ವಾಸುದೇವ್‌ ರೇಖೆಯಲ್ಲಿ ಅರಳಿದ ರಾಮಾನುಜನ್‌ ಕಾವ್ಯದ ಅಂತರಾತ್ಮ

ವಾಸುದೇವ್‌ ರೇಖೆಗಳ ನೆವದಲ್ಲಿ ಎ.ಕೆ. ರಾಮಾನುಜನ್‌ ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು...

Update: 2024-03-15 01:00 GMT

Self Portrait

I resemble everyone

but myself ̧ and sometimes see

in shop windows ̧

despite the well known laws

of optics ̧

the portrait of a stranger ̧

date unkown ̧

often signed in a corner

by father.

A K Ramanuja̧n The Striders

(ʼಸ್ಟ್ರೈಡರ್ಸ್‌ʼ ರಾಮಾನುಜನ್‌ ಅವರ ಮೊದಲ ಇಂಗ್ಲಿಷ್‌ ಕವನ ಸಂಕಲನ)


ಮಾರ್ಚ್ 16 ಕ್ಕೆ ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಭಾಷಾ ತಜ್ಞ, ಭಾಷಾಂತರಕಾರ ಎ.ಕೆ ರಾಮಾನುಜನ್‌ ನಮ್ಮನ್ನಗಲಿ 31 ವರ್ಷ. ಅವರು ಇಂದು ನಮ್ಮೊಂದಿಗಿದ್ದರೆ ಅವರಿಗೆ 95 ವರ್ಷವಾಗುತ್ತಿತ್ತು. ಇವರ ಹುಟ್ಟುಹಬ್ಬ ಒಂದು ನೆವವಾಗಿ Indian Institute of World Culture ನಲ್ಲಿ Tribute to Ramanujan (ರಾಮಾನುಜನ್‌ ಅವರಿಗೊಂದು ಶ್ರದ್ಧಾಂಜಲಿ) An exhibition of drawings by S G Vasudev ಎಂಬ ಎಸ್.‌ಜಿ. ವಾಸುದೇವ್‌ ಅವರ ಚಿತ್ರಗಳ ಪ್ರದರ್ಶನ ಮಾರ್ಚ 15 ರಂದು ಆರಂಭವಾಗಲಿದೆ. ರಾಮಾನುಜನ್‌ ಅವರ ಪದ್ಯಗಳನ್ನು ಆಧರಿಸಿ ರಚಿಸಿದ ಈ ರೇಖಾ ಚಿತ್ರಗಳ ಪ್ರದರ್ಶನ ಈ ತಿಂಗಳ 24 ರಂದು ಅಂತ್ಯಗೊಳ್ಳಲಿದೆ.

ಮಾರ್ಚ್ 16 ರಂದು Ramanujan A Perspective (ರಾಮಾನುಜನ್‌ ಒಂದು ದೃಷ್ಟಿಕೋನ) ಎಂಬ ಸಂವಾದ ನಡೆಯಲಿದೆ. ಈ ಸಂವಾದದಲ್ಲಿ ಸಿನಿಮಾ ಮತ್ತು ರಂಗಭೂಮಿ ಕಲಾವಿದ ಪ್ರಕಾಶ್‌ ಬೆಳವಾಡಿ, ವಿದ್ವಾಂಸೆ ಹಾಗೂ ಖ್ಯಾತ ಅನುವಾದಕಿ ವನಮಾಲಾ ವಿಶ್ವನಾಥ್‌, ದೃಶ್ಯ ಕಲಾವಿದ ಎ ಎಂ ಪ್ರಕಾಶ್‌, ಕಲಾ ಇತಿಹಾಸಗಾರ್ತಿ, ಡಾ. ಪ್ರಮಿಳಾ ಲೋಚನ್‌ ಅವರು ರಾಮಾನುಜನ್‌ ಅವರ ಅರಿವಿನ ಜಗತ್ತಿನ ಕುರಿತು ವಾಸುದೇವ್‌ ಅವರೊಂದಿಗೆ ಚರ್ಚಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ರಾಮಾನುಜನ್‌ ಅವರ ಪದ್ಯಗಳನ್ನು ಖ್ಯಾತ ಲೇಖಕರು ವಾಚಿಸುತ್ತಿದ್ದಂತೆ ವಾಸುದೇವ್‌ ಅವರ ರೇಖಾ ಚಿತ್ರಗಳು ಅನಿಮೇಷನ್‌ ವಿನ್ಯಾಸದಲ್ಲಿ ಮೂಡಿಬರುತ್ತವೆ. ಇದನ್ನು ನೋಡುವುದು, ಕೇಳುವುದು ರಾಮಾನುಜನ್‌ ಪ್ರತಿಭೆಯನ್ನು ಆರಾಧಿಸುವವರಿಗೆ ಒಂದು ಕಾವ್ಯಹಬ್ಬ ಎಂದೇ ಹೇಳಬಹುದು ಎನ್ನುತ್ತಾರೆ Indian Institute of World Culture ನ ಅರಕಳಿ ವೆಂಕಟೇಶ್.‌

ಮನೋಹರ ಗ್ರಂಥಮಾಲಾ 2011ರಲ್ಲಿ ಎ.ಕೆ. ರಾಮಾನುಜನ್‌ ಅವರ ಸಮಗ್ರ ಕನ್ನಡ ಕೃತಿಗಳನ್ನು ಪ್ರಕಟಿಸಿ, ಕನ್ನಡ ವಾಗ್ಮಯ ಜಗತ್ತಿಗೆ ಉಪಕರಿಸಿದೆ. ಇದೇ ರೀತಿ 2012ರಲ್ಲಿ ಎ.ಕೆ. ರಾಮಾನುಜನ್‌ ಅವರ ಆಯ್ದ ಇಂಗ್ಲಿಷ್‌ ಪ್ರಬಂಧಗಳ ಕನ್ನಡ ಅನುವಾದವನ್ನು ಪ್ರಕಟಿಸಿ ಉಪಕರಿಸಿದೆ. ರಾಮಾನುಜನ್‌ ಸಮಗ್ರವನ್ನು ರಮಾಕಾಂತ್‌ ಜೋಶಿ ಅವರು ಖ್ಯಾತ ಲೇಖಕ-ಅನುವಾದಕ, ಕವಿ ಎಸ್.‌ ದಿವಾಕರ್‌ ಜೊತೆಗೂಡಿ ಸಂಪಾದಿಸಿದ್ದರೆ, ಪ್ರಬಂಧಗಳನ್ನು ಡಾ. ಓ.ಎಲ್.‌ ನಾಗಭೂಷಣ ಸ್ವಾಮಿ ಅನುವಾದಿಸಿ ಉಪಕರಿಸಿದ್ದಾರೆ. ರಾಮಾನುಜನ್‌ ಅವರು ತಮ್ಮ ಹೊಕ್ಕಳಲ್ಲಿ ಹೂವಿಲ್ಲ ಕವನ ಸಂಕಲನವನ್ನು ಅರ್ಪಿಸಿರುವುದು; ತಮ್ಮ ಪ್ರೀತಿಪಾತ್ರರಾದ ಅಡಿಗ, ಜಿ.ಬಿ.ಜೋಶಿ (ಮನೋಹರ ಗ್ರಂಥಮಾಲೆ ಅಸ್ತಿತ್ವಕ್ಕೆ ಕಾರಣರಾದವರು), ಎಂ.ಜಿ. ಕೃಷ್ಣಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಹಾಗೂ ಅವರ ಪತ್ನಿ ಮಾಲಿಗೆ.

