್ರಮ ಕೈಗೊಳ್ಳುತ್ತದೆ. ಇದು ಗ್ರಾಮಸ್ಥರಿಗೆ ಖುಷಿ ತಂದುಕೊಡುತ್ತದೆ ಎಂದು ಮೂಲಗಳು ಹೇಳಿವೆ.
ಮನುಷ್ಯನ ಸೇಡಿಗೆ 6ನೇ ಹುಲಿ ಬಲಿ
ವನ್ಯಜೀವಿ ಸಪ್ತಾಹದ ವೇಳೆಯೇ ನಡೆದಿರುವ ಈ ಅಮಾನವೀಯ ಕೃತ್ಯ, ಇಡೀ ಮಾನವ ಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಕಳೆದ ಮೂರು ತಿಂಗಳ ಅಂತರದಲ್ಲಿ, ಇದೇ ವನ್ಯಧಾಮದಲ್ಲಿ ಮನುಷ್ಯನ ಸೇಡಿಗೆ ಬಲಿಯಾದ 6ನೇ ಹುಲಿ ಇದಾಗಿದೆ. ವನ್ಯಧಾಮದಲ್ಲಿ ಗಸ್ತು ವ್ಯವಸ್ಥೆ ಹದಗೆಟ್ಟಿದೆ, ಇಲಾಖೆಯ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆಯಿದೆ, ಹಾಗೂ ಸಿಬ್ಬಂದಿ ಮತ್ತು ಸೌಲಭ್ಯಗಳ ಕೊರತೆಯೂ ಕಾಡುತ್ತಿದೆ. ಇದೆಲ್ಲದರ ಪರಿಣಾಮವಾಗಿಯೇ ಮೂರು ತಿಂಗಳ ಅಂತರದಲ್ಲಿ ಒಂದೇ ವನ್ಯಧಾಮದಲ್ಲಿ 6 ಹುಲಿಗಳು ಮನುಷ್ಯನ ಸೇಡಿಗೆ ಬಲಿಯಾಗಿವೆ ಎಂಬುದು ವನ್ಯಜೀವಿ ಪ್ರಿಯರ ಆರೋಪವಾಗಿದೆ.
ಕಳೆದ ಜೂನ್ ತಿಂಗಳಲ್ಲಿ, ಹಸುವಿನ ಮೃತದೇಹಕ್ಕೆ ವಿಷಪ್ರಾಶನ ಮಾಡಿ, ಒಂದು ಹುಲಿ ಮತ್ತು ಅದರ ನಾಲ್ಕು ಮರಿಗಳನ್ನು ಹತ್ಯೆ ಮಾಡಲಾಗಿತ್ತು. ಇದೀಗ ಮತ್ತೊಂದು ಹುಲಿಯನ್ನು ಹತ್ಯೆ ಮಾಡಲಾಗಿದೆ. ಇತ್ತೀಚಿನ ಘಟನೆಯು ಸಂರಕ್ಷಣಾ ವಲಯಗಳಲ್ಲಿ ಆತಂಕ ಮೂಡಿಸಿದ್ದು, ಈ ಅಭಯಾರಣ್ಯವು ನಿಧಾನವಾಗಿ 'ಹುಲಿಗಳ ಸಮಾಧಿ ಸ್ಥಳ'ವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜನವರಿಯಿಂದ 15 ಹುಲಿಗಳ ಸಾವು
ಮಲೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿನ 6 ಹುಲಿಗಳ ಹತ್ಯೆ ಸೇರಿದಂತೆ, ಮೈಸೂರು ಭಾಗದ ಅರಣ್ಯ ಪ್ರದೇಶಗಳಲ್ಲಿ ಜನವರಿಯಿಂದ ಈವರೆಗೆ ಒಟ್ಟು 15 ಹುಲಿಗಳು ನಾನಾ ಕಾರಣಗಳಿಂದ ಅಸುನೀಗಿವೆ ಎಂಬುದು ಗಮನಾರ್ಹ ಸಂಗತಿ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಜ.11ರಂದು ನಾಗರಹೊಳೆಯ ಡಿ.ಬಿ.ಕುಪ್ಪೆಯಲ್ಲಿ 1, ಫೆ.2ರಂದು ಹಾಸನದ ಬೇಲೂರು ಅರಣ್ಯದಲ್ಲಿ 1, ಫೆ.17ರಂದು ಶಿವಮೊಗ್ಗದ ಅಂಬ್ಲಿಗೋಳದಲ್ಲಿ 1, ಏ.27ರಂದು ಬಂಡೀಪುರದ ಓಂಕಾರ್‌ನಲ್ಲಿ 1, ಜೂ.26ರಂದು ಮಲೆ ಮಹದೇಶ್ವರಬೆಟ್ಟದಲ್ಲಿ 5, ಆ.7ರಂದು ಬಂಡೀಪುರದ ಗುಂಡ್ರೆಯಲ್ಲಿ 1, ಆ.11ರಂದು ಕಾವೇರಿ ವನ್ಯಧಾಮದಲ್ಲಿ 1, ಆ.20ರಂದು ಪೊನ್ನಂಪೇಟೆಯಲ್ಲಿ 1, ಹಾಗೂ ಅ.2ರಂದು ಮ.ಮ.ಬೆಟ್ಟ ವನ್ಯಧಾಮದ ಪಚ್ಚೆದೊಡ್ಡಿ ಅರಣ್ಯದಲ್ಲಿ 1 ಹುಲಿ ಮೃತಪಟ್ಟಿದೆ.
