ಧವನ್‌ ರಾಕೇಶ್‌ ಸಿದ್ದರಾಮಯ್ಯ : ಕುಟುಂಬ ರಾಜಕಾರಣ ವಿರೋಧಿ ನಾಯಕನ ಮೊಮ್ಮಗನೂ ಅಖಾಡಕ್ಕೆ?

ವಂಶ ರಾಜಕಾರಣವನ್ನು ಪದೇ ಪದೇ ಟೀಕಿಸಿ ರಾಜಕೀಯವಾಗಿ ಮುನ್ನಡೆದ ನಾಯಕನೊಬ್ಬ ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಲ್ಲದೆ, ತಮ್ಮ ಕುಟುಂಬದ ಕುಡಿಗಳನ್ನೂ ರಾಜಕಾರಣಕ್ಕೆ ತರುತ್ತಿರುವ ವೈಪರೀತ್ಯವಿದು.

Update: 2025-10-21 01:30 GMT

ಸಮಾಜವಾದಿ ರಾಜಕಾರಣ ಅರಂಭಿಸಿದ ಈ ನಾಯಕ ಅಲ್ಲದೆ ಕಾಂಗ್ರೆಸ್ ಆಡಳಿತವನ್ನು ಮತ್ತು ಅದರ ವಂಶ ರಾಜಕಾರಣವನ್ನು ಕಟುವಾಗಿ ಟೀಕಿಸಿದ್ದರು. ಕರ್ನಾಟಕದಲ್ಲೂ ಒಂದು ಕಾಲದಲ್ಲಿ ತಾವೇ ಜತೆಗಿದ್ದ ಜನತಾದಳದ ಪರಮೋಚ್ಛ ನಾಯಕ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣವನ್ನು ʼಅಪ್ಪ-ಮಕ್ಕಳʼ ಪಕ್ಷವೆಂದು ಆರೋಪಿಸಿದ್ದರು.

ವಂಶ ರಾಜಕಾರಣವನ್ನು ಪದೇ ಪದೇ ಟೀಕಿಸಿ ರಾಜಕೀಯವಾಗಿ ಮುನ್ನಡೆದ ನಾಯಕನೊಬ್ಬ ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಲ್ಲದೆ, ತಮ್ಮ ಕುಟುಂಬದ ಕುಡಿಗಳನ್ನೂ ರಾಜಕಾರಣಕ್ಕೆ ತರುತ್ತಿರುವ ವೈಪರೀತ್ಯವಿದು.

ಹೌದು. ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಮತ್ತು ದಲಿತ (ಅಹಿಂದ) ವರ್ಗಗಳ ಪ್ರಶ್ನಾತೀತ ನಾಯಕ, ಸದ್ಯದ ಮಟ್ಟಿಗೆ ಅತಿ ಹೆಚ್ಚು ಜನಪ್ರಿಯರಾಗಿರುವ ಮಾಸ್ ಲೀಡರ್ , ಅನ್ನ ಭಾಗ್ಯ ಮತ್ತಿತರ ಜನಪರ ಯೋಜನೆಗಳ ಮೂಲಕ ಜನಮಾನಸಕ್ಕೆ ಹತ್ತಿರವಾಗಿರುವ ಸಿದ್ದರಾಮಯ್ಯ ಅವರ ರಾಜಕೀಯದ ಕಥೆಯಿದು.

ಈಗ ಈ ವಿಷಯ ಚರ್ಚಗೆ ಬರಲು ಮುಖ್ಯ ಕಾರಣ, ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನಸಭೆ ಶಾಸಕನಾಗಿ ಮಾಡಿಸಿ, ಈಗ ವಿಧಾರ ಪರಿಷತ್ ಸದಸ್ಯನಾಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಕಾಲ ಮರಣಕ್ಕೀಡಾದ ತಮ್ಮ ಮೊದಲ ಪುತ್ರನ ಮಗ ಅಂದರೆ ತಮ್ಮನ ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯ ಅವರನ್ನೂ ಚುನಾವಣಾ ರಾಜಕೀಯಕ್ಕೆ ಕರೆತರಲು ಯೋಜನೆ ರೂಪಿಸಿರುವುದು ಸಿದ್ದರಾಮಯ್ಯ ಅವರ ಕುಟುಂಬ ಪ್ರೇಮದ ಬಗ್ಗೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ಸಿದ್ದರಾಮಯ್ಯ ಹೀಗಿದ್ದರು…

ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಕರ್ನಾಟಕದ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಆರಂಭದಿಂದಲೂ ಸಮಾಜವಾದಿ ಸಿದ್ಧಾಂತ ಮೈಗೂಡಿಸಿಕೊಂಡವರು.