ಭಾರತ-ಅಮೆರಿಕಾ ನಡುವಿನ ಕೂಡು-ಗೆರೆ; ರಾಮಾನುಜನ್‌

ಅತ್ತಿಪಟ್ಟು ಕೃಷ್ಣಸ್ವಾಮಿ ರಾಮಾನುಜನ್‌, ಕ್ವಚಿತ್ತಾಗಿ ಎ.ಕೆ. ರಾಮಾನುಜನ್‌ ಎಂದೇ ವಿದ್ವತ್‌ ವಲಯದಲ್ಲಿ ಪರಿಚಿತರಾಗಿರುವ ರಾಮಾನುಜನ್‌ ಹುಟ್ಟಿದ್ದು ಮಾರ್ಚ್ 16, 1929 ರಂದು. ಮೈಸೂರಿನಲ್ಲಿ ಹುಟ್ಟಿದ ರಾಮಾನುಜನ್‌ ಕನ್ನಡ ಮತ್ತು ಇಂಗ್ಲಿಷ್‌ ಬಾಷೆಗಳೆರಡರಲ್ಲೂ ಲೀಲಾಜಾಲವಾಗಿ ಗದ್ಯ-ಪದ್ಯ ರಚಿಸಿದ ಕೀರ್ತಿಗೆ ಭಾಜನರಾದವರು. ಕನ್ನಡ ಭಾಷೆಯ ಸಂಪತ್ತನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಮಹನೀಯರಲ್ಲಿ ಒಬ್ಬರು. ದ್ವಿಭಾಷಾ ಪ್ರವೀಣರಾದ ರಾಮಾನುಜನ್‌ ಗೆಳೆಯರ ನಡುವೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದುದು ಹೀಗೆ; “ನಾನು ಭಾರತ-ಅಮೆರಿಕಾ ನಡುವಿನ ಕೂಡುಗೆರೆ (hyphen) ರಾಮಾನುಜನ್‌ ಅವರನ್ನು ಕೆಲವು ಬಾರಿ ಭೇಟಿ ಮಾಡಿ, ಅವರೊಂದಿಗೆ ಮಾತನಾಡಿ, ಅವರು ಮಾತನಾಡಿದ್ದನ್ನು ಕೇಳಿ ಗ್ರಹಿಸಿ, ಅರ್ಥೈಸಿಕೊಂಡು, ಅಂತರಂಗಕ್ಕೆ ಕೇಳಿಸದವರಿಗೆ ಮಾತ್ರ ಅರ್ಥವಾಗುವ ವ್ಯಕ್ತಿತ್ವ ರಾಮಾನುಜನ್‌‌ ಅವರದು.

ಅವರೇ ಹೇಳುವಂತೆ. "ನೋಡುವುದಕ್ಕೆ ಎರಡು ಕಣ್ಣಿದ್ದರಷ್ಟೇ ಸಾಲದು, ಅದೃಷ್ಟವೂ ಬೇಕು”- ಇವರು ರಾಮಾನುಜನ್‌. ಎಸ್.‌ ದಿವಾಕರ್‌ ಅವರು ಹೇಳುವಂತೆ; “ಐದಡಿ ಎತ್ತರವೂ ಇಲ್ಲದಿದ್ದ, ತೀರ ಸಪೂರವಾಗಿದ್ದ ಕೇಳಿಸಿಯೂ ಕೇಳಿಸದಂಥ ಮೃದು ಧ್ವನಿಯಲ್ಲಿ ಮಾತನಾಡುತ್ತಿದ್ದ ರಾಮಾನುಜನ್‌ರದು ನೋಡಿದ ತಕ್ಷಣ ಮನಸ್ಸಿನಲ್ಲಿ ಅಚ್ಚೊತ್ತಿ ನಿಲ್ಲುವಂಥ ವ್ಯಕ್ತಿತ್ವವೇನಲ್ಲ. ಆದರೆ ತಮ್ಮ ಆಳವಾದ ಪಾಂಡಿತ್ಯದಿಂದ, ನಿರ್ದಿಷ್ಟವಾದ ವಿವರವೊಂದನ್ನು ಸಾರ್ವತ್ರಿಕಗೊಳಿಸಬಲ್ಲ ಅಸಮಾನ್ಯ ಶಕ್ತಿಯಿಂದ, ಅಪ್ಪಟ ಕಾವ್ಯ ಪ್ರತಿಭೆಯಿಂದ, ಎಲ್ಲಕ್ಕಿಂತ ಮಿಗಿಲಾಗಿ ತಿಳಿಯಾದ ಹಾಸ್ಯಪ್ರಜ್ಞೆಯಿಂದ ತಮ್ಮ ಸಂಪರ್ಕಕ್ಕೆ ಬಂದವರೆಲ್ಲರ ಮೇಲೂ ಪ್ರಭಾವ ಬೀರಬಲ್ಲ ವ್ಯಕ್ತಿತ್ವ ಅವರದು”.

