ವಾಯು ಮಾಲಿನ್ಯ | ಹೊಗೆ, ಧೂಳಿನಿಂದ ಉಸಿರುಗಟ್ಟುತ್ತಿವೆ ಬೆಂಗಳೂರು, ಮಂಗಳೂರು, ಮೈಸೂರು !

ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ದೀಪಾವಳಿಗೆ ಮುಂಚೆಯೇ ಆತಂಕದ ಸುದ್ದಿ ಬಂದಿದೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಮೂರು ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ʼಗ್ರೀನ್‌ಪೀಸ್‌ ಇಂಡಿಯಾʼ ಎಚ್ಚರಿಕೆ ನೀಡಿದೆ.

Update: 2024-09-07 08:09 GMT

ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ದೀಪಾವಳಿಗೆ ಮುಂಚೆಯೇ ಆತಂಕದ ಸುದ್ದಿ ಬಂದಿದೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಮೂರು ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಹೆಚ್ಚುತ್ತಿರುವ ಬಗ್ಗೆ ʼಗ್ರೀನ್‌ಪೀಸ್‌ ಇಂಡಿಯಾʼ ಎಚ್ಚರಿಕೆ ನೀಡಿದೆ.

ಬೆಂಗಳೂರು, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿರುವುದು ಅಧ್ಯಯನದಿಂದ ಬಹಿರಂಗವಾಗಿದೆ ಎಂದು ʼಗ್ರೀನ್‌ಪೀಸ್ ಇಂಡಿಯಾʼ ಹೇಳಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳಲ್ಲಿ ಸರಾಸರಿ ಪಿಎಂ 2.5 ಮತ್ತು ಪಿಎಂ 10 (ಇವು ಗಾಳಿಯಲ್ಲಿರುವ ದೂಳು ಮತ್ತು ಅಪಾಯಕಾರಿ ಕಣಗಳನ್ನು ನಿರ್ಧರಿಸುವ ಮಾಪಕಗಳಾಗಿವೆ) ಮಟ್ಟ ಹೆಚ್ಚುತ್ತಲೇ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಮೀರಿದೆ. ವಾಯು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಗರಗಳಲ್ಲಿ ಯಾವುದೇ ಕ್ರಮಗಳನ್ನು ಜರುಗಿಸದೇ ನಿರ್ಲಕ್ಷಿಸಲಾಗಿರುವುದೇ ಈ ಆತಂಕಕಾರಿ ಪರಿಸ್ಥಿತಿಗೆ ಕಾರಣ. ಇದು ಆರೋಗ್ಯದ ವಿಚಾರದಲ್ಲಿ ಆತಂಕದ ಬೆಳವಣಿಗೆ ಎಂದು ಗ್ರೀನ್‌ಪೀಸ್ ಇಂಡಿಯಾದ ಇತ್ತೀಚಿನ ‘ಸ್ಪೇರ್ ದಿ ಏರ್-2’ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಯುಮಾಲಿನ್ಯ ಎಲ್ಲೆಲ್ಲಿ ಹೆಚ್ಚಿದೆ?

ದೇಶದ ಹೈದರಾಬಾದ್, ಚೆನ್ನೈ, ಅಮರಾವತಿ, ವಿಶಾಖಪಟ್ಟಣಂ, ಕೊಚ್ಚಿ, ವಿಜಯವಾಡ, ಬೆಂಗಳೂರು, ಮೈಸೂರು, ಮಂಗಳೂರು, ಮತ್ತು ಪುದುಚೇರಿಗಳ ವಾಯು ಗುಣಮಟ್ಟದ ಬಗ್ಗೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಡಬ್ಲ್ಯೂಎಚ್ಒ ಮಾನದಂಡಕ್ಕಿಂತ ಅಧಿಕ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಪಿಎಂ2.5 ಮತ್ತು ಪಿಎಂ10 ಪ್ರಮಾಣ 10 ಪಟ್ಟು ಹೆಚ್ಚಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಿಗಿಂತ 9 ಪಟ್ಟು ಹೆಚ್ಚಾಗಿದೆ ಮತ್ತು ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳ (NAAQS) ಮಿತಿಗಳನ್ನು ಮೀರಿದೆ ಎಂದು ಅಧ್ಯಯನ ಹೇಳಿದೆ.

ಹೈದರಾಬಾದ್, ವಿಜಯವಾಡ, ಕೊಚ್ಚಿ, ಮಂಗಳೂರು, ಅಮರಾವತಿ ಮತ್ತು ಚೆನ್ನೈನಲ್ಲಿ ವಾರ್ಷಿಕ ಸರಾಸರಿ ಪಿಎಂ2.5 ಮಟ್ಟ 6 ರಿಂದ 7 ಪಟ್ಟು ಹೆಚ್ಚಾಗಿದೆ. ಆದರೆ ಬೆಂಗಳೂರು, ಪುದುಚೇರಿ ಮತ್ತು ಮೈಸೂರಿನಲ್ಲಿ ವಾರ್ಷಿಕ ಸರಾಸರಿ ಪಿಎಂ10 ಮಟ್ಟ ವಿಶ್ವಸಂಸ್ಥೆಯ ಮಾರ್ಗಸೂಚಿ ಪ್ರಕಾರ ಇರಬೇಕಾದ್ದಕ್ಕಿಂತ 4 ರಿಂದ 5 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.

ಶುದ್ಧ ಗಾಳಿಯು ಮನುಷ್ಯನ ಆರೋಗ್ಯಕ್ಕೆ ಅತ್ಯಗತ್ಯ. ಆದರೆ, ದಕ್ಷಿಣ ಭಾರತದ ಈ ಎಲ್ಲಾ ನಗರಗಳಲ್ಲಿನ ದೂಳಿನ ಕಣಗಳ ಮಟ್ಟವು ಡಬ್ಲ್ಯುಎಚ್ಒದ ಪರಿಷ್ಕೃತ ಮಾರ್ಗಸೂಚಿಗಳನ್ನು ಮೀರಿದೆ ಎಂಬುದನ್ನು ಈ ವರದಿಯು ಬಹಿರಂಗಪಡಿಸಿದೆ ಎಂದು ಸಂಶೋಧಕಿ ಆಕಾಂಕ್ಷಾ ಸಿಂಗ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.

ಅಧ್ಯಯನ ವರದಿಯು, ದಕ್ಷಿಣದ ರಾಜ್ಯಗಳಲ್ಲಿ ಶುದ್ಧ ಗಾಳಿ ಇದೆ ಎಂಬ ವಾದವನ್ನು ಸುಳ್ಳಾಗಿಸಿದೆ. ದಕ್ಷಿಣದ ರಾಜ್ಯಗಳಲ್ಲಿನ ಒಂದೇ ಒಂದು ಪ್ರಮುಖ ನಗರವೂ ವಿಶ್ವ ಆರೋಗ್ಯ ಸಂಸ್ಥೆಯ ಸುರಕ್ಷಿತ ಮತ್ತು ಆರೋಗ್ಯಕರ ಗಾಳಿಯ ಮಾನದಂಡಗಳನ್ನು ಈಡೇರಿಸುವುದಿಲ್ಲ ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಹೇಳಿದ್ದಾರೆ.

Tags:    

Similar News