Save Lalbagh| ಸಾಧಕ-ಬಾಧಕ ಪರಿಶೀಲಿಸದ ಸುರಂಗ ರಸ್ತೆ ಬೆಂಗಳೂರಿಗೆ ಬೇಕೆ?, ಯೋಜನೆ ಅನುಷ್ಠಾನಕ್ಕೆ ಆತುರವೇಕೆ?

ಸುರಂಗದ ತ್ಯಾಜ್ಯ ದೊಡ್ಡ ಸಮಸ್ಯೆಯಾಗಲಿದೆ, ಕಲ್ಲು ಬಂಡೆಗಳು, ಮಣ್ಣು ಇತ್ಯಾದಿಯನ್ನು ವಿಲೇವಾರಿ ಮಾಡುವಾಗ ಅಕ್ಕಪಕ್ಕದ ರಸ್ತೆಗಳೂ ಹಾಳಾಗಲಿವೆ. ಸಂಚಾರ ದಟ್ಟಣೆಯೂ ಹೆಚ್ಚಾಗಲಿದೆ.

Update: 2025-10-27 03:30 GMT

ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ (ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ) ಇಲಾಖೆ ಅನುಮತಿ, ಪರಿಸರ ಪರಿಣಾಮ ಮೌಲ್ಯಮಾಪನ(EIA) ಹಾಗೂ ಸಾರ್ವಜನಿಕರ ಅಹವಾಲು ಸಭೆ ನಡೆಸದೇ ಲಾಲ್ ಬಾಗ್ ಪ್ರದೇಶದಲ್ಲಿ ಸುರಂಗ ರಸ್ತೆ ಯೋಜನೆ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಯೋಜನೆ ಕುರಿತು ಸಾಧಕ-ಬಾಧಕ ಪರಿಶೀಲಿಸದೇ ಅನುಷ್ಠಾನಕ್ಕೆ ಆತುರ ಪಡುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಕರ್ನಾಟಕ ಉದ್ಯಾನ ಸಂರಕ್ಷಣೆ ಕಾಯ್ದೆ 1975 ರ ಪ್ರಕಾರ ಉದ್ಯಾನಗಳಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳುವಂತಿಲ್ಲ. ಹೀಗಿರುವಾಗ ಟನಲ್ ರಸ್ತೆ ಯೋಜನೆಯಿಂದ ನಿಯಮ ಉಲ್ಲಂಘನೆ ಆಗುವುದಿಲ್ಲವೇ, 3 ಶತಕೋಟಿ ವರ್ಷಗಳ ಹಳೆಯ ಬಂಡೆಯ ಕೆಳಗೆ ಸುರಂಗ ನಿರ್ಮಿಸಿದರೆ ಸ್ಮಾರಕ ಸಂರಕ್ಷಣೆಗೆ ಅರ್ಥವಿದೆಯೇ ಎಂದು ಪ್ರಸ್ನಿಸುತ್ತಾರೆ ಬೆಂಗಳೂರಿನ ಸಿಟಿಜನ್ ಫಾರ್ ಸಿಟಿಜನ್ (ಸಿ4ಸಿ) ಸಂಸ್ಥಾಪಕ ಹಾಗೂ ನಗರ ತಜ್ಞ ರಾಜಕುಮಾರ್ ದುಗಾರ್.

'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನಲ್ಲಿ ಲಾಲ್ ಬಾಗ್ ಸಮೀಪ ಟನಲ್ ನಿರ್ಮಾಣ ಯೋಜನೆಯಿಂದ ಎದುರಾಗುವ ಆತಂಕ, ಅಪಾಯಗಳ ಕುರಿತು ವಿವರಿಸಿದ್ದಾರೆ. ಅವರ ಸಂದರ್ಶನದ ಸಾರ ಇಲ್ಲಿದೆ.

