Breast Cancer | 16 ಜಿಲ್ಲೆಗಳಲ್ಲಿ ಡೇ ಕೇರ್‌ ಕಿಮೊಥೆರಪಿ ಘಟಕ ಆರಂಭ; ಜಿಲ್ಲೆಗೊಂದು ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪನೆ ಗುರಿ - ಡಾ.ಶರಣ ಪ್ರಕಾಶ್‌ ಪಾಟೀಲ

ಪರಿಣಾಮಕಾರಿ ತಪಾಸಣೆಯಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸೂಕ್ತ ಚಿಕಿತ್ಸೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಸ್ತನ ಕ್ಯಾನ್ಸರ್‌ ನಿಯಂತ್ರಣಕ್ಕೆ ಸರ್ಕಾರ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ.

Update: 2025-10-23 03:30 GMT

ರಾಜ್ಯದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳವಾಗುತ್ತಿರುವಂತೆ ರಾಜ್ಯ ಸರ್ಕಾರವು ಜಾಗೃತಿ ಅಭಿಯಾನವನ್ನು ವ್ಯಾಪಕಗೊಳಿಸುತ್ತಿದೆ. ಸ್ತನ ಕ್ಯಾನ್ಸರ್‌ ತಪಾಸಣೆ, ಚಿಕಿತ್ಸೆ ಜತೆಗೆ ಸ್ತನ ಸ್ವಯಂ ಪರೀಕ್ಷೆ(ಬಿಎಸ್‌ಇ) ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುತ್ತಿದೆ. 

ʼದ ಫೆಡರಲ್‌ ಕರ್ನಾಟಕʼ ಕೈಗೊಂಡ ಸ್ತನ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು, ರಾಜ್ಯ ಸರ್ಕಾರ ಕೈಗೊಂಡಿರುವ ಹಲವು ಉಪಕ್ರಮಗಳ ಕುರಿತು ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ  ಸ್ತನ ಕ್ಯಾನ್ಸರ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದು ಕಳವಳಕಾರಿ. ಪರಿಣಾಮಕಾರಿ ತಪಾಸಣೆಯಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸೂಕ್ತ ಚಿಕಿತ್ಸೆ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಸ್ತನ ಕ್ಯಾನ್ಸರ್‌ ನಿಯಂತ್ರಣಕ್ಕೆ ಸರ್ಕಾರ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ತನ, ಗರ್ಭಕೋಶ ಸೇರಿ ಹಲವು ಕ್ಯಾನ್ಸರ್‌ ಕಾಯಿಲೆಗಳಿಗೆ ಆಧುನಿಕ ಚಿಕಿತ್ಸಾ ವಿಧಾನಗಳು ಲಭ್ಯವಿವೆ. ಪ್ರೋಟಾನ್ ಚಿಕಿತ್ಸೆ ಅತ್ಯಾಧುನಿಕವಾದರೂ ದುಬಾರಿ ವೆಚ್ಚದಂದ ಕೂಡಿದೆ. ಹಾಗಾಗಿ ಈ ಚಿಕಿತ್ಸೆಗೆ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಮೂಲಸೌಕರ್ಯ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಒತ್ತಡ ಎದುರಾಗಿದೆ. ಅದಕ್ಕಾಗಿ ಪ್ರತಿ ಜಿಲ್ಲೆಗೊಂದು ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡುವ ಯೋಜನೆ ಸರ್ಕಾರದ ಮುಂದೆ ಇದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕಿಮೊಥೆರಪಿ ಘಟಕಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು. 

ಜಾಗೃತಿ ಅಭಿಯಾನ, ಉಚಿತ ತಪಾಸಣೆ

30 ವರ್ಷ ಮೇಲ್ಪಟ್ಟ ಮಹಿಳೆಯರು ನಿರ್ದಿಷ್ಟ ಅವಧಿಯಲ್ಲಿ (ಆರು ತಿಂಗಳು ಇಲ್ಲವೇ ಕನಿಷ್ಠ ಒಂದು ವರ್ಷ) ಸ್ತನ ಮತ್ತು ಗರ್ಭಾಶಯ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಅಭಿಯಾನವನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಸೌಲಭ್ಯ ಲಭ್ಯವಿದ್ದು, ಮಹಿಳೆಯರ ಆರೋಗ್ಯ ಕೇಂದ್ರೀಕರಿಸಿ ನಡೆಸಲಾಗುತ್ತಿದೆ ಎಂದು ಡಾ.ಶರಣ ಪ್ರಕಾಶ್‌ ಪಾಟೀಲ ಹೇಳಿದರು. 

