ಕಬ್ಬಿನ ಬವಣೆ: Part-3| ಉತ್ತಮ ಬೆಳೆ ಬಂದರೂ ಸಿಗದ ಸೂಕ್ತ ಬೆಲೆ; ಸರ್ಕಾರದ ಭರವಸೆಗೆ ರೈತರ ಅಸಮಾಧಾನ

ಈ ವರ್ಷ ಅಂದಾಜು 7ಲಕ್ಷ ಹೆಕೇರ್‌ನಲ್ಲಿ ಬೆಳೆದಿರುವ ಕಬ್ಬು ಕಟಾವಿಗೆ ಬಂದಿದ್ದು, 6 ಕೋಟಿ ಟನ್ ಉತ್ಪಾದನೆಯ ನಿರೀಕ್ಷೆ ಇದೆ. ವಿಪರ್ಯಾಸವೆಂದರೆ ಉತ್ತಮ ಫಸಲು ಬಂದರೂ ಬೆಂಬಲ ಇಲ್ಲದೇ ರೈತರು ಪರಿತಪಿಸುವಂತಾಗಿದೆ.

Update: 2025-11-09 03:30 GMT
Click the Play button to listen to article

ದೇಶದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನ, ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ಕಬ್ಬಿಗೆ ನ್ಯಾಯೋಚಿತ ಹಾಗೂ ಲಾಭದಾಯಕ ಬೆಲೆಗಾಗಿ ರೈತರ ಆಲಾಪ ಕಡಿಮೆಯಾಗಿಲ್ಲ. ನೀರಿನ ಸಮಸ್ಯೆ, ಅಸಮರ್ಪಕ ಬೆಲೆ ಹಾಗೂ ಸಕ್ಕರೆ ಕಾರ್ಖಾನೆ ಲಾಬಿಯಲ್ಲಿ ಸಿಲುಕಿರುವ ರೈತರ ಪರಿಸ್ಥಿತಿ ಅತಂತ್ರವಾಗಿದೆ. 

ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ರಿಕವರಿ ಆಧರಿಸಿ ದರ ನಿಗದಿ ಮಾಡಿದೆ. ಆದರೆ, ಬಹುತೇಕ ರೈತರಿಗೆ ಸರ್ಕಾರದ ನಿರ್ಧಾರ ಸಮಾಧಾನ ತಂದಿಲ್ಲ. ಈಗಲೂ ಹಲವು ರೈತರು ಟನ್‌ಗೆ 3500 ರೂ. ನಿಗದಿ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಪ್ರಸ್ತುತ ಎದುರಾಗಿರುವ ಪರಿಸ್ಥಿತಿ ಕಬ್ಬು ಬೆಳೆಗಾರರನ್ನು ಅಡಕತ್ತರಿಗೆ ಸಿಲುಕಿಸಿದೆ. ಏಕೆಂದರೆ ಈಗಾಗಲೇ ಹೊಲಗಳಲ್ಲಿ ಕಬ್ಬು ಕಟಾವಿಗೆ ಬಂದು ನಿಂತಿದೆ. ಪ್ರತಿಭಟನೆ, ಹೋರಾಟ ಮುಂದುವರಿಸಿದರೆ ಬೆಳೆ ನಾಶವಾಗುವ ಭೀತಿ ಎದುರಾಗಲಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ರೈತರ ಜೊತೆ ಚೆಲ್ಲಾಟವಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಪ್ರಸಕ್ತ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆ ಬೆಳೆ ವಿಸ್ತೀರ್ಣ ಹೆಚ್ಚಾಗಿದೆ. 2023-24 ರಲ್ಲಿ ಅಂದಾಜು 6 ಲಕ್ಷ ಹೆಕ್ಟೇರ್‌ನಲ್ಲಿ 5.40 ಕೋಟಿ ಟನ್ ಕಬ್ಬು ಬೆಳೆಯಲಾಗಿತ್ತು. ಈ ವರ್ಷ ಅಂದಾಜು 7ಲಕ್ಷ ಹೆಕೇರ್‌ನಲ್ಲಿ ಬೆಳೆದಿರುವ ಕಬ್ಬು ಕಟಾವಿಗೆ ಬಂದಿದ್ದು, 6 ಕೋಟಿ ಟನ್ ಉತ್ಪಾದನೆಯ ನಿರೀಕ್ಷೆ ಇದೆ. ವಿಪರ್ಯಾಸವೆಂದರೆ ಉತ್ತಮ ಫಸಲು ಬಂದರೂ ಬೆಂಬಲ ಇಲ್ಲ. 

