ಹಾವೇ.. ಹಾವೇ.. ಬಾಗಿಲ ಬಿಲದಲಿ ನಿನ್ನಯ ಠಾವೆ? ರಾಜಧಾನಿಯಲ್ಲಿ ಹಾವುಗಳ ಹಾವಳಿ!

ಬೆಂಗಳೂರಿನಲ್ಲಿ ನಾಗರಹಾವು, ಕೊಳಕುಮಂಡಲ, ತೋಳದ ಹಾವು ಹಾಗೂ ನೀರುಹಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅತ್ಯಂತ ವಿಷಕಾರಿ ಹಾವುಗಳು ಎಂದು ಗುರುತಿಸಲಾಗಿರುವ ನಾಗರಹಾವು, ಕೊಳಕು ಮಂಡಲ, ಕಟ್ಟು ಹಾವು ಹಾಗೂ ಉರಿ ಮಂಡಲ ಹಾವುಗಳು ಸಹ ಕಾಣಿಸಿಕೊಳ್ಳುತ್ತಿವೆ. ಹಾವುಗಳನ್ನು ಹಿಡಿಯಲು ಸಹಾಯವಾಣಿ 1926, ಬಿಬಿಎಂಪಿ ಸಹಾಯವಾಣಿ: 1533 / 08022221188 ಗೆ ಕರೆ ಮಾಡಬಹುದಾಗಿದೆ.;

By :  Hitesh Y
Update: 2024-05-30 00:40 GMT
ಬೆಂಗಳೂರಿನ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಹಾವುಗಳು

"ನಾಗರ ಹಾವೆ! ಹಾವೊಳು ಹೂವೆ!

ಬಾಗಿಲ ಬಿಲದಲಿ ನಿನ್ನಯ ಠಾವೆ?

ಕೈಗಳ ಮುಗಿವೆ, ಹಾಲನ್ನೀವೆ..

ಬಾ ಬಾ ಬಾ ಬಾ ಬಾ ಬಾ ಬಾ ಬಾ...;

ಹಳದಿಯ ಹೆಡೆಯನು ಬಿಚ್ಚೋ ಬೇಗಾ!

ಹೊಳಹಿನ ಹೊಂದಲೆ ತೂಗೋ, ನಾಗಾ!

ಕೊಳಲನ್ನೂದುವೆ ಲಾಲಿಸು ರಾಗಾ!

ನೀ ನೀ ನೀ ನೀ ನೀ ನೀ ನೀ ನೀ"

...ಇದು ಕನ್ನಡದ ಕವಿ ಪಂಜೆ ಮಂಗೇಶರಾಯರ ಕವನ.

ಆದರೆ ಕವಿವಾಣಿಯಂತೆ ಹಾವುಗಳಿಗೆ "ಹಾಲನ್ನೀಯಲು" ಇಲ್ಲಿ ಅವಕಾಶವಿಲ್ಲ. ʼಬಾ.. ಬಾ..ʼ ಎನ್ನುವ ಧೈರ್ಯವಂತೂ ಇಲ್ಲವೇ ಇಲ್ಲ! ಹೌದು.. ರಾಜಧಾನಿ  ಬೆಂಗಳೂರಿನ ಹೊರವಲಯದಲ್ಲಿ ಈಗ  ಮನೆಗಳಿಗೆ, ಕಾರ್ಖಾನೆಗಳಿಗೆ ಹಾವುಗಳು ನುಗ್ಗುವುದು ಹೆಚ್ಚಾಗುತ್ತಿದೆ. ಮನೆಯ ಶೌಚಾಲಯ, ಅಡುಗೆ ಮನೆ, ಕಾಂಪೌಂಡ್‌ ಹೀಗೆ ಎಲ್ಲಿಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜನ ಭಯಭೀತರಾಗುತ್ತಿದ್ದಾರೆ. 

ಶೂ ಸ್ಟ್ಯಾಂಡ್‌ಗಳಲ್ಲೂ ಹಾವುಗಳು ಬುಸುಗುಡುವ ಸದ್ದು ಕೇಳಿಸುತ್ತಿದೆ. ವಿಷಕಾರಿ ಹಾವುಗಳು ಸಹ ಕಾಣಿಸಿಕೊಳ್ಳುತ್ತಿದ್ದು, ಹಾವು ನೋಡಿದ ಜನ ಭಯದಿಂದ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ.  