ಐದು ವರ್ಷದಲ್ಲಿ 76 ಹುಲಿಗಳು ಸಾವು
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ, ಒಂದಲ್ಲ ಒಂದು ಕಾರಣದಿಂದ ಒಟ್ಟು 76 ಹುಲಿಗಳು ಮೃತಪಟ್ಟಿವೆ. ಹುಲಿಗಳು ಅಳಿವಿನಂಚಿನಲ್ಲಿರುವ ಕಾರಣ, ಸರ್ಕಾರವು 'ಹುಲಿ ಸಂರಕ್ಷಿತ ಅರಣ್ಯ ಯೋಜನೆ'ಗಳನ್ನು ಜಾರಿಗೊಳಿಸಿ, ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ. ಆದರೂ, ಹುಲಿಗಳು ಮೃತಪಡುತ್ತಿರುವುದು ವನ್ಯಜೀವಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. 2020ರಿಂದ ಈವರೆಗೆ, ಬಂಡೀಪುರದಲ್ಲಿ 22, ಬಿಳಿಗಿರಿ ರಂಗನಬೆಟ್ಟದಲ್ಲಿ (ಬಿಆರ್‌ಟಿ) 8, ಮಲೆಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ 6, ಭದ್ರಾದಲ್ಲಿ 2, ಮತ್ತು ಪೊನ್ನಂಪೇಟೆಯಲ್ಲಿ 3 ಸೇರಿದಂತೆ ರಾಜ್ಯದ ವಿವಿಧ ಅರಣ್ಯಗಳಲ್ಲಿ ಒಟ್ಟು 76 ವ್ಯಾಘ್ರಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ.
ಹೆಸರು ಹೇಳಲು ಇಚ್ಛಿಸದ ಅರಣ್ಯಾಧಿಕಾರಿಯೊಬ್ಬರು 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿ, "ಈ ಘಟನೆಯು, ಅರಣ್ಯ ಪ್ರದೇಶದಲ್ಲಿ ವರ್ಷಗಳಿಂದ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷದ ತೀವ್ರತೆಯನ್ನು ಮತ್ತೊಮ್ಮೆ ತೋರಿಸಿದೆ. ಗ್ರಾಮಸ್ಥರು ಸರ್ಕಾರದಿಂದ ಪರಿಹಾರ ಪಡೆಯಲು ಅಲೆದಾಡಿದ್ದರು. ಆದರೆ, ಪರಿಹಾರ ನೀಡುವಲ್ಲಿನ ವಿಳಂಬದಿಂದ ಜನರಲ್ಲಿ ಅಸಮಾಧಾನ ಹೆಚ್ಚಿತ್ತು. ಕೆಲವು ಅಸಮಾಧಾನಿತರು ಪ್ರತೀಕಾರದ ಮನೋಭಾವದಿಂದ ಈ ಕ್ರೂರ ಕೃತ್ಯ ನಡೆಸಿರಬಹುದು," ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. "ಹುಲಿ ಸಂರಕ್ಷಣೆಗೆ ವಿಶೇಷ ಕಾರ್ಯಯೋಜನೆ ರೂಪಿಸಬೇಕಾದ ಅಗತ್ಯವಿದೆ. ಪ್ರಕೃತಿಯ ರಕ್ಷಣೆ ಕೇವಲ ಅಧಿಕಾರಿಗಳ ಹೊಣೆಯಲ್ಲ, ಅದು ಸಮಾಜದ ಜವಾಬ್ದಾರಿಯೂ ಹೌದು," ಎಂದಿದ್ದಾರೆ.