ಯೋಜನೆಗೆ ಅಡ್ಡಿ ಆತಂಕಗಳೇ ಹೆಚ್ಚು

ಟನಲ್ ರಸ್ತೆಯಲ್ಲಿ ಸಾಗುವ ಮಾರ್ಗ ಮಧ್ಯೆ ಲಾಲ್ ಬಾಗ್ ಬಂಡೆಯಿದೆ. ಇದು 3 ಶತಕೋಟಿ ವರ್ಷಗಳ ಹಳೆಯ ಬಂಡೆ. ಉದ್ದೇಶಿತ ಡಿಪಿಆರ್ (ವಿಸ್ತೃತ ಯೋಜನಾ ವರದಿ) ನಲ್ಲಿ ಸುರಂಗ ಕೊರೆಯುವ ಪ್ರಸ್ತಾಪವಿದೆ. ಟನಲ್ ರಸ್ತೆ ಯೋಜನೆಯಿಂದ ಇಲ್ಲಿನ ಪರಿಸರ ವ್ಯವಸ್ಥೆ ಹಾಳಾಗಲಿದೆ. ಸುರಂಗದ ತ್ಯಾಜ್ಯ ದೊಡ್ಡ ಸಮಸ್ಯೆಯಾಗಲಿದೆ, ಕಲ್ಲು ಬಂಡೆಗಳು, ಮಣ್ಣು ಇತ್ಯಾದಿಯನ್ನು ವಿಲೇವಾರಿ ಮಾಡುವಾಗ ಅಕ್ಕಪಕ್ಕದ ರಸ್ತೆಗಳೂ ಹಾಳಾಗಲಿವೆ. ಸಂಚಾರ ದಟ್ಟಣೆಯೂ ಹೆಚ್ಚಾಗಲಿದೆ. ಯೋಜನೆ ವಿಳಂಬದಿಂದ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ. ಇನ್ನು ಟನಲ್ ರಸ್ತೆಯ ಸಮೀಪವೇ ಮೆಟ್ರೋ ಯೋಜನೆ ಮಾರ್ಗ ಇರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದ್ದಾರೆ. 

ನೀರು, ಮಣ್ಣು ಕಲುಷಿತ ಭೀತಿ

ಟನಲ್ ಕೊರೆಯುವ ಯಂತ್ರಕ್ಕೆ (ಟಿಬಿಎಂ) ಬೆಂಟೋನೈಟ್ ಸ್ಲರಿ ಬಳಸಲಾಗುತ್ತದೆ. ಬೆಂಟೋನೈಟ್ ಸ್ಲರಿಯನ್ನು ಸರಿಯಾಗಿ ನಿರ್ವಹಿಸದೇ ಹೋದರೆ ಮಣ್ಣು ಹಾಗೂ ನೀರು ಕಲುಷಿತವಾಗಲಿವೆ.

ಟಿಬಿಎಂ ಯಂತ್ರವು ಭೂಮಿಯನ್ನು ಕೊರೆಯುವ ಸಂದರ್ಭದಲ್ಲಿ ಕಟ್ಟಡಗಳು ಕಂಪಿಸುವ ಸಾಧ್ಯತೆ ಇರಲಿದೆ. ಟನಲ್ ಮಾರ್ಗದಲ್ಲಿರುವ ಬಹುಮಹಡಿ ಕಟ್ಟಡಗಳು ಸುಮಾರು 50 ಅಡಿ ಆಳದವರೆಗೆ (ಮಹಡಿಗಳ ಆಧಾರದ ಮೇಲೆ ತಳಪಾಯ ಆಳ ನಿರ್ಧಾರವಾಗಲಿದೆ) ಅಡಿಪಾಯ ಹಾಕಲಿವೆ. ಇಂತಹ ಸ್ಥಳಗಳಲ್ಲಿ ಟಿಬಿಎಂ ಯಂತ್ರಗಳು ಟನಲ್ ಕೊರೆಯುವುದರಿಂದ ಅಡಿಪಾಯ ಸಡಿಲವಾಗಿ ಅಪಾಯ ಉಂಟಾಗುವ ಸಾಧ್ಯತೆಗಳಿರಲಿವೆ ಎಂಬ ಆತಂಕ ಕಾಡುತ್ತಿದೆ.

