ಆರಕ್ಕೇರದ, ಮೂರಕ್ಕಿಳಿಯದ ಕನ್ನಡ ಚಿತ್ರರಂಗದ ಗತಿ-ಸ್ಥಿತಿ | ದಶಕಗಳ ಹಿಂದಿನ ಯಶಸ್ವಿ ಚಿತ್ರಗಳ ʼಮರು ಬಿಡುಗಡೆʼ ಪರ್ವ
“ಬಿಡುಗಡೆಯಾಗುತ್ತಿರುವ ಸಾಲುಸಾಲು ಚಿತ್ರಗಳ ವಸ್ತುಗಳು ಸದಭಿರುಚಿಯದಾಗಿದ್ದರೂ, ಕಲಾತ್ಮಕವಾಗಿ ಮೆಚ್ಚಿಗೆ ಗಳಿಸಿದರೂ, ಗಲ್ಲಾ ಪಟ್ಟಿಗೆ ಮಾತ್ರ ಖಾಲಿಖಾಲಿ” ಎನ್ನುತ್ತಾರೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್. “ಇವೆಲ್ಲ ಕಾರಣಗಳಿಗಾಗಿ ದಶಕಗಳ ಹಿಂದಿನ ಯಶಸ್ವಿ ಚಿತ್ರಗಳ ಮರುಬಿಡುಗಡೆ ಪರ್ವ ಆರಂಭವಾಗಿರಬಹುದು" ಎಂಬುದು ಅವರ ಅಭಿಪ್ರಾಯ.;
ತೊಂಭತ್ತರ ದಶಕದ ಮಧ್ಯ ಭಾಗದಲ್ಲಿ, ಕನ್ನಡ ಚಿತ್ರರಂಗಕ್ಕೆ ತಮ್ಮ ʻಓಂʼ ಚಿತ್ರದ ಮೂಲಕ ಹೊಸ ನೀರು ಹರಿಸಿದ ಉಪೇಂದ್ರ ಮೂವತ್ತು ವರ್ಷಗಳ ನಂತರವೂ ತಮ್ಮ ವರ್ಚಸ್ಸನ್ನು ಕಾಪಾಡಿಕೊಂಡಿರುವುದಕ್ಕೆ ಈ ಶುಕ್ರವಾರ ಬಿಡುಗಡೆಯಾಗುತ್ತಿರುವ ಅವರ ʻಎʼ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯೇ ಸಾಕ್ಷಿ.
ಉಪೇಂದ್ರ ಅವರ ʻUIʼ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದ ತಮ್ಮ ಅಭಿಮಾನಿಗಳಿಗೆ ಉಪೇಂದ್ರ ತಮ್ಮ ʻAʼ ಚಿತ್ರವನ್ನು ಮರುಬಿಡುಗಡೆ ಮಾಡುವುದಾಗಿ ಪ್ರಕಟಿಸಿದ ಆಶ್ಚರ್ಯ ಹುಟ್ಟಿಸಿದ್ದಾರೆ. ʻʼUIʼ ಚಿತ್ರ ವಿಎಫ್‌ಎಕ್ಸ್ ಕೆಲಸದ ವಿಳಂಬದಿಂದಾಗಿ ತೆರೆಗೆ ಬರಲು ತಡವಾಗುತ್ತಿರುವುದರಿಂದ ʻAʼ ಚಿತ್ರವನ್ನು ಬಿಡುಗಡೆಮಾಡುತ್ತಿರುವುದಾಗಿ ಉಪೇಂದ್ರ ಅವರ ಸಮೀಪವರ್ತಿಗಳು ಹೇಳುತ್ತಿದ್ದಾರೆ.
ಉಪೇಂದ್ರ ಅವರ ʻA ʼ ಚಿತ್ರ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ನಡುವೆ ಡಾ. ವಿಷ್ಣುವರ್ಧನ್ ಅಭಿನಯದ ಮೂವತ್ತೆಂಟು ವರ್ಷದ ಹಿಂದಿನ ಚಿತ್ರ ʼಕೃಷ್ಣಾ ನೀ ಬೇಗನೆ ಬಾರೋʼ ಕೂಡ ತೆರೆ ಕಾಣುತ್ತಿದೆ.
ಅಂದು-ಇಂದಿನ ʻAʼ ಕುರಿತು ಉಪೇಂದ್ರ ಹೇಳುವುದೇನು?
