Breast Cancer| ಸ್ವಾಸ್ಥ್ಯ ಸೇತು, ಗೃಹ ಆರೋಗ್ಯ ಯೋಜನೆ ವರದಾನ; ಪರೀಕ್ಷೆಗಳಿಂದ ಮಾರಕ ಕಾಯಿಲೆಗೆ ಕಡಿವಾಣ
ಇತ್ತೀಚಿನ ದಿನದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರವು ಹಮ್ಮಿಕೊಳ್ಳುತ್ತಿದೆ.
ಮಹಿಳೆಯರನ್ನು ಹೆಚ್ಚು ಬಾಧಿಸುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ.
ಶೇ.80 ರಷ್ಟು ಕ್ಯಾನ್ಸರ್ ಪ್ರಕರಣಗಳು ಅಪಾಯಕಾರಿಯಾದರೂ ಆರಂಭದಲ್ಲೇ ಕಾಯಿಲೆ ಪತ್ತೆ ಹಚ್ಚಿ ಪರಿಣಾಮಕಾರಿ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ಗುಣಪಡಿಸಬಹುದಾಗಿದೆ. ಇತ್ತೀಚಿನ ದಿನದಲ್ಲಿ ಬೆಂಗಳೂರು ಸ್ತನ ಕ್ಯಾನ್ಸರ್ ಪ್ರಕರಣಗಳ ರಾಜಧಾನಿಯಂತಾಗಿದ್ದು, ಜಾಗೃತಿ ಹಾಗೂ ತ್ವರಿತ ಚಿಕಿತ್ಸೆ ಮೂಲಕ ಪ್ರಕರಣಗಳನ್ನು ತಹಬದಿಗೆ ತರಲು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ಕೇಂದ್ರ ಸರ್ಕಾರದ ಸ್ವಾಸ್ಥ್ಯ ಸೇತು, ರಾಜ್ಯ ಸರ್ಕಾರದ ಗೃಹ ಆರೋಗ್ಯ, ಎನ್ ಸಿಡಿ (ಸಾಂಕ್ರಾಮಿಕವಲ್ಲದ ರೋಗಗಳು) ಕಾರ್ಯಕ್ರಮದ ಮೂಲಕ ಸಮರೋಪಾದಿಯಲ್ಲಿ ಕ್ಯಾನ್ಸರ್ ಪತ್ತೆ, ತಪಾಸಣೆ ನಡೆಯುತ್ತಿದೆ. ತಪಾಸಣೆ ಹೆಚ್ಚಿದ ಪರಿಣಾಮ ಪ್ರಕರಣಗಳು ಕೂಡ ಏರಿಕೆಯಾಗುತ್ತಿವೆ.
ಸ್ವಾಸ್ಥ್ಯ ಸೇತು ಯೋಜನೆ ಏನು?
ಕೇಂದ್ರ ಸರ್ಕಾರದ 'ಸ್ವಾಸ್ಥ್ಯ ಸೇತು ಯೋಜನೆ'ಯು ನಾವೀನ್ಯತೆಯ ಆರೋಗ್ಯ ಯೋಜನೆಯಾಗಿದೆ. ತಂತ್ರಜ್ಞಾನವನ್ನು ಆರೋಗ್ಯ ಸೇವೆಗಳೊಂದಿಗೆ ಸಂಯೋಜಿಸಿ ಚಿಕಿತ್ಸೆ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಸ್ವಾಸ್ಥ್ಯ ಸೇತು ಎಂಬುದು ಸ್ತನ ಕ್ಯಾನ್ಸರ್ ಜಾಗೃತಿ ಮತ್ತು ಆರಂಭಿಕ ಪತ್ತೆಗಾಗಿ ಹ್ಯೂಮನ್ ಪೀಪಲ್ ಟು ಪೀಪಲ್ ಇಂಡಿಯಾ ಮತ್ತು ಸ್ಥಳೀಯ ಆರೋಗ್ಯ ಕೇಂದ್ರಗಳ ಸಹಯೋಗದಲ್ಲಿ ಜಾರಿಗೆ ತಂರಲಾಗಿದೆ. ಸ್ತನದಲ್ಲಿರುವ ಅಸಹಜ ಜೀವಕೋಶಗಳ ಬೆಳವಣಿಗೆಯಿಂದ ಉಂಟಾಗುವ ಕ್ಯಾನ್ಸರ್ ಅನ್ನು ಆರಂಭಿಕವಾಗಿ ಪತ್ತೆ ಹಚ್ಚಿ ಸಮುದಾಯವನ್ನು ರಕ್ಷಿಸಲು ಕೇಂದ್ರ ಸರ್ಕಾರ ಪಣ ತೊಟ್ಟಿದೆ.
