Loksabha Election 2024 | ಚಿಕ್ಕೋಡಿ: ಅಣ್ಣಾ ಸಾಹೇಬರಿಗೆ ದೊಡ್ಡ ಸವಾಲಾದ ಪ್ರಿಯಾಂಕಾ ಜಾರಕಿಹೊಳಿ

ಮೋದಿ ಅಲೆ, ಕೇಂದ್ರದ ಯೋಜನೆಗಳ ಹಿನ್ನೆಲೆಯಲ್ಲಿ ಮತದಾರರು ಜೊಲ್ಲೆ ಅವರಿಗೆ ಮತ್ತೊಮ್ಮೆ ಗೆಲುವಿನ ಮಾಲೆ ಹಾಕುತ್ತಾರಾ ಅಥವಾ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು, ಸಚಿವ ಸತೀಶ್ ಜಾರಕಿಹೊಳಿ ಪ್ರಭಾವ ಮೊದಲಾದ ಕಾರಣಗಳಿಂದ ಕಾಂಗ್ರೆಸ್‌ಗೆ ಗೆಲುವು ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

Update: 2024-05-05 02:40 GMT

ರಾಜ್ಯದ ಗಡಿ ಭಾಗದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಬೆಳಗಾವಿಯ ಹಲವು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು, ಕಳೆದ ಎರಡು ದಶಕಗಳಿಂದ ಬಿಜೆಪಿ ತೆಕ್ಕೆಯಲ್ಲಿದೆ. ಇದೀಗ ಮತ್ತೆ ಕಾಂಗ್ರೆಸ್, ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಲು ಶತಪ್ರಯತ್ನ ಮಾಡುತ್ತಿದೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಹೌದು, ಬಿಜೆಪಿಯಿಂದ ಹಿರಿಯ ನಾಯಕ, ಹಾಲಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಕಣದಲ್ಲಿದ್ದರೆ, ಕಾಂಗ್ರೆಸ್‌ನಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧೆಯೊಡ್ಡಿದ್ದಾರೆ. ದಶಕಗಳಿಂದ ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಉತ್ಸುಕವಾಗಿದ್ದು, ತನ್ನ ಭದ್ರಕೋಟೆಯನ್ನು ಕಾಯ್ದುಕೊಳ್ಳಲು ಬಿಜೆಪಿ ಮುಂದಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಹುತೇಕ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಒಟ್ಟು ಸುಮಾರು 4.10 ಲಕ್ಷದಷ್ಟು ಲಿಂಗಾಯುತ ಮತದಾರರಿದ್ದಾರೆ. ಕುರುಬ 1.70 ಲಕ್ಷ, ಎಸ್‌ಸಿ 1.65 ಲಕ್ಷ, ಎಸ್‌ಟಿ 90 ಸಾವಿರ, ಮುಸ್ಲಿಂ 1.80 ಲಕ್ಷ, ಮರಾಠ 1.70 ಲಕ್ಷ, ಜೈನ 1.30 ಲಕ್ಷ ಮತ್ತು ಇತರ ಸಮುದಾಯದ 2.25 ಲಕ್ಷ ಮಂದಿ ಕ್ಷೇತ್ರದಲ್ಲಿದ್ದಾರೆ. ಲಿಂಗಾಯತರು ಯಾರ ಕೈ ಹಿಡಿಯುತ್ತಾರೆನ್ನುವುದರ ಮೇಲೆ ಸೋಲು-ಗೆಲುವು ನಿರ್ಧಾರವಾಗಲಿದೆ.

ಕ್ಷೇತ್ರದ ಬಲಾಬಲ

ಲೋಕಸಲಾ ಕ್ಷೇತ್ರದಲ್ಲಿರುವ ಒಟ್ಟು ಎಂಟು ವಿಧಾನಸಭೆಗಳ ಪೈಕಿ ಐದರಲ್ಲಿ ಕಾಂಗ್ರೆಸ್, ಉಳಿದ ಮೂರು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ನಿಪ್ಪಾಣಿ (ಬಿಜೆಪಿ), ಚಿಕ್ಕೋಡಿ-ಸದಲಗಾ (ಕಾಂಗ್ರೆಸ್), ಅಥಣಿ (ಕಾಂಗ್ರೆಸ್), ಕಾಗವಾಡ (ಕಾಂಗ್ರೆಸ್), ಕುಡಚಿ (ಕಾಂಗ್ರೆಸ್), ರಾಯಬಾಗ (ಬಿಜೆಪಿ), ಹುಕ್ಕೇರಿ (ಬಿಜೆಪಿ), ಯಮಕನಮರಡಿ (ಕಾಂಗ್ರೆಸ್).