ಬಜೆಟ್‌ನಲ್ಲಿ ಕ್ಯಾನ್ಸರ್ ಪತ್ತೆಗೆ ಅನುದಾನ 

2024–25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸ್ತನ ಕ್ಯಾನ್ಸರ್ ಪತ್ತೆಗೆ 21 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.  ಈ ಮೊತ್ತದಿಂದ 20 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಜಿಟಲ್ ಮ್ಯಾಮೋಗ್ರಫಿ ಯಂತ್ರಗಳು ಅಳವಡಿಸಲಾಗುವುದು. 16 ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಆರೋಗ್ಯ ಇಲಾಖೆ ಆರಂಭಿಸಿದೆ. 

ನೈಸರ್ಗಿಕ ಪೋಷಕಾಂಶಗಳಿಂದ ಕ್ಯಾನ್ಸರ್‌ಗೆ ಕಡಿವಾಣ

ಸ್ತನ ಕ್ಯಾನ್ಸರ್‌ ತಡೆಯುವಲ್ಲಿ ನೈಸರ್ಗಿಕ ಪೋಷಕಾಂಶ ಮತ್ತು ಉತ್ಕರ್ಷಣಾ ನಿರೋಧಕಗಳು ಕೂಡ ಪ್ರಮುಖ ಪಾತ್ರ ವಹಿಸಲಿವೆ ಎಂದು ಆಹಾರ ಹಾಗೂ ಆರೋಗ್ಯ ತಜ್ಞರು ಹೇಳುತ್ತಾರೆ. ಹಾರ್ಮೋನ್‌ಗಳ ಸಮತೋಲನ, ಉರಿಯೂತ ನಿಯಂತ್ರಣ ಮತ್ತು ರೋಗನಿರೋಧಕ ಶಕ್ತಿಯ ವೃದ್ಧಿಯಿಂದ ಸ್ತನ ಕ್ಯಾನ್ಸರ್‌ ಸೇರಿದಂತೆ ಎಲ್ಲ ರೀತಿಯ ಕ್ಯಾನ್ಸರ್‌ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ.

ದಾಳಿಂಬೆಯಲ್ಲಿ ಎಲಾಜಿಟಾನಿನ್‌ಗಳಂತಹ ಉತ್ಕರ್ಷಣಾ ನಿರೋಧಕಗಳು ಸಮೃದ್ಧವಾಗಿರುವುದರಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯಲಿವೆ. ದೇಹದಲ್ಲಿ ಈಸ್ಟ್ರೊಜೆನ್ ಪ್ರಮಾಣವನ್ನು ಸಮತೋಲನಗೊಳಿಸಲಿದೆ. ಇದರಿಂದ ಸ್ತನ ಕ್ಯಾನ್ಸರ್‌ ನಿಯಂತ್ರಿಸಬಬಹುದಾಗಿದೆ ಎಂಬುದು ಆಹಾರ ತಜ್ಞರ ಮಾತಾಗಿದೆ.

ಅದೇ ರೀತಿ ಆಲೀವ್‌ ಎಣ್ಣೆಯಲ್ಲಿರುವ ಪಾಲಿಫಿನಾಲ್‌ಗಳು ಉರಿಯೂತ ಕಡಿಮೆ ಮಾಡುತ್ತವೆ. ಆರೋಗ್ಯಕರ ಕೋಶಗಳನ್ನು ರಕ್ಷಣೆ ಮಾಡಲಿವೆ. ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿಧಾನಗೊಳಿಸುವಲ್ಲಿ ಆಲಿವ್ ಎಣ್ಣೆಯು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