ನಾಲ್ವರು ಆರೋಪಿಗಳ ಬಂಧನ
ಪಚ್ಚೆದೊಡ್ಡಿ ಗ್ರಾಮದಲ್ಲಿ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಹನೂರು ತಾಲೂಕಿನ ಪಚ್ಚಮಲ್ಲ ಗ್ರಾಮದ ನಿವಾಸಿ, ಪ್ರಮುಖ ಆರೋಪಿ ಪಚ್ಚಮಲ್ಲ ಹಾಗೂ ಆತನ ಸಹಚರರಾದ ಗಣೇಶ, ಗೋವಿಂದೇಗೌಡ, ಮಂಜುನಾಥ, ಮತ್ತು ಕಂಬಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ, ಸೇಡು ತೀರಿಸಿಕೊಳ್ಳಲು ಹುಲಿಯನ್ನು ಕೊಂದಿರುವುದು ತಿಳಿದುಬಂದಿದೆ. ಆರೋಪಿ ಪಚ್ಚಮಲ್ಲನ ಹಸುವನ್ನು ಹುಲಿ ಬೇಟೆಯಾಡಿ ಕೊಂದಿದ್ದಕ್ಕೆ ರೊಚ್ಚಿಗೆದ್ದಿದ್ದ ಆತ, ತನ್ನ ಸಹಚರರೊಂದಿಗೆ ಸೇರಿ ಮಾಂಸದಲ್ಲಿ ವಿಷವಿಟ್ಟು ಹುಲಿಯನ್ನು ಕೊಂದಿದ್ದ. ಹುಲಿ ಸತ್ತ ನಂತರ, ಕೊಡಲಿಯಿಂದ ಕತ್ತರಿಸಿರುವ ಶಂಕೆ ವ್ಯಕ್ತವಾಗಿದೆ.
ಪರಿಹಾರಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು
ಹುಲಿಗಳ ಹತ್ಯೆಯಾಗುತ್ತಿರುವುದಕ್ಕೆ ವನ್ಯಜೀವಿ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ. 'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, "ಅರಣ್ಯ ಪ್ರದೇಶದ ನಿವಾಸಿಗಳಿಗೆ ಅವರ ಜಾನುವಾರುಗಳ ಹತ್ಯೆಗೆ ಸರ್ಕಾರದಿಂದ ಪರಿಹಾರ ನೀಡುವುದು ತಡವಾಗುತ್ತಿದೆ. ಒಂದು ವರ್ಷಕ್ಕೂ ಅಧಿಕ ಸಮಯವಾದರೂ ಪರಿಹಾರ ಸಿಗುವುದಿಲ್ಲ. ಇದು ಸ್ಥಳೀಯ ಅರಣ್ಯಾಧಿಕಾರಿಗಳ ತಪ್ಪಲ್ಲ. ಉನ್ನತ ಅಧಿಕಾರಿಗಳು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ, ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಮಾಡಿಸಬೇಕು. ಆದರೆ, ಆ ಕೆಲಸವಾಗದ ಕಾರಣ, ಅರಣ್ಯವಾಸಿಗಳಲ್ಲಿ ಅಸಮಾಧಾನ ಉಂಟಾಗಿ, ಇಂತಹ ಪರಿಣಾಮಗಳು ಉಂಟಾಗುತ್ತವೆ. ಇಲ್ಲಿ ಕೇವಲ ಅರಣ್ಯಾಧಿಕಾರಿಗಳಿಂದ ಮಾತ್ರ ತಪ್ಪಾಗುವುದಿಲ್ಲ, ಜನರದ್ದೂ ಸಹ ತಪ್ಪು