ಕ್ಷೇತ್ರದ ಮತದಾರರ ವಿವರ

ಪುರುಷರು- 8,75,953

ಮಹಿಳೆಯರು- 8,65,731

ಇತರರು- 74

ಒಟ್ಟು- 17,41,758

ಅಖಾಡದಲ್ಲಿ ಹಿರಿಯ ಅಭ್ಯರ್ಥಿ VS ಕಿರಿಯ ಅಭ್ಯರ್ಥಿ 

ಕಳೆದ ಹತ್ತು ವರ್ಷಗಳಲ್ಲಿ ಪ್ರಭಲವಾಗಿ ಬೆಳೆದಿರುವ ಬಿಜೆಪಿ ಮತ್ತು ಮೋದಿ ಅಲೆಯನ್ನು ಎದುರಿಸುವ ಸಾಮರ್ಥ್ಯವಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಉದ್ದೇಶದಿಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಇನ್ನು, ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ. ಮೋದಿ ಅವರ ವರ್ಚಸ್ಸಿನ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಪ್ರಿಯಾಂಕಾ ಪಾಲಿಗೆ ಇದೇ ಮೊದಲ ಚುನಾವಣೆ. ತಂದೆ ಮತ್ತು ಕುಟುಂಬದ ರಾಜಕೀಯ ಪ್ರಭಾವ ಮತ್ತು ವರ್ಚಸ್ಸು ಅವರ ಬೆನ್ನಿಗಿದೆ.

ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ ಅಭ್ಯರ್ಥಿ ಚಿಕ್ಕೋಡಿ ಕ್ಷೇತ್ರದ ಹಾಲಿ ಸಂಸದ. ಸಂಘ- ಪರಿವಾರದಲ್ಲಿ ಉತ್ತಮ ಬಾಂಧವ್ಯ ಹೊಂದಿದವರು. ಉದ್ಯಮಿಯೂ ಆಗಿರುವ ಜೊಲ್ಲೆ, ಅವರು ಈಗ 2ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಇವರ ಪತ್ನಿ . 2019ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ವಿರುದ್ಧ ಗೆಲುವು ಸಾಧಿಸಿ, ಸಂಸತ್ ಪ್ರವೇಶಿಸಿದ್ದರು.

ಈ ಬಾರಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ ಕತ್ತಿ ಅವರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಚುನಾವಣಾ ಪ್ರಚಾರದಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಜೊತೆಗೆ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಪ್ರಭಾಕರ ಕೋರೆ ಕೂಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಜಿಲ್ಲೆಯಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಬಿಜೆಪಿಯ ಜಾರಕಿಹೊಳಿ ಸಹೋದರರಾದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದಿಂದಲೇ ಅಂತರ ಕಾಯ್ದುಕೊಂಡಿದ್ದಾರೆ. ಇದು ಬಿಜೆಪಿಗೆ ಹೊಡೆತ ನೀಡಬಹುದು ಎಂಬ ಲೆಕ್ಕಾಚಾರ ಕೂಡ ಶುರುವಾಗಿದೆ.

ಮತ್ತೊಂದೆಡೆ, ಜನರ ಬೇಡಿಕೆಯಿರುವ ಕ್ಷೇತ್ರದ ಪ್ರಮುಖ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಸ್ಪಂದಿಸದಿರುವ ಆರೋಪ, ರಮೇಶ್ ಕತ್ತಿ ಬಣದ ಮುನಿಸು ಎದುರಿಸುವ ಸ್ಥಿತಿ, ಕೆಳಹಂತದ ಕಾರ್ಯಕರ್ತರೊಂದಿಗೆ ಹೆಚ್ಚು ಬೆರೆಯದ ಆರೋಪಗಳು ಜೊಲ್ಲೆ ಮೇಲಿವೆ.

ಸದ್ಯ ಜೊಲ್ಲೆ ಬೆನ್ನಿಗೆ ನಿಂತಿರುವುದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಬ್ಬರೇ, ಅವರು ಪ್ರಖರ ಮಾತುಗಳ ಮೂಲಕ ಜಾರಕಿಹೊಳಿ ಕುಟುಂಬ ರಾಜಕಾರಣ ಟೀಕಿಸುತ್ತಿದ್ದಾರೆ.

ಪ್ರಿಯಾಂಕಾಗೆ ಕಲ್ಲೋಳ್ಕರ್ ಕಂಟಕ

ಅಸಮಾಧಾನದ ಹೊಗೆ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲೂ ಇದೆ. ಕಾಂಗ್ರೆಸ್ ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳ್ಕರ್ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2013ರ ವಿಧಾನಸಭಾ ಚುನಾವಣೆಗೆ ಅವರು ರಾಯಭಾಗ (ಮೀಸಲು) ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮಹಾವೀರ ಮೋದಿ ಅವರಿಗೆ ಪಕ್ಷ ಆಗ ಮಣೆ ಹಾಕಿತ್ತು. ಆಗಲೂ ಬಂಡಾಯವೆದ್ದಿದ್ದ ಶಂಭು ಕಲ್ಲೋಳ್ಕರ್ ಸ್ವತಂತ್ರ ವಾಗಿ ಸ್ಪರ್ಧಿಸಿ 54000ಕ್ಕಿಂತ ಅಧಿಕ ಮತಗಳನ್ನು ಪಡೆದು ಕೇವಲ 2631 ಮತಗಳ ಅಂತರದಿಂದ ಬಿಜೆಪಿಯ ದುರ್ಯೋಧನ ಐಹೊಳೆ ವಿರುದ್ಧ ಪರಾಭವಗೊಂಡಿದ್ದರು.