ಒಂದು ಜನಾಂಗದ ಕಣ್ಣು ತೆರೆಸಿದ ಕವಿ-ಲೇಖಕ ಎಂದೇ ಖ್ಯಾತರಾದ ಮೊಗೇರಿ ಗೋಪಾಲಕೃಷ್ಣ ಅಡಿಗರ ಪ್ರಭಾವ ಕಾವ್ಯಲೋಕದಲ್ಲಿ ದಟ್ಟವಾಗಿದ್ದ ಕಾಲದಲ್ಲಿ ಅಡಿಗರ ಪ್ರಭಾವದಿಂದ ಮುಕ್ತರಾಗಿ ಹೊಸ ಸಂವೇದನೆಗಳೊಂದಿಗೆ ತಮ್ಮದೆ ಆದ ಹೊಸ ಶೈಲಿಯಲ್ಲಿ ಕಾವ್ಯವನ್ನು ರಚಿಸಿದವರು ರಾಮಾನುಜನ್.‌ ʼಹೊಕ್ಕಳಲ್ಲಿ ಹೂವಿಲ್ಲʼ ಸಂಕಲನದ ಮೂಲಕ ಕಾವ್ಯ ರಚನೆ, ಭಾಷಾ ಬಳಕೆ, ಶಕ್ತ ಪ್ರತಿಮೆಗಳ ಹೊಸ ಲೋಕವೊಂದನ್ನು ಸೃಷ್ಟಿಸಿದವರು ರಾಮಾನುಜನ್.‌

ಮೈಸೂರು ವಿಶ್ವವಿದ್ಯಾನಿಲಯ ಮತ್ತು ಪುಣೆಯ ಡೆಕ್ಕನ್‌ ಕಾಲೇಜಿನಲ್ಲಿ ಪದವಿಗಳನ್ನು ಪಡೆದ ರಾಮಾನುಜನ್‌, ಇಂಡಿಯಾನಾ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದರು. 1962ರಲ್ಲಿ ಷಿಕಾಗೋ ವಿಶ್ವವಿದ್ಯಾಲದಲ್ಲಿ ಭಾಷಾ ವಿಜ್ಙಾನ ಹಾಗೂ ದ್ರಾವಿಡ ಅಧ್ಯಯನದ ಅಧ್ಯಾಪಕರಾಗಿ ಸೇರಿದ ರಾಮಾನುಜನ್‌ 1993ರಲ್ಲಿ ನಿಧನರಾಗುವ ತನಕದ ತಮ್ಮ ವೃತ್ತಿ ಜೀವನವನ್ನು ಅಲ್ಲಿಯೇ ನಡೆಸಿದರು. ತಮ್ಮ ಸೇವೆಯನ್ನು ಕೇವಲ ಷಿಕಾಗೋ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮತಗೊಳಿಸಿಕೊಳ್ಳದೆ ವಿಸ್ಕಾನ್ಸಿನ್‌, ಬರ್ಕಲೇ, ಮಿಷಿಗನ್‌ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಬಹುಶೃತ ಜ್ಞಾನವನ್ನು ಹಂಚಿದರು. ಷಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷಿಯಾ ಭಾಷೆಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದ ಕೀರ್ತಿ ರಾಮಾನುಜನ್‌ ಅವರದು. ಆಗ ಭಾರತದಲ್ಲಿ, ಕನ್ನಡ ಹಾಗೂ ತಮಿಳು ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನಕ್ಕೆ, ಸಂಶೋಧನೆಗೆ ಅವಕಾಶಗಳಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ತಾವು ಅಮೆರಿಕೆಗೆ ಹೋಗುತ್ತಲೇ ಇರಲಿಲ್ಲ ಎಂದು ರಾಮಾನುಜನ್‌ ತಮ್ಮ ಸ್ನೇಹಿತರೊಂದಿಗೆ ಅಲವೊತ್ತಿಕೊಂಡಿರುವುದೂ ಇದೆ.

“ರಾಮಾನುಜನ್‌ ಅಮೆರಿಕೆಯಲ್ಲಿ ಕನ್ನಡ, ತಮಿಳು ಗ್ರಂಥಗಳ ಬಹುದೊಡ್ಡ ಸಂಗ್ರಹವನ್ನಿಟ್ಟುಕೊಂಡಿದ್ದರು. ಹಾಗಾಗಿ ತಾಯ್ನಾಡಿನಿಂದ ದೂರವಿದ್ದರೂ, ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಅವರು ಭಾರತ ಮತ್ತು ಅಮೆರಿಕಾ ಎರಡೂ ದೇಶಗಳಲ್ಲಿ ಏಕಕಾಲದಲ್ಲಿ ಬದುಕಲು, ಚಿಂತಿಸಲು, ಸೃಜನಶೀಲರಾಗಲು ಸಾಧ್ಯವಾಯಿತು. ಭಾರತದಲ್ಲಿದ್ದಾಗಲೇ ಪ್ರಾಚೀನ ತಮಿಳು ಕಾವ್ಯ ಅವರಿಗೆ ಹುಚ್ಚು ಹಿಡಿಸಿತ್ತು. ಹಾಗಾಗೆ ಅವರು ಕನ್ನಡದ ವಚನ ಸಾಹಿತ್ಯವನ್ನು ತಮಿಳಿನ ಸಂಗಮ ಕಾವ್ಯವನ್ನು ಸಮರ್ಥವಾಗಿ ಅನುವಾದಿಸಲು ಸಹಕಾರಿಯಾಯಿತು” ಎನ್ನುವುದು ದಿವಾಕರ್‌ ಅವರು ರಾಮಾನುಜನ್‌ರನ್ನು ಕಾಣುವ ರೀತಿ.

ಅಮೆರಿಕಾದಲ್ಲಿ ಅವರು ಸದಾ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಾದಂಥ ಪರಿಸ್ಥಿತಿಯಲ್ಲಿ, ಭಾರತದ ಜೀವನ ವಿಧಾನ ಮತ್ತು ಬೌದ್ಧಿಕ ಚಿಂತನೆಗಳ ಬಗೆಗೆ ಹಿಂದೆ ಯಾರೂ ಕಂಡುಕೊಳ್ಳಲಾಗದ, ತೀರಾ ಸ್ವೋಪಜ್ಞವಾದ ಒಳನೋಟಗಳನ್ನು ಕಂಡುಕೊಂಡರೆಂಬುದು ನಿಜಕ್ಕೂ ಕುತೂಹಲಕರ ಸಂಗತಿ.

