Delay in Recruitment Part -3 | ನೇಮಕಾತಿಗೆ ಸರ್ಕಾರ ವಿಳಂಬ; ಸ್ಪರ್ಧಾರ್ಥಿಗಳಲ್ಲಿ ವಯೋಮಿತಿ ಮೀರುವ ಆತಂಕ !

ಸರ್ಕಾರದ 3 ವರ್ಷ ವಯೋಮಿತಿ ಸಡಿಲಿಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಪರ್ಧಾರ್ಥಿಗಳು ಕನಿಷ್ಠ 5 ವರ್ಷ ಸಡಿಲಿಕೆಗೆ ಒತ್ತಾಯಿಸುತ್ತಿದ್ದಾರೆ. ತಪ್ಪಿದಲ್ಲಿ ಕಲಬುರಗಿ, ಬೆಳಗಾವಿ, ಕೊಪ್ಪಳ, ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆ ನೀಡಿವೆ ವಿದ್ಯಾರ್ಥಿ ಸಂಘಟನೆಗಳು.

Update: 2025-10-04 03:30 GMT
ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಕನಸು ಕಾಣುತ್ತಿರುವ ಲಕ್ಷಾಂತರ ಸ್ಪರ್ಧಾರ್ಥಿಗಳು, ನಿತ್ಯ ಆಸೆ ಕಂಗಳಿಂದ ಸರ್ಕಾರದ ನೇಮಕಾತಿ ಅಧಿಸೂಚನೆಯ ನಿರೀಕ್ಷೆಯಲ್ಲೇ ಕಾಯುತ್ತಿದ್ದಾರೆ.

ನೇಮಕಾತಿ ಪ್ರಕ್ರಿಯೆಗೆ ಎದುರಾಗಿದ್ದ ಅಡ್ಡಿ ಆತಂಕಗಳು ಒಳ ಮೀಸಲಾತಿ ಜಾರಿಯಿಂದ ದೂರವಾದರೂ ಈವರೆಗೂ ಯಾವುದೇ ನೇಮಕಾತಿ ಪ್ರಕ್ರಿಯೆ ಆರಂಭವಾಗದಿರುವುದು ಸ್ಪರ್ಧಾರ್ಥಿಗಳನ್ನು ಚಿಂತೆ ದೂಡಿದೆ. ಕೋವಿಡ್ ಅವಧಿಯಿಂದ ನೇಮಕಾತಿ ಅಧಿಸೂಚನೆ ಪ್ರಕಟಿಸದ ಕಾರಣ ಹಲವು ಸ್ಪರ್ಧಾರ್ಥಿಗಳು ಈಗ ವಯೋಮಿತಿ ಅಂಚಿನಲ್ಲಿದ್ದಾರೆ. ಕೆಲವರ ವಯೋಮಿತಿ ಮೀರಿ ಹೋಗಿದೆ.

ರಾಜ್ಯ ಸರ್ಕಾರ ಇತ್ತೀಚೆಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದರೂ ಬಹುತೇಕರಿಗೆ ಇದರ ಲಾಭ ಸಿಗುತ್ತಿಲ್ಲ. ಏಕೆಂದರೆ, 2019-20 ರಲ್ಲಿ ವಯೋಮಿತಿ ಅಂಚಿನಲ್ಲಿದ್ದವರಿಗೆ ಸರ್ಕಾರದ ಆದೇಶದಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕನಿಷ್ಠ 5 ವರ್ಷವಾದರೂ ವಯೋಮಿತಿ ಸಡಿಲಿಕೆ ಮಾಡಬೇಕು ಎಂಬುದು ಸ್ಪರ್ಧಾರ್ಥಿಗಳ ಒತ್ತಾಯವಾಗಿದೆ.