ಇವರು ಮೊದಲು ಚುನಾವಣಾ ರಾಜಕೀಯ ಪ್ರವೇಶ ಮಾಡಿದ್ದು ಕಾಂಗ್ರೆಸ್ ವಿರೋಧಿ ನಿಲುವಿನ ಜನತಾಪರಿವಾರದ ಸಾಂಗತ್ಯದಲ್ಲಿ. 1978ರ ಮೈಸೂರು ತಾಲ್ಲೂಕು ಬೋರ್ಡ್ ಚುನಾವಣೆ ಇವರಿಗೆ ರಾಜಕಾರಣದ ಚಿಮ್ಮು ಹಲಗೆ.

1972ರಲ್ಲಿ ಸಮಾಜವಾದಿ ಯುವಜನ ಸಭಾ ಸೇರಿ, 1974ರ ಜೆಪಿ ಸಮಾಜವಾದಿ ಜನಾಂದೋಲನದಲ್ಲಿ ಭಾಗಿಯಾಗಿ 1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಇದಕ್ಕಾಗಿ ಜೈಲುವಾಸವನ್ನೂ ಅನುಭವಿಸಿದ್ದ ಸಿದ್ದರಾಮಯ್ಯ; ಕಾಂಗ್ರೆಸ್ ರಾಜಕಾರಣದ ವಿರುದ್ದ ಯಾವತ್ತೂ ಹೊಳೆಯುವ ನಿಗಿ ನಿಗಿ ಕೆಂಡದಂತಹ ವ್ಯಕ್ತಿತ್ವ ಹೊಂದಿದ್ದವರು!

ವಿಶಾಲ ವಿಮರ್ಶಾತ್ಮಕ ರಾಜಕೀಯ ಚಿಂತನೆಗಳನ್ನೊಳಗೊಂಡ ಜನತಾಪರಿವಾರದ ವೇದಿಕೆಯಲ್ಲಿ ಜನಸ್ನೇಹಿ ರಾಜಕಾರಣ ಮಾಡುತ್ತಿದ್ದ ಸಿದ್ದರಾಮಯ್ಯ ಸ್ಥಿತಿ ಈಗ ಬದಲಾಗಿದೆ. ಕಟುವಾಗಿ ಟೀಕಿಸುತ್ತಿದ್ದ ಪಕ್ಷವನ್ನೇ ಒಪ್ಪಿಕೊಂಡು, ಇದರ ನೀತಿ ನಿಯಮಗಳನ್ನು ಚಾಚೂತಪ್ಪದೇ ಅನುಸರಿಸುವ ಅನಿವಾರ್ಯತೆ ಇವರಿಗೆದುರಾಗಿದೆ.

ಸಂದಿಗ್ದತೆಗೊಡ್ಡುವ ಇಂತಹ ಸ್ಥಿತಿಯನ್ನೂ ಬಹಳ ಜಾಣ್ಮೆಯಿಂದ ಉಪಯೋಗಿಸಿಕೊಂಡ ಸಿದ್ದರಾಮಯ್ಯ, ಕಾಂಗ್ರೆಸ್ನಲ್ಲಿ ಹಲವು ಹಿರಿಯರಿದ್ದರೂ ಸಹ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ದೊಡ್ಡ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇದು ಕಾಂಗ್ರೆಸ್ನ ಸಿದ್ಧಮಾದರಿಯ ರಾಜಕಾರಣದಲ್ಲಿ ಗೋಚರಿಸಿದ ಅಚ್ಚರಿಯ ಬೆಳವಣಿಗೆ. ಹೊರಗಿನಿಂದ ಈ ಪಕ್ಷಕ್ಕೆ ವಲಸೆ ಬಂದವರು ದೊಡ್ಡ ಹುದ್ದೆ ಪಡೆಯುವುದು ಬಹಳ ಕಷ್ಟದ ವಿಚಾರ. ಆದರೆ ಸಿದ್ದರಾಮಯ್ಯ ಇದನ್ನು ಸಾಧ್ಯವಾಗಿಸಿದ್ದಾರೆ.

