ವರ್ಷಾಂತ್ಯದ ಪ್ರವಾಸಕ್ಕೆ ಹರ್ಷದ ಹೊನಲು ಹರಿಸುವ 28 ವಿಶಿಷ್ಟ ಪ್ರವಾಸಿ ತಾಣಗಳು

ಕಾಶ್ಮೀರದ ಗುರೇಜ್ ಕಣಿವೆಯಿಂದ ಅರುಣಾಚಲ ಪ್ರದೇಶದ ಝೀರೋ ತನಕ, ತಮಿಳು ನಾಡಿನ ಚಿದಂಬರಂನಿಂದ ಒಡಿಶಾದ ಕೋನಾರ್ಕ್ ತನಕ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಪ್ರವಾಸ ಕೈಗೊಳ್ಳಬಹುದಾದ 28 ವಿಶಿಷ್ಟ ಪ್ರವಾಸಿ ತಾಣಗಳನ್ನು ಪರಿಚಯಿಸುವ ವಿಶೇಷ ಲೇಖನ ಇಲ್ಲಿದೆ

Update: 2025-10-25 00:30 GMT

ಜಮ್ಮು ಮತ್ತು ಕಾಶ್ಮೀರದ ಗುರೆಜ್ ಕಣಿವೆಯು 16 ನೇ ಶತಮಾನದ ಹಬ್ಬಾ ಖಾತೂನ್ ಶಿಖರದಿಂದ ಆವೃತವಾಗಿದೆ.

Click the Play button to listen to article

ದೀಪಾವಳಿಯ ಜೊತೆ ದೀರ್ಘ ವಾರಾಂತ್ಯವೂ ಮುಗಿದೆ. ಅಕ್ಟೋಬರ್ ತಿಂಗಳ ಕೊನೆಯ ಪಾದಕ್ಕೆ ನಾವು ಪದಾರ್ಪಣೆ ಮಾಡಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ಪ್ರವೇಶಿಸಿ ಇಡೀ ಕ್ಯಾಲೆಂಡರನ್ನು ಭರ್ತಿ ಮಾಡಲಿದೆ. ಇಂತಹ ಕಾಲಘಟ್ಟದಲ್ಲಿ ಪ್ರವಾಸಕ್ಕಿರುವ ಅವಕಾಶವನ್ನು ಕಳೆದುಕೊಳ್ಳಬಾರದು. ಇಲ್ಲಿ ಮಾಡಿರುವ ಪ್ರವಾಸದ ಪಟ್ಟಿಗಳು ಟ್ರೆಂಡಿಂಗ್ ರೀಲ್ಸ್ ಮಾಡುವ ತಾಣಗಳಲ್ಲ ಅಥವಾ ಇದೊಂದು ಪ್ರಚಾರವೂ ಅಲ್ಲ. ಇದು ಉತ್ತರದಿಂದ ದಕ್ಷಿಣಕ್ಕೆ, ಕರಾವಳಿ ಭಾಗದಿಂದ ಬೆಟ್ಟಪ್ರದೇಶಗಳ ತನಕ ಒಂದೊಂದು ರಾಜ್ಯದಿಂದ ಒಂದೊಂದು ತಾಣವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಮುಂದೆ ಮಂಡಿಸುವ ಪ್ರಯತ್ನ. ಇಲ್ಲಿನ ಪ್ರತಿಯೊಂದು ತಾಣಕ್ಕೂ ತನ್ನದೇ ಆದ ಕತೆ ಇದೆ.

ಹಾಗಾಗಿ, ಹಬ್ಬಗಳು ಕಳೆದು ನಿಮಗೇನಾದರೂ ಒಂದೆರಡು ದಿನಗಳ ಬಿಡುವು ಸಿಕ್ಕೂ ಬಿಟ್ಟರೆ, ಮತ್ತು ಪ್ರಾಚೀನ ಕಣಿವೆಗಳು, ಪ್ರಶಾಂತ ಪಟ್ಟಣಗಳು, ನದಿದ್ವೀಪಗಳು, ಕೋಟೆಕೊತ್ತಲಗಳು ಮತ್ತು ಅರಣ್ಯಗಳಲ್ಲಿ ಅಲೆದಾಡುವ ತಾಳ್ಮೆ ಇತ್ತೂ ಅನ್ನುವುದಾದರೆ, ನೀವು ಭೇಟಿ ನೀಡಬಹುದಾದ 28 ಸ್ಥಳಗಳ ಪಟ್ಟಿ ಇಲ್ಲಿದೆ. ನೀವು ಪರ್ವತಗಳಲ್ಲಿ ಅಥವಾ ಅದರ ತಪ್ಪಲುಗಳಲ್ಲಿ ಚುಮುಗುಡುವ ಬೆಳಕನ್ನು ಬೆನ್ನಟ್ಟುತ್ತಿರಲಿ, ಭಿತ್ತಿಚಿತ್ರಗಳಿರುವ ರಾಜಸ್ಥಾನದ ಹವೇಲಿಗಳಲ್ಲಿ ನಡೆಯುತ್ತಿರಲಿ, ಅಥವಾ ಮಣಿಪುರದ ಲೋಕ್ಟಕ್‌ನ ಸಜೀವ ದ್ವೀಪಗಳ ಮೇಲೆ ತೇಲುತ್ತಿರಲಿ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ನಿಮ್ಮ ಪ್ರಯಾಣ ಯೋಜನೆಗಳಿಗೆ ಇದೇ ನಿಮ್ಮ ನಕ್ಷೆ ಎಂದು ಪರಿಗಣಿಸಿ.

1. ಗುರೇಜ್ ಕಣಿವೆ, ಜಮ್ಮು-ಕಾಶ್ಮೀರ

ಗುರೇಜ್ ಕಣಿವೆಯು ಶ್ರೀನಗರದ ಉತ್ತರಕ್ಕೆ ಕಿಶನ್‌ಗಂಗಾ ನದಿಯ ಉದ್ದಕ್ಕೂ, ರಾಜಧಾನಿಯಿಂದ ಸುಮಾರು 120 ಕಿ.ಮೀ ದೂರದಲ್ಲಿದೆ ಮತ್ತು ನಿಯಂತ್ರಣ ರೇಖೆಗೆ (LoC) ಸಮೀಪದಲ್ಲಿದೆ. ಒಂದು ಕಾಲದಲ್ಲಿ ನಾಗರಿಕರಿಗೆ ಇಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಇದನ್ನು ಸಂದರ್ಶಕರಿಗೆ ಮುಕ್ತಗೊಳಿಸಿದ್ದು 2007ರಲ್ಲಿ. ಈ ಕಣಿವೆಯು ಸುಮಾರು 8,000 ಅಡಿ ಎತ್ತರದಲ್ಲಿದೆ ಮತ್ತು 16ನೇ ಶತಮಾನದ ಕಾಶ್ಮೀರಿ ಕವಯತ್ರಿ ಹಾಗೂ ರಾಣಿಯ ಹೆಸರಿನ ಹಬ್ಬಾ ಖಾತೂನ್ ಶಿಖರದಿಂದ ಆವೃತವಾಗಿದೆ. ಇಲ್ಲಿನ ಜನಸಂಖ್ಯೆಯು ಹೆಚ್ಚಾಗಿ ದರ್ದ್-ಶಿನ್ ಇಂಡೋ-ಆರ್ಯನ್ ಜನಾಂಗೀಯ ಗುಂಪಿನವರಾಗಿದ್ದು, ಅವರು ಮಾತನಾಡುವ ಭಾಷೆ ಶಿನಾ.

ಈ ಕಣಿವೆಯನ್ನು ಪ್ರತ್ಯೇಕಗೊಳಿಸಿದ್ದರಿಂದ ಸಾಂಪ್ರದಾಯಿಕ ಮರದ ವಾಸ್ತುಶಿಲ್ಪ ಮತ್ತು ಮೇವು-ಆಧಾರಿತ ಜೀವನೋಪಾಯ ಸುರಕ್ಷಿತವಾಗಿದೆ. ಬೇಸಿಗೆಯ ಮೇವು ಪ್ರದೇಶಗಳು ಜೂನ್‌ನಿಂದ ಅಕ್ಟೋಬರ್‌ವರೆಗೆ ತೆರೆದಿರುತ್ತವೆ. ಮೊದಲ ಹಿಮಪಾತದ ನಂತರ, ರಾಜ್ದಾನ್ ಪಾಸ್ ಮೂಲಕ ಹಾದುಹೋಗುವ ದಾರಿಯನ್ನು ತಿಂಗಳುಗಳವರೆಗೆ ಮುಚ್ಚಲಾಗುತ್ತದೆ. ಮಳೆಗಾಲದ ನಂತರದ ಅಕ್ಟೋಬರ್ ತಿಂಗಳಲ್ಲಿ ಎಲ್ಲವೂ ಕ್ಲೀನ್ ಆ್ಯಂಡ್ ನೀಟ್. ಕಿಷನ್‌ಗಂಗಾ ನದಿಯು ವೈಡೂರ್ಯದ ಬಣ್ಣದಲ್ಲಿ ಫಳಗುಟ್ಟುತ್ತದೆ ಮತ್ತು ಹಚ್ಚಹಸುರಾಗಿರುವ ಹುಲ್ಲುಗಾವಲುಗಳು ಕಣ್ಣಿಗೆ ಹಬ್ಬ. ಗಡಿಯ ಸಮೀಪದಲ್ಲೇ ಇರುವುದರಿಂದ ಈ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಸೀಮಿತ ಅತಿಥಿಗೃಹಗಳು ಮತ್ತು ಮಿಲಿಟರಿ ಮಂದಿ ಹದ್ದಿನ ಕಣ್ಣು ಇಟ್ಟಿರುತ್ತಾರೆ.