ಸ್ಟ್ರೈಡರ್ಸ್‌, ರಿಲೇಷನ್ಸ್‌, ಸೆಕೆಂಡ್‌ ನೈಟ್‌ ಎಂಬ ಮೂರು ಮೂರು ಇಂಗ್ಲಿಷ್‌ ಕವನಗಳ ಸಂಕಲನಗಳನ್ನು ಹೊರತಂದ ರಾಮಾನುಜನ್‌ ಭಾರತದ ಆಧುನಿಕ ಇಂಗ್ಲಿಷ್‌ ಕಾವ್ಯಕ್ಕೆ ಹೊಸನೀರು ಹರಿಸಿದವರು. ಆದರೆ ಅವರು ಜಗತ್ತಿಗೆ ಬಿಟ್ಟುಹೋಗಿರುವ ಅಮೂಲ್ಯ ಕೊಡುಗೆಯೆಂದರೆ, ಅವರು ಇಂಗ್ಲಿಷ್ ಗೆ ಮಾಡಿರುವ ಅನುವಾದಗಳು. ಇವುಗಳಲ್ಲಿ ತಮಿಳಿನ ಸಂಗಮ ಕಾಲದ ಕಾವ್ಯ ʼಇಂಟೀರಿಯರ್‌ ಲ್ಯಾಂಡ್‌ ಸ್ಕೇಪ್ʼ, ಆಳ್ವಾರ್‌ ಅವರ ಕಾವ್ಯ ʼಹಿಮ್ಸ್‌ ಫಾರ್‌ ದ ಡ್ರೌನಿಂಗ್‌ʼ, ನಮ್ಮ ವಚನಕಾರರ ಆಯ್ದ ವಚನಗಳಿರುವ ʼಸ್ಪೀಕಿಂಗ್‌ ಆಫ್‌ ಶಿವʼ, ಭಾರತದ ಜಾನಪದ ಕಥೆಗಳಾದ ʼಫೋಕ್‌ಟೇಲ್ಸ್‌ ಆಫ್‌ ಇಂಡಿಯಾʼ, ಹಾಗೂ ಯು. ಆರ್.‌ ಅನಂತಮೂರ್ತಿ ಅವರ ʼಸಂಸ್ಕಾರʼ ಮುಖ್ಯವಾದವು ಎಂದು ದಿವಾಕರ್‌ ಸ್ಪಷ್ಟವಾಗಿ ಹೇಳುತ್ತಾರೆ. ಹೌದು, ಒಂದು ಸಂಸ್ಕೃತಿಯಲ್ಲಿ, ನಿರ್ದಿಷ್ಟ ಸಂದರ್ಭವೊಂದರಲ್ಲಿ ಹುಟ್ಟಿದ ಕೃತಿಯನ್ನು ವಿಭಿನ್ನ ದೇಶಕಾಲದ ಭಾಷೆಗೆ ಅನುವಾದಿಸುವಾಗ ಎದುರಿಸಬೇಕಾದ ಸಮಸ್ಯೆಗಳು ಒಂದೆರಡಲ್ಲ. ಈ ಸವಾಲನ್ನು ರಾಮಾನುಜನ್‌ ಮುಖಾಮುಖಿಯಾಗಿ ಯಶಸ್ವಿ ಕೂಡ ಆದರೆನ್ನುವುದು ಇಲ್ಲಿ ಬಹುಮುಖ್ಯ. ಭಾಷಾ ಶಾಸ್ತ್ರದಲ್ಲಿ ಪರಿಣಿತರೆನ್ನಿಸಿಕೊಂಡಿದ್ದ ರಾಮಾನುಜನ್‌ ದ್ರಾವಿಡ ಭಾಷೆಗಳಲ್ಲಿನ ಜಾತೀಯ ಉಪಭಾಷೆಗಳ ಬಗ್ಗೆ ಸಂಶೋಧನಾ ಲೇಖನ ಬರೆದರು. ನೋಮ್‌ ಚಾಮ್ಸಕಿ ಯ ಸಿದ್ಧಾಂತಗಳ ಬೆಳಕಿನಲ್ಲಿ ಕನ್ನಡ ವ್ಯಾಕರಣವನ್ನು ವಿವರಿಸಿದರು. ಅವರ ಆಧ್ಯಯನ ಸಂಶೋಧನೆಯ ವ್ಯಾಪ್ತಿ ಎಷ್ಟೆಂದು ಅರಿಯಬೇಕಾದರೆ ಅವರ ನಿಧನಾನಂತರ ಪ್ರಕಟವಾದ ಪ್ರಕಟವಾದ ʼದ ಕಲೆಕ್ಟೆಡ್‌ ಎಸ್ಸೇಸ್‌ʼ ಪ್ರಬಂಧ ಸಂಕಲನವನ್ನು ನೋಡಬೇಕು.

ದಕ್ಷಿಣ ಭಾಷೆಗಳ ರಾಯಭಾರಿ

ರಾಮಾನುಜನ್‌ ಅವರು ಅಮೆರಿಕೆಯಲ್ಲಿ ನೆಲೆಸಿದ್ದರೂ, ಅವರು ಪ್ರತಿ ವರ್ಷ ನಾಲ್ಕೈದು ತಿಂಗಳು ಭಾರತಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ಬಂದು ಇಲ್ಲಿಯ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿಕೊಂಡು ಹೋಗುತ್ತಿದ್ದರು. ಅವರ ಅಭ್ಯಾಸ ಕನ್ನಡ, ತಮಿಳು ಬಾಷೆಯಲ್ಲಿಯ, ಹಿಂದಿನ ಸಾಹಿತ್ಯವನ್ನು ಇಂಗ್ಲಿಷ್ ಗೆ ಭಾಷಾಂತರಿಸುವ ಕಾರ್ಯದಲ್ಲಿ ನಿರತವಾಗಿತ್ತು. ಈ ಅರ್ಥದಲ್ಲಿ ಅವರು ನಿಜವಾದ ಭಾರತೀಯ ದಕ್ಷಿಣ ಭಾಷೆಯ ರಾಯಭಾರಿಯಾಗಿದ್ದರು.

