ಕುಮಾರವ್ಯಾಸನ ಇಂಗ್ಲಿಷ್ ಯಾತ್ರೆ: ಕುಮಾರವ್ಯಾಸ ಭಾರತ ಈಗ ಜಗದಗಲ
ಕನ್ನಡದ ಮಹತ್ವದ ಕವಿಯ ಕೃತಿ ಇನ್ನು ಇಂಗ್ಲಿಷಿನಲ್ಲಿಯೂ ಲಭ್ಯವಾಗಲಿದೆ;
ಕುಮಾರ ವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿಯುವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!
ಹೀಗೆಂದು ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿ ಹಿಡಿದಿದ್ದರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು. ಇದುವರೆಗೆ ಕನ್ನಡಿಗರಿಗೆ ಮಾತ್ರ ಪರಿಚಿತವಾಗಿದ್ದ ಕುಮಾರವ್ಯಾಸನ ಕುಮಾರವ್ಯಾಸ ಭಾರತ ಇನ್ನು ಮುಂದೆ ಮಹಾಭಾರತ ಮಹಾಕಾವ್ಯವನ್ನು ಪ್ರೀತಿಸುವ, ಆರಾಧಿಸುವವರೆಲ್ಲರಿಗೂ ಲಭ್ಯ. ಏಕೆಂದರೆ ಇನ್ನು ಮುಂದೆ ಕುಮಾರವ್ಯಾಸ ಭಾರತ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಾಗಲಿದೆ.
ಕುಮಾರವ್ಯಾಸ ಭಾರತದ ಇಂಗ್ಲಿಷ್ ಅವತರಣಿಕೆ ಡಿಸೆಂಬರ್, ೩ರಂದು ಲೋಕಾರ್ಪಣೆಯಾಗಿದೆ. ಈ ಕೃತಿಯನ್ನು ಖ್ಯಾತ ಬರಹಗಾರ, ಅನುವಾದಕ ಹಾಗೂ ವಿಮರ್ಶಕರಾದ ಪ್ರೊ, ಸಿ.ಎನ್. ರಾಮಚಂದ್ರನ್ ಅವರು ಕನ್ನಡದ ಖ್ಯಾತ ಲೇಖಕರುಗಳಾದ ಎಚ್. ಎಸ್. ಶಿವಪ್ರಕಾಶ್, ನಾರಾಯಣ ಹೆಗ್ಡೆ, ಎಚ್. ಎಸ್. ರಾಘವೇಂದ್ರ ರಾವ್ ಹಾಗೂ ಪ್ರೊ. ಎಸ್. ಎನ್. ಶ್ರೀಧರ್ ಅವರ ನೆರವಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ
ಸದ್ಯ ಬಿಡುಗಡೆಯಾಗಿರುವುದು ಪ್ರಥಮ ಸಂಪುಟ. ಬಿಡುಗಡೆಯಾದದ್ದು; ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ ಪ್ರತಿಷ್ಠಿತ ಬೆಂಗಳೂರು ಸಾಹಿತ್ಯೋತ್ಸವದಲ್ಲಿ. ಇನ್ಫೋಸಿಸ್ ಸಂಸ್ಥಾಪಕರಾದ ಎನ್. ಆರ್. ನಾರಾಯಣಮೂರ್ತಿ ಅವರ ಪುತ್ರ ರೋಹನ್‌ಮೂರ್ತಿ ಅವರು ಸ್ಥಾಪಿಸಿರುವ ಹಾರ್ವರ್ಡ್ ವಿ ವಿ ಯಲ್ಲಿರುವ ಟ್ರಸ್ಟ್ ಮೂಲಕ ಕುಮಾರವ್ಯಾಸ ಭಾರತದ ಇಂಗ್ಲಿಷ್ ಅವತರಣಿಕೆ ಪ್ರಕಟವಾಗಿದೆ. ಈ ಟ್ರಸ್ಟ್ (ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ) ಪ್ರಾಚೀನ ಭಾರತದ ಕ್ಲಾಸಿಕ್ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿ ವಿಶ್ವದ ಮೂಲೆಮೂಲೆಗಳಿಗೆ ತಲುಪಿಸುವ ಮಹದುದ್ದೇಶವನ್ನು ಹೊಂದಿದೆ.