2. ಸ್ಪಿತಿ ಕಣಿವೆ, ಹಿಮಾಚಲ ಪ್ರದೇಶ

 “ಮಧ್ಯದ ಭೂಮಿ” ಎಂಬ ಅರ್ಥವಿರುವ ಸ್ಪಿತಿಯು ಟಿಬೆಟ್ ಮತ್ತು ಭಾರತದ ನಡುವೆ 10,000-15,000 ಅಡಿ ಎತ್ತರದಲ್ಲಿದೆ. ಇದು ಲಾಹೌಲ್ ಸ್ಪಿತಿ ಜಿಲ್ಲೆಯ ಭಾಗ. ಹಿಮಾಲಯ ಭಾಗದಲ್ಲಿರುವ ಇದು ಅತ್ಯಂತ ಶೀತಲ ಕಣಿವೆಗಳಲ್ಲಿ ಒಂದು. ಸ್ಪಿತಿ ನದಿಯು ಸಟ್ಲೆಜ್ ನದಿಗೆ ಹರಿದು, ನಡುವಲೊಂದು ಎತ್ತರದ ಮರುಭೂಮಿಯನ್ನು ನಿರ್ಮಿಸುತ್ತದೆ. ಕೀ, ತಬೋ ಮತ್ತು ಧನಕರ್‌ನಂತಹ ಮಠಗಳು 10 ರಿಂದ 14ನೇ ಶತಮಾನದಷ್ಟು ಹಿಂದಿನವು ಮತ್ತು ಗೆಲುಗ್ಪಾ ಬೌದ್ಧ ಸಂಪ್ರದಾಯವನ್ನು ಅನುಸರಿಸುತ್ತವೆ.

ಕುಂಜುಮ್ ಪಾಸ್ ಮೂಲಕ ಸಾಗುವ ಮನಾಲಿ ರಸ್ತೆಯ ಪ್ರವೇಶವು ಜೂನ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ತೆರೆದಿರುತ್ತದೆ, ಇದರಿಂದಾಗಿ ಅಕ್ಟೋಬರ್ ಅಂತ್ಯದ ಪ್ರಯಾಣವು ಏಕಾಂತವೂ ಪ್ರಶಾಂತವೂ ಆಗಿರುತ್ತದೆ. ಕಣಿವೆಯ ಪರಿಸರ ವ್ಯವಸ್ಥೆಯು ಸೀಮಿತ ಕೃಷಿಗೆ (ಬಾರ್ಲಿ, ಬಟಾಣಿ ಮತ್ತು ಕಿತ್ತಳೆ ಬಣ್ಣದ ಹಣ್ಣಿನ ಗಿಡಿ) ಪೂರಕವಾಗಿದೆ.

3 ಸುಲ್ತಾನ್‌ಪುರ ಲೋಧಿ, ಪಂಜಾಬ್

ಪಂಜಾಬಿನ ಕಪುರ್ತಲಾ ಜಿಲ್ಲೆಯಲ್ಲಿರುವ ಸುಲ್ತಾನ್‌ಪುರ ಲೋಧಿಗೆ ಸಿಖ್ ಇತಿಹಾಸದಲ್ಲಿ ವಿಶೇಷ ಮಹತ್ವವಿದೆ. ಗುರು ನಾನಕ್ ದೇವ್ ಅವರು ಇಲ್ಲಿ ಸುಮಾರು ೧೪ ವರ್ಷಗಳ ಕಾಲ ಕಳೆದರು ಮತ್ತು ಸುಮಾರು ಕ್ರಿ.ಶ. 1496ರಲ್ಲಿ ಜ್ಞಾನೋದಯವನ್ನು ಪಡೆದರು ಎಂದು ನಂಬಲಾಗಿದೆ. ಈ ಸ್ಥಳದಲ್ಲಿ ಅನೇಕ ಗುರುದ್ವಾರಗಳಿವೆ, ಅವುಗಳಲ್ಲಿ ಪ್ರಮುಖವಾದುದು ಗುರುದ್ವಾರ ಬೇರ್ ಸಾಹೀಬ್. ಗುರು ನಾನಕ್ ಅವರು ಇಲ್ಲಿ ಒಂದು ಬೋರೆ ಮರದ ಕೆಳಗೆ ಕುಳಿತು ಧ್ಯಾನಸ್ಥರಾಗಿದ್ದರು ಎಂದು ಹೇಳಲಾಗುವ ಜಾಗದಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿದೆ.

ಪ್ರತಿ ವರ್ಷ, ಗುರು ನಾನಕ್ ಜಯಂತಿಯ ಸಮಯದಲ್ಲಿ ಈ ಪಟ್ಟಣವು ಯಾತ್ರಾ ಕೇಂದ್ರವಾಗಿ ಪರಿವರ್ತನೆ ಹೊಂದುತ್ತದೆ. ಸಾಮಾನ್ಯವಾಗಿ ಸುಗ್ಗಿಯ ನಂತರದ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಈ ಜಯಂತಿ ಕಾರ್ಯಕ್ರಮವಿರುತ್ತದೆ. ಈ ವರ್ಷ ಅದು ನವೆಂಬರ್ 5ರಂದು ನಡೆಯಲಿದೆ. 2019ರಲ್ಲಿ ಗುರುಗಳ 550ನೇ ಜನ್ಮ ವಾರ್ಷಿಕೋತ್ಸವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಡಿದ ಜೀರ್ಣೋದ್ಧಾರದಿಂದಾಗಿ ಪ್ರವೇಶ ಮತ್ತು ನದಿಯಂಚಿನ ಸೌಲಭ್ಯಗಳು ಸುಧಾರಿಸಿವೆ. ಈ ಪಟ್ಟಣದ ಮೂಲಕ ಹರಿಯುವ ಕಾಳಿ ಬೀನ್ ನದಿ ಗುರುಗಳ ಕಥೆ ಮತ್ತು ಸ್ಥಳೀಯ ಪರಿಸರಕ್ಕೆ ಕೇಂದ್ರಬಿಂದು.

4. ಮೋರ್ನಿ ಪರ್ವತ ಪ್ರದೇಶ ಹರಿಯಾಣ

ಮೋರ್ನಿ ಪರ್ವತ ಪ್ರದೇಶವು ಚಂಡೀಗಢದಿಂದ ಸುಮಾರು 45 ಕಿ.ಮೀ. ದೂರದ ಶಿವಾಲಿಕ್ ಶ್ರೇಣಿಯಲ್ಲಿದೆ. ಇದು 1200ರಿಂದ 1500 ಮೀಟರ್ ಎತ್ತರದ ವರೆಗೂ ತಲುಪುತ್ತದೆ ಮತ್ತು ಹರಿಯಾಣದ ಏಕೈಕ ಗಿರಿಧಾಮ. ಇದಕ್ಕೆ ಸ್ಥಳೀಯ ರಾಣಿ ಮೋರ್ನಿ ಹೆಸರು ಇಡಲಾಗಿದೆ. ಈ ಪ್ರದೇಶದಲ್ಲಿ ಅಂತರ್ಜಲ ಸಂಪರ್ಕಗಳ ಮೂಲಕ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವ ಎರಡು ಪರಸ್ಪರ ಸಂಪರ್ಕ ಹೊಂದಿದ ಸರೋವರಗಳಿವೆ.

ಇಲ್ಲಿನ ಅರಣ್ಯಗಳಲ್ಲಿ ಪ್ರಧಾನವಾಗಿ ಚೀರ್ ಪೈನ್, ಓಕ್ ಮತ್ತು ಅಕೇಶಿಯಾ ಮರಗಳಿವೆ. ಇತ್ತೀಚೆಗೆ ಪುನಃಸ್ಥಾಪಿಸಲಾದ ಮೋರ್ನಿ ಕೋಟೆಯು 17ನೇ ಶತಮಾನಕ್ಕೆ ಸೇರಿದೆ. ಈ ಬೆಟ್ಟಗಳು ಸಣ್ಣ ಸಮುದಾಯ ನಿರ್ವಹಣೆಯ ಅರಣ್ಯ ಪ್ರದೇಶಗಳನ್ನು ಹೊಂದಿದ್ದು, ಪರಿಸರ-ಪ್ರವಾಸೋದ್ಯಮಕ್ಕೆ ಮಾದರಿಯಾಗಿವೆ. ಮಳೆಗಾಲ ಕಳೆದ ಬಳಿಕ ಅಕ್ಟೋಬರ್ ತಿಂಗಳು ಪ್ರಶಾಂತ ಮತ್ತು ಹಸಿರಿನಿಂದ ಕೂಡಿರುತ್ತದೆ, ನಂತರ ಕ್ರಮೇಣ ಚಳಿಗಾಲದ ಮಂಜು ಆವರಿಸುತ್ತದೆ.

5. ಮೆಹ್ರೌಲಿ ಪುರಾತತ್ವ ಉದ್ಯಾನವನ, ದೆಹಲಿ

ಕುತುಬ್ ಕಾಂಪ್ಲೆಕ್ಸ್‌ನ ಪಕ್ಕದಲ್ಲಿರುವ ಮೆಹ್ರೌಲಿ ಪುರಾತತ್ವ ಉದ್ಯಾನವನವು ಸುಮಾರು 2೦೦ ಎಕರೆ ಪ್ರದೇಶದಲ್ಲಿದೆ. ಇದು ತೋಮರ್ ರಜಪೂತರಿಂದ ಮೊದಲುಗೊಂಡು ಮೊಘಲರು ಮತ್ತು ಬ್ರಿಟಿಷರ ವರೆಗಿನ ಸಾವಿರ ವರ್ಷಗಳ ಅವಧಿಯ ಅವಶೇಷಗಳನ್ನು ಒಳಗೊಂಡಿದೆ. ಪ್ರಮುಖ ಸ್ಥಳಗಳೆಂದರೆ ಬಲ್ಬನ್‌ರ ಸಮಾಧಿ (13ನೇ ಶತಮಾನ), ಜಮಾಲಿ-ಕಮಾಲಿ ಮಸೀದಿ, ರಾಜೋನ್ ಕಿ ಬಾವಲಿ ಮತ್ತು ಜಫರ್ ಮಹಲ್.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಮತ್ತು INTACHಗಳು 1990ರ ದಶಕದಲ್ಲಿ ವ್ಯವಸ್ಥಿತ ಸಂರಕ್ಷಣೆಯನ್ನು ಪ್ರಾರಂಭಿಸಿ, ಕಾಲುದಾರಿ ಮತ್ತು ಫಲಕಗಳನ್ನು ಹಾಕಿವೆ. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಬೆಳಕು ಕೆಂಪು ಮರಳುಗಲ್ಲು ಮತ್ತು ಹಸಿರು ಎಲೆಗಳ ವೈದೃಶ್ಯತೆಯನ್ನು ಎತ್ತಿ ತೋರಿಸುತ್ತದೆ, ಮತ್ತು ವಲಸೆ ಹೋಗುವ ಪಕ್ಷಿಗಳು ಈ ಪ್ರದೇಶದ ಮೆಟ್ಟಿಲುಬಾವಿಗಳಿಗೆ ಮರಳುತ್ತವೆ. ಇದು ತನ್ನ ಮೂಲ ಭೌಗೋಳಿಕ ಚೆಲುವನ್ನು ಉಳಿಸಿಕೊಂಡಿರುವ ದೆಹಲಿಯ ಕೆಲವೇ ನಗರ ಪುರಾತತ್ವ ವಲಯಗಳಲ್ಲಿ ಒಂದಾಗಿದೆ.