ಬೆಂಗಳೂರಿನ ಜನವಸತಿ ಪ್ರದೇಶದಲ್ಲಿ ಹಾವುಗಳ ಸಂತತಿ ಹೆಚ್ಚುತ್ತಿದ್ದು, ಬೆಂಗಳೂರು ಮಹಾನಗರ ಪಾಲಿಕೆಗೆ ನಿತ್ಯವೂ ಸಾರ್ವಜನಿಕರಿಂದ 100ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಹಾಗೂ ಜೂನ್ ಪ್ರಾರಂಭದಲ್ಲಿ ಹಾವುಗಳು ಮರಿಗಳಿಗೆ ಜನ್ಮ ನೀಡುತ್ತವೆ. ಬೆಂಗಳೂರಿನಲ್ಲಿ ಉಂಟಾದ ಹವಾಮಾನ ವೈಪರೀತ್ಯದಿಂದ ಏಪ್ರಿಲ್ ಕೊನೆಯ ತಿಂಗಳು ಹಾಗೂ ಮೇ ಪ್ರಾರಂಭದಲ್ಲೇ ಹಾವುಗಳು ಮರಿಗಳಿಗೆ ಜನ್ಮ ನೀಡುತ್ತಿದ್ದು, ಜನವಸತಿ ಪ್ರದೇಶದಲ್ಲಿ ಹಾವುಗಳ ಸಂಚಲನ ಹೆಚ್ಚಾಗಿದೆ.

ʻಮನೆಯ ಒಳಗೆ ಹಾವಿನ ಮರಿ ಬಂದಿತ್ತು. ಬಕೆಟ್‌ನ ಪಕ್ಕದಲ್ಲಿ ಹಾವು ಇತ್ತು. ಬಟ್ಟೆ ಒಗೆಯುವಾಗ ಹಾವು ನೋಡಿ ಭಯವಾಯ್ತು. ಕೂಡಲೇ ಬಿಬಿಎಂಪಿಗೆ ಕರೆ ಮಾಡಿದ್ವಿ. ಇತ್ತೀಚಿನ ದಿನಗಳಲ್ಲಿ ಎರಡನೇಯ ಬಾರಿ ಮನೆಯಲ್ಲಿ ಹಾವು ಕಾಣಿಸಿಕೊಂಡಿದೆʼ ಎಂದು ಬೆಂಗಳೂರಿನ ಬೈರೇಗೌಡ ಲೇಔಟ್‌ನ ಮುದ್ದಿನಪಾಳ್ಯದ ನಿವಾಸಿ ಸೀಮಾ ಹೊಳ್ಳ ಅವರು ದ ಫೆಡರಲ್‌ ಕರ್ನಾಟಕಕ್ಕೆ ತಿಳಿಸಿದರು. 

ʻಈ ಪ್ರದೇಶದಲ್ಲಿ ಹಾವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮನೆಯ ಒಳಗೇ ಹಾವು ಬರುತ್ತಿದ್ದು, ಸಂಜೆ ಮೇಲೆ ಹೊರಗೆ ಓಡಾಡಲು ಭಯವಾಗುತ್ತೆʼ ಎಂದರು. 