ಪಂಚ ಪಂಡಿತರ ಸಪ್ತ ಸಂವತ್ಸರದ ಸಾಧನೆ
ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಲು, ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿವಿಯಲ್ಲಿರುವ ಭಾರತೀಯ ಅಧ್ಯಯನ ಕೇಂದ್ರದ ಮುಖ್ಯಸ್ಥಪ್ರೊ. ಎಸ್. ಎನ್. ಶ್ರೀಧರ್ ಅವರು ಸ್ಟೋನಿಬ್ರೂಕ್ ವಿವಿಯ ನಿರ್ದೇಶಕರು ಹಾಗೂ ಭಾರತೀಯ ಸಾಹಿತ್ಯ, ಭಾಷೆಗಳ ಮೇಲೆ ಪ್ರಭುತ್ವ ಸ್ಥಾಪಿಸಿರುವ ಷೆಲ್ಡಾನ್ ಪೋಲ್ಲಾಕ್ ಅವರನ್ನು ಸಂಪರ್ಕಿಸಿ, ಅನುವಾದಕ್ಕೆ ಅನುಮತಿ ಪಡೆದಿದ್ದಾರೆ. ಪ್ರೊ, ಸಿ.ಎನ್. ರಾಮಚಂದ್ರನ್ ಅವರು ಕಳೆದ ಏಳು ವರ್ಷಗಳಿಂದ ಈ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅವರಿಗೆ ಕನ್ನಡದ ಖ್ಯಾತ ಲೇಖಕರುಗಳಾದ ಎಚ್. ಎಸ್. ಶಿವಪ್ರಕಾಶ್, ನಾರಾಯಣ ಹೆಗ್ಡೆ, ಎಚ್. ಎಸ್. ರಾಘವೇಂದ್ರ ರಾವ್ ಹಾಗೂ ಪ್ರೊ. ಎಸ್. ಎನ್. ಶ್ರೀಧರ್ ನೆರವಾಗಿದ್ದಾರೆ. ನಾವೆಲ್ಲ ಕೂಡಿ ಈ ಅನುವಾದ ಯೋಜನೆಯ ಸಾಧಕ ಬಾಧಕಗಳನ್ನು ನಿರಂತರವಾಗಿ ಚರ್ಚಿಸಿದ್ದೇವೆ. ಅನುವಾದದ ಪ್ರತಿಯೊಂದು ಹಂತದಲ್ಲಿಯೂ ಸಾಕಷ್ಟು ಚರ್ಚೆ-ಜಿಜ್ಞಾಸೆ ನಡೆಸಿದ್ದೇವೆ ಎನ್ನುತ್ತಾರೆ ರಾಮಚಂದ್ರನ್.
ಎಂಟು ಸಹಸ್ರ ಷಟ್ಪದಿ
ಅನುವಾದದ ಕ್ಲಿಷ್ಟ ಹಾದಿಯನ್ನು ವಿವರಿಸುವ ಅವರು; ಪ್ರತಿಯೊಬ್ಬರೂ ಆದಿ ಪಂಚಕದಿಂದ ಒಂದು ಪರ್ವ ಮತ್ತು ಯುದ್ಧ ಪಂಚಕದಿಂದ ಒಂದು ಪರ್ವ ಹೀಗೆ ಅನುವಾದ ಮಾಡಬೇಕು. ಶ್ರೀಧರ್ ಮುಖ್ಯ ಸಂಪಾದಕರಾಗಬೇಕೆಂದು ತೀರ್ಮಾನವಾಗಿತ್ತು. ಕುಮಾರವ್ಯಾಸ ಭಾರತ ಮಹಾಕಾವ್ಯದಲ್ಲಿ ೮೦೦೦ ಕ್ಕೂ ಹೆಚ್ಚು ಷಟ್ಪದಿಗಳಿವೆ. ಇಷ್ಟನ್ನೂ ಅನುವಾದಿಸುವುದು ಕಷ್ಟ ಸಾಧ್ಯ. ಹೀಗಾಗಿ ಕೃತಿಯ ಮೂರನೇ ಒಂದು ಭಾಗದಷ್ಟನ್ನು ಅಂದರೆ ೩೦೦೦ ಷಟ್ಪದಿಗಳನ್ನು ಅನುವಾದಿಸಬೇಕು. ಹಾಗಾಗಿ ಪ್ರತಿಯೊಬ್ಬರೂ ೩೦೦ ರಿಂದ ೬೦೦ ಷಟ್ಪದಿಗಳನ್ನು ಅನುವಾದಿಸಬೇಕೆಂದು ನಿರ್ಣಯವಾಗಿತ್ತು. ಈ ಯೋಜನೆಯ ಮೊದಲ ಸಂಪುಟದಲ್ಲಿ ಆದಿಪರ್ವ (ಅನುವಾದ: ಪ್ರೊ, ಸಿ.ಎನ್. ರಾಮಚಂದ್ರನ್), ಮತ್ತು ಸಭಾಪರ್ವ (ಅನುವಾದ: ನಾರಾಯಣ ಹೆಗ್ಡೆ) ಅವರ ಇಂಗ್ಲಿಷ್ ಅನುವಾದವಿದೆ.