ರೈತ ಸಂಘದ ಅಥಣಿ ತಾಲೂಕು ಅಧ್ಯಕ್ಷ ಮಾದೇವ ಮಡಿವಾಳ ಅವರು 'ದ ಫೆಡರಲ್‌ ಕರ್ನಾಟಕ'ದ ಜೊತೆ ಮಾತನಾಡಿ, "ಈ ವರ್ಷ ಉತ್ತಮ ಮಳೆಯಾದ ಕಾರಣ ಕಬ್ಬು ಬೆಳೆ ಪ್ರಮಾಣವೂ ಹೆಚ್ಚಿದೆ. ಆದರೆ, ಎಫ್‌ಆರ್‌ಪಿ ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರ ಸಮಂಜಸವಲ್ಲ. ರಿಕವರಿ ಆಧಾರದ ಮೇಲೆ ದರ ನಿಗದಿ ಮಾಡಿರುವುದನ್ನು ರೈತರು ಒಪ್ಪುವುದಿಲ್ಲ. ಈ ವರ್ಷ ಬೆಳೆ ಹೆಚ್ಚಾಗಿರುವ ಕಾರಣ ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ದರ ನೀಡಲು ಹಿಂದೇಟು ಹಾಕುತ್ತಿವೆ. ಬೆಳೆ ಕಡಿಮೆ ಇರುವ ಸಂದರ್ಭಗಳಲ್ಲಿ ಇದೇ ಕಾರ್ಖಾನೆಗಳು ಹೆಚ್ಚು ಬೆಲೆ ನೀಡುವುದಾಗಿ ಆಮಿಷವೊಡ್ಡುತ್ತವೆ. ಬೆಲೆ ನಿಯಂತ್ರಣ ಮಾಡಬೇಕಾದ ರಾಜ್ಯ ಸರ್ಕಾರವು ರೈತರ ಹಿತ ಪರಿಗಣಿಸುತ್ತಿಲ್ಲ, ಬದಲಾಗಿ ಕಾರ್ಖಾನೆಗಳ ಪರ ಲಾಬಿ ಮಾಡುತ್ತಿದೆ" ಎಂದು ಆರೋಪಿಸಿದರು.

"ಸ್ವಾಮಿನಾಥನ್‌ ವರದಿ ಜಾರಿ ಮಾಡಿದರೆ ಪ್ರತಿ ವರ್ಷ ರೈತರು ಬೀದಿಗೆ ಇಳಿಯುವ ಪ್ರಮೇಯ ಇರುವುದಿಲ್ಲ. ಸರ್ಕಾರಗಳು ರೈತರನ್ನು ಶೋಷಿಸಲೆಂದೇ ಸ್ವಾಮಿನಾಥನ್‌ ವರದಿ ಜಾರಿಗೆ ಚಕಾರ ಎತ್ತುವುದಿಲ್ಲ. ಕಬ್ಬು ಕೈ ಬಿಟ್ಟು ಪರ್ಯಾಯ ಬೆಳೆಗಳತ್ತ ಹೋಗೋಣ ಎಂದರೆ ಅಲ್ಲಿ ಮಾರುಕಟ್ಟೆ ದರಗಳು ಸ್ಥಿರವಾಗಿಲ್ಲ. ಹಾಗಾಗಿ ಕಬ್ಬು ಬೆಳೆಯುವುದೇ ರೈತರಿಗೆ ಅನಿವಾರ್ಯವಾಗಿದೆ" ಎಂದು ಅಳಲು ತೋಡಿಕೊಂಡರು. 