ಲಾಲ್ ಬಾಗ್ ಬಂಡೆಯ ಕೆಳಗೆ ಟನಲ್ ರಸ್ತೆ

ಲಾಲ್ ಬಾಗ್ ಉದ್ಯಾನದ ಪೆನಿನ್ಸುಲರ್  ಬಂಡೆಯ ಕೆಳಗೆ ಎರಡು ಟನಲ್ ಗಳ ಜತೆಗೆ ಎರಡು ರ‍್ಯಾಂಪ್ ನಿರ್ಮಿಸಲಾಗುತ್ತದೆ. ಲಾಲ್ ಬಾಗ್ ಸಮೀಪದ ಸಿದ್ದಾಪುರ ರಸ್ತೆಯ ಮೂಲಕ ಟನಲ್ ರಸ್ತೆ ಸಾಗಲಿದೆ. ಅಶೋಕ ಪಿಲ್ಲರ್ ನಲ್ಲಿ ಪ್ರವೇಶ ಕಲ್ಪಿಸಿದರೆ, ಮರಿಗೌಡ ರಸ್ತೆಯಲ್ಲಿ ನಿರ್ಗಮನ ಹಾದಿ ನಿರ್ಮಿಸಲಾಗುವುದು.

ಲಾಲ್ ಬಾಗ್ ಬಂಡೆಯ ಕೆಳಗೆ 16 ಮೀಟರ್ ವ್ಯಾಸದ ರಂಧ್ರ ಹಾಗೂ 10 ಮೀಟರ್ ವ್ಯಾಸದ ರ‍್ಯಾಂಪ್ ನಿರ್ಮಿಸಿದರೆ ಸಮಸ್ಯೆಯಾಗಲಿದೆ ಎಂದು ರಾಜಕುಮಾರ್ ದುಗಾರ್ ಆತಂಕ ವ್ಯಕ್ತಪಡಿಸಿದರು.

ಟನಲ್ ನಿರ್ಮಾಣಕ್ಕೆ ಆರು ಎಕರೆ ಜಾಗ ಬಳಸಲಾಗುತ್ತಿದೆ. ಸುರಂಗದಲ್ಲಿ ವಾಹನಗಳ ಹೊಗೆ ಹೊರಹಾಕಿ, ಆಮ್ಲಜನಕ ಪೂರೈಸಲು ಚಿಮಣಿ ವ್ಯವಸ್ಥೆ ನಿರ್ಮಾಣ ಮಾಡಲಾಗುವುದು. ಇದನ್ನು ಸುಮಾರು 100 ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವುದು. ಇದರಲ್ಲಿ ಕಂಟ್ರೋಲ್ ಸಿಸ್ಟಮ್, ಲಿಫ್ಟ್, ವಾಟರ್ ಸ್ಟೋರೇಜ್, ಕಮರ್ಷಿಯಲ್ ಸ್ಪೇಸ್ ಹಾಗೂ ಆಟೊ, ಕ್ಯಾಬ್ ನಿಲ್ದಾಣ ಕಲ್ಪಿಸಲು ನಿರ್ಧರಿಸಲಾಗಿದೆ.

ಬಂಡೆಯ ಕೆಳಗೆ ಏನೆಲ್ಲಾ ಇದೆ ಎಂಬುದೇ ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಅಧ್ಯಯನವೂ ನಡೆಸಿಲ್ಲ. ಆಕಸ್ಮಾತ್ ಬಂಡೆಯ ಕೆಳಗೆ ಬಿರುಕಿದ್ದರೆ ಅಥವಾ ಡೈಕ್( ಲಾವಾ ಸಂಗ್ರಹ ಸ್ಥಳ) ಇದ್ದರೆ ಸಮಸ್ಯೆ ಆಗಬಹುದು ಎಂಬುದನ್ನು ಭೂವಿಜ್ಞಾನಿಗಳೆ ಹೇಳುತ್ತಾರೆ.