ರಾಮಾನುಜನ್‌ ಕೇವಲ ಕವಿಯಷ್ಟೇ ಅಲ್ಲ. ಅವರು ವಿಶ್ವಮಟ್ಟದ ಭಾಷಾಂತರಕಾರರೂ ಹೌದು. ಕನ್ನಡ ವಚನ ಸಾಹಿತ್ಯವನ್ನು ʼSpeaking of Shivá ದ ಮೂಲಕ 12ನೇ ಶತಮಾನದ ವಚನ ಸಾಹಿತ್ಯವನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದರು. ರಾಮಾನುಜನ್‌ ಅವರ The Interior Landscape ಪ್ರಾಚೀನ ತಮಿಳು ಸಾಹಿತ್ಯವನ್ನು ಪಶ್ಚಿಮ ಲೋಕಗಳಿಗೆ ಪರಿಚಯಿಸಿದೆ. ಕನ್ನಡ ವಿದ್ವತ್‌ಲೋಕ ಕಂಡ ವಿಶಿಷ್ಟ ವಿಮರ್ಶಕ ಎಂ.ಜಿ. ಕೃಷ್ಣಮೂರ್ತಿ ಅವರೊಂದಿಗೆ ಸೇರಿ ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳನ್ನು ಇಂಗ್ಲಿಷ್‌ ಗೆ ಅನುವಾದ ಮಾಡಿದ ರಾಮಾನುಜನ್‌ , ಜ್ಞಾನಪೀಠ ಪುರಸ್ಕೃತ ಸಾಹಿತಿ ಯು. ಆರ್‌. ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯನ್ನು ಇಂಗ್ಲಿಷ್ ಗೆ ಅನುವಾದಿಸಿದರು. ಹೊಕ್ಕಳಲ್ಲಿ ಹೂವಿಲ್ಲ , ಕುಂಟೋ ಬಿಲ್ಲೆ, ಹಾಗೂ ʼಮತ್ತು ಇತರ ಕವಿತೆಗಳು, ಮತ್ತೊಬ್ಬನ ಆತ್ಮಚರಿತ್ರೆ, ಅವರ ಪ್ರಮುಖ ಕೃತಿಗಳು. ರಾಮಾನುಜನ್‌ ಅವರ ಸಮಗ್ರ ಕೃತಿಗಳನ್ನು ಮನೋಹರ ಗ್ರಂಥಮಾಲೆ ಇತ್ತೀಚೆಗೆ ಹೊರತಂದಿದೆ. ಅದರಲ್ಲಿ ಅವರ ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ನಾಲ್ಕು ಸಣ್ಣ ಕಥೆಗಳು ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತಾದ ಕಿರುಹೊತ್ತಿಗೆ, ಅಡಿಗರು ಹೊರತರುತ್ತಿದ್ದ ಸಾಕ್ಷಿ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾದ ಕವನಗಳು, ಐವತ್ತರ ದಶಕದಲ್ಲಿ ರಾಶಿ ಅವರು ಹೊರತರುತ್ತಿದ್ದ ʼಕೊರವಂಜಿʼ ಪತ್ರಿಕೆಯಲ್ಲಿ ಪ್ರಕಟವಾದ ಅವರ ನಗೆ ಬರಹಗಳು ಇದರಲ್ಲಿವೆ.

ಪದ್ಮಶ್ರೀ ಪುರಸ್ಕೃತ

ರಾಮಾನುಜನ್‌ ಅವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಷ್ಟೇ ಅಲ್ಲ 1983ರಲ್ಲಿ ಅವರಿಗೆ ಪ್ರಸಿದ್ಧ ಮ್ಯಾಕ್‌ ಆರ್ಥರ್‌ ಫೆಲೋಷಿಪ್‌ ಗೌರವ ಕೂಡ ದಕ್ಕಿತ್ತು.

ಸಾಹಿತ್ಯ ಚಿಂತನೆ, ಕ್ಲಾಸಿಕಲ್‌ ಸಾಹಿತ್ಯ , ಜಾನಪದ, ಹೆಣ್ಣುಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ-ಈ ಎಲ್ಲ ವಲಯಗಳಿಗೆ ರಾಮಾನುಜನ್‌ ಅವರ ಕೊಡುಗೆ ಅಪೂರ್ವವಾದದ್ದು. ಸಂರಚನಾವಾದಕ್ಕೆ, ಪಠ್ಯದ ನಿಕಟ ಓದು ಮತ್ತು ವಿಶ್ಲೇಷಣೆಗೆ ಒಲಿದವರು ರಾಮಾನುಜನ್.‌ ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು, ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ಮತ್ತು ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್‌ ಬರವಣಿಗೆ ಮಾಡಿಕೊಡುತ್ತದೆ. ಶೈಕ್ಷಣಿಕ ಶಿಸ್ತಿಗೆ ಅತ್ಯಂತ ಸೂಕ್ತವಾದ ಸೌಷ್ಠುವವನ್ನೂ ರಾಮಾನುಜನ್‌ ಅವರ ಬರವಣಿಗೆಯಲ್ಲಿ ಕಾಣಬಹುದು . ಅಂತಾರಾಷ್ಟ್ರೀಯ ಮಟ್ಟದ ಚಿಂತಕರ ಬರವಣಿಗೆ ಎಷ್ಟು ಸದೃಢವೋ, ಸಹಜ, ಸುಲಲಿತವೋ ಅದೇ ಮಟ್ಟದ ದೃಢ, ಸಹಜ ಮತ್ತು ಲಲಿತ ಬರವಣಿಗೆ ರಾಮಾನುಜನ್‌ ಅವರದು ಎನ್ನುತ್ತಾರೆ ಎ.ಕೆ. ರಾಮಾನುಜನ್‌ ಅವರ ಆಯ್ದ ಇಂಗ್ಲೀಷ್‌ ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿರುವ ವಿದ್ವಾಂಸರಾದ ಓ. ಎಲ್.‌ ನಾಗಭೂಷಣ ಸ್ವಾಮಿ.

ಕನ್ನಡ ಕಾವ್ಯ ಲೋಕದಲ್ಲಿ ರಾಮಾನುಜನ್‌ ಅವರ ವಿಶಿಷ್ಟ ಧ್ವನಿ ಕೇಳಿಸುವುದು ಮುಖ್ಯವಾಗಿ ಅವರ ಕಾವ್ಯದಲ್ಲಿ. ʼಹೊಕ್ಕಳಲ್ಲಿ ಹೂವಿಲ್ಲʼ, ʼಮತ್ತು ಇತರ ಪದ್ಯಗಳುʼ, ʼಕುಂಟೋಬಿಲ್ಲೆ..ಹೀಗೆ ಮೂರು ಸಂಕಲನಗಳಲ್ಲಿ ಹರಡಿಕೊಂಡಿರುವ ಒಟ್ಟು ಕಾವ್ಯದಲ್ಲಿ ಅವರು ವಿವರಗಳಿಗೆ ನೀಡುವ ಸೂಕ್ಷ್ಮ ಗಮನ ಎದ್ದು ಕಾಣುತ್ತದೆ. . ಆಡುಮಾತಿನ ಲಯಕ್ಕೆ ಹತ್ತಿರವಾದ, ಸೂಕ್ಷ್ಮ ವ್ಯಂಗ್ಯದ, ಅನ್ಯೋಕ್ತಿಯಿಂದ ಸಮೃದ್ಧವಾದ ಹೊಚ್ಚ ಹೊಸ ಬಗೆಯ ಕವನಗಳು ರಾಮಾನುಜನ್‌ರದು.