ದಲಿತ ಸಮುದಾಯಕ್ಕೆ ಸೇರಿರುವ ಕಲ್ಲೋಳ್ಕರ್ ಅವರು ಈಗ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ಗೆ ಮುಳ್ಳಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಪ್ರಿಯಾಂಕಾ ಜಾರಕಿಹೊಳಿಗೂ ಒಳಪೆಟ್ಟಿನ ಆತಂಕ ಇದೆ ಎಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಕಾಶ ಹುಕ್ಕೇರಿ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲ ಹಾಲಿ ಹಾಗೂ ಮಾಜಿ ಶಾಸಕರೂ ಒಗ್ಗಟ್ಟು ಪ್ರದರ್ಶಿಸಿದರು. 'ಶಕ್ತಿ ಪ್ರದರ್ಶನ- ಕ್ಕಿಂತ ಒಗ್ಗಟ್ಟು ಪ್ರದರ್ಶನ ಮುಖ್ಯ' ಎಂಬ ಸತೀಶ ಜಾರಕಿಹೊಳಿ ಮಾತು, ಒಳಪೆಟ್ಟಿನ ಸಂಶಯವಿದೆ ಎಂಬುದಕ್ಕೆ ಸಾಕ್ಷ್ಯದಂತಿದೆ.

ಎಲ್ಲ ನಾಯಕರೂ ಪ್ರಿಯಾಂಕಾ ಪರ ಅಲ್ಲಲ್ಲಿ ಪ್ರಚಾರ ನಡೆಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಪ್ರಚಾರ ಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಟುವಾಗಿ ಟೀಕಿಸುತ್ತ ಸಾಗಿದ್ದಾರೆ. 'ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದರೆ ಸಚಿವ ಸ್ಥಾನ ನಿಶ್ಚಿತ' ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿರುವ ಮಾತೂ ಇಲ್ಲಿ ಸವದಿ ತಲೆಯಲ್ಲಿ ಅಚ್ಚಾಗಿ ಉಳಿದಿದೆ.

2014ರಲ್ಲಿ ಪ್ರಬಲ ಮೋದಿ ಅಲೆ ನಡುವೆಯೂ ಇಲ್ಲಿ ಕಾಂಗ್ರೆಸ್ ನಿಂದ ಪ್ರಕಾಶ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ರಮೇಶ್ ಕತ್ತಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು ಮುಂದೆ 2019ರಲ್ಲಿ ಸೋಲುಂಡರು. ಈಗ ಮತ್ತೆ ಕಾಂಗ್ರೆಸ್ ಮೋದಿ ಅಲೆ ನಡುವೆಯೂ ಯುವ ಮುಖ, ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಿದೆ.

ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹಿರಿಯ ಪುತ್ರಿ 26 ವರ್ಷದ ಎಂಬಿಎ ಪದವೀಧರರಾಗಿರುವ ಪ್ರಿಯಾಂಕಾ ಅವರು ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ, ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ವರ್ಚಸ್ಸಿನ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಆಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಜಾರಕಿಹೊಳಿ ಕುಟುಂಬದ ಪ್ರಭಾವ ಮತ್ತು ವರ್ಚಸ್ಸು ಹೆಚ್ಚು ಕೆಲಸ ಮಾಡುವ ಸಾಧ್ಯತೆ ಇದೆ. ಪ್ರಿಯಾಂಕಾ ಅವರು ಹೊಸ ಮುಖ ಮತ್ತು ರಾಜಕೀಯ ಅನುಭವದ ಕೊರತೆ ಇದೆ.

ಮೋದಿ ಅಲೆ, ಕೇಂದ್ರದ ಯೋಜನೆಗಳ ಹಿನ್ನೆಲೆಯಲ್ಲಿ ಮತದಾರರು ಜೊಲ್ಲೆ ಅವರಿಗೆ ಮತ್ತೊಮ್ಮೆ ಗೆಲುವಿನ ಮಾಲೆ ಹಾಕುತ್ತಾರಾ ಅಥವಾ ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು, ಸಚಿವ ಸತೀಶ್ ಜಾರಕಿಹೊಳಿ ಪ್ರಭಾವ ಮೊದಲಾದ ಕಾರಣಗಳಿಂದ ಕಾಂಗ್ರೆಸ್‌ಗೆ ಗೆಲುವು ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

Tags:    

Similar News