
ಗದಗದಲ್ಲಿ ಮೊಮ್ಮಗನಿಗೆ ರಾಜಕೀಯದ ಮೊದಲ ಪಾಠ ಕಲಿಸಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ
ವೇದಿಕೆಯ ಮೇಲೆ, ಸನ್ಮಾನ ಸ್ವೀಕರಿಸಲು ಬಂದ ಗಣ್ಯರಿಗೆ ಮತ್ತು ಸ್ಥಳೀಯ ಮುಖಂಡರಿಗೆ ತಮ್ಮ ಮೊಮ್ಮಗನನ್ನು ಪ್ರೀತಿಯಿಂದ ಪರಿಚಯ ಮಾಡಿಕೊಡುತ್ತಿದ್ದರು. ಎಲ್ಲರೊಂದಿಗೆ ಬೆರೆಯುವಂತೆ ಪ್ರೋತ್ಸಾಹಿಸುತ್ತಿದ್ದ ದೃಶ್ಯ ಕಂಡು ಬಂತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಮಗ ದವನ್ ರಾಕೇಶ್ ಅವರನ್ನು ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ಪರಿಚಯಿಸುವ ಮೂಲಕ, ತಮ್ಮ ರಾಜಕೀಯ ಉತ್ತರಾಧಿಕಾರಿಯ ಮುನ್ಸೂಚನೆ ನೀಡಿದ್ದಾರೆಯೇ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ.
ಗದಗ ತಾಲೂಕು ಕುರುಬರ ಸಂಘದ ವತಿಯಿಂದ ಕನಕ ಭವನದಲ್ಲಿ ಆಯೋಜಿಸಲಾಗಿದ್ದ 'ರಾಜ್ಯ ಮಟ್ಟದ ಕನಕೋತ್ಸವ' ಮತ್ತು ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮೊಮ್ಮಗನೊಂದಿಗೆ ಪಾಲ್ಗೊಂಡು, ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದುದ್ದಕ್ಕೂ ಮೊಮ್ಮಗ ದವನ್ ಅವರನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡಿದ್ದ ಸಿದ್ದರಾಮಯ್ಯ, ಅವರಿಗೆ ರಾಜಕೀಯ ವೇದಿಕೆಯ ಮೊದಲ ಅನುಭವವನ್ನು ನೀಡಿದರು. ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ, ದವನ್ ಕೈಯಿಂದಲೇ ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೆ, ಕನಕದಾಸರ ಪ್ರತಿಮೆಗೆ ಹಾರ ಹಾಕುವ ಅವಕಾಶವನ್ನೂ ಮೊಮ್ಮಗನಿಗೆ ನೀಡುವ ಮೂಲಕ, ಸಿದ್ದರಾಮಯ್ಯ ಅವರು ದವನ್‌ಗೆ ಸಾರ್ವಜನಿಕವಾಗಿ ಹೆಚ್ಚಿನ ಮನ್ನಣೆ ನೀಡಲು ಪ್ರಯತ್ನಿಸಿದರು.
ವೇದಿಕೆಯ ಮೇಲೆ, ಸನ್ಮಾನ ಸ್ವೀಕರಿಸಲು ಬಂದ ಗಣ್ಯರಿಗೆ ಮತ್ತು ಸ್ಥಳೀಯ ಮುಖಂಡರಿಗೆ ತಮ್ಮ ಮೊಮ್ಮಗನನ್ನು ಪ್ರೀತಿಯಿಂದ ಪರಿಚಯ ಮಾಡಿಕೊಡುತ್ತಿದ್ದರು. ಮೊಮ್ಮಗನ ಹೆಗಲ ಮೇಲೆ ಕೈ ಹಾಕಿ, ಎಲ್ಲರೊಂದಿಗೆ ಬೆರೆಯುವಂತೆ ಪ್ರೋತ್ಸಾಹಿಸುತ್ತಿದ್ದ ದೃಶ್ಯ, ದವನ್ ಅವರ ರಾಜಕೀಯ ಪ್ರವೇಶಕ್ಕೆ ಸಿದ್ದರಾಮಯ್ಯ ಅವರು ತಾಲೀಮು ನಡೆಸುತ್ತಿದ್ದಾರೆಯೇ ಎಂಬ ಚರ್ಚೆಗೆ ಮತ್ತಷ್ಟು ಇಂಬು ನೀಡಿತು. ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ದವನ್, ಅಜ್ಜನ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನದ ಮೊದಲ ಹೆಜ್ಜೆಗಳನ್ನು ಇಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ರಾಕೇಶ್ ಉತ್ತರಾಧಿಕಾರಿಎಂದು ಹೇಳಲಾಗಿತ್ತು
ಈ ಹಿಂದೆ, ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ವರುಣಾ ಕ್ಷೇತ್ರದ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದರು. ಆದರೆ, ಅವರ ಅಕಾಲಿಕ ನಿಧನದ ನಂತರ, ಆ ಸ್ಥಾನದಲ್ಲಿ ಸಹಜವಾಗಿಯೇ ಶೂನ್ಯ ಆವರಿಸಿತ್ತು. ಇದೀಗ, ರಾಕೇಶ್ ಅವರ ಪುತ್ರ ದವನ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಕರೆತರುವ ಮೂಲಕ, ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪರಂಪರೆಯನ್ನು ಮುಂದುವರೆಸುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರ ಈ ನಡೆ, ಅವರ ಬೆಂಬಲಿಗರಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದ್ದು, ದವನ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಮೊಮ್ಮಗನನ್ನು ರಾಜಕೀಯಕ್ಕೆ ತರುವ ಮೂಲಕ, ಸಿದ್ದರಾಮಯ್ಯ ಅವರು ತಮ್ಮ ಕುಟುಂಬದ ರಾಜಕೀಯ ನೆಲೆಗಟ್ಟನ್ನು ಮತ್ತಷ್ಟು ಭದ್ರಪಡಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.