ಬಡವಾದ ಒಳಹರಿವು | ಜಲಾಶಯಗಳಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳಿ: ಕರ್ನಾಟಕ, ತಮಿಳುನಾಡಿಗೆ ಕಾವೇರಿ ಪ್ರಾಧಿಕಾರ ಸೂಚನೆ

Update: 2024-06-27 11:05 GMT

ಕಾವೇರಿ ಪಾತ್ರದಲ್ಲಿ ಈ ವರ್ಷ ನಿರೀಕ್ಷಿಸಿದಷ್ಟು ಮಳೆಯಾಗದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ತಮಿಳು ನಾಡು-ಎರಡೂ ರಾಜ್ಯಗಳೂ ಚಿಂತೆಗೊಳಗಾದಂತೆ ಕಾಣುತ್ತಿದೆ. ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (Cauvery Water Management Authority) ಕೂಡ ಆತಂಕದಿಂದ ಗಮನಿಸುತ್ತಿರುವಂತಿದೆ.

ಮಂಗಳವಾರ ನವದೆಹಲಿಯಲ್ಲಿ ಸಭೆ ನಡೆಸಿದ ಪ್ರಾಧಿಕಾರ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಮುಂದಿನ ದಿನಗಳಲ್ಲಿ ಒದಗಬಹುದಾದ ಸಂಕಷ್ಟದ ಹಿನ್ನೆಲೆಯಲ್ಲಿ, ಕುಡಿಯುವ ನೀರು ಮತ್ತು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ,ಮತ್ತು ಜೀವ ವೈವಿಧ್ಯದ ರಕ್ಷಣೆಗೆ ಅಗತ್ಯವಾದಷ್ಟು ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಚಿಸಿದೆ.

ಜುಲೈ 26 ರಂದು ಪುನರ್ವಿಮರ್ಶೆ

ಕರ್ನಾಟಕದಲ್ಲಿ ಕಾವೇರಿ ಪಾತ್ರದ ಜಲಶಯಗಳ ಮಟ್ಟ ಈ ರೀತಿ ಇದೆ: ಕೃಷ್ಣರಾಜ ಸಾಗರ- 92.97 ಅಡಿ ,ಹಾರಂಗಿ 89.53 ಅಡಿ, ಹೇಮಾವತಿ 69.07 ಅಡಿ ಹಾಗೂ ಕಬಿನಿ 50.38 ಅಡಿ ಇದೆ (ಜೂನ್‌ 26 ರ ಮಾಹಿತಿ).

ಕರ್ನಾಟಕದ ವಾದ

ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು, ಯಾವುದೇ ದೀರ್ಘ ಕಾಲಿಕ ಬೆಳೆಗಳಿಗೆ ಅನುಮತಿ ನೀಡದಿದ್ದರೂ, ಮೆಟ್ಟೂರು, ಭವಾನಿ ಮತ್ತು ಅಮರಾವತಿ ಜಲಾಶಯಗಳಿಂದ ತಮಿಳುನಾಡು ಫೆಬ್ರುವರಿಯಿಂದ ಮೇ ಅಂತ್ಯದವರೆಗೆ 35 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿಕೊಂಡಿದೆ ಎಂದು ಕರ್ನಾಟಕ ಆರೋಪಿಸಿದೆ.

ಕರ್ನಾಟಕದ ಕೆಆರ್‌ ಎಸ್‌, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಿಗೆ ಜೂನ್‌ ತಿಂಗಳ ಸಂಚಿತ ಒಳಹರಿವು 7.3 ಟಿಎಂಸಿ ಅಡಿ ಇದೆ. ಆದರೆ ಇದೇ ಆವಧಿಯಲ್ಲಿ 30 ವರ್ಷಗಳ ಸರಾಸರಿ ಒಳಹರಿವು ೨೪ ಟಿಎಂಸಿ ಅಡಿ. ಪ್ರಸ್ತುತ ವರ್ಷದ ಒಳಹರಿವನ್ನು 30 ವರ್ಷಗಳ ಒಳಹರಿವಿನ ಸರಾಸರಿಗೆ ಹೋಲಿಸಿದರೆ, ಶೇ. 29.8 ರಷ್ಟು ಕಡಿಮೆ ಇದೆ. ಕರ್ನಾಟಕದ ನಾಲ್ಕೂ ಜಲಾಶಯಗಳಲ್ಲಿ ಶೇ. 70.01 ರಷ್ಟು ಸಂಕಷ್ಟದ ಪರಿಸ್ಥಿತಿ ಇದೆ. ರಾಜ್ಯವು ಕುಡಿಯುವ ನೀರಿಗೆ ಆದ್ಯತೆ ನೀಡುತ್ತಿದೆ. ಕಾಲುವೆಗಳಿಗೆ ನೀರು ಬಿಡುತ್ತಿಲ್ಲ.