ʼನಮ್ಮ ಫಾರ್‌ಸೈಟ್‌ʼ ತರಬೇತಿ ಕೇಂದ್ರದ ನಿರ್ದೇಶಕ ತೌಸಿಫ್‌ ಪಾಷ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, "ವಯೋಮಿತಿ ಹೆಚ್ಚಳ ಮಾಡುವ ಪರಿಸ್ಥಿತಿ ಬರದಂತೆ ಸರ್ಕಾರ ನೇಮಕಾತಿಗಳನ್ನು ನಡೆಸಬೇಕು. ಕೇಂದ್ರ ಲೋಕಸೇವಾ ಆಯೋಗದಂತೆ ರಾಜ್ಯದಲ್ಲೂ ಪರೀಕ್ಷಾ ವೇಳಾಪಟ್ಟಿ ತಯಾರಿಸಿ ವಿಳಂಬ ಮಾಡದಂತೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಹಲವು ವರ್ಷಗಳಿಂದ ನಡೆದಿಲ್ಲ ನೇಮಕಾತಿ

ರಾಜ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಕಳೆದ 15 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಅರಣ್ಯ ಇಲಾಖೆಯಲ್ಲಿ 5 ವರ್ಷ, ಕೃಷಿ ಇಲಾಖೆಯಲ್ಲಿ 8 ವರ್ಷ, ತೋಟಗಾರಿಕೆ ಇಲಾಖೆಯಲ್ಲಿ 7 ವರ್ಷ, ಪೊಲೀಸ್‌ ಇಲಾಖೆ ಪಿಎಸ್‌ಐ ಹುದ್ದೆಗೆ 5 ವರ್ಷ, ಸಬ್‌ ರಿಜಿಸ್ಟಾರ್‌ ಹುದ್ದೆಗೆ 10 ವರ್ಷ ಹಾಗೂ ಅಬಕಾರಿ ಇಲಾಖೆಯಲ್ಲಿ 9 ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಇಷ್ಟೂ ವರ್ಷ ಅಭ್ಯರ್ಥಿಗಳು ನೇಮಕಾತಿಗೆ ಕಾದು ಕಾದು ವಯೋಮಿತಿ ದಾಟಿದ್ದಾರೆ. ಸರ್ಕಾರದ ವಿಳಂಬ ಧೋರಣೆಯು ಅಭ್ಯರ್ಥಿಗಳ ಉದ್ಯೋಗದ ಹಕ್ಕನ್ನೇ ಕಸಿದಿದೆ ಎಂದು ತೌಸಿಫ್‌ ಪಾಷ ಆರೋಪಿಸಿದರು.

ಪ್ರತಿಯೊಂದು ಹುದ್ದೆಗೂ ಲಕ್ಷಾಂತರ ಅಭ್ಯರ್ಥಿಗಳು ಹಗಲಿರುಳು ತಯಾರಿ ನಡೆಸುತ್ತಿರುತ್ತಾರೆ. ಆದರೆ ಸರ್ಕಾರ ವಿವಿಧ ಇಲಾಖೆಗಳಲ್ಲಿ ನೇಮಕಾತಿ ನಡೆಸಲು ಕನಿಷ್ಠ ಐದು ವರ್ಷ ಸಮಯ ವ್ಯಯ ಮಾಡಿದರೆ ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿರುತ್ತದೆ. ಆದ್ದರಿಂದ, ಸರ್ಕಾರ ಮೂರು ವರ್ಷದ ಬದಲಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕಿದೆ. ಜತೆಗೆ ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು. 

ವಯೋಮಿತಿ ಹೆಚ್ಚಳ ಏಕೆ? 

ಕೋವಿಡ್‌ ಕಾರಣದಿಂದಾಗಿ ರಾಜ್ಯ ಸರ್ಕಾರ ಯಾವುದೇ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿರಲಿಲ್ಲ. ವಿದ್ಯಾರ್ಥಿ ಸಂಘಟನೆಗಳ ಒತ್ತಾಯದ ಮೇರೆಗೆ ಕೋವಿಡ್‌ ನಂತರ ಹೊರಡಿಸುವ ಎಲ್ಲಾ ಹೊಸ ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಎರಡು ವರ್ಷ ಸಡಿಲಗೊಳಿಸಲಾಗಿತ್ತು. ಆದರೆ ಕೋವಿಡ್‌ ನಂತರ ನಡೆದಿದ್ದು ಕೇವಲ ಬೆರಳೆಣಿಕೆಯಷ್ಟು ನೇಮಕಾತಿಗಳು ಮಾತ್ರ. ಕಳೆದ ವರ್ಷ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡುವ ಕಾರಣದಿಂದ ಯಾವುದೇ ಹೊಸ ಅಧಿಸೂಚನೆ ಹೊರಡಿಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಪರಿಶಿಷ್ಟ ಜಾತಿಯನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಿದ್ದು ಗ್ರೂಪ್‌ ʼಎʼ ಗೆ ಶೇ.6 ಗ್ರೂಪ್‌ ʼಬಿʼ ಗೆ ಶೇ.6 ಮತ್ತು ಗ್ರೂಪ್‌ ʼಸಿʼಗೆ ಶೇ.5 ಮೀಸಲಾತಿ ನೀಡಿದೆ. ಮುಂದಿನ ಎಲ್ಲಾ ನೇಮಕಾತಿಗಳಲ್ಲಿ ಇದೇ ಮೀಸಲಾತಿ ರೋಸ್ಟರ್ ಅನುಸರಿಸುವಂತೆ ನೇಮಕಾತಿ  ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ.