 ಹೊಸ ಬಡಾವಣೆಗಳಲ್ಲಿ ಹೆಚ್ಚು

ಬೆಂಗಳೂರಿನಲ್ಲಿ ಹೊಸ ಬಡಾವಣೆಗಳಲ್ಲೇ ಹಾವುಗಳ ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಮುಖ್ಯವಾಗಿ ರಾಜರಾಜೇಶ್ವರಿ ನಗರ, ದಾಸರಹಳ್ಳಿ, ಯಲಹಂಕ, ಸರ್ಜಾಪುರ, ಬೊಮ್ಮನಹಳ್ಳಿ ಸೇರಿದಂತೆ ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಬಡಾವಣೆಗಳಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ನಾಗರಭಾವಿಯಲ್ಲಿ ಅತ್ಯಂತ ಹೆಚ್ಚು ಹಾವುಗಳು ಕಾಣಿಸಿಕೊಳ್ಳುತ್ತಿವೆ. ಬೆಂಗಳೂರು ಪೂರ್ವ ಹಾಗೂ ಪಶ್ಚಿಮ ಭಾಗದಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಉಳಿದ ಪ್ರದೇಶಗಳಲ್ಲಿ ಹಾವು ಕಾಣಿಸಿಕೊಳ್ಳುವುದು ನಿರಂತರವಾಗಿ ವರದಿಯಾಗುತ್ತಿದೆ ಎನ್ನುತ್ತಾರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ವನ್ಯಜೀವಿ ಸಂರಕ್ಷಕ ಹಾಗೂ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಮಾದರಿಯ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಅವುಗಳಲ್ಲಿ ಕೆಲವು ವಿಷಕಾರಿ ಇನ್ನೂ ಕೆಲವು ವಿಷಕಾರಿಯಲ್ಲದ ಹಾವುಗಳಾಗಿವೆ. ಬೆಂಗಳೂರಿನಲ್ಲಿ ಮುಖ್ಯವಾಗಿ ನಾಗರಹಾವು, ಕೊಳಕುಮಂಡಲ, ರ್ಯಾಟ್ ಸ್ನೇಕ್, ತೋಳದ ಹಾವು ಹಾಗೂ ನೀರುಹಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ವಿಷಕಾರಿಯಲ್ಲದ ಹಾವುಗಳನ್ನು ಸ್ಥಳಾಂತರ ಮಾಡದೆ ನಿರ್ಜಲನ ಪ್ರದೇಶದಲ್ಲಿ ಬಿಡಲಾಗುತ್ತಿದ್ದು, ವಿಷಕಾರಿ ಹಾವುಗಳನ್ನು ಬೆಂಗಳೂರು ಹೊರ ವಲಯದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಮುಂಗಾರು ಪೂರ್ವದ ಅವಧಿ ಹೆಚ್ಚು

ಮುಂಗಾರು ಪೂರ್ವ ಅವಧಿಯಲ್ಲಿ ಹಾವುಗಳ ಮೊಟ್ಟೆಗಳು ಮರಿಯಾಗಿ ರೂಪಾಂತರವಾಗುತ್ತವೆ. ಕೆಲವು ಹಾವುಗಳು ಮೊದಲು ಮೊಟ್ಟೆಗಳನ್ನು ಇರಿಸಿದರೆ, ಇನ್ನೂ ಕೆಲವು ಹಾವುಗಳು ನೇರವಾಗಿ ಮರಿಗಳಿಗೆ ಜನ್ಮ ನೀಡುತ್ತವೆ. ಕೊಳಕು ಮಂಡಲ ಒಮ್ಮೊಮ್ಮೆ 35 ರಿಂದ 40 ಮರಿಗಳಿಗೆ ಜನ್ಮ ನೀಡುತ್ತವೆ. ಕೆಲವೊಮ್ಮೆ ಈ ಸಂಖ್ಯೆ 55ಕ್ಕೆ ತಲುಪುವುದು ಸಹ ಇದೆ. ಕೋಬ್ರಾ ಹಾಗೂ ಹಸಿರು ಹಾವುಗಳು ಸಹ ಏಕಕಾಲಕ್ಕೆ ಹಲವು ಹಾವುಗಳಿಗೆ ಜನ್ಮ ನೀಡುತ್ತವೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಎಲ್ಲ ಹಾವುಗಳ ಮರಿಗಳು ಸಹ ಬದುಕುಳಿಯುವ ಸಾಧ್ಯತೆ ವಿರಳ. ಮೊಟ್ಟೆಗಳು ಇರುವ ಜಾಗದಲ್ಲಿ ನೀರು ಹೋದರೆ ಅಥವಾ ಫಂಗಸ್ ಸೃಷ್ಟಿಯಾದರೆ ಮೊಟ್ಟೆಗಳು ಬದುಕುಳಿಯುವುದಿಲ್ಲ ಎನ್ನುತ್ತಾರೆ ಪ್ರಸನ್ನ ಕುಮಾರ್.