6. ಮುಕ್ತೇಶ್ವರ, ಉತ್ತರಾಖಂಡ

ನೈನಿತಾಲ್ ಜಿಲ್ಲೆಯಲ್ಲಿ ಸುಮಾರು 2,300 ಮೀಟರ್ ಎತ್ತರದಲ್ಲಿದೆ ಈ ಮುಕ್ತೇಶ್ವರ, ಪಟ್ಟಣಕ್ಕೆ ಕಳಶಪ್ರಾಯವಾಗಿರುವುದು 350 ವರ್ಷಗಳಷ್ಟು ಹಳೆಯ ಶಿವ ದೇವಾಲಯ. ಹಿಂದೊಮ್ಮೆ ಅಂದರೆ 1893ರಲ್ಲಿ ಜಾನುವಾರು ರೋಗಗಳನ್ನು ಅಧ್ಯಯನ ಮಾಡಲು ಇಂಪೀರಿಯಲ್ ಬ್ಯಾಕ್ಟೀರಿಯಾಲಾಜಿಕಲ್ ಲ್ಯಾಬೋರೇಟರಿಯನ್ನು (ಈಗ IVRI) ಸ್ಥಾಪಿಸಲಾಗಿತ್ತು. ಬ್ರಿಟಿಷರು ಇಲ್ಲಿ ಹಣ್ಣಿನ ತೋಟಗಳು ಮತ್ತು ಅರಣ್ಯ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಿದ್ದರು, ಹಾಗಾಗಿ ಈ ಪ್ರದೇಶಕ್ಕೆ ವಸಾಹತುಶಾಹಿ ಮುದ್ರೆಯನ್ನು ನೀಡಿತು.

ಅಕ್ಟೋಬರ್ ತಿಂಗಳಲ್ಲಿ, ನಂದಾ ದೇವಿ ಮತ್ತು ತ್ರಿಶೂಲ್ ಶಿಖರದ ದೃಶ್ಯವನ್ನು ವರ್ಣಿಸಲು ಪದಗಳು ಸಾಲದು. ಈ ಪ್ರದೇಶದಲ್ಲಿ ಸೇಬು, ಏಪ್ರಿಕಾಟ್ ಮತ್ತು ಪ್ಲಮ್ ಹಣ್ಣಿನ ತೋಟಗಳು ಯತೇಚ್ಛವಾಗಿವೆ. ಇಲ್ಲಿನ ಪರಿಸರ-ಪ್ರವಾಸೋದ್ಯಮ ಉಪಕ್ರಮಗಳು ಸುಸ್ಥಿರ ಹೋಮ್‌ಸ್ಟೇ ಮತ್ತು ಸಾವಯವ ಕೃಷಿಗೆ ಒತ್ತು ನೀಡುತ್ತವೆ. ನೀಲಾಕಾಶ ಮತ್ತು ಮಾನ್ಸೂನ್ ನಂತರದ ಸಸ್ಯವರ್ಗವು ಸೇರಿ ಇದನ್ನು ಅಕ್ಟೋಬರ್‌ಗೆ ಪ್ರವಾಸ ಕೈಗೊಳ್ಳಲು ಸೂಕ್ತ ತಾಣವನ್ನಾಗಿ ಮಾಡಿದೆ.

7. ಸಾರನಾಥ, ಉತ್ತರ ಪ್ರದೇಶ

ವಾರಾಣಸಿಯ ಈಶಾನ್ಯಕ್ಕೆ 10 ಕಿ.ಮೀ ದೂರದಲ್ಲಿರುವ ಸಾರನಾಥವು ಜ್ಞಾನೋದಯದ ನಂತರ ಬುದ್ಧನ ಮೊದಲ ಧರ್ಮೋಪದೇಶವಾದ 'ಧಮ್ಮಚಕ್ಕಪ್ಪವಟ್ಟಣ ಸುತ್ತ' ಎಂದು ಕರೆಯಲಾಗುತ್ತದೆ. ಚಕ್ರವರ್ತಿ ಅಶೋಕ ಇಲ್ಲಿ ಕ್ರಿ.ಪೂ. 3ನೇ ಶತಮಾನದಲ್ಲಿ ಒಂದು ಸ್ತೂಪ ಮತ್ತು ಸ್ತಂಭವನ್ನು ನಿರ್ಮಿಸಿದ, ಆ ಕಂಬದ ಮೇಲಿನ ಸಿಂಹ ರಾಜಧಾನಿ ಈಗ ಭಾರತದ ರಾಷ್ಟ್ರೀಯ ಲಾಂಛನ.

19ನೇ ಶತಮಾನದಿಂದ ನಡೆಸಿದ ಉತ್ಖನನಗಳು ಮೌರ್ಯರಿಂದ ಗುಪ್ತರವರೆಗಿನ ಅವಧಿಯ ಮಠಗಳು, ಸ್ತೂಪಗಳು ಮತ್ತು ಶಾಸನಗಳನ್ನು ಬಹಿರಂಗಪಡಿಸಿವೆ. ಧಮೇಕ್ ಸ್ತೂಪ (ಸುಮಾರು ಕ್ರಿ.ಶ.500) ದೃಶ್ಯ ಕೇಂದ್ರಬಿಂದುವಾಗಿ ಉಳಿದುಕೊಂಡಿದೆ. ಅಕ್ಟೋಬರ್ ಚಳಿಗಾಲದ ಮೊದಲು ಬಿಸಿ ಮತ್ತು ಸ್ಪಚ್ಛ ಗಾಳಿ ಬೀಸುತ್ತಿರುತ್ತದೆ. ಹತ್ತಿರದ ಸಾರನಾಥ ವಸ್ತುಸಂಗ್ರಹಾಲಯ, ಭಾರತದ ಅತ್ಯಂತ ಹಳೆಯ ವಸ್ತುಸಂಗ್ರಹಾಲಯಗಳಲ್ಲಿ ಒಂದಾಗಿದ್ದು, 6,000ಕ್ಕೂ ಹೆಚ್ಚು ಕಲಾಕೃತಿಗಳು ಇಲ್ಲಿವೆ.

8. ಶೇಖಾವತಿ, ರಾಜಸ್ಥಾನ

ಶೇಖಾವತಿಯು ಈಶಾನ್ಯ ರಾಜಸ್ಥಾನದ ಝುನ್‌-ಝುನು, ಸಿಕರ್ ಮತ್ತು ಚುರು ಜಿಲ್ಲೆಗಳನ್ನು ಒಳಗೊಂಡಿದೆ. 18ರಿಂದ 20ನೇ ಶತಮಾನದ ಆರಂಭದ ನಡುವೆ, ಮಾರ್ವಾಡಿ ವ್ಯಾಪಾರಿಗಳು ಪುರಾಣ, ವಸಾಹತುಶಾಹಿ ದೃಶ್ಯಗಳು ಮತ್ತು ದೈನಂದಿನ ಜೀವನವನ್ನು ನಿರೂಪಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟ ಸಾವಿರಾರು ಹವೇಲಿಗಳನ್ನು ನಿರ್ಮಿಸಿದರು. ಸುಣ್ಣದ ಕಲ್ಲು, ಇಂಡಿಗೊ ಮತ್ತು ಚಿನ್ನದ ಧೂಳಿನಿಂದ ವರ್ಣದ್ರವ್ಯಗಳನ್ನು ಪಡೆಯಲಾಗುತ್ತಿತ್ತು, ಇದು ವಿಶಿಷ್ಟವಾದ ಭಿತ್ತಿಚಿತ್ರ ಸಂಪ್ರದಾಯವನ್ನು ರೂಪಿಸಿತು.

ವ್ಯಾಪಾರಿಗಳು ಕಲ್ಕತ್ತಾ ಮತ್ತು ಮುಂಬೈಗೆ ಸ್ಥಳಾಂತರಗೊಂಡ ನಂತರ ಅನೇಕ ಹವೇಲಿಗಳು ನಿರ್ಲಕ್ಷ್ಯಕ್ಕೆ ಒಳಗಾದವು, ಆದರೆ ಮರುಸ್ಥಾಪನೆಯಿಂದಾಗಿ ಮಾಂಡಾವಾ ಮತ್ತು ನವಲ್‌ಗಢದಂತಹ ಪಟ್ಟಣಗಳಲ್ಲಿ ಪರಂಪರಾ ವೃತ್ತಗಳಿಗೆ ಹೊಸ ಚೈತನ್ಯ ತುಂಬಿದಂತಾಗಿದೆ. ಅಕ್ಟೋಬರ್‌ನ ಒಣ ಮಾನ್ಸೂನ್ ನಂತರದ ಗಾಳಿ ವರ್ಣದ್ರವ್ಯದ ಸ್ಪಷ್ಟತೆಯನ್ನು ಬಿಂಬಿಸುತ್ತದೆ ಸೂರ್ಯನ ಮಂದ ಬೆಳಕು ಗೋಡೆಯ ಬಣ್ಣದ ವೈದೃಶ್ಯತೆಯನ್ನು ಹೆಚ್ಚಿಸುತ್ತದೆ, ಇದು ಕಾಲ್ನಡಿಗೆ ಪ್ರವಾಸಗಳಿಗೆ ಅತ್ಯುತ್ತಮ ಕಾಲ.