ಇರುತ್ತದೆ. ಕಾಡುಪ್ರಾಣಿಗಳನ್ನು ಬೇಟೆಯಾಡುವುದರಿಂದ, ಹುಲಿ-ಸಿಂಹಗಳಿಗೆ ಆಹಾರ ಲಭ್ಯವಾಗುವುದಿಲ್ಲ. ಆಗ ಸಹಜವಾಗಿ ಅವು ಜಾನುವಾರುಗಳನ್ನು ಬೇಟೆಯಾಡುತ್ತವೆ. ಅರಣ್ಯವಾಸಿಗಳು ಬೇಟೆಯಾಡುವುದಕ್ಕೆ ಕಡಿವಾಣ ಹಾಕಬೇಕು. ಆಗ ಮಾತ್ರ ಕಾಡುಪ್ರಾಣಿಗಳ ಹತ್ಯೆ ಕಡಿಮೆಯಾಗಬಹುದು," ಎಂದು ಹೇಳಿದರು.
ಮತ್ತೋರ್ವ ವನ್ಯಜೀವಿ ತಜ್ಞ ಗಿರಿ ವಾಲ್ಮೀಕಿ, "ಹುಲಿಗಳ ಹತ್ಯೆ ಪ್ರಕರಣಗಳು ಆತಂಕಕಾರಿಯಾಗಿದೆ. ಇದಕ್ಕೆ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವೇ ಕಾರಣ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಅರಣ್ಯ ಪ್ರದೇಶದ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅವರ ಜಾನುವಾರುಗಳಿಗೆ ನೀಡಬೇಕಾದ ಪರಿಹಾರವನ್ನು ಶೀಘ್ರದಲ್ಲಿಯೇ ನೀಡಬೇಕು. ಆಗ ಕಾಡುಪ್ರಾಣಿಗಳ ಹತ್ಯೆಗೆ ಕಡಿವಾಣ ಹಾಕುವ ಸಾಧ್ಯತೆಯಿದೆ. ಕೆಲವೊಮ್ಮೆ ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ಧ ತಿರುಗಿಬೀಳುವ ಅರಣ್ಯವಾಸಿಗಳು, ಅವರ ಮೇಲಿನ ಕೋಪಕ್ಕೆ ಈ ರೀತಿ ಮಾಡುವ ಉದಾಹರಣೆಗಳೂ ಇವೆ. ಹೀಗಾಗಿ, ಸರ್ಕಾರವು ಅರಣ್ಯವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೆ, ವನ್ಯಜೀವಿಗಳ ರಕ್ಷಣೆಯಾಗಲಿದೆ," ಎಂದು ಹೇಳಿದರು.
ಸತ್ಯಮಂಗಲ ಹಾಗೂ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಕಾವೇರಿ ವನ್ಯಧಾಮ ಹಾಗೂ ಬರಗೂರು ಮೀಸಲು ಅರಣ್ಯದ ಜೊತೆಗೆ ಗಡಿ ಹಂಚಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮವು, ಹುಲಿಗಳ ಆವಾಸಕ್ಕೆ ಯೋಗ್ಯವಾದ ನೆಲೆಯಾಗಿದೆ. ಆದರೆ, ಮಾನವ-ಪ್ರಾಣಿ ಸಂಘರ್ಷದಿಂದಾಗಿ ಇಲ್ಲಿ ಹುಲಿಗಳ ಮಾರಣಹೋಮ ನಡೆಯುತ್ತಿರುವುದು ಪ್ರಾಣಿಪ್ರಿಯರಲ್ಲಿ ಆತಂಕ ಹುಟ್ಟಿಸಿದೆ.