ಸರ್ಕಾರವು ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿ ಪ್ರತಿ ಟನ್‌ಗೆ 3300 ರೂ. ನಿಗದಿ ಮಾಡಿದೆ. ಆದರೆ, ರಿಕವರಿ ಆಧರಿಸಿ ದರ ನೀಡುವ ನಿರ್ಧಾರ, ರೈತರ ವಿರೋಧಕ್ಕೆ ಕಾರಣವಾಗಿದೆ. 11.25 ರಿಕವರಿ ಇದ್ದರೆ ಸಕ್ಕರೆ ಕಾರ್ಖಾನೆಗಳು 50 ರೂ. ಪಾವತಿಸಬೇಕು ಎಂಬ ಸೂತ್ರ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರದ ನಿರ್ಧಾರ ಒಪ್ಪದ ಅಥಣಿ, ಬೈಲಹೊಂಗಲ ರೈತರು ಹೋರಾಟ ಮುಂದುವರಿಸುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಅನಿವಾರ್ಯ ಪರಿಸ್ಥಿತಿ ಹಾಗೂ ಕೆಲವರ ವಿರೋಧವಿಲ್ಲಿ ಫಲಿಸಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. 

ಕಬ್ಬು ಬೆಳೆಯಲ್ಲಿ ರಾಜ್ಯದ ಪಾಲು ಎಷ್ಟು?

2024 ರಲ್ಲಿ ಉತ್ತರ ಪ್ರದೇಶ 177.43 ಮಿಲಿಯನ್‌ ಟನ್‌ ಕಬ್ಬು ಉತ್ಪಾದಿಸುವ ಮೂಲಕ ‌ಮೊದಲ ಸ್ಥಾನದಲ್ಲಿದೆ.  ಮಹಾರಾಷ್ಟ್ರ 113.17 ಮಿಲಿಯನ್‌ ಟನ್‌, ಕರ್ನಾಟಕ 56.47ಮಿಲಿಯನ್‌ ಟನ್‌, ಗುಜರಾತ್ 17.44 ಮಿಲಿಯನ್‌ ಟನ್‌, ತಮಿಳುನಾಡು 14.53 ಮಿಲಿಯನ್‌ ಟನ್ ಕಬ್ಬು ಉತ್ಪಾದಿಸಿವೆ.

ರಾಷ್ಟ್ರೀಯ ಒಟ್ಟು ಕಬ್ಬು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ 14 ಕ್ಕಿಂತ ಹೆಚ್ಚಿದೆ. 2021–22ರಲ್ಲಿ ಸರಾಸರಿ ಇಳುವರಿ ಪ್ರಮಾಣ ಹೆಕ್ಟೇರ್‌ಗೆ 96 ಟನ್ ಇತ್ತು.ಈಗ 85 ಟನ್‌ಗೆ ಕುಸಿದಿದೆ. 

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಮಂಡ್ಯ ಜಿಲ್ಲೆಗಳಲ್ಲಿ ನದಿ ನೀರಿನ ಸೌಲಭ್ಯ ಇರುವುದರಿಂದ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಬೆಳಗಾವಿ ಒಂದರಲ್ಲೇ ಸುಮಾರು 2.90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿರುವ 29 ಕಾರ್ಖಾನೆಗಳು ಸುಮಾರು 1 ಕೋಟಿ 7 ಲಕ್ಷ ಟನ್ ಕಬ್ಬು ನುರಿಸಿವೆ. ಇದರಿಂದ 8,77,357 ಟನ್ ಸಕ್ಕರೆ ಉತ್ಪಾದನೆ ಮಾಡಿವೆ.

ದಕ್ಷಿಣ ಕರ್ನಾಟಕದಲ್ಲಿ ಹೇಗಿದೆ ಕಬ್ಬು ಬೆಳೆ?

ದಕ್ಷಿಣ ಕರ್ನಾಟಕ ಭಾಗದ ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ಉಡುಪಿ ಜಿಲ್ಲೆಯಲ್ಲಿ ಕಬ್ಬು ಬೆಳೆಯಲಾಗುತ್ತದೆ.

ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ 2024-25 ರ ಋತುವಿನಲ್ಲಿ 40,361ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. 2012–13 ರಿಂದ 2023–24 ರ ಅವಧಿಯಲ್ಲಿ ಮಂಡ್ಯದಲ್ಲಿ ಮಣ್ಣಿನ ಫಲವತ್ತತೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಬ್ಬಿನ ಉತ್ಪಾದನೆಯೂ ಕಡಿಮೆಯಾಗಿದೆ.