ಮುಖಪುಟದಲ್ಲಿ ಕುಮಾರವ್ಯಾಸ-ದ ಕನ್ನಡ ಮಹಾಭಾರತ-ಸಂಪುಟ ಎಂದು ಅಂದವಾಗಿ ಮುದ್ರಿಸಲಾಗಿದೆ. ಈ ಸಂಪುಟದ ಬೆನ್ನುಡಿಯಂತೂ ಪಾಂಡಿತ್ಯಪೂರ್ಣವಾಗಿದೆ. ಇಂಗ್ಲಿಷ್ ಓದುಗರ ಪ್ರವೇಶಿಕೆಯಾಗಿ ಸಹಾಯವಾಗುತ್ತದೆ. ಇಂಗ್ಲಿಷ್ ಅನುವಾದ ಸಾಹಿತ್ಯಕ್ಕೆ ಇದೊಂದು ಮಹತ್ವದ ಕೊಡುಗೆ ಎಂದರೂ ತಪ್ಪಾಗಲಾರದು.
ಕುಮಾರವ್ಯಾಸ ಭಾರತ ಮಹಾಕಾವ್ಯ ಮಹಾಭಾರತದ ಒಂದು ಸೊಗಸಾದ ಪುನರಾವರ್ತನೆಯಾಗಿದೆ. ಇದು ಹಿಂದೂ ಪುರಾಣ ಮತ್ತು ತತ್ವಶಾಸ್ತ್ರದ ಮೂಲಾಧಾರವಾಗಿದೆ. ಕುಮಾರವ್ಯಾಸನ ಮಹಾಭಾರತದ ಆವೃತ್ತಿಯು ಅದರ ಕಾವ್ಯಾತ್ಮಕ ತೇಜಸ್ಸು, ಭಾಷಾ ಶ್ರೀಮಂತಿಕೆ ಮತ್ತು ಆಳವಾದ ತಾತ್ವಿಕ ಒಳನೋಟಗಳಿಂದ ಗಮನಾರ್ಹವಾಗಿದೆ ಕುಮಾರವ್ಯಾಸನು ತನ್ನದೇ ಆದ ವಿಶಿಷ್ಟ ಶೈಲಿ ಹಾಗೂ ದೃಷ್ಟಿಕೋನದಿಂದ ಮೂಲ ಮಹಾಕಾವ್ಯದ ಸಾರವನ್ನು ಯಶಸ್ವಿಯಾಗಿ ಹಿಡಿದಿದ್ದಾನೆ.
ಯಾರು ಈ ಕುಮಾರವ್ಯಾಸ?