ಮಂಡುವಿನಲ್ಲಿ ಹಿಂದೋಳ ಮಹಲ್‌ನ ಕಮಾನುಗಳು.

9. ಮಾಂಡು, ಮಧ್ಯಪ್ರದೇಶ

ವಿಂದ್ಯ ಪರ್ವತ ಶ್ರೇಣಿಯ 20 ಚದರ ಕಿ.ಮೀ. ಪ್ರಸ್ಥಭೂಮಿಯ ಮೇಲೆ ನೆಲೆಗೊಂಡಿರುವ ಮಾಂಡು (ಮಾಂಡವ್) 15ನೇ ಶತಮಾನದಲ್ಲಿ ಮಾಳವ ಸುಲ್ತಾನರ ರಾಜಧಾನಿಯಾಗಿತ್ತು. ಇಲ್ಲಿನ ಜಹಾಜ್ ಮಹಲ್ ವಾಸ್ತುಶಿಲ್ಪದಲ್ಲಿ ಅಫ್ಘಾನ್ ಪ್ರಭಾವ ಮತ್ತು ಸ್ಥಳೀಯರ ಶಿಲ್ಪತಂತ್ರ ಬೆರೆತಿರುವುದು ಕಾಣುತ್ತದೆ. ಹಿಂದೋಳ ಮಹಲ್ ಮತ್ತು ರಾಣಿ ರೂಪಮತಿ ಪೆವಿಲಿಯನ್ ಇದಕ್ಕೆ ಅತ್ಯುತ್ತಮ ಉದಾಹರಣೆ.

ಈ ತಾಣದ ವಿನ್ಯಾಸವು ಜಲಮೂಲಗಳಾದ ತೊಟ್ಟಿಗಳು, ಮೆಟ್ಟಿಲುಬಾವಿಗಳು ಮತ್ತು ಸರೋವರಗಳನ್ನು ಒಳಗೊಂಡಿದೆ. ಮಧ್ಯಕಾಲೀನ ಜಲಸಂಬಂಧಿ ಯೋಜನೆಗಳು ಇಲ್ಲಿದ್ದವು ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಲ್ಲಿನ 61 ಸಂರಕ್ಷಿತ ಸ್ಮಾರಕಗಳ ನಿರ್ವಹಣೆ ಮಾಡುತ್ತಿದೆ. ಅಕ್ಟೋಬರ್ ವೇಳೆಗೆ, ಮಾಂಡುವಿನ ತೊಟ್ಟಿಗಳು ತುಂಬಿರುತ್ತವೆ ಮತ್ತು ತಂಪು ಹವಾಮಾನ ಆವರಿಸಿಕೊಂಡಿರುತ್ತದೆ, ಇದು ಇಂಡೋ-ಅಫ್ಘನ್ ವಾಸ್ತುಶಿಲ್ಪದ ಸ್ಥಳಾಧ್ಯಯನಕ್ಕೆ ಸೂಕ್ತವಾಗಿದೆ.

10. ಸಿರ್ಪುರ, ಛತ್ತೀಸ್‌ಗಢ

ರಾಯಪುರದಿಂದ 84 ಕಿ.ಮೀ ದೂರದಲ್ಲಿ ಮಹಾನದಿ ದಡದಲ್ಲಿರುವ ಸಿರ್ಪುರ (ಪ್ರಾಚೀನ ಶ್ರೀಪುರ) ಪಾಂಡುವಂಶಿ ರಾಜವಂಶದ (ಕ್ರಿ.ಶ. 6ನೇ-8ನೇ ಶತಮಾನ) ರಾಜಧಾನಿಯಾಗಿತ್ತು. ಇಲ್ಲಿ ನಡೆಸಲಾದ ಉತ್ಖನನಗಳಿಂದ ಬೌದ್ಧ ವಿಹಾರಗಳು, ಶೈವ ಮತ್ತು ವೈಷ್ಣವ ದೇವಾಲಯಗಳು ಮತ್ತು ಟೆರಾಕೋಟಾ ಶಿಲ್ಪಗಳಿರುವುದನ್ನು ಕಂಡುಕೊಳ್ಳಲಾಗಿದೆ. ಸುಮಾರು ಕ್ರಿ.ಶ. 625ರಲ್ಲಿ ನಿರ್ಮಿಸಲಾದ ಲಕ್ಷ್ಮಣ ದೇವಾಲಯವು ಭಾರತದ ಅತ್ಯಂತ ಹಳೆಯ ಇಟ್ಟಿಗೆ ದೇವಾಲಯಗಳಲ್ಲಿ ಒಂದಾಗಿದೆ.

ಇಲ್ಲಿ ದೊರೆತ ಪುರಾತತ್ವ ವಸ್ತುಗಳಾದ ಮಠದ ಮುದ್ರೆಗಳು, ತಾಮ್ರದ ಫಲಕಗಳು ಮತ್ತು ಆಗ್ನೇಯ ಏಷ್ಯಾದೊಂದಿಗೆ ವ್ಯಾಪಾರ ಸಂಪರ್ಕಕ್ಕೆ ಪುರಾವೆಗಳಾಗಿವೆ. 2014ರಲ್ಲಿ ಯುನೆಸ್ಕೋ ಸಿರ್ಪುರವನ್ನು ತನ್ನ ತಾತ್ಕಾಲಿಕ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರಿಸಿದೆ. ಅಕ್ಟೋಬರ್ ತಿಂಗಳಲ್ಲಿ , ಮಳೆಗಾಲ ಮುಗಿದ ಬಳಿಕ, ದೇವಾಲಯಗಳು ಸ್ಪಷ್ಟವಾಗಿ ಕಾಣಿಸುತ್ತವೆ, ಇದರಿಂದ ರಚನೆಗಳ ಫೋಟೊಗ್ರಫಿ ಮತ್ತು ಅಧ್ಯಯನಕ್ಕೆ ಅನುಕೂಲ.

11. ಧೋಲಾವೀರಾ, ಗುಜರಾತ್‌

ಕಚ್ಚ್‌ ವಲಯದ ರಣ್‌ ಎಂಬಲ್ಲಿರುವ ಖಾದಿರ್ ಬೆಟ್ ದ್ವೀಪದಲ್ಲಿ ನೆಲೆಗೊಂಡಿರುವ ಧೋಲಾವೀರಾ, ಐದು ಪ್ರಮುಖ ಹರಪ್ಪನ್ ನಗರಗಳಲ್ಲಿ ಒಂದು. ಇದು ಕ್ರಿ.ಪೂ. 3000-1500ರ ನಡುವೆ ಆಕ್ರಮಣಕ್ಕೆ ಒಳಗಾಗಿತ್ತು. ಆರ್.ಎಸ್.ಬಿಶ್ತ್ ನೇತೃತ್ವದಲ್ಲಿ ನಡೆದ ಉತ್ಖನನಗಳಿಂದಾಗಿ ಕೋಟೆ, ಜಲಾಶಯ ಮತ್ತು ಅತ್ಯಾಧುನಿಕ ಜಲ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ವಿಸ್ತಾರ ನಗರ ವಿನ್ಯಾಸ ಬಯಲಾಯಿತು.

2021ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲ್ಪಟ್ಟ ಧೋಲಾವೀರದಲ್ಲಿ ಸಿಂಧೂ ಲಿಪಿಯ ಫಲಕದ ಪುರಾವೆಗಳು ಕಂಡುಬಂದಿವೆ. ಇದು ದಕ್ಷಿಣ ಏಷ್ಯಾದಲ್ಲಿನ ಬರವಣಿಗೆಯ ಆರಂಭಿಕ ಉದಾಹರಣೆಗಳಲ್ಲಿ ಒಂದಾಗಿದೆ. ಮಳೆಗಾಲ ಮುಗಿದ ಬಳಿಕದ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಆರಾಮವಾಗಿ ಈ ತಾಣದ ಪರಿಶೋಧನೆ ನಡೆಸಬಹುದಾಗಿದೆ. ಆ ಬಳಿಕ ರಣ್ ಉತ್ಸವದ ಜನಸಂದಣಿ ಹೆಚ್ಚಾಗುತ್ತದೆ.

12. ಲೋನಾರ್ ಉಲ್ಕಾಶಿಲೆ ಕುಳಿ ಸರೋವರ, ಮಹಾರಾಷ್ಟ್ರ

 ಸುಮಾರು 52,೦೦೦ ವರ್ಷಗಳ ಹಿಂದೆ ಸಂಭವಿಸಿದ ಕ್ಷಿಪ್ರವೇಗದ ಉಲ್ಕಾಪಾತ ಅಪ್ಪಳಿಸಿ ರೂಪುಗೊಂಡ ಲೋಣಾರ್ ಕುಳಿ ಮಹಾರಾಷ್ಟ್ರದ ಬಲ್ಧಾನಾ ಜಿಲ್ಲೆಯಲ್ಲಿದೆ. ಇದು 1.8 ಕಿ.ಮೀ ವ್ಯಾಸ ಮತ್ತು 150 ಮೀ. ಆಳವಿದೆ. ಇದು ಡೆಕ್ಕನ್ ಟ್ರ್ಯಾಪ್ಸ್ ಜ್ವಾಲಾಮುಖಿ ಪ್ರಸ್ಥಭೂಮಿಯೊಳಗೆ ಇರುವ, ಭಾರತದ ಏಕೈಕ ಅಗ್ನಿಶಿಲೆ ಕುಳಿ ಸರೋವರ.