ʻಸಣ್ಣ ಅಥವಾ ಮರಿ ಹಾವುಗಳ ಬಗ್ಗೆ ಜನರಲ್ಲಿ ತಪ್ಪು ಭಾವನೆ ಇದೆ. ಸಣ್ಣ ಹಾವುಗಳು ಏನು ಮಾಡುವುದಿಲ್ಲ. ಮರಿ ಹಾವುಗಳನ್ನು ನಾವೇ ಹಿಡಿಯಬಹುದು ಎಂದು ಕೆಲವರು ಭಾವಿಸುತ್ತಾರೆ. ಆದರೆ, ಸಣ್ಣ ಹಾವುಗಳು ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ. ಕೈಗೆ ಸಿಗುವುದಿಲ್ಲ, ಅಲ್ಲದೇ ಹೆಚ್ಚು ಚಟುವಟಿಕೆ ನಡೆಸುತ್ತಿರುತ್ತವೆ. ಹೀಗಾಗಿ, ಸಣ್ಣ ಹಾವುಗಳನ್ನು ಸಹ ಜನ ಮುಟ್ಟುವ ಸಾಹಸ ಮಾಡಬಾರದು. ಸಾಮಾನ್ಯವಾಗಿ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲಿ ಹಾವಿನ ಕಡಿತದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಇದಕ್ಕೆ ಮರಿ ಹಾವುಗಳು ಸಹ ಪ್ರಮುಖ ಕಾರಣʼ  ಎನ್ನುತ್ತಾರೆ ಪ್ರಸನ್ನ ಕುಮಾರ್.

ವಿಷಕಾರಿ ಹಾವುಗಳು

ಅತ್ಯಂತ ವಿಷಕಾರಿ ಹಾವುಗಳು ಎಂದು ಗುರುತಿಸಲಾಗಿರುವ ನಾಗರಹಾವು, ಕೊಳಕು ಮಂಡಲ, ಕಟ್ಟು ಹಾವು ಹಾಗೂ ಉರಿ ಮಂಡಲ ಹಾವುಗಳು ಸಹ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳುತ್ತಿವೆ.

ಬಿಬಿಎಂಪಿಯಿಂದ ವಿವಿಧ ಪ್ರಾಣಿಗಳ ರಕ್ಷಣೆ

ಬೆಂಗಳೂರಿನಲ್ಲಿ ಬಿಬಿಎಂಪಿ ವನ್ಯಜೀವಿ ಸಂರಕ್ಷಣಾ ತಂಡವು ಹಾವುಗಳೊಂದಿಗೆ ವಿವಿಧ ಪ್ರಾಣಿಗಳನ್ನು ಸಹ ರಕ್ಷಿಸುತ್ತಿದೆ. ವಿವಿಧ ಜಾತಿಯ ಹಾವುಗಳೊಂದಿಗೆ ನವಿಲು, ಹದ್ದು, ಪಕ್ಷಿ ಗೂಬೆ, ಕೋತಿ,ಚೇಳು ಹಾಗೂ ಚಿರತೆಗಳನ್ನು ಸಹ ರಕ್ಷಣೆ ಮಾಡಲಾಗುತ್ತಿದೆ. ಈ ರೀತಿ ರಕ್ಷಿಸಿದ ಪ್ರಾಣಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಬಿಟ್ಟು ಬರಲಾಗುತ್ತಿದೆ.  

ಸಹಾಯವಾಣಿ ಸಂಖ್ಯೆ

ವಸತಿ ಪ್ರದೇಶದಲ್ಲಿ ಹಾವುಗಳು ಕಾಣಿಸಿಕೊಂಡರೆ, ಸಾರ್ವಜನಿಕರು ಭಯಪಡದೆ ಹಾವುಗಳಿಂದ ಅಂತರ ಕಾಪಾಡಿಕೊಳ್ಳಬೇಕು. ಹಾವುಗಳನ್ನು ಹಿಡಿಯಲು ಈ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ.

ಕರ್ನಾಟಕ ಅರಣ್ಯ ಇಲಾಖೆ: 1926

ಬಿಬಿಎಂಪಿ ಸಹಾಯವಾಣಿ: 1533 / 08022221188

ಪ್ರಸನ್ನ ಕುಮಾರ್ (ಬಿಬಿಎಂಪಿ): ೯೯೦೨೭೯೪೭೧೧ 

Tags:    

Similar News