ಆರೋಗ್ಯ ಹಕ್ಕನ್ನು ಪ್ರತಿಯೊಬ್ಬರಿಗೂ ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಒಂದು ಬಲಿಷ್ಠ ಸೇತುಬಂಧವಾಗಲಿದೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಈ ಯೋಜನೆಯಡಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು, ಕ್ಲಿನಿಕಲ್ ಸ್ತನ ಪರೀಕ್ಷೆಗಾಗಿ ಸೂಕ್ತ ವೇದಿಕೆ ಕಲ್ಪಿಸಲಾಗುವುದು. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಅಧಿಕಾರಿಗಳ ಮೂಲಕ ಅರಿವು ಮೂಡಿಸಲಾಗುತ್ತದೆ. ವೈದ್ಯಕೀಯ ದಾಖಲೆಗಳ ಭದ್ರತೆ ಮತ್ತು ಸುಲಭ ನಿರ್ವಹಣೆ ಮಾಡಲು ಯೋಜನೆಯು ಪ್ರಯೋಜನಕಾರಿಯಾಗಿದೆ.
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ತಂತ್ರಜ್ಞಾನ ಆಧಾರಿತ ಅಂಕಿ ಅಂಶಗಳು ಸರ್ಕಾರಕ್ಕೆ ಲಭ್ಯವಾಗಲಿವೆ. ಇದರಿಂದ ಸ್ತನಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಹಕಾರಿಯಾಗಲಿದೆ.
ಕರ್ನಾಟಕ ಗೃಹ ಆರೋಗ್ಯ ಯೋಜನೆ
ರಾಜ್ಯ ಸರ್ಕಾರ ಕೂಡ ಸಾಂಕ್ರಾಮಿಕವಲ್ಲದ ರೋಗಗಳ ತಪಾಸಣೆಗಾಗಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದೆ.
2024ರ ಅ.24 ರಂದು ಯೋಜನೆಗೆ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಪ್ರಾಯೋಗಿಕವಾಗಿ ಯಶಸ್ವಿಗೊಳಿಸಿದ ಬಳಿಕ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಜನರಿಗೆ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಈ ಯೋಜನೆಯು ರಾಜ್ಯದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲಿದೆ. ಕೇವಲ ರೋಗ ತಪಾಸಣೆಯಷ್ಟೇ ಅಲ್ಲದೇ ರೋಗ ಪೀಡಿತರಿಗೆ ಉಚಿತ ಔಷಧಗಳನ್ನು ಒದಗಿಸಲಿದೆ.
ಗೃಹ ಆರೋಗ್ಯ ಯೋಜನೆಯ ಮುಖ್ಯ ಉದ್ದೇಶವೆಂದರೆ ರೋಗಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದಾಗಿದೆ. ಇದು ಅಕಾಲಿಕ ಸಾವು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಗುರಿ ಹೊಂದಿದೆ.
ಯಾವೆಲ್ಲಾ ಕಾಯಿಲೆಗಳ ಪರೀಕ್ಷೆ?
ಮಧುಮೇಹ, ಅಧಿಕ ರಕ್ತದೊತ್ತಡ, ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ಡಯಾಬೆಟಿಕ್ ಫೂಟ್ ಮತ್ತು ರೆಟಿನೋಪತಿ, ಮಾನಸಿಕ ಆರೋಗ್ಯ ಅಸ್ವಸ್ಥತೆಗಳು, ನರವೈಜ್ಞಾನಿಕ ಅಸ್ವಸ್ಥತೆಗಳು, ನಿದ್ರೆಯಲ್ಲಿ ಉಸಿರುಗಟ್ಟುವಿಕೆ, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಆಲ್ಕೋಹಾಲ್ ರಹಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಮತ್ತು ರಕ್ತಹೀನತೆಯ (19-29 ವರ್ಷ ವಯಸ್ಸಿನವರಿಗೆ) ಆರೋಗ್ಯ ತಪಾಸಣೆಯನ್ನು ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ (AAM) ಉಚಿತವಾಗಿ ನಡೆಸಿ, NCD ಪೊರ್ಟಲ್ ನಲ್ಲಿ ಡೇಟಾ ನಮೂದಿಸಲಾಗುವುದು. ಕೆಲ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧ ವಿತರಿಸಲಾಗುವುದು. ಆರೋಗ್ಯ ತಪಾಸಣೆ, ನಿರ್ವಹಣೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಲಾಗುವುದು.