ʻAʼ ಚಿತ್ರದ ಮರುಬಿಡುಗಡೆ ಬಗ್ಗೆ ಉಪೇಂದ್ರ ಹೇಳುವುದಾದರೂ ಏನು? “ನಾನು ʻAʻ ಚಿತ್ರ ನಿರ್ಮಿಸಿದಾಗ, ಅದರ ವಸ್ತು ತನ್ನ ಕಾಲಕ್ಕಿಂತ ದಶಕಗಳ ಮುಂದಿತ್ತು. “ಈಗ ಅ ವಸ್ತುವನ್ನು ಇಂದಿನ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನಗಿದೆ” ಎನ್ನುತ್ತಾರೆ ಉಪೇಂದ್ರ. ʻAʼ ಚಿತ್ರದ ಶೀರ್ಷಿಕೆ ಚಿತ್ರದ ವಸ್ತುವಿನಿಂದಲೇ ಹುಟ್ಟಿಕೊಂಡಿದ್ದು. ಚಿತ್ರಕ್ಕೆ ಸೆನ್ಸಾರ್ ಮಂಡಳಿ ʻAʼ ಪ್ರಮಾಣ ಪತ್ರ ನೀಡಬಹುದೆಂಬ ಕುತೂಹಲವಿತ್ತು. ಆದರೆ ನನ್ನ ಮಟ್ಟಿಗೆ ಈ ಚಿತ್ರ ಪ್ರಬುದ್ಧ ನೋಡಗರಿಗೆ ಮಾತ್ರ ಆಗಿತ್ತು. ಹಾಗಾಗೆ ನಾನು ಈ ಚಿತ್ರವನ್ನು “ಬುದ್ಧಿವಂತರಿಗೆ ಮಾತ್ರ” ಎಂದು ಹೇಳಿದ್ದೆ. ಆದರೆ ಅದನ್ನು ಕೆಲವರು ಪ್ರಚಾರದ ಹುಚ್ಚು ಎನ್ನುವ ಮಟ್ಟಕ್ಕೆ ವಿಶ್ಲೇಷಿಸಿದರು. ನಾನೇನೂ ಚಿಂತಿಸಲಿಲ್ಲ. ಈಗ ಈಗಿನ ಜನಾಂಗ ಈ ಚಿತ್ರವನ್ನು ಹೇಗೆ ಸ್ವೀಕರಿಬಹುದೆಂಬ ಕುತೂಹಲ ನನಗಿದೆ” ಎಂದು ಮುಗುಳ್ನಗುತ್ತಾರೆ.
ಈ ಎರಡು ಚಿತ್ರಗಳ ಮರುಬಿಡುಗಡೆ ಗಮನಿಸಿದರೆ, ಕನ್ನಡ ಚಿತ್ರರಂಗಕ್ಕೆ ಈಗ ʼಮರುಬಿಡುಗಡೆ ಪರ್ವಕಾಲವೇ? ಎಂಬ ಪ್ರಶ್ನೆ ಕಾಡುತ್ತದೆ.
ಚುನಾವಣೆ ಮತ್ತು ಐಪಿಎಲ್ ನೆಪ
ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದ ಕಾರಣ ಹಾಗೂ ಐಪಿಎಲ್ ಕ್ರಿಕೆಟ್ ಪಂದ್ಯ ಸತತವಾಗಿ ನಡೆಯುತ್ತಿರುವ ಕಾರಣ ಹೊಸ ಚಿತ್ರಗಳು ಬಿಡುಗಡೆ ಮಾಡಿದರೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವುದಿಲ್ಲ ಎಂಬ ನೆಪವನ್ನು ಮುಂದೊಡ್ಡಿ ನಿರ್ಮಾಪಕರು ಹಳೆಯ ಚಿತ್ರಗಳನ್ನು ಬಿಡುಗಡೆ ಮಾಡುತ್ತಾ ಬಂದಿದ್ದಾರೆ.
ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಮರುಬಿಡುಗಡೆ ಪರ್ವ ಆರಂಭವಾದದ್ದು, ಕನ್ನಡದ ಸ್ಟಾರ್ ನಟ ಡಾ. ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ʼಜಾಕಿʼ ಚಿತ್ರದೊಂದಿಗೆ. ʼಜಾಕಿʼ ಚಿತ್ರದ ಬಿಡುಗಡೆಗೆ ದಕ್ಕಿದ ಪ್ರತಿಕ್ರಿಯೆಯಿಂದ ಉತ್ತೇಜಿತರಾರ ನಿರ್ಮಾಪಕರು ಪುನೀತ್ ರಾಜ್ ಕುಮಾರ್ ಅವರ ʻಅಂಜನಿಪುತ್ರʼ ಮತ್ತು ʻಪವರ್ ಸ್ಟಾರ್ʼ ಚಿತ್ರಗಳನ್ನು ಒಟ್ಟೊಟ್ಟಾಗಿ ಬಿಡುಗಡೆ ಮಾಡಿದರು. ಆದರೆ ಆ ಎರಡೂ ಚಿತ್ರಗಳಿಗೆ ಪ್ರೇಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ʻಅಪ್ಪುʼ (ಪುನೀತ್ ಅವರನ್ನು ಅವರ ಅಭಿಮಾನಿಗಳು ಗೌರವದಿಂದ, ಪ್ರೀತಿಯಿಂದ ಕರೆಯುವುದು ಅಪ್ಪು ಎಂದೇ) ಅಭಿಮಾನಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿ ಒಟ್ಟೊಟ್ಟಾಗಿ ಚಿತ್ರಗಳನ್ನು ಬಿಡುಗಡೆ ಮಾಡಿದ್ದಕ್ಕೆ ಕೆಂಡ ಕಾರಿದ್ದು ನೆನಪಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಈ ರೀತಿ ದಶಕಗಳ ಹಿಂದೆ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿದ ಚಿತ್ರಗಳನ್ನು ನಿರ್ಮಾಪಕರು ಬಿಡುಗಡೆ ಮಾಡುತ್ತಿರುವ ಕಾರಣಗಳನ್ನು ಹುಡುಕುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.
ಚಿತ್ರಮಂದಿರಗಳಿಗೆ ಚಿತ್ರದ ಕೊರತೆ
ಕನ್ನಡ ಚಿತ್ರರಂಗವನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಕನ್ನಡ ಚಿತ್ರರಂಗ ಈಗ ಸಂಕಷ್ಟ ಸ್ಥಿತಿಯಲ್ಲಿದೆ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ಸಿನಿಮಾಗಳ ಕೊರತೆ ಎದುರಾಗಿದೆ. ಹೀಗಾಗೇ ಏಕಪರದೆ (Single Screen) ಚಿತ್ರಮಂದಿರಗಳು ಒಂದರ ಹಿಂದೆ ಒಂದಂತೆ ನೆಲಕಚ್ಚುತ್ತಿವೆ.
ಮೊನ್ನೆ ಮೊನ್ನೆ ಕಾವೇರಿ ಚಿತ್ರಮಂದಿರ ಕೊನೆಯಾಟ ಮುಗಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳು ತಾವೆಂಬ ಭ್ರಮೆಯಲ್ಲಿರುವು ಸೂಪರ್ ಸ್ಟಾರ್ ನಟರುಗಳು ತಮ್ಮ ʼದೇಶಾದ್ಯಂತದ ಚಿತ್ರʼ (pan Indian film) ಗಳಲ್ಲಿ ಲೀನ-ತಲ್ಲೀನರಾಗಿದ್ದಾರೆ. ಅವರ ತಾರಾ ವರ್ಚಸ್ಸು-ಯಶಸ್ಸು ಅವರಿಗೆ ಮುಖ್ಯವಾಗಿದೆ. ಸೊರಗುತ್ತಿರುವ ಕನ್ನಡ ಚಿತ್ರರಂಗದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗದೆ ಈ ವರ್ಷದ ಅರ್ಧ ಭಾಗ ಈಗಾಗಲೇ ಕಳೆದಿದೆ. ಬಿಡುಗಡೆಗೆ ಸಜ್ಜಾಗಿರುವ ಸಿನಿಮಾಗಳ ನಿರ್ಮಾಕರೂ ಕೂಡ ನಾನಾ ಕಾರಣಗಳನ್ನು ಮುಂದು ಮಾಡಿ ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೂಡುತ್ತಿದ್ದಾರೆ.
ಶಿವರಾಜ್ ಕುಮಾರ್ ಚಿತ್ರಗಳದೇ ಮೇಲುಗೈ
ಹಾಗೆ ನೋಡಿದರೆ ಸ್ಟಾರ್ ಸಿನಿಮಾಗಳೆಂದು ಬಿಡುಗಡೆಯಾಗುತ್ತಿರುವುದು ಶಿವರಾಜ್ ಕುಮಾರ್ ಅವರ ಚಿತ್ರಗಳು ಮಾತ್ರ. ಮಾರ್ಚಿ ತಿಂಗಳಲ್ಲಿ, ಚುನಾವಣೆಗೆ ಒಂದೂವರೆ ತಿಂಗಳ ಮುನ್ನ, ಶಿವರಾಜ್ ಕುಮಾರ್ ಮತ್ತು ಪ್ರಭುದೇವ ನಟಿಸಿದ ʼಕರಟಕ-ದಮನಕʼ ಬಿಡುಗಡೆಯಾಗಿತ್ತು. ಈ ಚಿತ್ರ ಹೊರತುಪಡಿಸಿದರೆ, ಈ ವರ್ಷ ಇದುವರೆಗೆ ಇತರೆ ಯಾವುದೇ ಸ್ಟಾರ್ ನಟರ ಚಿತ್ರಗಳೂ ತೆರೆಕಂಡಿಲ್ಲ. ಆಗಸ್ಟ್ ತಿಂಗಳವರೆಗೆ ಸ್ಟಾರ್ ನಟರ ಯಾವುದೇ ಚಿತ್ರ ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.
ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು ಶಿವರಾಜ್ ಕುಮಾರ್ ಅವರ ʻಭೈರತಿ ರಣಗಲ್ʼ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ. ಜನವರಿಯಿಂದ ಮೇ ತಿಂಗಳವರೆಗಿ ಕೆಲ ಸದಭಿರುಚಿಯ ಚಿತ್ರಗಳು ಬಿಡುಗಡೆಗೊಂಡಿದ್ದರೂ, ಅವುಗಳಿಗೆ ಪ್ರೇಕ್ಷಕರ ಕೊರತೆ ಢಾಳಾಗಿ ಕಾಣಿಸುತ್ತಿತ್ತು. ಕನ್ನಡದಲ್ಲಿ ಸಿನಿಮಾ ಹಬ್ಬದ ಉತ್ಸಾಹ ಕಾಣಬೇಕೆಂದರೆ, ತಾರಾ ನಟರ ಚಿತ್ರಗಳು ಬಿಡುಗಡೆಯಾಗಬೇಕೆಂಬುದು ʻಗಾಂಧಿ ನಗರʼದ (ಕನ್ನಡ ಚಿತ್ರರಂಗದ ಕೇಂದ್ರ ಸ್ಥಾನ) ನಂಬಿಕೆ.
ಈಗ ಕರ್ನಾಟಕದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಮೇ ತಿಂಗಳ ಅಂತ್ಯಕ್ಕೆ ಐಪಿಎಲ್ ಜ್ವರ ಕೂಡ ಇಳಿಯುತ್ತದೆ. ಜೂನ್ ೪ಕ್ಕೆ ಫಲಿತಾಂಶ ಕೂಡ ಬರಲಿದೆ. ಆದರೂ ತಾರಾ ನಟರ ಚಿತ್ರಗಳು ಬಿಡುಗಡೆಯಾಗುವ ಲಕ್ಷಣಗಳು ಕಾಣುತ್ತಿಲ್ಲ ಎನ್ನುವುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ ಎನ್ ಸುರೇಶ್ ಅವರ ಅನಿಸಿಕೆ.
ಕೆಲ ಸ್ಟಾರ್ ನಟರ ಚಿತ್ರಗಳ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕು ವ್ಯವಹಾರದಲ್ಲಿ ಸಿಕ್ಕಿಕೊಂಡಿವೆ. ಮತ್ತೆ ಕೆಲವರು Pan-India ಭ್ರಮೆಯಲ್ಲಿ ಮುಳುಗಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿರ್ಮಾಪಕರೊಬ್ಬರ ನಿಷ್ಠೂರ ಅಭಿಪ್ರಾಯ.
ಈ ನಡುವೆ ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತು ಪ್ರತಿದಿನವೂ ಕೇಳಿಬರುತ್ತಿದೆ. “ಬಿಡುಗಡೆಯಾಗುತ್ತಿರುವ ಸಾಲುಸಾಲು ಚಿತ್ರಗಳ ವಸ್ತುಗಳು ಸದಭಿರುಚಿಯದಾಗಿದ್ದರೂ, ಕಲಾತ್ಮಕವಾಗಿ ಮೆಚ್ಚಿಗೆ ಗಳಿಸಿದರೂ, ಗಲ್ಲಾ ಪಟ್ಟಿಗೆ ಮಾತ್ರ ಖಾಲಿಖಾಲಿ” ಎನ್ನುತ್ತಾರೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್. “ಇವೆಲ್ಲ ಕಾರಣಗಳಿಗಾಗಿ ದಶಕಗಳ ಹಿಂದಿನ ಯಶಸ್ವಿ ಚಿತ್ರಗಳ ಮರುಬಿಡುಗಡೆ ಪರ್ವ ಆರಂಭವಾಗಿರಬಹುದು" ಎಂಬುದು ಅವರ ಅಭಿಪ್ರಾಯ.