ಈ ಸರೋವರದ ನೀರು ಲವಣಯುಕ್ತವೂ ಹೌದು ಕ್ಷಾರೀಯ ಹೌದು. ವಿಪರೀತ ಪರಿಸ್ಥಿತಿಗಳಲ್ಲಿ ಬದುಕುವ ಸೂಕ್ಷ್ಮಜೀವಿಗಳಿಗೆ (extremophile microbes) ಆಶ್ರಯ ನೀಡಿದೆ. ಇದರ ಸುತ್ತಲೂ ಚಾಲುಕ್ಯ ಮತ್ತು ಯಾದವರ ಕಾಲದಲ್ಲಿ ನಿರ್ಮಿಸಲಾದ ಮಧ್ಯಕಾಲೀನ ದೇವಾಲಯಗಳಿವೆ. ಇಸ್ರೋ ಮತ್ತು ಐಐಟಿಗಳ ಅಧ್ಯಯನಗಳು ಇದರ ವಿಶಿಷ್ಟ ಭೂ-ರಾಸಾಯನಿಕ ಪರಿಸರ ವ್ಯವಸ್ಥೆಯ ನಿರಂತರ ಅವಲೋಕನ ನಡೆಸುತ್ತಿವೆ. ಅಕ್ಟೋಬರ್ ತಿಂಗಳೆಂದರೆ ನೀಲಾ ನೀಲಿ ಆಕಾಶ, ವಲಸೆ ಬರುವ ಪಕ್ಷಿಗಳು ಮತ್ತು ಕುಳಿಯೊಳಗೆ ಇಳಿಯಲು ಸಾಧ್ಯವಿರುವ ತಾಪಮಾನ ಇರುತ್ತದೆ.

13. ದಿವಾರ್ ದ್ವೀಪ, ಗೋವಾಲ್

ಹಳೆಯ ಗೋವಾದ ನದಿಯ ಮೇಲ್ಭಾಗದಲ್ಲಿರುವ ದಿವಾರ್ ದ್ವೀಪವನ್ನು ಮಾಂಡೋವಿ ನದಿಯ ಮೂಲಕ ದೋಣಿಯ ಮೂಲಕ ತಲುಪಬಹುದು. 16ನೇ ಶತಮಾನದಲ್ಲಿ ಪೋರ್ಚುಗೀಸರು ನಾಶ ಮಾಡುವ ಮೊದಲು ಇದು ಹಿಂದೂ ದೇವಾಲಯಗಳ ನೆಲೆವೀಡಾಗಿತ್ತು, ನಂತರ ‘ಅವರ್ ಲೇಡಿ ಆಫ್ ಕಾಂಪ್ಯಾಶನ್' (Our Lady of Compassion) ನಂತಹ ಬರೊಕ್ ಶೈಲಿಯ ಚರ್ಚ್‌ಗಳಿರುವ ಕ್ಯಾಥೋಲಿಕ್ ವಸಾಹತಾಗಿ ಪರಿವರ್ತನೆ ಹೊಂದಿತು.

ಈ ದ್ವೀಪವು ಇಂಡೋ-ಪೋರ್ಚುಗೀಸ್ ಶೈಲಿಯ ಮನೆಗಳು, ಭತ್ತದ ಗದ್ದೆಗಳು ಮತ್ತು ಬೊಂಡೆರಂ (ಧ್ವಜ ಉತ್ಸವ) ನಂತಹ ಸಾಂಪ್ರದಾಯಿಕ ಹಬ್ಬಗಳನ್ನು ಕಾಯ್ದಿರಿಸಿಕೊಂಡಿದೆ. ಅಕ್ಟೋಬರ್ ತಿಂಗಳಲ್ಲಿ ಕರಾವಳಿಗೆ ಭೇಟಿ ಕೊಡುವವರಿಗಿಂತ ಕಡಿಮೆ ಪ್ರವಾಸಿಗರು ಮತ್ತು ಹಚ್ಚ ಹಸಿರಿನ ಸಸ್ಯವರ್ಗವನ್ನು ಕಾಣಬಹುದು. ಪ್ರತಿದಿನವೂ ದೋಣಿಗಳ ಸೌಲಭ್ಯವಿದೆ. ಗೋವಾದ ಒಳನಾಡಿನ ಸಂಸ್ಕೃತಿ ಮತ್ತು ಭೂದೃಶ್ಯದ ನೈಜತೆಗೆ ಇದು ಸಾಕ್ಷಿಯಾಗಿದೆ.

14. ಬೇಕಲ್ ಕೋಟೆ, ಕೇರಳ

ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಬೇಕಲ್ ಕೋಟೆ ನಿರ್ಮಾಣವಾಗಿದ್ದು 17ನೇ ಶತಮಾನದ ಮಧ್ಯಭಾಗದಲ್ಲಿ. ಇದನ್ನು ನಿರ್ಮಿಸಿದ್ದು ಕೆಳದಿಯ ಶಿವಪ್ಪ ನಾಯಕ. ಇದು 40 ಎಕರೆ ಪ್ರದೇಶವನ್ನು ವ್ಯಾಪಿಸಿದ್ದು, ಕೇರಳದ ಅತಿದೊಡ್ಡ ಕೋಟೆ ಎಂಬ ಹೆಗ್ಗಳಿಕೆ. ವೀಕ್ಷಣಾ ಗೋಪುರಗಳಿಂದ ಅರಬ್ಬಿ ಸಮುದ್ರದ ವಿಸ್ಮಯವನ್ನು ಸವಿಯಬಹುದು. ಶಿವಪ್ಪ ನಾಯಕನ ನಂತರದ ಅವಧಿಯಲ್ಲಿ ಇದು ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರ ವಶವಾಯಿತು.

ಈ ಭಾಗದ ವಿಶೇಷತೆಗಳಲ್ಲಿ ಒಂದಾದ ಕೆಂಪು ಕಲ್ಲಿನಿಂದ (laterite) ಗೋಡೆಗಳನ್ನು ಕೋಟೆಯ ನಿರ್ಮಿಸಲಾಗಿದೆ. ಈ ವಿಶಿಷ್ಟ ವಿನ್ಯಾಸದ ಕೋಟೆಯಲ್ಲಿ ನೀರಿನ ಟ್ಯಾಂಕ್ ಮತ್ತು ಭೂಗತ ಮಾರ್ಗವೂ ಇದೆ. ಪುರಾತತ್ವ ಮತ್ತು ಪ್ರವಾಸೋದ್ಯಮ ಇಲಾಖೆಗಳು ಕೋಟೆಯ ಗೋಡೆಗಳನ್ನು ಬಲಪಡಿಸುವ ಕಾರ್ಯ ಕೈಗೊಂಡಿವೆ. ಮಳೆಗಾಲದ ಬಳಿಕ ಸುತ್ತಲಿನ ಹಚ್ಚಹಸಿರು ಮತ್ತು ಸಮುದ್ರದ ಹೆದ್ದೆರೆಗಳು ನಿಮ್ಮನ್ನು ಸ್ವಾಗತಿಸುತ್ತವೆ.

15. ಚಿದಂಬರಂ, ತಮಿಳುನಾಡು

 ಶಿವನನ್ನು ವಿಶ್ವ ನೃತ್ಯ ರೂಪದಲ್ಲಿ (ನಟರಾಜ) ಪೂಜಿಸುವ ಚಿದಂಬರಂನ ನಟರಾಜ ದೇವಾಲಯವು 10ನೇ ಶತಮಾನದ ಚೋಳರ ಕಾಲಕ್ಕೆ ಸೇರಿದೆ. ನಂತರದಲ್ಲಿ ಪಾಂಡ್ಯ ಮತ್ತು ವಿಜಯನಗರದ ಅರಸರ ಆಡಳಿತಕ್ಕೆ ಸೇರಿತು. ಇದರ ಚಿನ್ನದ ಹೊದಿಕೆಯ ಗರ್ಭಗುಡಿ "ಚಿದಂಬರ ರಹಸ್ಯ"ವನ್ನು ಪ್ರತಿನಿಧಿಸುತ್ತದೆ, ಅಂದರೆ ದಿವ್ಯತೆಯನ್ನು ಅಂತರಿಕ್ಷದ ರೂಪದಲ್ಲಿ ಆರಾಧಿಸುವುದು.

ಲೋಹಶಾಸ್ತ್ರ, ದೇವತಾಶಾಸ್ತ್ರ ಮತ್ತು ಚಲನೆಯನ್ನು ಸಂಯೋಜಿಸುವ ಕಂಚಿನ ನಟರಾಜ ವಿಗ್ರಹಗಳು ಇಲ್ಲಿಯೇ ಹುಟ್ಟಿಕೊಂಡವು. ಈ ದೇವಾಲಯದಲ್ಲಿ ಈಗಲೂ ವಿಶಿಷ್ಟ ಆಚರಣೆಗಳು ನಡೆಯುತ್ತಿರುತ್ತವೆ. ಅಕ್ಟೋಬರ್ ತಿಂಗಳಲ್ಲಿ ಚಳಿಗಾಲದ ಹಬ್ಬಗಳ ಋತು ಆರಂಭವಾಗುತ್ತದೆ. ಆಗ ನೃತ್ಯಗಾರರು ಮತ್ತು ಭಕ್ತರು ತೆರೆದ ಆಕಾಶದ ಅಡಿಯಲ್ಲಿ ಒಗ್ಗೂಡುತ್ತಾರೆ.

 ಹಂಪಿ, ವಿಜಯಪುರದ ಹಲವಾರು ಪಾಳುಬಿದ್ದ ದೇವಾಲಯ ಸಂಕೀರ್ಣಗಳಿಂದ ಕೂಡಿದೆ.

16. ಹಂಪಿ, ಕರ್ನಾಟಕ

ಯುನೆಸ್ಕೋ ವಿಶ್ವ ಪರಂಪರಾ ತಾಣವಾದ ಹಂಪಿ, ವಿಜಯನಗರ ಸಾಮ್ರಾಜ್ಯದ (14-16ನೇ ಶತಮಾನ) ರಾಜಧಾನಿಯಾಗಿತ್ತು. ಈ ಪ್ರದೇಶವು ತುಂಗಭದ್ರಾ ನದಿಯ ಉದ್ದಕ್ಕೂ 26 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಗ್ರಾನೈಟ್ ಬಂಡೆಗಳಲ್ಲಿ ಕೆತ್ತಿದ ದೇವಾಲಯಗಳು, ಮಾರುಕಟ್ಟೆಗಳು ಮತ್ತು ರಾಜಮನೆತನದ ಆವರಣಗಳಿಂದ ತುಂಬಿದೆ. ಇಲ್ಲಿನ ಪ್ರಮುಖ ಸ್ಮಾರಕಗಳಲ್ಲಿ ವಿರೂಪಾಕ್ಷ ದೇವಾಲಯ, ಕಲ್ಲಿನ ರಥವನ್ನು ಹೊಂದಿರುವ ವಿಠ್ಠಲ ದೇವಾಲಯ ಮತ್ತು ಕಮಲ ಮಹಲ್ ಸೇರಿವೆ. ಪುರಾತತ್ವ ಮತ್ತು ಶಾಸನಶಾಸ್ತ್ರದ ಅಧ್ಯಯನಗಳ ಪ್ರಕಾರ ಪರ್ಷಿಯಾ ಮತ್ತು ಪೋರ್ಚುಗಲ್‌ ಜೊತೆ ವ್ಯಾಪಕ ವ್ಯಾಪಾರ ಜಾಲ ಹೊಂದಿರುವುದನ್ನು ಅನಾವರಣ ಮಾಡುತ್ತವೆ.