16.7ಕಿ.ಮೀ. ಉದ್ದದ ಸುರಂಗ, 18 ಕಿ.ಮೀ. ಉದ್ದದ ರ‍್ಯಾಂಪ್ ಮಾರ್ಗದಲ್ಲಿ ಹೆಬ್ಬಾಳ ಕೆರೆ, ನಾಗವಾರ ಕೆರೆ, ಸ್ಯಾಂಕಿ ಕೆರೆ, ಅರಮನೆ ಮೈದಾನದ ಕೆರೆ, ಲಾಲ್ ಬಾಗ್ ಕೆರೆ ಹಾಗೂ ಬೆಳ್ಳಂದೂರು ಕೆರೆಯಲ್ಲಿ ಬರಲಿವೆ. ಸಾವಿರಾರು ಕೊಳವೆಬಾವಿಗಳಿಗೆ ಇವೆ. ಟನಲ್ ರಸ್ತೆಯಿಂದ ಜಲಮೂಲಗಳಿಗೆ ತೊಂದರೆ ಆಗುವ ಸಾಧ್ಯತೆಯೂ ಇದೆ ಎಂಬುದು ರಾಜಕುಮಾರ್ ದುಗಾರ್ ಕಳವಳವಾಗಿದೆ.

ಲಾಲ್ ಬಾಗ್ ನಲ್ಲಿರುವ ಪೆನಿನ್ಸುಲರ್ ಬಂಡೆಯು ಎಂ.ಎಂ. ಹಿಲ್ಸ್, ಕನಕಪುರ, ಬೆಂಗಳೂರು, ಬಳ್ಳಾರಿವರೆಗೂ ಹರಡಿದೆ. ಇಲ್ಲಿ ಬಂಡೆಯ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಭೂ ಕಂಪನಗಳು ಸಂಭವಿಸಿದರೂ ಅದನ್ನು ಬಂಡೆಗಲ್ಲು ತಡೆಯುತ್ತದೆ. ಟನಲ್ ರಸ್ತೆಯಿಂದ ಬಂಡೆಗಲ್ಲಿಗೆ ಹಾನಿಯಾದರೆ ಸಮಸ್ಯೆಗಳು ಎದುರಾಗುವ ಅಪಾಯವಿದೆ.  

ಲಾಲ್ ಬಾಗ್ ಹಾಗೂ ಇತರೆ ಸ್ಥಳಗಳಲ್ಲಿ ಟನಲ್ ರಸ್ತೆಗಾಗಿ ಗಿಡ ಮರಗಳನ್ನು ಕಡೆಯಲಾಗುತ್ತದೆ. ಭೂಮಿ ಶಿಥಿಲವಾಗಲಿದೆ. ಟನಲ್ ರಸ್ತೆಯಿಂದ ಸಸ್ಯೋದ್ಯಾನದ ಸ್ವರೂಪವೇ ಬದಲಾಗಲಿದೆ. ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಿದರು.

188 ಜಾತಿಯ ಪಕ್ಷಿಗಳಿಗೂ ತೊಂದರೆ

ಲಾಲ್ ಬಾಗ್ ನಲ್ಲಿ ಸುಮಾರು 188 ಜಾತಿಯ ಪಕ್ಷಿಗಳ ಪ್ರಬೇಧವಿದೆ. ಟನಲ್ ರಸ್ತೆ ನಿರ್ಮಾಣದಿಂದ ಪಕ್ಷಿ ಸಂಕುಲಕ್ಕೆ ಹಾನಿಯಾಗುವ ಆತಂಕವಿದೆ. ಕೆಲ ಅಪರೂಪದ ಪ್ರಬೇಧಗಳು ಇಲ್ಲಿಂದ ವಲಸೆ ಹೋಗುವ ಸಾಧ್ಯತೆಯೂ ಇದೆ.