ಇದಕ್ಕಾಗಿ ಔಷಧಗಳ ಕಿಟ್‌ಗಳನ್ನು ದಾಸ್ತಾನು ಮಾಡಲಾಗಿದೆ. ಸಮುದಾಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಸುರಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳಿಗೆ ಅಗತ್ಯ ತರಬೇತಿ ಒದಗಿಸಲಾಗಿದೆ. ಯೋಜನೆಯಡಿ ಪ್ರತಿ ಮನೆಗೂ ತೆರಳಿ, 30 ವರ್ಷ ಮೇಲ್ಪಟ್ಟ ಎಲ್ಲರನ್ನೂ ತಪಾಸಣೆ ಮಾಡಲಾಗುತ್ತದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಈ ತಪಾಸಣೆ ನಡೆಯಲಿದ್ದು, ದಿನಕ್ಕೆ ತಲಾ 15 ಮನೆಗಳಿಗೆ ತಂಡಗಳು ಭೇಟಿ ನೀಡಿ ತಪಾಸಣೆ ಕಾರ್ಯ ನಡೆಸಲಿವೆ. ಯೋಜನೆಯಡಿ ಗುರುತಿಸಲಾದ ರೋಗಿಗಳಿಗೆ ಮನೆ ಬಾಗಿಲಲ್ಲೇ ಉಚಿತವಾಗಿ ಔಷಧ ಪೂರೈಸಲಾಗುತ್ತದೆ.
ಅರಿವಿನ ಕೊರತೆಯೇ ದೊಡ್ಡ ಸಮಸ್ಯೆ
ಸ್ತನ ಕ್ಯಾನ್ಸರ್‌ಗೆ ಸಂಬಂಧಪಟ್ಟಂತೆ ಸ್ವಾಸ್ಥ್ಯ ಸೇತು ಯೋಜನೆ ಮತ್ತುಗೃಹ ಆರೋಗ್ಯ ಯೋಜನೆ ಕುರಿತು ದ ಫೆಡರಲ್ ಕರ್ನಾಟಕ ಕುರಿತು ಮಾತನಾಡಿದ ಕೊಪ್ಪಳ ಜಿಲ್ಲೆಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಕೌಶಲ್ಯ, ಸ್ತನ ಕ್ಯಾನ್ಸರ್ ಬಗ್ಗೆ ಅರಿವು ತುಂಬಾ ಕಡಿಮೆ ಇದೆ. ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ. ಜನರ ಬಳಿ 16 ರೋಗಗಳ ಬಗ್ಗೆ ಮಾಹಿತಿ ಕೇಳಲಿದ್ದು, ಈ ಪೈಕಿ ಕ್ಯಾನ್ಸರ್ ಕಾಯಿಲೆಯೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ. ಈ ಹಿಂಜರಿಕೆ ಹೋದರೆ ಸಮಸ್ಯೆಗೆ ಆರಂಭಿಕ ಹಂತದಲ್ಲಿಯೇ ಔಷಧ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮಂಗಳೂರು ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ್ ಮಾತನಾಡಿ, ಸ್ತನ ಕ್ಯಾನ್ಸರ್ ಕುರಿತು ನಾವೇ ಕೇಳಿ ತಿಳಿದುಕೊಳ್ಳುತ್ತೇವೆ. ಕೆಲವೊಮ್ಮೆ ಮಹಿಳೆಯರು ಹೇಳುತ್ತಾರೆ. ಮಹಿಳೆಯರ ಬಳಿ ಮಾಹಿತಿ ಪಡೆದುಕೊಂಡ ಬಳಿಕ ಆ ವಿಷಯದ ಬಗ್ಗೆ ಸಂಬಂಧಪಟ್ಟ ವೈದ್ಯಕೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ. ಅವರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಮಹಿಳೆಯರ ಗುಂಪು ಸಭೆ ನಡೆಸುತ್ತೇವೆ. ಈ ವೇಳೆ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಮಹಿಳೆಯರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಡಾ. ತ್ರಿವೇಣಿ, ನಗರೀಕರಣ ಪ್ರಭಾವದಿಂದಾಗಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಮಕ್ಕಳಿಗೆ ಎರಡು ವರ್ಷದವರೆಗೆ ಹಾಲುಣಿಸಬೇಕು. ಆದರೆ, ಇತ್ತೀಚಿನ ದಿನದಲ್ಲಿ ಇದು ಕಡಿಮೆಯಾಗುತ್ತಿದೆ. ಪೌಷ್ಠಿಕಾಂಶದ ಆಹಾರ ಇಲ್ಲದಿರುವುದು ಕೂಡ ಸ್ತನ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಆರಂಭಿಕ ಹಂತದಲ್ಲಿ ಇದರ ಪರಿಣಾಮ ಗೊತ್ತಾಗುವುದಿಲ್ಲ. 3 ಮತ್ತು 4ನೇ ಹಂತದಲ್ಲಿಯೇ ಗೊತ್ತಾಗಲಿದ್ದು, ಅಷ್ಟೊತ್ತಿಗೆ ತಡವಾಗಿರುತ್ತದೆ. ಹೀಗಾಗಿ 30 ವರ್ಷದ ಬಳಿಕ ಮಹಿಳೆಯರ ಆಗಾಗ್ಗೆ ಪರೀಕ್ಷೆ ಮಾಡಿಸಿಕೊಂಡರೆ ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ ಎಂದರು.