ಅಕ್ಟೋಬರ್ ತಿಂಗಳಲ್ಲಿ ನೆಲೆಸಿರುವ ಪ್ರಕಾಶಮಾನ ಮತ್ತು ಅಷ್ಟೇನೂ ಧಗೆ ಇಲ್ಲದ ಹವಾಮಾನವು ಈ ಅತಿವಾಸ್ತವಿಕ (surreal) ಭೂದೃಶ್ಯವನ್ನು ಸುಂದರವಾಗಿ ನಮ್ಮ ಮುಂದೆ ತೆರೆದಿಡುತ್ತದೆ. ಜೆಎಸ್‌ಡಬ್ಲ್ಯು ಫೌಂಡೇಶನ್, ಸಂಗೀತಾ ಜಿಂದಾಲ್ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಹಂಪಿ ಆರ್ಟ್ ಲ್ಯಾಬ್ಸ್ ನಂತಹ ಉಪಕ್ರಮಗಳ ಮೂಲಕ ಕಲಾವಿದರಿಗೆ ಮತ್ತು ಕಲಾ ಶಿಕ್ಷಣಕ್ಕೆ ಬೆಂಬಲ ನೀಡುವ ಮೂಲಕ ಹಂಪಿಯನ್ನು ರಾಷ್ಟ್ರೀಯ ಪ್ರಜ್ಞೆಗೆ ಪಕ್ಕಾಗಿ ರೂಪಿಸಲಾಗಿದೆ. ಜೆ.ಎಸ್‌.ಡಬ್ಲ್ಯು ಟೌನ್‌-ಶಿಪ್‌ನಲ್ಲಿ 10 ಎಕರೆಗಳಷ್ಟು ವಿಸ್ತರಿಸಿರುವ ಅಂತರರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಗ್ರಾಮವಾದ ಕಲಾಂಧಾಮಕ್ಕೆ ಪರಂಪರೆಯನ್ನು ಪ್ರೀತಿಸುವ ಪ್ರತಿಯೊಬ್ಬನೂ ಭೇಟಿ ನೀಡಲೇಬೇಕಾದ ಸ್ಥಳ.

17. ಗಂಡಿಕೋಟ, ಆಂಧ್ರ ಪ್ರದೇಶ

ಕಡಪಾ ಜಿಲ್ಲೆಯ ಪೆನ್ನಾ ನದಿಯ ದಡದಲ್ಲಿರುವ ಗಂಡಿಕೋಟ ಕೋಟೆಯು ಕೆಂಪು ಗ್ರಾನೈಟ್ ಬಂಡೆಗಳ ಆಳವಾದ ಕಂದಕದ ಸಮ್ಮುಖದಲ್ಲಿದೆ. 13ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದ್ದು ಕಮ್ಮ ರಾಜರು ಮತ್ತು ನಂತರ ಕುತುಬ್ ಶಾಹಿ ಹಾಗೂ ವಿಜಯನಗರದ ಆಡಳಿತಗಾರರು ಇನ್ನಷ್ಟು ವಿಸ್ತರಿಸಿದರು, ಇದು ಪ್ರಮುಖ ದಖ್ಖನ್ ಕೋಟೆಯಾಗಿ ಕಾರ್ಯನಿರ್ವಹಿಸಿತ್ತು.

ಈ ಕಂದಕದ ರಚನೆಯು ಸಂಪೂರ್ಣವಾಗಿ ಭೂವೈಜ್ಞಾನಿಕವಾಗಿದ್ದು, ಮಿಲಿಯನ್ ಗಟ್ಟಲೆ ವರ್ಷಗಳ ನದಿ ಸವೆತದಿಂದ ಸೃಷ್ಟಿಯಾಗಿದೆ. ಆಂತರಿಕ ರಚನೆಗಳಲ್ಲಿ ಕಣಜ, ಮಸೀದಿ ಮತ್ತು ದೇವಾಲಯಗಳು ಸೇರಿವೆ. ಮಂದವಾದ ಬಿಸಿಲು ಮತ್ತು ತಿಳಿತಿಳಿ ಇಬ್ಬನಿಯ ಸಿಂಚನವಾಗುವ ಅಕ್ಟೋಬರ್‌ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ.

18. ರಾಮಪ್ಪ ಮಂದಿರ, ಪಾಲಂಪೇಟ್ ಗ್ರಾಮ, ತೆಲಂಗಾಣ

ವಾರಂಗಲ್ ಬಳಿಯ ರಾಮಪ್ಪ ದೇವಾಲಯವನ್ನು ಕ್ರಿ.ಶ. 1213ರಲ್ಲಿ ಕಾಕತೀಯ ದಂಡನಾಯಕ ರೇಚರ್ಲ ರುದ್ರ ನಿರ್ಮಿಸಿದ. 2021ರಲ್ಲಿ ಯುನೆಸ್ಕೊ ಈ ವಿಶಿಷ್ಟ ಮಂದಿರವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿತು. ಮಂದಿರದ ಇಟ್ಟಿಗೆಯ ಮೇಲಿನ ರಚನೆಯು ಭೂಕಂಪದ ಪರಿಣಾಮವನ್ನು ತಗ್ಗಿಸುವ ಹಗುರವಾದ ಸರಂಧ್ರ (ಪೋರಸ್) ವಸ್ತುವಿನಿಂದ ನಿರ್ಮಿಸಲಾಗಿದೆ. ಅದರ ಬುನಾದಿ ದಟ್ಟವಾದ ಮರಳುಗಲ್ಲಿನಿಂದ ಕೂಡಿದೆ.

ಇಲ್ಲಿನ ಮದನಿಕೆಯರ ನೃತ್ಯ ಭಂಗಿಗಳು ಉನ್ನತ ಚಲನಶೀಲ ಮನೋವೃತ್ತಿಯನ್ನು ಪ್ರದರ್ಶಿಸುತ್ತವೆ. ಈ ದೇವಾಲಯವು ರಾಮಪ್ಪ ಕೆರೆಯ ದಡದ ಮೇಲೆ ನಿಂತಿದೆ, ಇದು ಮಧ್ಯಕಾಲೀನ ಜಲ ಶಿಲ್ಪಶಾಸ್ತ್ರಕ್ಕೆ ಉದಾಹರಣೆಯಾಗಿದೆ. ಅಕ್ಟೋಬರ್‌ನ ಸ್ವಚ್ಛ ಆಕಾಶ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ವಾಸ್ತುಶಿಲ್ಪಗಳನ್ನು ತಾಳ್ನೆಯಿಂದ ವೀಕ್ಷಿಸಲು ಅನುಕೂಲ.

19. ಕೋನಾರ್ಕ್, ಒಡಿಶಾ

ಪೂರ್ವ ಗಂಗಾ ರಾಜವಂಶದ ಒಂದನೇ ರಾಜ ನರಸಿಂಹದೇವನಿಂದ ನಿರ್ಮಿಸಲ್ಪಟ್ಟ, ಕೋನಾರ್ಕ್‌ನ 13ನೇ ಶತಮಾನದ ಸೂರ್ಯ ದೇವಾಲಯವು ಏಳು ಕುದುರೆಗಳು ಚಾಲನೆ ಮಾಡುವಂತಿರುವ ಒಂದು ಬೃಹತ್ ಶಿಲಾರಥ. ಈ ದೇವಾಲಯದ ದೃಷ್ಟಿಕೋನವು ಬಂಗಾಳಕೊಲ್ಲಿಯ ಮೇಲೆ ಆಗುವ ಸೂರ್ಯೋದಯಕ್ಕೆ ತಳಕು ಹಾಕಲ್ಪಟ್ಟಿದೆ.

ಭಾಗಶಃ ಕುಸಿದಿದ್ದರೂ, ಇದು ಭಾರತದ ಕೆಲವು ಅತ್ಯಂತ ಸಂಕೀರ್ಣ ಕಳಿಂಗ ಶೈಲಿಯ ಕೆತ್ತನೆಗಳನ್ನು ಕಾಯ್ದುಕೊಂಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅದರ ಬುನಾದಿಯನ್ನು ಸ್ಥಿರಗೊಳಿಸಲು ಮರಳಿನ ತಡೆ ಮತ್ತು ಒಳಚರಂಡಿ ಅಳವಡಿಸಿದೆ. ಮುಂಗಾರು ಹಿಮ್ಮೆಟ್ಟಿದ ನಂತರ, ಡಿಸೆಂಬರ್ ನೃತ್ಯ ಉತ್ಸವದ ಜನಸಂದಣಿಗಿಂತ ಮೊದಲು ಸ್ಥಿರ ಹವಾಮಾನ ಇಲ್ಲಿರುತ್ತದೆ. ಹಾಗಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.

20. ಬಿಷ್ಣುಪುರ, ಪಶ್ಚಿಮ ಬಂಗಾಳ

ಬಂಕುರಾ ಜಿಲ್ಲೆಯಲ್ಲಿರುವ ಬಿಷ್ಣುಪುರ ಅಸ್ತಿತ್ವಕ್ಕೆ ಬಂದಿದ್ದು ಮಲ್ಲ ರಾಜರ ಆಡಳಿತದಲ್ಲಿ (17-18ನೇ ಶತಮಾನ) ಪ್ರವರ್ಧಮಾನಕ್ಕೆ ಬಂದಿತು. ವೈಷ್ಣವ ಧರ್ಮದ ಪೋಷಕರಾಗಿದ್ದ ಆಡಳಿತಗಾರರು, ಸ್ಥಳೀಯ ಕೆಂಪುಕಲ್ಲು ಮತ್ತು ಜೇಡಿಮಣ್ಣು ಬಳಸಿ ಟೆರಾಕೋಟಾ ದೇವಾಲಯಗಳನ್ನು ನಿರ್ಮಿಸಿದರು, ಇದು ಒಂದು ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಟಿಸಿತು.