ವಿದ್ಯಾರ್ಥಿಗಳ ಬೇಡಿಕೆ ಏನು? 

ರಾಜ್ಯ ಸರ್ಕಾರ ಕೋವಿಡ್‌ ಕಾರಣದಿಂದ ಎರಡು ವರ್ಷ, ಒಳ ಮೀಸಲಾತಿ ಕಾರಣದಿಂದ ಒಂದು ವರ್ಷ ಯಾವುದೇ ನೇಮಕಾತಿ ನಡೆಸಿಲ್ಲ. ಆದ್ದರಿಂದ ಮುಂದೆ ನಡೆಯಲಿರುವ ಎಲ್ಲಾ ನೇಮಕಾತಿಗಳಿಗೂ ಕನಿಷ್ಠ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಬೇಕು. ಖಾಲಿ ಇರುವ 2.84ಲಕ್ಷ ಹುದ್ದೆಗಳಿಗೆ ಶೀಘ್ರವೇ ಹಂತ-ಹಂತವಾಗಿ ನೇಮಕ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ವಿದ್ಯಾರ್ಥಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಸರ್ಕಾರಿ ಹುದ್ದೆಗಳಿಗಿರುವ ವಯೋಮಿತಿ ಎಷ್ಟು ?

ರಾಜ್ಯ ಸರ್ಕಾರ ಹೊರಡಿಸುವ ನೇಮಕಾತಿಗಳಿಗೆ ನಿರ್ದಿಷ್ಟ ವಯೋಮಿತಿ ನಿಗದಿಪಡಿಸಿದೆ. ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಸಾಮಾನ್ಯ ವರ್ಗಕ್ಕೆ 25 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 27 ವರ್ಷ ನಿಗದಿಪಡಿಸಿದೆ. ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಸಾಮಾನ್ಯ ವರ್ಗದವರಿಗೆ 28 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 30 ವರ್ಷ ನಿಗದಿಪಡಿಸಲಾಗಿತ್ತು. ಗ್ರೂಪ್‌ ʼಬಿʼ ಮತ್ತ ʼಸಿʼ ಹುದ್ದೆಗಳಿಗೆ  ಸಾಮಾನ್ಯ ವರ್ಗಕ್ಕೆ 35 ವರ್ಷ, ಇತರೆ ಹಿಂದುಳಿದ ವರ್ಗಗಳಿಗೆ 38 ವರ್ಷ ಮತ್ತು ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1 ವಿದ್ಯಾರ್ಥಿಗಳಿಗೆ 40 ವರ್ಷ ನಿಗದಿಪಡಿಸಿತ್ತು.

ವಿದ್ಯಾರ್ಥಿಗಳು, ಜನಪ್ರತಿನಿಧಿಗಳ ಒತ್ತಾಯ ಹಾಗೂ ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಒಂದು ಬಾರಿಗೆ ಅನ್ವಯವಾಗುವಂತೆ 2027 ಡಿ.31ರೊಳಗೆ ಅಧಿಸೂಚನೆ ಪ್ರಕಟಿಸುವ ಎಲ್ಲಾ ನೇಮಕಾತಿಗಳಿಗೂ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿದೆ.

