ಗಾಂಧಿನಗರದಲ್ಲೇ 11,200 ನಕಲಿ ಮತದಾರರು: ದಿನೇಶ್ ಗುಂಡೂರಾವ್ ಆರೋಪ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ 'ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ'ಕ್ಕೆ ಭಾನುವಾರ ಬೆಂಗಳೂರಿನ ಸನ್‌ರೈಸ್ ವೃತ್ತದಲ್ಲಿ ಚಾಲನೆ ನೀಡಿದ ವೇಳೆ ಅವರು ಈ ಆರೋಪ ಮಾಡಿದ್ದಾರೆ.
ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ಸಾವಿರಾರು ನಕಲಿ ಮತದಾರರನ್ನು ವ್ಯವಸ್ಥಿತವಾಗಿ ಸೃಷ್ಟಿಸುವ ಮೂಲಕ ಬಿಜೆಪಿ 'ಮತ ಕಳವು' ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ. ತಾವು ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರವೊಂದರಲ್ಲೇ ಬರೋಬ್ಬರಿ 11,200 ನಕಲಿ ಮತದಾರರಿರುವುದಾಗಿ ಅವರು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ 'ಮತದಾರರ ಹಕ್ಕುಗಳಿಗಾಗಿ ಸಹಿ ಸಂಗ್ರಹ ಅಭಿಯಾನ'ಕ್ಕೆ ಭಾನುವಾರ ಬೆಂಗಳೂರಿನ ಸನ್‌ರೈಸ್ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. "ಚುನಾವಣಾ ಆಯೋಗವನ್ನು ಕೈಗೊಂಬೆಯಾಗಿಸಿಕೊಂಡು, ಅಸ್ತಿತ್ವದಲ್ಲಿಲ್ಲದ ಮತದಾರರನ್ನು ಸೃಷ್ಟಿಸಿ, ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸಿ ಬಿಜೆಪಿ ಅಧಿಕಾರ ಹಿಡಿದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ," ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಹಲವೆಡೆ ನಕಲಿ ಮತದಾರರ ಜಾಲ
ನಕಲಿ ಮತದಾರರ ಹಾವಳಿ ಕೇವಲ ಗಾಂಧಿನಗರಕ್ಕೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ದಿನೇಶ್ ಗುಂಡೂರಾವ್, ಇದು ಬೆಂಗಳೂರಿನ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿದೆ ಎಂದು ವಿವರಿಸಿದರು. "ಗಾಂಧಿನಗರ ಮಾತ್ರವಲ್ಲದೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ಒಂದರಲ್ಲಿಯೂ ನಮ್ಮ ಕಾರ್ಯಕರ್ತರು ಸಾವಿರಾರು ನಕಲಿ ಮತದಾರರನ್ನು ಪತ್ತೆಹಚ್ಚಿದ್ದಾರೆ. ಇದೇ ರೀತಿ, ಮಹದೇವಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ. ಈ ಮತ ಕಳವು ನಡೆಯದೇ ಇದ್ದಿದ್ದರೆ, ಬೆಂಗಳೂರು ಕೇಂದ್ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಿದ್ದರು," ಎಂದು ಅವರು ಹೇಳಿದರು.
ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಕಿಡಿ
ನಕಲಿ ಮತದಾರರ ಪಟ್ಟಿಯನ್ನು ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಿದ್ರಿಸುತ್ತಿರುವ ಆಯೋಗದ ಅಧಿಕಾರಿಗಳನ್ನು ಎಚ್ಚರಿಸಲು ನಾವು ಈ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ನಕಲಿ ಮತಗಳನ್ನು ತೆಗೆದುಹಾಕಲು ಆಯೋಗ ಏಕೆ ಮೀನಮೇಷ ಎಣಿಸುತ್ತಿದೆ?" ಎಂದು ಅವರು ಪ್ರಶ್ನಿಸಿದರು. ಈ ಅಭಿಯಾನವು ದೇಶಾದ್ಯಂತ ನಡೆಯುತ್ತಿದ್ದು, ಗಾಂಧಿನಗರ ಕ್ಷೇತ್ರದಿಂದಲೇ ಒಂದು ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸುವ ಗುರಿ ಇದೆ ಎಂದು ಅವರು ತಿಳಿಸಿದರು.