ರಾಸ್ಮಂಚಾ ಮತ್ತು ಜೋರ್ ಬಾಂಗ್ಲಾದಂತಹ ದೇವಾಲಯಗಳು ಕೃಷ್ಣನ ದಂತಕಥೆಗಳು ಮತ್ತು ಸಾಮಾಜಿಕ ದೃಶ್ಯಗಳ ಉಬ್ಬುಶಿಲ್ಪಗಳಿಗೆ ಜನಪ್ರಿಯ. ಈ ಪಟ್ಟಣವು ಬಾಲುಚಾರಿ ರೇಷ್ಮೆ ನೇಯ್ಗೆ ಸಂಪ್ರದಾಯವನ್ನೂ ಸಂರಕ್ಷಿಸಿದೆ. ಅಕ್ಟೋಬರ್‌ ತಿಂಗಳ ಒಣ ಗಾಳಿ ಸೂಕ್ಷ್ಮ ಟೆರಾಕೋಟಾವನ್ನು ತೇವಾಂಶ ಹಾನಿಯಿಂದ ರಕ್ಷಿಸುತ್ತದೆ, ಇದು ಕ್ಷೇತ್ರ ಭೇಟಿ ಮತ್ತು ದಾಖಲೀಕರಣಕ್ಕೆ ಸೂಕ್ತವಾಗಿದೆ.

21. ನಳಂದಾ, ಬಿಹಾರ

ನಳಂದಾ ವಿಶ್ವವಿದ್ಯಾಲಯವು 5ನೇ ಶತಮಾನದಿಂದ 12ನೇ ಶತಮಾನದವರೆಗೆ ಪ್ರಮುಖ ಬೌದ್ಧ ಕಲಿಕಾ ಕೇಂದ್ರವಾಗಿ ಕಾರ್ಯನಿರ್ವಹಿಸಿತು, ಇಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಪುರಾತತ್ವ ಉತ್ಖನನಗಳು 23 ಹೆಕ್ಟೇರ್‌ಗಳಷ್ಟು ವಿಸ್ತೀರ್ಣದಲ್ಲಿ ಕೆಂಪು ಇಟ್ಟಿಗೆಯ ಮಠಗಳು, ಸ್ತೂಪಗಳು ಮತ್ತು ಉಪನ್ಯಾಸ ಸಭಾಂಗಣಗಳು ನೆಲೆ ನಿಂತಿವೆ.

ಈ ತಾಣವು 12ನೇ ಶತಮಾನದ ಉತ್ತರಾರ್ಧದಲ್ಲಿ ಟರ್ಕಿಕ್ ಆಕ್ರಮಣಗಳಿಂದ ನಾಶವಾಯಿತು. 19ನೇ ಶತಮಾನದಲ್ಲಿ ಇದರ ಮರುಶೋಧ ನಡೆಸಲಾಯಿತು. ಇದು ಗುಪ್ತರ ಕಾಲದ ಶಿಕ್ಷಣ ಮತ್ತು ವಾಸ್ತುಶಿಲ್ಪದ ಬಗ್ಗೆ ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ. ಅಕ್ಟೋಬರ್‌ನಲ್ಲಿ ಸುಮಾರು 28 ಡಿಗ್ರಿ ಸೆಲ್ಷಿಯಸ್ ಇರುವ ತಾಪಮಾನದ ಕಾರಣದಿಂದ ಚಳಿಗಾಲಕ್ಕೂ ಮೊದಲು ಭೇಟಿಗೆ ಸೂಕ್ತ.

22. ನೇತ್ರಹಾಟ್, ಜಾರ್ಖಂಡ್‌

ರಾಂಚಿಯಿಂದ 156 ಕಿ.ಮೀ. ಪಶ್ಚಿಮಕ್ಕೆ ಇರುವ ನೇತ್ರಹಾಟ್ ಪ್ರಸ್ಥಭೂಮಿಯು 1128 ಮೀ. ಎತ್ತರಕ್ಕಿದೆ ಮತ್ತು ಛೋಟಾನಾಗಪುರ್ ಗುಡ್ಡಗಾಡು ಪ್ರದೇಶದ ಒಂದು ಭಾಗವಾಗಿದೆ. ಬ್ರಿಟಿಷರ ಗಿರಿಧಾಮವಾಗಿ ಸ್ಥಾಪಿತವಾದ ಇದು, ವಸಾಹತುಶಾಹಿ ಯುಗದ ಬಂಗಲೆಗಳು ಮತ್ತು ಪೈನ್ ತೋಪುಗಳನ್ನು ಕಾಯ್ದುಕೊಂಡು ಬಂದಿದೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ತಾಣಗಳಿಗೆ ಹೆಸರುವಾಸಿಯಾದ ನೇತ್ರಹಾಟ್, ಇತ್ತೀಚೆಗೆ ಅರಣ್ಯ ಇಲಾಖೆಯ ಅಧೀನದಲ್ಲಿ ಪರಿಸರ-ವಸತಿ ಗೃಹಗಳನ್ನು ಅಭಿವೃದ್ಧಿಪಡಿಸಿದೆ. ಅಕ್ಟೋಬರ್‌ನಲ್ಲಿ ಹಿತವಾದ ತಾಪಮಾನ ಮತ್ತು ಮಳೆ ನಂತರದ ಹಸಿರು ಚಾಪಿಸಿರುತ್ತದೆ. ಈ ಪ್ರಸ್ಥಭೂಮಿಯು ಸಾಲ್ ಕಾಡುಗಳು ಮತ್ತು ಬೇಸಾಯವನ್ನು ಅವಲಂಬಿಸಿಕೊಂಡಿರು ಬುಡಕಟ್ಟು ವಸಾಹತುಗಳಿಗೆ ಆಧಾರವಾಗಿದೆ.

23. ಯುಕ್ಸೋಮ್, ಸಿಕ್ಕಿಂ

1642ರಲ್ಲಿ ಸ್ಥಾಪನೆಯಾದ ಯುಕ್ಸೋಮ್ ಸಿಕ್ಕಿಂನ ಮೊದಲ ರಾಜಧಾನಿ ಮತ್ತು ಅದರ ಚೋಗ್ಯಲ್ (ರಾಜ)ನ ಪಟ್ಟಾಭಿಷೇಕದ ತಾಣವಾಗಿತ್ತು. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಾಂಗ್‌ಚೆಂಡ್‌ಝೋಂಗಾ ರಾಷ್ಟ್ರೀಯ ಉದ್ಯಾನವನದ ಒಳಗೆ ಹಾಗೂ ಕಾಂಚನಜುಂಗಾ ಪರ್ವತದ ತಳ ಭಾಗದಲ್ಲಿದೆ.

ನೋರ್ಬುಗಾಂಗ್ ಚೋರ್ಟೆನ್ ಮತ್ತು ದುಬ್ಡಿ ಮಠ (1701) ಸಿಕ್ಕಿಂ ಬೌದ್ಧಧರ್ಮದ ಮೂಲವನ್ನು ಗುರುತಿಸುತ್ತವೆ. ಈ ಪ್ರದೇಶವು ಝೊಂಗ್ರಿ-ಗೋಚ ಲಾ ಟ್ರೆಕ್ಗೆ ಆರಂಭದ ಹಂತವಾಗಿದೆ. ಅಕ್ಟೋಬರ್‌ನಲ್ಲಿ ಚಳಿಗಾಲದ ಮೊದಲು ಹಿಮದ ಶಿಖರಗಳ ಸ್ಪಷ್ಟ ನೋಟಗಳು ಲಭ್ಯ.

24. ಜಿರೋ ಕಣಿವೆ, ಅರುಣಾಚಲ ಪ್ರದೇಶ

ಕೆಳ ಸುಬನ್ಸಿರಿ ಜಿಲ್ಲೆಯಲ್ಲಿ 1,500 ಮೀಟರ್ ಎತ್ತರದಲ್ಲಿರುವ ಜಿರೋ ಕಣಿವೆಯು, ಆಪತನಿ ಬುಡಕಟ್ಟಿನ ನೆಲೆ. ಈ ಬುಡಕಟ್ಟು ಜನಾಂಗವು ಜಾನುವಾರುಗಳ ನೆರವಿಲ್ಲದೆ, ನೀರಿನೊಂದಿಗೆ ಭತ್ತದ ಕೃಷಿ ಮತ್ತು ಸೂಕ್ತ ನೀರಾವರಿ ಕಾಲುವೆಗಳ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಈ ಕಣಿವೆಯ ಗದ್ದೆಗಳು ಮತ್ತು ಬಿದಿರಿನ ಮನೆಗಳನ್ನು ಯುನೆಸ್ಕೋ ಸಾಂಸ್ಕೃತಿಕ ಭೂದೃಶ್ಯಗಳು ಎಂದು ಪಟ್ಟಿಮಾಡಿದೆ.

ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯುವ ಜಿರೋ ಸಂಗೀತ ಉತ್ಸವವು ಮುಗಿದ ನಂತರ ಅಕ್ಟೋಬರ್‌ನಲ್ಲಿ ಇಲ್ಲಿ ಶಾಂತ ವಾತಾವರಣ ನೆಲೆಸಿರುತ್ತದೆ ಮತ್ತು ಗದ್ದೆಗಳು ಚಿನ್ನದ ಬಣ್ಣಕ್ಕೆ ತಿರುಗುತ್ತವೆ. ಈ ಪ್ರದೇಶದ ಜೀವವೈವಿಧ್ಯದಲ್ಲಿ ಹಾರ್ನ್‌ಬಿಲ್‌ಗಳು ಮತ್ತು ಆರ್ಕಿಡ್‌ಗಳು ಸೇರಿವೆ, ಮತ್ತು ಇಲ್ಲಿನ ಸಮಶೀತೋಷ್ಣ ಹವಾಮಾನವು ವರ್ಷಪೂರ್ತಿ ವಾಸಕ್ಕೆ ಯೋಗ್ಯ.