ತೀರಾ ಅಮೂರ್ತ ಕಾವ್ಯ

ಖ್ಯಾತ ವಿಮರ್ಶಕ ಡಿ.ಆರ್‌. ನಾಗಾರಾಜ್‌ ಅವರ ಪ್ರಕಾರ “ರಾಮಾನುಜನ್‌ ಅವರದ್ದು ತೀರಾ ಅಮೂರ್ತವಾದ ಕಾವ್ಯ. ಹಾಗಾಗಿ ಓದುಗರಿಂದಲೂ ಉಗ್ರವಾದ ಅಕ್ಷರ ನಿಷ್ಠೆಯನ್ನು ನಿರೀಕ್ಷಿಸುವ ಕಾವ್ಯ. ಈ ದೃಷ್ಟಿಯಿಂದ ರಾಮಾನುಜನ್‌ ಕಾವ್ಯದ ಕೆಲವು ಅನ್ಯ ಸಂಸ್ಕೃತಿಗಳ ವಿವರಗಳ ಪರಿಚಯವಿಲ್ಲದೆ ಹೋದರೆ ಆ ವಿವರಗಳು ಓದುಗನಿಗೆ ಏನನ್ನೂ ಧ್ವನಿಸದೇ ಹೋಗಬಹುದು. ಕೆಲವು ವಿವರಗಳಲ್ಲಿ ಸಾರ್ವಕಾಲಿಕತೆಯನ್ನು ಧ್ವನಿಸುತ್ತಾ, ಮತ್ತೆ ಕೆಲವು ವಿವರಗಳಲ್ಲಿ ಸಾಪೇಕ್ಷತೆಯನ್ನು ಸೂಚಿಸುವ ಅವರ ಕ್ರಮ ಉದ್ದೇಶಪೂರ್ವಕವಾಗಿದೆ. ಏಕೆಂದರೆ ಇದು ರಾಮಾನುಜನ್‌ ಅವರ ಜೀವನ ದೃಷ್ಟಿಗೇ ನೇರವಾಗಿ ಸಂಬಂಧಿಸಿದ ಸಂಗತಿಯಾಗಿದೆ”

ಜೀವಿತ ಕಾಲದಲ್ಲಿ ದಕ್ಕದ ವಿಮರ್ಶಾ ಮನ್ನಣೆ

ರಾಮಾನುಜನ್‌ ಕನ್ನಡದಲ್ಲಿ ಬರೆದದ್ದು ಕೆಲವೇ ಕೆಲವು ಕೃತಿಗಳಷ್ಟೇ. ಆದರೆ ಅವಷ್ಟೇ ಸಾಕು ಅವರ ಪ್ರತಿಭೆಯನ್ನು ಪ್ರತಿಫಲಿಸಲಿಕ್ಕೆ. ಅವು ಅವರ ಅನನ್ಯ ಪ್ರತಿಭೆಗೆ ಸಾಕ್ಷಿ. ರಾಮಾನುಜನ್‌ ಬರೆದದ್ದು ನಾಲ್ಕೇ ಕಥೆಗಳು. ಪ್ರತಿಯೊಂದು ಕನ್ನಡಕ್ಕೆ ವಿಶಿಷ್ಟವಾಗಿದೆ. ಅವರು ನವ್ಯ ಕಾಲದಲ್ಲಿ ಈ ಕಥೆಗಳನ್ನು ಬರೆದರೂ ಕನ್ನಡ ಕಥಾ ಪರಂಪರೆಯನ್ನು ಕಡೆಗಣಿಸದೆ ಹೊಚ್ಚ ಹೊಸ ದಾಟಿಯೊಂದನ್ನು ರೂಪಿಸಿಕೊಂಡದ್ದು. ಒಟ್ಟಿನಲ್ಲಿ ರಾಮಾನುಜನ್ ಅವರದು ಒಂದು ಅನುಭವವನ್ನು ಇನ್ನೊಂದು ವಸ್ತುವಿನ ಪ್ರತಿರೂಪದಿಂದ ಶೋಧಿಸುವ ಕ್ರಮ. ಆದರೆ ದುರಂತವೆಂದರೆ ರಾಮಾನುಜನ್‌ ಬದುಕಿದ್ದಾಗ ಅವರ ಸಾಹಿತ್ಯಕ್ಕೆ ನಿಜಕ್ಕೂ ಸಲ್ಲಬೇಕಾದ ವಿಮರ್ಶಾಮನ್ನಣೆ ಸಲ್ಲಲೇ ಇಲ್ಲ. ಅವರ ಕೃತಿಗಳು ಚರ್ಚೆಯಾದದ್ದು ಕೂಡ ಅಪರೂಪ.

‌ರಾಮಾನುಜನ್‌ ಅವರ ಸ್ನೇಹಿತರ ಬಳಗದಲ್ಲಿ ಅತಿಮುಖ್ಯರಾಗಿದ್ದ ಮೂವರೆಂದರೆ ಗಿರೀಶ ಕಾರ್ನಾಡ, ಕೀರ್ತಿನಾಥ ಕುರ್ತಕೋಟಿ ಮತ್ತು ಎಸ್.‌ ಜಿ. ವಾಸುದೇವ್‌ ಎನ್ನುತ್ತಾರೆ, ರಾಮಾನುಜನ್‌ರ ಎಲ್ಲ ಕನ್ನಡ ಕೃತಿಗಳನ್ನು ಪ್ರಕಟಿಸಿದ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಷಿ.


ಹಾಗಾದರೆ, ರಾಮಾನುಜನ್‌ ಅವರ ಪದ್ಯಗಳಿಗೆ ರೇಖಾರೂಪ ನೀಡಿದ ವಾಸುದೇವ್‌ ಅವರು ರಾಮಾನುಜನ್‌ ಅವರನ್ನು ಮೊದಲು ಭೇಟಿಯಾದದ್ದು ಯಾವಾಗ?