ದೊಡ್ಡ ಯಂತ್ರಗಳ ಶಬ್ದ, ವಾಹನಗಳ ಸಂಚಾರದಿಂದ ಪಕ್ಷಿಗಳಿಗೆ ತೊಂದರೆಯಾಗಲಿದೆ. ಬಟಾನಿಕ್ ಗಾರ್ಡನ್‌ಗೆ ಕುತ್ತು ಬರಲಿದೆ. ಯೋಜನೆಗೆ ಜಿಎಸ್ಐ, ಬಿಎಂಎಲ್ ಟಿಎ(ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ), ಡಿಯುಎಲ್ ಟಿ ( ನಗರ ಭೂಸಾರಿಗೆ ನಿರ್ದೇಶನಾಲಯ) ಅನುಮತಿ ಪಡೆದಿಲ್ಲ. ಯೋಜನೆ ಕಾರ್ಯಸಾಧುವಲ್ಲ ಎಂದು ತಜ್ಞರ ಸಮಿತಿ ವರದಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರ್ಯಾಯ ಮಾರ್ಗಗಳಿದ್ದರೂ ಯಾವುದನ್ನೂ ಬಳಸಿಕೊಂಡಿಲ್ಲ ಎಂಬುದು ನಗರ ತಜ್ಞರ ಆರೋಪವಾಗಿದೆ.

ಯೋಜನೆ ರದ್ದು ಮಾಡುವುದು ಕಷ್ಟ

ಟನಲ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ. ವಿನ್ಯಾಸವನ್ನೂ ಮಾಡಲಾಗಿದೆ. ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ, ಮಾರ್ಗ ಬದಲಿಸಲು ಸಾಧ್ಯವಾಗದು. ಒಂದು ವೇಳೆ ಮಾರ್ಗ ಬದಲಾವಣೆ ಮಾಡಬೇಕಾದರೆ ಇಡೀ ಯೋಜನೆಯನ್ನೇ ಬದಲಾಯಿಸಬೇಕಾಗುತ್ತದೆ. ಹೊಸದಾಗಿ ಡಿಪಿಆರ್ ಮಾಡಬೇಕಾಗುತ್ತದೆ. ಈ ಕಸರತ್ತು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ಅವಧಿಯಲ್ಲಿ ಬೇರೆ ಯೋಜನೆಯನ್ನೇ ಮಾಡಬಹುದು ಎಂದು ಅಭಿಪ್ರಾಯಪಟ್ಟರು.

ಯೋಜನೆಗೆ ಎತ್ತಿರುವ ಆಕ್ಷೇಪಗಳಿಗೆ ಸರ್ಕಾರದ ಯಾರೊಬ್ಬರು ಉತ್ತರ ನೀಡಿಲ್ಲ. ಸಾರ್ವಜನಿಕರ ಸಲಹೆಯನ್ನೂ ಪಡೆದಿಲ್ಲ. ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದ ಜನರಲ್ಲಿ ಯೋಜನೆ ಬಗ್ಗೆ ವಿಶ್ವಾಸ ಮೂಡಿಲ್ಲ.  

ಸಿವಿಕ್ ಬೆಂಗಳೂರು ಸಂಘಟನೆಯಿಂದ ಡಿಸಿಎಂ ಅವರಿಗೆ ಪತ್ರ ಬರೆದು ವರ್ಷವಾದರೂ ಈವರೆಗೆ ಉತ್ತರ ಬಂದಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಆಗಿಲ್ಲ. ಟನಲ್ ರಸ್ತೆಯಲ್ಲಿ ಅಧಿಕ ಟೋಲ್ ಶುಲ್ಕದಿಂದ ಕ್ಯಾಬ್ ಮಾಲೀಕರಿಗೆ ಹೊರೆಯಾಗಲಿದೆ ಎಂದು ರಾಜಕುಮಾರ್ ದುಗಾರ್ ದೂರಿದರು.