ಲಿವಿಂಗ್ ರೂಟ್ ಬ್ರಿಡ್ಜ್‌ಗಳು, ನಾಂಗ್ರಿಯಾಟ್ ಗ್ರಾಮ, ಮೇಘಾಲಯ.

25. ಜೀವಂತ ಬೇರಿನ ಸೇತುವೆಗಳು, ಮೇಘಾಲಯ; ಖಾಸಿ ಮತ್ತು ಜೈಂತಿಯಾ ಸಮುದಾಯಗಳು ಈ ಸೇತುವೆಗಳನ್ನು ಫೈಕಸ್ ಎಲಾಸ್ಟಿಕಾ (Ficus elastica) ಮರದ ಮೇಲ್ಭಾಗದ ಬೇರುಗಳನ್ನು ಬಳಸಿ ನಿರ್ಮಿಸಿದ್ದಾರೆ. ಇವು ಬೆಳೆಯಲು ದಶಕಗಳು ಬೇಕಾಗುತ್ತವೆ ಮತ್ತು 500 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಇದಕ್ಕೆ ನಾಂಗ್ರಿಯಾಟ್ (Nongriat) ಮತ್ತು ಮಾವ್ಲಿನ್ನಾಂಗ್‌ನಲ್ಲಿ (Mawlynnong) ಅತ್ಯಂತ ಬಲಿಷ್ಠ ಉದಾಹರಣೆಗಳಿವೆ, ಇದರಲ್ಲಿ ಡಬಲ್-ಡೆಕ್ಕರ್ ಉಮ್‌ಶಿಯಾಂಗ್ ಸೇತುವೆ ಕೂಡ ಸೇರಿದೆ.

ಇದು ಸಾಂಪ್ರದಾಯಿಕ ಪರಿಸರ ಜ್ಞಾನ ಮತ್ತು ಸುಸ್ಥಿರ ಎಂಜಿನಿಯರಿಂಗ್‌ ಗೆ ಸಾಕ್ಷಿ. ಯುನೆಸ್ಕೋದಿಂದ ಸಂಭಾವ್ಯ ಪರಂಪರೆಯ ಸ್ಥಾನಮಾನಕ್ಕಾಗಿ ಮಾನ್ಯತೆ ಪಡೆದಿರುವ ಈ ರಚನೆಗಳು ಕಾಲಾನಂತರದಲ್ಲಿ ತಮ್ಮಷ್ಟಕ್ಕೆ ತಾವೇ ಗಟ್ಟಿಯಾಗುತ್ತವೆ. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಪ್ರವಾಹ ಕಡಿಮೆಯಾದ ನಂತರ, ಅಕ್ಟೋಬರ್‌ನ ಮಳೆ ಇವುಗಳನ್ನು ಹಚ್ಚಹಸಿರಾಗಿಸಿ ಮತ್ತು ಬಳಸಲು ಯೋಗ್ಯವಾಗಿ ಮಾಡುತ್ತದೆ.

26. ಖೊನೋಮಾ ಗ್ರಾಮ, ನಾಗಾಲ್ಯಾಂಡ್; ಕೊಹಿಮಾದಿಂದ 20 ಕಿ.ಮೀ ದೂರದಲ್ಲಿರುವ ಖೊನೋಮಾವನ್ನು ಏಷ್ಯಾದ ಮೊದಲ "ಹಸಿರು ಗ್ರಾಮ" ಎಂದು ಪರಿಗಣಿಸಲಾಗಿದೆ. ದಶಕಗಳ ಅರಣ್ಯನಾಶದ ನಂತರ ಜೀವವೈವಿಧ್ಯವನ್ನು ಮರುಸ್ಥಾಪಿಸಲು, 1990ರ ದಶಕದಲ್ಲಿ ಸ್ಥಳೀಯ ಹಿರೀಕರು ಇಲ್ಲಿ ಬೇಟೆಯನ್ನು ನಿಷೇಧಿಸಿದರು. ಇಂದು, ಖೊನೋಮಾ ಪ್ರಕೃತಿ ಸಂರಕ್ಷಣೆ ಮತ್ತು ಟ್ರಾಗೋಪಾನ್ ಅಭಯಾರಣ್ಯವು 20 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡಿದೆ.

ಐತಿಹಾಸಿಕವಾಗಿ, ಇದು 1879ರ ಆಂಗ್ಲೋ-ನಾಗಾ ಸಂಘರ್ಷದ ತಾಣವಾಗಿತ್ತು. ಮೆಟ್ಟಿಲು ಸಾಗುವಳಿ (Terraced cultivation) ಮತ್ತು ಆಲ್ಡರ್-ಆಧಾರಿತ ಕೃಷಿ ಅರಣ್ಯ ಪದ್ಧತಿ ಇಲ್ಲಿಯ ಆರ್ಥಿಕತೆಗೆ ಪೂರಕ. ಮುಂಗಾರು ಮುಗಿದು ಅಕ್ಟೋಬರ್ ತಿಂಗಳಲ್ಲಿ ಅರಳುವ ಕಾಡು ಹೂವುಗಳು ಮತ್ತು ಹಾರ್ನ್‌ಬಿಲ್ ಉತ್ಸವದ ಸಿದ್ಧತೆಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರುತ್ತವೆ.

27. ಲೋಕ್ತಕ್ ಸರೋವರ, ಮಣಿಪುರ: ಮೊಯಿರಾಂಗ್ ಬಳಿಯಿರುವ ಲೋಕ್ತಕ್, ಈಶಾನ್ಯ ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ. ಇದು ಫುಮ್ಡಿಸ್ – ತೇಲುವ ಸಸ್ಯ ಮತ್ತು ಮಣ್ಣಿನ ಹಾಸುಗಳಿಗೆ – ಪ್ರಸಿದ್ಧವಾಗಿದೆ. ಒಂದು ಫುಮ್ಡಿ ಮೇಲೆ ಇರುವ ಕೀಬುಲ್ ಲಾಂಜಾವೊ ರಾಷ್ಟ್ರೀಯ ಉದ್ಯಾನವನವು ವಿಶ್ವದ ಏಕೈಕ ತೇಲುವ ವನ್ಯಜೀವಿ ಧಾಮವಾಗಿದೆ. ಅಳಿವಿನಂಚಿನಲ್ಲಿರುವ ಸಂಗೈ ಜಿಂಕೆಗಳ ಆವಾಸಸ್ಥಾನ.

ಈ ಸರೋವರವು ಮೀನುಗಾರಿಕೆ ಮತ್ತು ನೀರಾವರಿಯ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರವಾಗಿದೆ. ಆದಾಗ್ಯೂ, ಇಥಾಯ್ ಅಣೆಕಟ್ಟಿನಿಂದಾದ ಜಲವಿಜ್ಞಾನದ ಬದಲಾವಣೆಗಳು ಇದರ ಪರಿಸರ ವ್ಯವಸ್ಥೆಯನ್ನು ಮಾರ್ಪಡಿಸಿವೆ. ಮಳೆ ಮುಗಿದ ನಂತರ ಅಕ್ಟೋಬರ್‌ನಲ್ಲಿ ನೀರಿನ ಮಟ್ಟ ಸ್ಥಿರಗೊಳ್ಳುತ್ತದೆ, ಇದು ಸಂಶೋಧನೆ ಮತ್ತು ದೋಣಿ ವಿಹಾರಕ್ಕೆ ಸೂಕ್ತ ಸಮಯವಾಗಿದೆ.

28. ಮಾಜುಲಿ, ಅಸ್ಸಾಂ: ಬ್ರಹ್ಮಪುತ್ರದ ಜಾಲರಿಯಂತಹ ಕಾಲುವೆಗಳಿಂದ ರೂಪುಗೊಂಡ ಮಾಜುಲಿಯು ವಿಶ್ವದ ಅತಿದೊಡ್ಡ ಜನವಸತಿಯ ನದಿದ್ವೀಪ. (ಸುಮಾರು 352 ಚದರ ಕಿ.ಮೀ). ಇದು 15ನೇ ಶತಮಾನದಲ್ಲಿ ಶ್ರೀಮಂತ ಶಂಕರದೇವರು ಸ್ಥಾಪಿಸಿದ ಅಸ್ಸಾಮೀಸ್ ನವ-ವೈಷ್ಣವ ಧರ್ಮದ ಸಾಂಸ್ಕೃತಿಕ ಕೇಂದ್ರವಾಗಿದ್ದು, 22 ಸತ್ರಗಳಿಗೆ (satras) ಆಶ್ರಯ ನೀಡಿದೆ.

ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುವ ನದಿ ಸವೆತವು ಇದರ ಪ್ರದೇಶವನ್ನು ಕುಗ್ಗಿಸುತ್ತಿದ್ದು, ವಾಸಸ್ಥಾನಕ್ಕೆ ಅಪಾಯಕಾರಿಯಾಗಿದೆ. ಅಕ್ಟೋಬರ್ ತಿಂಗಳು ಪ್ರವಾಹ ಋತುವಿನ ಅಂತ್ಯ ಮತ್ತು ಕೃಷ್ಣನನ್ನು ಕೊಂಡಾಡುವ ರಾಸ್ ಉತ್ಸವದ ಸಿದ್ಧತೆಗಳನ್ನು ಸೂಚಿಸುತ್ತದೆ. ದ್ವೀಪದ ಕಲೆ, ರಂಗಭೂಮಿ ಮತ್ತು ಪರಿಸರ ವಿಜ್ಞಾನದ ಮಿಶ್ರಣದಿಂದ ಇದನ್ನು ಭಾರತದ ಅತ್ಯಂತ ಸಂಕೀರ್ಣವಾದ ಸಜೀವ ಸಾಂಸ್ಕೃತಿಕ ಭೂದೃಶ್ಯಗಳಲ್ಲಿ ಒಂದನ್ನಾಗಿ ಮಾಡಿದೆ.

Tags:    

Similar News