ಪ್ರತಿಭಟನೆ, ಹೋರಾಟ, ಹಕ್ಕು ಪ್ರತಿಪಾದನೆಯಂತಹ ಜನತಾಪರಿವಾರದ ರಾಜಕಾರಣದಿಂದ ಮಗ್ಗಲು ಬದಲಿಸಿ ಗರಿಗರಿ ಬಿಳಿಬಟ್ಟೆಯ ಕಾಂಗ್ರೆಸ್ಸಿಗನಾಗಿ ಬದಲಾದ ಸಿದ್ದರಾಮಯ್ಯ 16ಬಾರಿ ರಾಜ್ಯದ ಬಜೆಟ್ ಮಂಡಿಸಿ ದೊಡ್ಡ ದಾಖಲೆ ಮಾಡಿದ್ದಾರೆ. ದೇವರಾಜ ಅರಸು ಅವರನ್ನು ಹೊರತುಪಡಿಸಿ ಮೈಸೂರಿನಿಂದ ಪೂರ್ಣಾವಧಿಗೆ ಮುಖ್ಯಮಂತ್ರಿಯಾದ ರಾಜಕೀಯ ಪ್ರಮುಖ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ. ಎಂಟನೇ ಬಾರಿ ಮೈಸೂರು ದಸರಾ ಉದ್ಘಾಟಿಸಿದರು ಎಂಬ ವಿಶೇಷತೆಯನ್ನೂ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರ ರಾಜಕೀಯದ ಆರಂಭದ ದಿನಗಳು ಮತ್ತು ಜನತಾ ಸರ್ಕಾರದ ಸಚಿವ ಸಂಪುಟದ ಪ್ರಮುಖ ಹುದ್ದೆಯೊಂದಿಗೆ ಜನರೊಡನೆ ಒಡನಾಡುವ ಸಂದರ್ಭಗಳನ್ನು ಗಮನಿಸಿದಾಗ ಇವರ ನೇರ ನಿಷ್ಠುರ ನುಡಿ ಮತ್ತು ದಿಟ್ಟ ಆಡಳಿತ ಅರಿವಿಗೆ ಬರುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ಕಾಂಗ್ರೆಸ್ ಪಕ್ಷ, ಇಂದಿರಾ ಮತ್ತು ರಾಜೀವ್ ಅವರ ಆಡಳಿತವನ್ನು ವ್ಯಂಗ್ಯಮಾಡುತ್ತಿದ್ದ ಇವರು ಕುಟುಂಬ ರಾಜಕಾರಣದ ದೊಡ್ಡ ಟೀಕಾಕಾರರೂ ಆಗಿದ್ದರು. ವಂಶಪಾರಂಪರ್ಯ ರಾಜಕಾರಣವನ್ನು ಗುರಿಯಾಗಿಸಿ ಬಹಿರಂಗ ವೇದಿಕೆಗಳಲ್ಲಿ ವ್ಯಂಗ್ಯಭರಿತ ಮಾತುಗಳಿಂದ ಚುಚ್ಚುತ್ತಿದ್ದ ಇದೇ ಸಿದ್ದರಾಮಯ್ಯ ಈಗ ಹೈಕಮಾಂಡ್ ಮಾದರಿಯ ದೆಹಲಿ ಕೇಂದ್ರೀಕೃತ ನಾಯಕತ್ವದೆದುರು ತಲೆಬಾಗಿಸಿ ಆಡಳಿತ ನಡೆಸುವ ಅನಿವಾರ್ಯತೆಗೊಳಗಾಗಿದ್ದಾರೆ.