ಅನ್ಯ ಪರಿಹಾರಗಳೇನು?

ಕಳೆದ 25 ವರ್ಷಗಳಲ್ಲಿ ವಾಹನಗಳ ಸಂಖ್ಯೆ ಅತಿ ಹೆಚ್ಚಿದೆ. 1.2 ಕೋಟಿ ವಾಹನಗಳು ಸಂಚರಿಸುತ್ತಿವೆ. ಅವುಗಳ ನಿಯಂತ್ರಣ ಸಾಧ್ಯವಾಗಿಲ್ಲ. ಬಿಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೇರೆ ಕಡೆ ಸಂಪರ್ಕ ವ್ಯವಸ್ಥೆ ಸುಧಾರಿಸಿದರೆ ಹೆಚ್ಚು ಅನುಕೂಲವಾಗಲಿದೆ.

ರಸ್ತೆ ಗುಂಡಿ, ಪುಟ್ ಪಾತ್ ಸರಿಯಾಗಿ ಮಾಡುತ್ತಿಲ್ಲ. ಸಾಕಷ್ಟು ಕಡೆ ಒತ್ತುವರಿಯಾಗಿದೆ. ವಾಕೆಬಿಲಿಟಿ ಆಗುತ್ತಿಲ್ಲ. ಚರಂಡಿ, ವಿದ್ಯುತ್ ದೀಪ ಹಾಳಾಗಿದೆ. ಕಸದ ಸಮಸ್ಯೆ ಇದೆ. ಸಬ್ ಅರ್ಬನ್ ಕಾರ್ಯ ಮುಗಿಸಬೇಕು. ಸಣ್ಣ ಬಸ್ ಗಳನ್ನು ಒದಗಿಸುವುದರಿಂದ ಚಿಕ್ಕ ದಾರಿಗಳಲ್ಲಿಯೂ ಸಂಚಾರ ಸುಲಭವಾಗಲಿದೆ. 5-6 ಸಾವಿರ ಬಸ್ ಗಳನ್ನು ಪೂರೈಸಬೇಕಾಗಿದೆ. ಮೆಟ್ರೋ ಫೀಡರ್ ಸೇವೆ ಹೆಚ್ಚಿಸಬೇಕು. ಇದರಿಂದ ದಟ್ಟಣೆ ಕಡಿಮೆಯಾಗಲಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ಲಾಲ್ ಬಾಗ್ ಬಂಡೆಯ ಕೆಳಗೆ, ಅಕ್ಕಪಕ್ಕದಲ್ಲಾದರೂ ಟನಲ್ ರಸ್ತೆ ಸಾಗಿದರೆ ಸಂರಕ್ಷಿತ ಪ್ರದೇಶಕ್ಕೆ ಹಾನಿಯಾಗಲಿದೆ. ಮರಗಿಡ, ಪ್ರಾಣಿ ಪಕ್ಷಿ ಕೆರೆಗೆ ತೊಂದರೆಯಾಗಲಿದೆ. ಲಾಲ್ ಬಾಗ್ ನೊಂದಿಗೆ ನಡಿಗೆದಾರರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

( ಟನಲ್ ರಸ್ತೆ ಯೋಜನೆ ಕುರಿತ ರಾಜಕುಮಾರ್ ದುಗಾರ್ ಅವರ ಸಂದರ್ಶನ ಉಳಿದ ಭಾಗ ಮುಂದಿನ ಸರಣಿಯಲ್ಲಿ ಪ್ರಕಟವಾಗಲಿದೆ)

Tags:    

Similar News