“ನಾನು ರಾಮಾನುಜನ್ ಅವರನ್ನು ಭೇಟಿ ಮಾಡಿದ್ದು, ಅರವತ್ತರ ದಶಕದ ಮಧ್ಯ ಭಾಗದಲ್ಲಿ. ಆಗ ನಾನು ಮದರಾಸಿನ ಕಲಾ ಕಾಲೇಜಿನಲ್ಲಿ ಓದುತ್ತಿದ್ದೆ. ನನ್ನನ್ನು ರಾಮಾನುಜನ್‌ಗೆ ಪರಿಚಯ ಮಾಡಿಸಿದವರು ಗಿರೀಶ್‌ ಕಾರ್ನಾಡ್.‌ “ನನ್ನ ಹೊಕ್ಕಳಲ್ಲಿ ಹೂವಿಲ್ಲ” ಕವನ ಸಂಕಲನಕ್ಕೆ ಮುಖಪುಟ ರಚಿಸಿ ಕೊಡುವಿರಾ” ಎಂದು ರಾಮಾನುಜನ್‌ ನನ್ನನ್ನು ಕೇಳಿದರು. ದಟ್ಟ ಕಪ್ಪು ಹಿನ್ನೆಲೆಯಲ್ಲಿ ಬಿಳಿ ಬಣ್ಣದಲ್ಲಿ ಕನ್ನಡ ಅಕ್ಷರಗಳನ್ನು ಬಳಸಿ ನಾನು ಮುಖಪುಟ ವಿನ್ಯಾಸ ಮಾಡಿದೆ. ಹಿಂಮುಖಪುಟದಲ್ಲಿ ಅವರ ಪದ್ಯವೊಂದನ್ನು ಕನ್ನಡದಲ್ಲಿ ನನ್ನ ಅಕ್ಷರಗಳಲ್ಲಿ ಬರೆದು ವಿನ್ಯಾಸ ಮಾಡಿದೆ. “ಇನ್ನಷ್ಟು ಬಣ್ಣಗಳನ್ನು ಬಳಸಬಹುದಿತ್ತಲ್ಲ?ʼ ಎಂದು ಅವರು ನನ್ನನ್ನು ಕೇಳಿದರು. “ನಾನು ನಿಮ್ಮ ಪದ್ಯಗಳನ್ನು ಕಪ್ಪು ಮತ್ತು ಬಿಳುಪಿನಲ್ಲಿ ಮಾತ್ರ ಕಲ್ಪಿಸಿಕೊಳ್ಳಲು ಸಾಧ್ಯ” ಎಂದು ನಾನು ಅವರಿಗೆ ಹೇಳಿದೆ” ಎಂದು ವಾಸುದೇವ್‌ ನೆನಪಿಸಿಕೊಳ್ಳುತ್ತಾರೆ. ಈ ಬಾರಿ ಕಂದು ಬಣ್ಣದ ಹಿನ್ನೆಲೆಯಲ್ಲಿ ಹಳದಿ ನಂತರ ತೊಂಭತ್ತರ ದಶಕದಲ್ಲಿ ಅವರ ಕುಂಟೋಬಿಲ್ಲೆ ಕವನ ಸಂಕಲನಕ್ಕೆ ಮುಖಪುಟ ವಿನ್ಯಾಸ ಮಾಡಿದೆ. ಈ ಬಾರಿ ಕಂದು ಬಣ್ಣದ ಹಿನ್ನೆಲೆಯಲ್ಲಿ ಹಳದಿ ಬಣ್ಣದಿಂದ ಆಳವಾದ ಕಂದು ಬಣ್ಣಕ್ಕೆ ತಿರುಗಿದ ವರ್ಣ ಸಂಚಯ ಅದು. ಪುಸ್ತಕದ ಪ್ರತಿ ದೊರೆತ ನಂತರ 1991ರಲ್ಲಿ ಅಮೆರಿಕೆಯಲ್ಲಿ ಅವರನ್ನು ನಾನು ಭೇಟಿಯಾದಾಗ, “ಈ ಪುಸ್ತಕವನ್ನು ನೀವು ಇನ್ನಷ್ಟು ವರ್ಣರಂಜಿತವಾಗಿಸಬಹುದಿತ್ತೇನೋ! ಇತ್ತೀಚೆಗೆ ಪ್ರಕಟವಾಗುತ್ತಿರುವ ಪುಸ್ತಕಗಳಂತೆ” ಎಂದರು. “ನಿಮ್ಮ ಪದ್ಯಗಳಿಗೆ ಅದರ ಅವಶ್ಯಕತೆ ಇಲ್ಲ” ಎಂದು ನಾನು ಅವರಿಗೆ ಹೇಳಿದೆ.


ʼಕುಂಟೋಬಿಲ್ಲೆʼಗೆ ಮುಖಪುಟ ರಚಿಸುವ ಜೊತೆಗೆ ಮತ್ತಷ್ಟು ಪದ್ಯಗಳಿಗೆ ನಾನು ರೇಖಾ ಚಿತ್ರಗಳನ್ನು ರಚಿಸಿದ್ದೆ. ಅದನ್ನು ಗಮನಿಸಿದ ರಾಮಾನುಜನ್‌ ಇನ್ನಷ್ಟು ಪದ್ಯಗಳಿಗೆ ರೇಖಾ ಚಿತ್ರಗಳನ್ನು ರಚಿಸಿದರೆ ಅದರದ್ದೇ ಆದ ಪ್ರದರ್ಶನ ಮಾಡಬಹುದು. ಅದರಲ್ಲಿ ಅವರೇ ಆ ಪದ್ಯಗಳನ್ನು ವಾಚಿಸಬಹುದು ಎಂದರು. ಅವರು 1993ರಲ್ಲಿ ತೀರಿಕೊಳ್ಳುವ ವೇಳೆಗೆ ಕೇವಲ ಏಳೆಂಟು ಪದ್ಯಗಳಿಗೆ ಮಾತ್ರ ನಾನು ಚಿತ್ರಗಳನ್ನು ರಚಿಸಿದ್ದೆ. ಅವರ ನಿಧನ ನಂತರ ಎರಡು ವರ್ಷಗಳ ವರೆಗೆ ನಾನು ಅದರ ಬಗ್ಗೆ ಯೋಚಿಸಿರಲೇ ಇಲ್ಲ. ಅದಾದ ನಂತರ ನನ್ನನ್ನು ಬಹುವಾಗಿ ತಟ್ಟಿದ 40 ಅಥವ 50 ಪದ್ಯಗಳಿಗೆ ಚಿತ್ರಗಳನ್ನು ರಚಿಸಿದೆ. ಆ ಪದ್ಯಗಳನ್ನು ಅವರ ʼಹೊಕ್ಕಳಲ್ಲಿ ಹೂವಿಲ್ಲʼ, ʼಮತ್ತು ಇತರ ಪದ್ಯಗಳುʼ, ಹಾಗೂ ʼಕುಂಟೋಬಿಲ್ಲೆʼಯಿಂದ ಆಯ್ಕೆ ಮಾಡಿಕೊಂಡೆ. ಈ ಮೂಲಕ ನಾನು ರಾಮಾನುಜನ್‌ ಅವರ ಪದ್ಯಗಳಿಗೆ ಚಿತ್ರರೂಪ ನೀಡಬಹುದೆಂದು ನಾನು ಭಾವಿಸಿಕೊಂಡೆ.