ಆದರೆ ತಮಿಳುನಾಡು, ತನ್ನ ಜಲಾಶಯಗಳಿಂದ3.97 ಟಿಎಂಸಿ ಅಡಿಯಷ್ಟು ನೀರನ್ನು ನದಿಗೆ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಜುಲೈ ಅಂತ್ಯದ ವರೆಗಿನ ಜಲ ವಿಜ್ಞಾನ ತಿಳುವಳಿಕೆಯಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕೆಂದು ಕರ್ನಾಟಕ ಪ್ರಾಧಿಕಾರಕ್ಕೆ ಮನವಿ ಮಾಡಿದೆ. ರಾಜ್ಯದಲ್ಲಿನ ಮುಂಗಾರು ಮತ್ತು ನಾಲ್ಕು ಜಲಾಶಯಗಳ ಒಳಹರಿವನ್ನು ಪರಿಗಣಿಸಿ ತಮಿಳು ನಾಡಿಗೆ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಸ್ಪಷ್ಟಪಡಿಸಿದೆ.

ನೀರು ಬಿಡುಗಡೆಗೆ ತಮಿಳುನಾಡು ಬೇಡಿಕೆ

ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಆದೇಶದ ಪ್ರಕಾರ ಜೂನ್‌ ತಿಂಗಳ ಬಾಕಿ 5.3 ಟಿಎಂಸಿ ಅಡಿ ಜುಲೈ ತಿಂಗಳಲ್ಲಿ 31.24 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶಿಸಬೇಕೆಂದು ತಮಿಳುನಾಡು ಪ್ರಾಧಿಕಾರವನ್ನು ಒತ್ತಾಯಿಸಿದೆ.

ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಪ್ರಾಧಿಕಾರ ರಾಜ್ಯಗಳಿಗೆ ಮುಂದಿನ ದಿನಗಳಲ್ಲಿ ಒದಗಬಹುದಾದ ಸಂಕಷ್ಟದ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಾದಷ್ಟು ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಮುನ್ನೆಚರಿಕೆ ಕ್ರಮವಾಗಿ ಸೂಚಿಸಿದೆ. ಮಳೆಯ ಪರಿಸ್ಥಿತಿ ಹಾಗೂ ಜಲ ವಿಜ್ಞಾನ ತಿಳುವಳಿಕೆ ನೆಲೆಯಲ್ಲಿ ,ಜುಲೈ 26 ರಂದು ಪುನರ್‌ ವಿಮರ್ಶೆ ಮಾಡುವುದಾಗಿ ಪ್ರಾಧಿಕಾರ ಹೇಳಿದೆ ಎಂದು ಕರ್ನಾಟಕ ಜಲ ಸಂಪನ್ಮೂಲ ಇಲಾಖೆಯ ಪ್ರಕಟಣೆ ತಿಳಿಸಿದೆ.

ಕಾವೇರಿಗೆ ತ್ಯಾಜ್ಯದ ಕಾಟ

ಈ ನಡುವೆ ಕಾವೇರಿ ನದಿಗೆ ತ್ಯಾಜ್ಯ ನೀರು ಬಿಡುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಅದನ್ನು ತಡೆಯಲು ಸ್ಥಳೀಯ ಪ್ರಾಧಿಕಾರಗಳು ಕೈಗೊಂಡ ಕ್ರಮಗಳನ್ನು ಕುರಿತು ವರದಿ ನೀಡುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜಲ ಸಂಪನ್ಮೂಲ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸೂಚಿಸಿದ್ದಾರೆ.

ಎರಡು ವಾರದಲ್ಲಿ ವರದಿ

ಅಷ್ಟೇ ಅಲ್ಲ. ನದಿ ನೀರು ಮಲೀನಗೊಳ್ಳದಂತೆ ತಡೆಯಲು ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಲಿಖಿತವಾಗಿ ಸೂಚಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿಮ ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಆದೇಶ ನೀಡಿದ್ದಾರೆ.

ಸಚಿವರ ಈ ಕ್ರಮಕ್ಕೆ ಕಾರಣ; ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಪತ್ರ. “ಕಾವೇರಿ ನದಿಗೆ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದೆ. ಮಾಲಿನ್ಯ ತಡೆಗೆ ಸರ್ಕಾರ ಶೀಘ್ರ ಕ್ರಮಕೈಗೊಳ್ಳಬೇಕೆಂದು ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದರು.

ಗೂಳಿಗೌಡ ಅವರ ಪ್ರಕಾರ; “ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ಹರಿಯುವ ಮಾರ್ಗದ ಕುಶಾಲನಗರ, ಹುಣಸೂರು, ಪೆರಿಯಾಪಟ್ಟಣ,, ಕೆ. ಆರ್.‌ ನಗರ, ಮೈಸೂರು, ಮಂಡ್ಯ, ಶ್ರೀರಂಗ ಪಟ್ಟಣ, ನಂಜನಗೂಡು, ತಿರುಮಕೂಡ್ಲು ನರಸಿಪುರ, ಕೊಳ್ಳೆಗಾಲಗಳಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿವೆ. ಅವುಗಳ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯಲು ಬಿಡುತ್ತಿರುವುದರಿಂದ ನದಿಯ ನೀರು ಮಲೀನಗೊಳ್ಳುತ್ತಿದೆ. ಕೂಡಲೇ ಕ್ರಮಕೈಗೊಳ್ಳದಿದ್ದರೆ, ಇದು ವ್ಯತಿರಿಕ್ತ ಪರಿಣಾವನ್ನು ಉಂಟುಮಾಡುತ್ತದೆ” ಎಂದು ಅವರು ಹೇಳಿದ್ದಾರೆ.

Tags:    

Similar News