ನೆಲ್ಲಿಕಾಯಿ ಮತ್ತು ಪೇರಳೆ ಹಣ್ಣಿನಲ್ಲಿ ವಿಟಮಿನ್ ಸಿ ಯತೇಚ್ಛ ಪ್ರಮಾಣದಲ್ಲಿ ಲಭ್ಯವಿದೆ. ಇದು ಉತ್ಕರ್ಷಣಾ ನಿರೋಧಕವಾಗಿದ್ದು, ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಿ ಡಿಎನ್‌ಎ ಹಾನಿ ತಡೆಗಟ್ಟುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿ ಕ್ಯಾನ್ಸರ್‌ನಿಂದ ರಕ್ಷಣೆ ನೀಡಲಿದೆ.

ಹಸಿರು ತರಕಾರಿಗಳು ಯಕೃತ್ತಿನ ಶುದ್ಧೀಕರಣ ಮತ್ತು ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಬ್ರೊಕೊಲಿ, ಹೂಕೋಸು, ಎಲೆಕೋಸು ಮುಂತಾದ ತರಕಾರಿಗಳಲ್ಲಿ ಸಲ್ಫೊರಾಫೇನ್ ಎಂಬ ಪೋಷಕಾಂಶವಿದೆ. ಇದು ಯಕೃತ್ತಿನ ಶುದ್ಧೀಕರಣಕ್ಕೆ ಸಹಕಾರಿಯಾಗಿ ದೇಹದಿಂದ ಹಾನಿಕಾರಕ ಈಸ್ಟ್ರೊಜೆನ್ ತೆಗೆದುಹಾಕುತ್ತದೆ. ಇದರಿಂದ ಗೆಡ್ಡೆ ಅಥವಾ ಕ್ಯಾನ್ಸರ್ ಬೆಳವಣಿಗೆ ಅಪಾಯ ಕಡಿಮೆಯಾಗಲಿದೆ ಎನ್ನುತ್ತಾರೆ ಆಹಾರ ತಜ್ಞರು.

ಸೋಯಾ ಮತ್ತು ಮಸೂರಗಳಲ್ಲಿ ಐಸೊಫ್ಲೇವೋನ್‌ಗಳಿದ್ದು, ದೇಹದ ನೈಸರ್ಗಿಕ ಈಸ್ಟ್ರೊಜೆನ್‌ನಂತೆಯೇ ಸೌಮ್ಯವಾಗಿ ಕೆಲಸ ಮಾಡುತ್ತವೆ. ಈ ಸಂಯುಕ್ತಗಳು ಹಾರ್ಮೋನುಗಳ ಏರಿಳಿತ ನಿಯಂತ್ರಿಸಿ ಅಸಹಜ ಕೋಶಗಳ ಬೆಳವಣಿಗೆ ತಡೆಗಟ್ಟುತ್ತವೆ., ಸೋಯಾ ಹಾಲು ಅಥವಾ ಮಸೂರವನ್ನು ದೈನಂದಿನ ಆಹಾರದಲ್ಲಿ ಸೇವಿಸುವುದರಿಂದ ಕ್ಯಾನ್ಸರ್‌ ನಿಯಂತ್ರಣದಲ್ಲಿಡಬಹುದಾಗಿದೆ.

ಅಗಸೆ ಬೀಜಗಳಲ್ಲಿ ಲಿಗ್ನಾನ್‌ ಎನ್ನುವ ಫೈಟೊ ಈಸ್ಟ್ರೊಜೆನ್‌ಗಳು ಇರುವುದರಿಂದ ಈಸ್ಟ್ರೊಜೆನ್ ಮಟ್ಟವನ್ನು ಸಮತೋಲನಗೊಳಿಸುತ್ತವೆ. ಬೀಜಗಳನ್ನು ಪುಡಿ ಮಾಡಿ ಮೊಸರು ಅಥವಾ ಸಲಾಡ್‌ಗಳಲ್ಲಿ ಸೇರಿಸಿ ಸೇವಿಸಿದರೆ ಸ್ತನ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಹೇಳಲಾಗುತ್ತದೆ.

Tags:    

Similar News