ರಾಮಾನುಜನ್‌ ಅವರ ಪದ್ಯಗಳು ಸ್ವಯಂ ಪ್ರೇರಿತವಾದದ್ದು. ಆದರೆ ನಂತರ ಅವರು ಅವುಗಳನ್ನು ತಿದ್ದಿ ಪುನರ್‌ ರೂಪ ನೀಡುತ್ತಿದ್ದರು . ಅವರೊಮ್ಮೆ ನನಗೆ ಹೇಳಿದರು. “ನಾನು ನನ್ನ ಪದ್ಯಗಳನ್ನು ತಿದ್ದುತ್ತಲೇ ಇರುತ್ತೇನೆ. ಶಿಲ್ಪಿಯೊಬ್ಬ ಶಿಲ್ಪದಲ್ಲಿ ಪರಿಪೂರ್ಣತೆ ಬಯಸುವಂತೆ” ಎಂದು ಒಮ್ಮೆ ಅವರು ನನಗೆ ಹೇಳಿದ್ದರು. ಅವರು ಪದಗಳನ್ನು ಅತಿ ಎಚ್ಚರದಿಂದ ಬಳಸುತ್ತಿದ್ದರು. ಅಗತ್ಯಕ್ಕಿಂತ ಹೆಚ್ಚಿನ ಪದಗಳ ಬಳಕೆ ಅವರಿಗೆ ದುಂದುವೆಚ್ಚದಂತೆ. ಅವರ ಆ ಗುಣವನ್ನೇ ನಾನು ನನ್ನ ಚಿತ್ರಗಳಲ್ಲಿ ಕಾಣಿಸಿದ್ದೇನೆ. ಅತಿ ಕಡಿಮೆ ಗೆರೆಗಳಲ್ಲಿ ಅವರ ಪದ್ಯದ ಅಂತರಾತ್ಮವನ್ನು ಕಾಣಿಸಲು ಯತ್ನಿಸಿದ್ದೇನೆ.


ಮೊದಲ ಬಾರಿಗೆ ಓದಿದಾಗ ರಾಮಾನುಜನ್‌ ಪದ್ಯಗಳು ಸುಲಭವಾಗಿ ಅರ್ಥವಾಗುತ್ತದೆ ಎನ್ನಿಸುತ್ತದೆ. ರಾಮಾನುಜನ್‌ ಮೂಲತಃ ದೃಶ್ಯಾತ್ಮಕ ಕವಿ. ಅವರು ಕಟ್ಟುವ ಪ್ರತಿಮೆಗಳಿಗೆ ರೇಖಾರೂಪ ನೀಡುವುದು ಸುಲಭದ ಮಾತಲ್ಲ. ಅವರ ಪದ್ಯಗಳು ರೇಖೆಗಳಿಗೆ ಸಮೀಪವಾಗುವಂಥವು. ಚಿತ್ರ ರಚನಾ ಕ್ರಿಯೆಯಲ್ಲಿ ನಾವು ಹಲವು ಪ್ರತಿಮೆಗಳನ್ನು ರೂಪಿಸುತ್ತೇವೆ. ಅದೇ ಸಮಯದಲ್ಲಿ ಅವುಗಳನ್ನು ಭಂಗ ಮಾಡುತ್ತೇವೆ ಕೂಡ. ಇದನ್ನೇ ರಾಮಾನುಜನ್‌ ಪದ್ಯಗಳಲ್ಲಿ ಮಾಡುತ್ತಿದ್ದರು ಎಂಬುದು ನನ್ನ ಅನಿಸಿಕೆ.

ಈ ರೇಖಾ ಚಿತ್ರಗಳು ರಾಮಾನುಜನ್‌ ಅವರ ಪದ್ಯಗಳಿಗೆ ನನ್ನ ಪ್ರತಿಕ್ರಿಯೆ. ಅವು ಇಂದು ತನ್ನ ಜೀವನದಲ್ಲಿ ಎಷ್ಟೊಂದು ಸಾಧನೆ ಮಾಡಿದ, ನನ್ನ ಬದುಕಿನಲ್ಲಿ ಅತಿ ಮುಖ್ಯರಾಗಿದ್ದ, ಪ್ರೀತಿಯ ಗೆಳೆಯರಾಗಿದ್ದ, ಅವರಿಗಾಗಲಿ, ನನಗಾಗಲೀ ಅರಿವಿರದಂತೆ ನನ್ನ ಗುರುವಾಗಿದ್ದ ಅವರಿಗೆ ಶ್ರದ್ಧಾಂಜಲಿ ಸ್ವರೂಪದಲ್ಲಿ ನಮ್ಮ ಮುಂದೆ ನಿಂತಿವೆ. ರಾಮಾನುಜನ್‌ ಬದುಕಿದ್ದರೆ ಈ ಶೀರ್ಷಿಕೆ ಬದಲಾಗುತ್ತಿತ್ತೋ ಏನೋ? ಹಾಗಾಗಿ ನಾನು ಈ ಚಿತ್ರ ಸರಣಿಯನ್ನು “ಎ.ಕೆ. ರಾಮಾನುಜನ್‌ ಅವರಿಗೆ ಶ್ರದ್ಧಾಜಲಿ” ಎಂದೇ ಕರೆದಿದ್ದೇನೆ.

ಈ ರೇಖಾ ಚಿತ್ರಗಳಲ್ಲದೆ ವ್ಯಕ್ತಿಯಾಗಿ ರಾಮಾನುಜನ್‌ ಅವರನ್ನು ಕುರಿತಾದ ನನ್ನ ಗ್ರಹಿಕೆಯ ಕೆಲವು ವರ್ಣ ಚಿತ್ರಗಳು ಇವೆ. ಬಹುಶಃ ರಾಮಾನುಜನ್‌ ಬದುಕಿದ್ದರೆ, ಈ ಚಿತ್ರಗಳನ್ನು ಆಧರಿಸಿ ಮತ್ತಷ್ಟು ಪದ್ಯಗಳನ್ನು ಬರೆಯುತ್ತದ್ದರೇನೋ!” ಎಂದು ವಾಸುದೇವ್‌ ಶೂನ್ಯದತ್ತ ದಿಟ್ಟಿಸಿ ನಿಟ್ಟುಸಿರಿಡುತ್ತಾರೆ.

ವಾಸುದೇವ್‌ ರೇಖೆಗಳ ನೆವದಲ್ಲಿ ಎ.ಕೆ. ರಾಮಾನುಜನ್‌ ನೆನಪಿನಂಗಳದಲ್ಲಿ ಈ ಮುಸ್ಸಂಜೆ ಹೊತ್ತಿನಲ್ಲಿ ನೆನಪಾದದ್ದು. ಕನಕದಾಸರ “ತೊರೆದು ಜೀವಿಸಬಹುದೇ” ಕೀರ್ತನೆ.



Tags:    

Similar News