ಕುಮಾರವ್ಯಾಸ ಕನ್ನಡ ಸಾಂಸ್ಕೃತಿಕ ಲೋಕದ ಪ್ರಮುಖ ಪ್ರತಿನಿಧಿಗಳಲ್ಲಿ ಒಬ್ಬರು. ಪಂಪ, ರನ್ನ, ಜನ್ನ, ವಚನಕಾರರಿಗೆ ಮಾತ್ರ ಸರಿಗಟ್ಟುವಂಥ ಪ್ರತಿಭೆ. ಪಂಡಿತರು ಪಾಮರರಿಬ್ಬರಿಗೂ ಸಲ್ಲುವ ಕವಿ ಈತ. ವಿರಹಿಗಳಿಂದ ವಿದ್ಯಾಪರಿಣಿತರವರೆಗೆ ಅರಸುಗಳಿಂದ ಯೋಗೀಶ್ವರವರೆಗೆ ಪ್ರತಿಯೊಬ್ಬರೂ ಪ್ರೀತಿಸುವ ಆರಾಧಿಸುವ ಕವಿ. ತನಗಿಂತ ಹಿಂದಿನ ಪಂಪ, ರನ್ನ, ನಾಗಚಂದ್ರ ಅವರಂತೆ ಪ್ರತಿಯೊಬ್ಬ ಓದುಗನಿಗೂ ಕೇಳುಗನಿಗೂ ಸುಪರಿಚಿತ ಕಾವ್ಯವನ್ನು ಆರಿಸಿಕೊಂಡು ಅದನ್ನು ತನ್ನ ಜೀವನ ದರ್ಶನದ ಮೂಲಕ ಮುಟ್ಟಿಸುವ ಪಾಂಡಿತ್ಯ ಅವರದು. ಕಾವ್ಯದ ಕೇಂದ್ರ ವಸ್ತುವನ್ನು ಪರಾಕ್ರಮದಿಂದ ಭಕ್ತಿಯ ಕಡೆಗೆ ತಿರುಗಿಸುವ ಅವರ ಶಕ್ತಿ ವಿಶಿಷ್ಟವಾದುದು. ಕುಮಾರವ್ಯಾಸ ಭಾರತ ಕಾವ್ಯ ಪ್ರತಿಯೊಂದು ಕ್ಷಣದಲ್ಲಿಯೂ ಮಹಾಭಾರತದ ಕೇಂದ್ರ ಪಾತ್ರ, ಕೃಷ್ಣನನ್ನೇ ಆವರಿಸಿಕೊಂಡಿದೆ. ತನ್ನ ಸುತ್ತಲಿನ ಇಂದ್ರಿಯಾನುಭವಗಳಿಂದ ಕೂಡಿದ ವಿಶ್ವ ಕುಮಾರವ್ಯಾಸನಿಗೆ ಕರತಲಾಮಲಕ. ಪುರಾತನವಾದ ಮಹಾಭಾರತದ ಕಥೆಯನ್ನು ಸ್ಥಳೀಯವಾದ ದೇಶ-ಕಾಲಗಳಲ್ಲಿ ಕೂಡಿಸುವ ಕಾವ್ಯ ಶಕ್ತಿ ಕುಮಾರವ್ಯಾಸರದು.
ಆಡು ಮಾತಿನ ಬೊಕ್ಕಸ ಸೂರೆ
ಕುಮಾರವ್ಯಾಸ ಎಂಬುದು ಗದುಗಿನ ನಾರಾಣಪ್ಪ ಅವರ ಕಾವ್ಯನಾಮ. ಇವರ ಕಾಲ ಕ್ರಿ.ಶ.೧೪೩೦. ಹದಿಮೂರನೇಯ ಶತಮಾನದಿಂದ ಹದಿನೈದನೇ ಶತಮಾನದವರೆಗಿನ ಆವಧಿ. ಹುಟ್ಟಿದ್ದು, ಬೆಳೆದದ್ದು, ಇಂದಿನ ಗದಗ ಜಿಲ್ಲೆಯ ಕೋಳಿವಾಡ ಎಂಬ ಗ್ರಾಮ. ಕುಮಾರವ್ಯಾಸನನ್ನು ಗುರುತಿಸುವುದೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು. ಕನ್ನಡ ಭಾಷೆಯ ನಾಡಿಮಿಡಿತವನ್ನು ಬಲ್ಲಿ ಕುಮಾರವ್ಯಾಸ ಭಾಷೆಯನ್ನು ತನ್ನ ಅಗತ್ಯಕ್ಕೆ ಬಗ್ಗಿಸಿಕೊಳ್ಳುವ ಪ್ರತಿಭಾವಂತ. ತನ್ನ ಸೃಜನಶೀಲತೆಗೆ ಬಳಸಿಕೊಂಡಿರುವುದು ಛಂದೋರೂಪವಾದ ಭಾಮಿನಿ ಷಟ್ಪದಿ. ನಾರಣಪ್ಪನ ಭಾಷೆ ಭಾವಗೀತಾತ್ಮಕವಾದದ್ದು. ಇದರೊಂದಿಗೆ ವರ್ಣನಾತ್ಮಕ ನಾಟಕೀಯ ಅಂಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಇವರು ನಿಸ್ಸೀಮರು. ಅರ್ಥಾಲಂಕಾರಗಳಿಗಾಗಿ ಕ್ಲಿಷೆಯಾಗಿರುವ ಕವಿಸಮಯವನ್ನು ಬಳಸದೆ, ಆಡುಮಾತಿನ ಬೊಕ್ಕಸವನ್ನು ಸೂರೆ ಮಾಡುವ ಮಹಾನ್ ಕವಿ-ಈ ಕುಮಾರವ್ಯಾಸ.