ಕೃಷಿ ಭೂಮಿಯ ವಿಘಟನೆಯಿಂದ ಸಣ್ಣ ಸಣ್ಣ ಹಿಡುವಳಿದಾರರು ಪರ್ಯಾಯ ಬೆಳೆಗಳತ್ತ ವಾಲುತ್ತಿದ್ದಾರೆ. ಮಂಡ್ಯದಲ್ಲಿ ಕಾಲುವೆ ನೀರಾವರಿ ವೈಫಲ್ಯದಿಂದಾಗಿ ಸಾಕಷ್ಟು ಕಬ್ಬು ಬೆಳೆ ನಾಶವಾಗಿದೆ.  ಅಲ್ಲದೇ ಪೋಷಕಾಂಶಗಳ ಅಸಮತೋಲನದಿಂದಲೂ ಕಬ್ಬು ಉತ್ಪಾದನೆ ಕ್ಷೀಣಿಸುತ್ತಿದೆ.

ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆ ಹೇಗಿದೆ?

ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರ್ಗಿ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಕಬ್ಬು ಬೆಳೆಗೆ ಅನುಕೂಲಕರ ವಾತಾವರಣವಿದೆ. ಕೃಷಿಗೆ ಫಲವತ್ತಾದ ಮಣ್ಣಿನೊಂದಿಗೆ ಕಬ್ಬಿಗೆ ಅಗತ್ಯವಾದ ನೀರಾವರಿ ಸೌಲಭ್ಯ ವಿಫುಲವಾಗಿದೆ .

ಉತ್ತರ ಕರ್ನಾಟಕವು ಶೇ 65 ರಷ್ಟು ಕಬ್ಬು ಬೆಳೆ ಪ್ರದೇಶ ಒಳಗೊಂಡಿದೆ. ಒಟ್ಟಾರೆ ಬೆಳೆ ಪ್ರದೇಶವು 3.7 ಲಕ್ಷ ಹೆಕ್ಟೇರ್‌ನಿಂದ 6.9 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಇಳುವರಿ ಪ್ರಮಾಣ ಹೆಕ್ಟೇರ್‌ಗೆ 94 ಟನ್‌ನಿಂದ  80 ಟನ್‌ಗೆ ಇಳಿದಿದೆ. ಕೆಲವು ಕಡೆ ಬಿಳಿ ಗ್ರಬ್, ಕೆಂಪು ಕೊಳೆತ ಬಾಧೆಯಿಂದಲೂ ಇಳುವರಿ ಕ್ಷೀಣಿಸುತ್ತಿದೆ. ಆದರೆ, ಈ ವರ್ಷ ಉತ್ತಮ ಮಳೆಯಿಂದ ಹೆಚ್ಚು ಬೆಳೆ ಬೆಳೆಯಲಾಗಿದೆ.

"ದಕ್ಷಿಣ ಕರ್ನಾಟಕದಲ್ಲಿ ನಾನಾ ಕಾರಣಗಳಿಂದ ಕಬ್ಬು ಬೆಳೆ ಕಡಿಮೆಯಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹದ ಆಧಾರದ ಮೇಲೆ ಕಬ್ಬು ಬೆಳೆ ನಿರ್ಧರಿಸಲಾಗುತ್ತದೆ. ಒಮ್ಮೊಮ್ಮೆ ಎರಡನೇ ಬೆಳೆಗೆ ಹರಿಸದೇ ಹೋದರೆ ಬೆಳೆ ಪ್ರದೇಶ ಕಡಿಮೆಯಾಗಲಿದೆ. ಉತ್ತರ ಕರ್ನಾಟಕದಲ್ಲಿ ಜಲಾಶಯಗಳು ಹಾಗೂ ಕಾಲುವೆ ನೀರಾವರಿ ಉತ್ತಮವಾಗಿರುವುದರಿಂದ ನೀರಿನ ಸಮಸ್ಯೆ ಅಷ್ಟಾಗಿ ಬಾಧಿಸುತ್ತಿಲ್ಲ. ಆದರೆ, ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳೇ ಕಂಟಕವಾಗಿವೆ. ರೈತರು ಪೂರೈಸುವ ಕಬ್ಬಿನ ಇಳುವರಿ ಸರಿಯಾಗಿ ತೋರಿಸುವುದಿಲ್ಲ. ಎಫ್ಆರ್‌ಪಿಯಂತೆ ಬೆಲೆಯನ್ನೂ ನೀಡುವುದಿಲ್ಲ" ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

Tags:    

Similar News