ಕುಟುಂಬ ರಾಜಕಾರಣದ ಒಲವು

ಜನತಾಪರಿವಾರದಲ್ಲಿದ್ದಾಗ ಯಾವ ಕುಟುಂಬ ರಾಜಕಾರಣವನ್ನು ಟೀಕಿಸುತ್ತಿದ್ದರೋ ಅದೇ ಸಿದ್ದರಾಮಯ್ಯ ಈಗ ಕಾಂಗ್ರೆಸ್ಸಿಗರಾಗಿ ತನ್ನ ಸ್ವಂತ ಕುಟುಂಬಕ್ಕೂ ಇದೇ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ. ಮಗ ಮತ್ತು ಮೊಮ್ಮಗನನ್ನು ತನ್ನ ರಾಜಕೀಯದ ಉತ್ತರಾಧಿಕಾರಿಗಳೆಂದು ಬಹಿರಂಗವಾಗಿಯೇ ಘೋಷಣೆ ಮಾಡಿಕೊಂಡಿದ್ದಾರೆ.

ಹಿರಿಯ ಮಗ ರಾಕೇಶ್ ಅನಿರೀಕ್ಷಿತವಾಗಿ ಅಸುನೀಗಿದ ನಂತರ, ತನ್ನ ರಾಜಕೀಯ ಸಾಮ್ರಾಜ್ಯದ ಹಿತರಕ್ಷಣೆ ಹಾಗೂ ಮುಂದುವರಿಕೆಯ ದೊಡ್ಡ ಸವಾಲು ಇವರ ಮುಂದಿತ್ತು. ಹೀಗಾಗಿಯೇ ರಾಜಕಾರಣದತ್ತ ಅಷ್ಟೇನೂ ಆಸಕ್ತಿವಹಿಸದ ಕಿರಿಯ ಮಗ ಡಾ. ಯತೀಂದ್ರ ಅವರನ್ನು ಸಿದ್ದರಾಮಯ್ಯ ರಾಜಕಾರಣಕ್ಕೆ ಎಳೆದು ತಂದರು.

ಯತೀಂದ್ರ ನಿಧಾನವಾಗಿ ರಾಜಕೀಯದ ಪಟ್ಟುಗಳನ್ನು ಕಲಿಯುತ್ತಿರುವ ಸಮಯದಲ್ಲೇ ಅಗಲಿದ ಮಗ ರಾಕೇಶ್ ಅವರ ಪಡಿಯಚ್ಚಿನಂತಿರುವ ಮೊಮ್ಮಗ ಧವನ್ ರಾಕೇಶ್‌ನನ್ನು ಸಾರ್ವಜನಿಕ ಜೀವನಕ್ಕಿಳಿಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ ಈಗಿನ ಸಮಯದ ದೊಡ್ಡ ನಾಯಕ ರಾಹುಲ್ ಗಾಂಧೀ ಅವರಿಂದ ಹಿಡಿದು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧೀ, ಮಲ್ಲಿಕಾರ್ಜುನ ಖರ್ಗೆಯಂತಹ ದೊಡ್ಡ ನಾಯಕರನ್ನು ಧವನ್‌ಗೆ ಪರಿಚಯಿಸಿದ್ದಾರೆ. ಮುಖ್ಯಮಂತ್ರಿಯ ನಿತ್ಯದ ಕೆಲಸ ಕಾರ್ಯ, ಜನರ ಅಹವಾಲುಗಳನ್ನು ಆಲಿಸಿ ಪರಿಹರಿಸುವ ವಿಧಾನ, ಅಧಿಕಾರಿಗಳನ್ನು ನಿರ್ವಹಿಸುವ ರೀತಿ ಈ ಎಲ್ಲವನ್ನೂ ಸಿಎಂ ಅಧಿಕೃತ ನಿವಾಸದಲ್ಲಿ ಮೊಮ್ಮಗ ಧವನ್ನನ್ನು ಇರಿಸಿಕೊಂಡು ಪ್ರತ್ಯಕ್ಷವಾಗಿ ಸಿದ್ದರಾಮಯ್ಯ ಪಟ್ಟುಗಳನ್ನು ಕಲಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಮಗ ದವನ್ ರಾಕೇಶ್ ಅವರನ್ನು ಇತ್ತೀಚೆಗೆ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಪರಿಚಯಿಸುವ ಮೂಲಕ, ತಮ್ಮ ರಾಜಕೀಯ ಉತ್ತರಾಧಿಕಾರಿಯ ಮುನ್ಸೂಚನೆ ನೀಡಿದ್ದಾರೆಯೇ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ.