ಇಲಾಖೆಗಳ ನಡುವಿನ ಗೊಂದಲ ಬಗೆಹರಿಯಲಿ

ಅಖಿಲ ಕರ್ನಾಟಕ ವಿದ್ಯಾರ್ಥಿ ಮತ್ತು ಸಂಶೋಧಕರ ಸಂಘದ ಅಧ್ಯಕ್ಷ ಸಂತೋಷ್‌ ಮರೂರು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, "ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ದೊಡ್ಡ ಪ್ರಮಾಣದ ನೇಮಕಾತಿಗಳು ನಡೆದಿಲ್ಲ. ಒಳ ಮೀಸಲಾತಿ ಕಲ್ಪಿಸಲು ಕಳೆದೊಂದು ವರ್ಷದಿಂದ ನೇಮಕಾತಿ ಅಧಿಸೂಚನೆ ಹೊರಡಿಸಿಲ್ಲ.

ಇದೀಗ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತಿದೆ. ವರ್ಷಾಂತ್ಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ಆರಂಭವಾದರೆ ನೇಮಕಾತಿಗಳಿಗೆ ಮತ್ತೊಮ್ಮೆ ತಡೆ ಬೀಳಲಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ತಮ್ಮಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಹೊರಡಿಸಿರುವ ರೋಸ್ಟರ್‌ ಪದ್ದತಿಯಂತೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ನೇಮಕಾತಿ ಪ್ರಾಧಿಕಾರಕ್ಕೆ ತಲುಪಿಸಬೇಕು. ಶೀಘ್ರ ಅಧಿಸೂಚನೆ ಹೊರಡಿಸಬೇಕು" ಎಂದು ಒತ್ತಾಯಿಸಿದರು.

ಎಲ್ಲಾ ಹುದ್ದೆಗಳಿಗೂ ವಯೋಮಿತಿ ಹೆಚ್ಚಿಸಲಿ

ರಾಜ್ಯ ಸರ್ಕಾರ ನೇಮಕಾತಿಗಳಲ್ಲಿ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿರುವುದು ಸಂತಸ ತಂದಿದೆ. ಕೆಲವು ಸ್ಪರ್ಧಾರ್ಥಿಗಳು ಬೇರೆ ರಾಜ್ಯದಲ್ಲಿರುವಂತೆ ರಾಜ್ಯ ಪೊಲೀಸ್‌ ಇಲಾಖೆಯಲ್ಲಿಯೂ ಶಾಶ್ವತವಾಗಿ ವಯೋಮಿತಿ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದ್ದು, ಪ್ರಸ್ತಾವನೆ ಸರ್ಕಾರದ ಮುಂದಿದೆ.

ವಯೋಮಿತಿ ಹೆಚ್ಚಳ ಮಾಡುವುದಾದರೆ ಎಲ್ಲಾ ಇಲಾಖೆಗಳ ನೇಮಕಾತಿಯಲ್ಲೂ ವಯೋಮಿತಿ ಹೆಚ್ಚಳ ಮಾಡಬೇಕು. ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ನೇಮಕ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಆದ್ದರಿಂದ ಸ್ಪರ್ಧಾರ್ಥಿಗಳೂ ತಮ್ಮ ತಯಾರಿ ಚುರುಕುಗೊಳಿಸಬೇಕು ಎಂದು ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಚಿಕ್ಕಮಗಳೂರಿನ ದರ್ಶನ್‌ ಇ.ಜೆ. ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಹಂತ ಹಂತವಾಗಿ ನೇಮಕ ಪ್ರಕ್ರಿಯೆ ಆರಂಭಿಸಿ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ವಯೋಮಿತಿ ಹೆಚ್ಚಳ ಮಾಡುವ ಅಗತ್ಯವೇ ಇಲ್ಲ. ಇದರಿಂದ ವಯೋಮಿತಿ ಮೀರುವ ಆತಂಕದಲ್ಲಿರುವ ಸ್ಪರ್ಧಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಸರ್ಕಾರ ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಐದು ವರ್ಷಗಳ ವಯೋಮಿತಿ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಧಾರವಾಡ ಹಾಗೂ ವಿಜಯಪುರದಲ್ಲಿ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಗಿತ್ತು. 

ವಯೋಮಿತಿ ಹೆಚ್ಚಳ ಮಾಡದಿದ್ದರೆ ಕಲಬುರಗಿ, ಬೆಳಗಾವಿ, ಕೊಪ್ಪಳ, ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಹೋರಾಟ ಮಾಡಲಾಗುವುದು ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Tags:    

Similar News