ಗದಗ ತಾಲೂಕು ಕುರುಬರ ಸಂಘದ ವತಿಯಿಂದ ಕನಕ ಭವನದಲ್ಲಿ ಆಯೋಜಿಸಲಾಗಿದ್ದ 'ರಾಜ್ಯ ಮಟ್ಟದ ಕನಕೋತ್ಸವ' ಮತ್ತು ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮೊಮ್ಮಗನೊಂದಿಗೆ ಪಾಲ್ಗೊಂಡು, ಎಲ್ಲರ ಗಮನ ಸೆಳೆದಿದ್ದರು.

ಧವನ್‌ ಸಿದ್ದರಾಮಯ್ಯ ತನ್ನ ಅಜ್ಜ ಸಿದ್ದರಾಮಯ್ಯ ಜೊತೆ ಕುರುಬರ ಸಂಘದ ಕಾರ್ಯಕ್ರಮದಲ್ಲಿ

 

ರಾಕೇಶ್ ನೆನಪು

ಸಿದ್ದರಾಮಯ್ಯ ಅವರ ಹಿರಿಯ ಮಗ ರಾಕೇಶ್ 2016ರಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದರು. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವರುಣದ ಆಗುಹೋಗುಗಳು ಮತ್ತು ಮೈಸೂರು ಜಿಲ್ಲೆಯ ರಾಜಕಾರಣ ಮತ್ತು ಪರೋಕ್ಷವಾಗಿ ಆಡಳಿತದ ಜವಾಬ್ದಾರಿಯನ್ನು ರಾಕೇಶ್ ನಿರ್ವಹಿಸುತ್ತಿದ್ದರು. ರಾಕೇಶ್ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ, ಚಾಮರಾಜನಗರದ ಈಗಿನ ಸಂಸದ ಸುನೀಲ್ ಬೋಸ್ ಆತ್ಮೀಯ ಗೆಳೆಯರು.

ರಾಕೇಶ್‌ ಸಿದ್ದರಾಮಯ್ಯ

2016ರ ಜುಲೈ 30ರಂದು ವಿದೇಶ ಪ್ರವಾಸದಲ್ಲಿದ್ದ ಸಮಯ ಅನಾರೋಗ್ಯಕ್ಕೊಳಗಾಗಿದ್ದ ರಾಕೇಶ್ ಬೆಲ್ಜಿಯಂನ ಆಸ್ಪತ್ರೆಯಲ್ಲಿ ಬಹುಅಂಗಾಂಗ ವೈಫಲ್ಯತೆಯಿಂದಾಗಿ ನಿಧನಹೊಂದಿದ್ದರು. ಸ್ಮಿತಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ರಾಕೇಶ್, ತಂದೆ ಸಿದ್ದರಾಮಯ್ಯ ಅವರಂತೆ ಜನಪ್ರಿಯ ರಾಜಕಾರಣಿಯಾಗುವತ್ತ ಮುನ್ನೆಡೆದಿದ್ದರು. ರಾಕೇಶ್ ಮತ್ತು ಸ್ಮಿತಾ ದಂಪತಿಯ ಪುತ್ರ ಧವನ್ ರಾಕೇಶ್ ಈಗ ರಾಜಕಾರಣ ಪ್ರವೇಶಿಸುವ ಹಾದಿಯಲ್ಲಿದ್ದಾರೆ.

ಧವನ್ ಇನ್ನೂ ಚಿಕ್ಕವರು

ಧವನ್ ಚುನಾವಣಾ ಕಣಕ್ಕಿಳಿಯಲು ಇನ್ನೂ ಐದು ವರ್ಷ ಕಾಲಾವಕಾಶವಿದೆ. ಈ ಅವಧಿಯಲ್ಲಿ ಇವರು ಕಾನೂನು ತಿಳಿವಳಿಕೆ ಪಡೆದು, ರಾಜಕಾರಣದ ಎಲ್ಲಾ ಪಟ್ಟುಗಳನ್ನು ತಾತ ಮತ್ತು ಚಿಕ್ಕಪ್ಪನಿಂದ ಕಲಿಯುವ ಆಸಕ್ತಿ ಹೊಂದಿದ್ದಾರೆ. ಬೆಂಗಳೂರು ಕೆನೆಡಿಯನ್ ಕಾಲೇಜಿನಲ್ಲಿ ಪಿಯು ಮುಗಿಸಿರುವ ಧವನ್ ತಾತ ಸಿದ್ದರಾಮಯ್ಯ ಅವರಂತೆ ಕಾನೂನು ವ್ಯಾಸಂಗದತ್ತ ಒಲವು ತೋರಿದ್ದು ಲಾ ಓದುತ್ತಿದ್ದಾರೆ. ಓದು ಮತ್ತು ರಾಜಕಾರಣದ ಹವ್ಯಾಸವನ್ನು ಸಿಎಂ ಮನೆಯಲ್ಲಿಯೇ ಧವನ್ ಮುಂದುವರೆಸುತ್ತಿದ್ದಾರೆ.

ಯತೀಂದ್ರ ರಾಜಕೀಯ

ಸಿಎಂ ಸಿದ್ದರಾಮಯ್ಯ ಅವರ ಕಿರಿಯ ಪುತ್ರ ಡಾ. ಯತೀಂದ್ರ ಅವರ ಮುಂದಿನ ಭವಿಷ್ಯ ತಂದೆ ಕಟ್ಟಿ ಬೆಳೆಸಿರುವ ರಾಜಕೀಯ ಸಾಮ್ರಾಜ್ಯವನ್ನು ನೋಡಿಕೊಂಡು, ಇದರಲ್ಲಿಯೇ ಮುಂದುವರೆಯುವುದರಲ್ಲಿ ಅಡಗಿದೆ.

ಅವಿವಾಹಿತರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ವೃತ್ತಿಯಲ್ಲಿ ವೈದ್ಯರು. ಪೆಥಾಲಜಿ ವಿಷಯ ತಜ್ಞರಾಗಿರುವ ಇವರು, ಅಣ್ಣ ರಾಕೇಶ್ ಅಗಲಿಕೆ ಬಳಿಕ, ರಾಜಕೀಯದಲ್ಲಿ ತಂದೆಗೆ ನೆರವಾಗಲೆಂದು ವರುಣ ಕ್ಷೇತ್ರದಿಂದ ಕಣಕ್ಕಿಳಿದು ಗೆಲುವು ಸಾಧಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿತಿದೇ ಕ್ಷೇತ್ರವನ್ನು ತಂದೆಗೆ ಬಿಟ್ಟುಕೊಟ್ಟಿದ್ದರು. ಇದರ ಫಲವೆಂಬಂತೆ ಈಗ ಹಿರಿಯರ ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ತಿಗೆ ಕಿರಿಯ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ಯತೀಂದ್ರ ಅವರಿಗೀಗ 45 ವರ್ಷ ವಯಸ್ಸು. ಇವರ ಮುಂದಿನ ರಾಜಕೀಯ ಹಾದಿ ವಿಶಾಲವಾಗಿದೆ.

ಅನುಕೂಲಕಾರಿ ಕ್ಷೇತ್ರಗಳು

ಮೈಸೂರು ಜಿಲ್ಲೆಯ ವರುಣ, ಚಾಮುಂಡೇಶ್ವರಿ, ಉತ್ತರ ಕರ್ನಾಟಕ ಭಾಗದ ಕೊಪ್ಪಳ, ಬಾದಾಮಿ ಮತ್ತು ರಾಜಧಾನಿ ಬೆಂಗಳೂರಿನ ಕೆಆರ್ ಪುರಂ ಸೇರಿ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಿಡಿತವಿದೆ. ಆಯಾ ಸಂದರ್ಭಕ್ಕೆ ಅನುಕೂಲಕಾರಿ ಎನಿಸಿದ ಕ್ಷೇತ್ರದಲ್ಲಿ ಮಗ ಮೊಮ್ಮಗನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಮೂಲಕ ಕುಟುಂಬ ರಾಜಕಾರಣ ಮುಂದುವರೆಸಲು ಸಿದ್ದರಾಮಯ್ಯ ಬಯಸಿದ್ದಾರೆ. ವಿಧಾನಸಭೆ, ವಿಧಾನಪರಿಷತ್ತು ಲೋಕಸಭೆ ಹಾಗೂ ರಾಜ್ಯಸಭೆ ಸೇರಿದಂತೆ ರಾಜಕೀಯ ಮತ ಜಿದ್ದಾಜಿದ್ದಿಯ ಯಾವುದೇ ಹಂತದಲ್ಲಾದರೂ ತನ್ನ ಮಗ ಮತ್ತು ಮೊಮ್ಮಗನನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಶಕ್ತಿ ಸಿದ್ದರಾಮಯ್ಯ ಅವರಿಗಿದೆ ಎಂದು ಆಪ್ತರು ಹೇಳುತ್ತಾರೆ.

ಸಿದ್ದರಾಮಯ್ಯ ಬಗ್ಗೆ ಇನ್ನಷ್ಟು...

ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಇದುವರೆಗೂ ಶಾಸಕರಾಗಿ ಒಂಭತ್ತು ಬಾರಿ ಗೆದ್ದಿದ್ದಾರೆ. ಚಾಮುಂಡೇಶ್ವರಿಯಲ್ಲಿ ಎಂಟು ಬಾರಿ ಸ್ಪರ್ಧಿಸಿ, ಐದು ಬಾರಿ ಗೆದ್ದಿದ್ದರೆ, ಹೊಸ ಕ್ಷೇತ್ರ ವರುಣದಿಂದ 2-2023ರ ಚುನಾವಣೆಯೂ ಸೇರಿ ಮೂರು ಬಾರಿ ಗೆದ್ದಿದ್ದಾರೆ. 2018ರಲ್ಲಿ ವರುಣದಿಂದ ಪುತ್ರನಿಗೆ ಅವಕಾಶ ನೀಡಿ, ತಾವು ಚಾಮುಂಡೇಶ್ವರಿ ಹಾಗು ಬಾದಾಮಿ ಎರಡೂ ಕಡೆ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ 36ಸಾವಿರ ಮತಗಳ ಅಂತರದ ದೊಡ್ಡ ಸೋಲು ಎದುರಾದರೆ, ಬಾದಾಮಿಯಲ್ಲಿ ಗೆಲುವು ಕೈಹಿಡಿಯಿತು. 2023ರ ಚುನಾವಣೆಯಲ್ಲಿ ವರುಣದ ಮೂಲಕ ಒಲಿದ ಒಂಭತ್ತನೇ ಜಯ ಇವರನ್ನು ಮತ್ತೆ ಮುಖ್ಯಮಂತ್ರಿ ಕುರ್ಚಿಯತ್ತ ಕರೆದೊಯ್ದಿದೆ.

ಜಾತ್ಯತೀತತೆ ಮತ್ತು ಸಮಾಜವಾದಿ ವಿಚಾರದಲ್ಲಿ ನಂಬಿಕೆ ಹೊಂದಿರುವ ನನಗೆ ಸಮಾಜದ ಶೋಷಿತ ಸಮುದಾಯಗಳ ಬಗ್ಗೆ ಬಹಳ ಕಾಳಜಿಯಿದೆ ಎಂದು ಸಿದ್ದರಾಮಯ್ಯ ಎಲ್ಲೆಡೆ ಹೇಳಿಕೊಳ್ಳುತ್ತಾರೆ. ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದವರಾಗಿರುವ ಸಿದ್ದರಾಮಯ್ಯ, ಈ ಸಮುದಾಯದ ಪ್ರಮುಖ ಹಾಗೂ ಪ್ರಶ್ನಾತೀತ ರಾಜಕೀಯ ನಾಯಕನೂ ಹೌದು.

Tags:    

Similar News