ಕಾನ್ವೆಂಟ್ ರಸ್ತೆ ಎಂಬ 'ಮೃತ್ಯುಕೂಪ': ಇದು ಬ್ರ್ಯಾಂಡ್ ಬೆಂಗಳೂರಿನ ಅಸಲಿ ಮುಖ!
ರೆಸಿಡೆನ್ಸಿಯಲ್ ರೋಡ್, ರಿಚ್‌ಮಂಡ್ ಸರ್ಕಲ್, ಎಂ.ಜಿ. ರೋಡ್ ಮತ್ತು ಚರ್ಚ್‌ಸ್ಟ್ರೀಟ್‌ಗಳಂತಹ ಪ್ರಮುಖ ಸ್ಥಳಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ. ಆದರೆ, ಈ ಮಾರ್ಗದಲ್ಲಿ ಸಾಗುವ ವಾಹನ ಸವಾರರಿಗೆ ಗುಂಡಿಗಳ ದರ್ಶನವಾಗುತ್ತದೆ.
ಸಿಲಿಕಾನ್ ಸಿಟಿ, ಉದ್ಯಾನ ನಗರಿ, 'ಬ್ರ್ಯಾಂಡ್ ಬೆಂಗಳೂರು' ಹೀಗೆ ನೂರಾರು ಬಿರುದುಗಳಿಂದ ಕರೆಯಲ್ಪಡುವ ನಮ್ಮ ಬೆಂಗಳೂರಿನ ಹೃದಯ ಭಾಗದಲ್ಲಿಯೇ, ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ 'ಕಾನ್ವೆಂಟ್ ರಸ್ತೆ'. ರಿಚ್ಮಂಡ್ ವೃತ್ತ, ಎಂ.ಜಿ. ರಸ್ತೆ, ಚರ್ಚ್‌ಸ್ಟ್ರೀಟ್‌ನಂತಹ ಮಹತ್ವದ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆಯು, ಇಂದು ಅಕ್ಷರಶಃ 'ಮೃತ್ಯುಕೂಪ'ವಾಗಿ ಮಾರ್ಪಟ್ಟಿದೆ. ಕಿತ್ತು ಹೋದ ಡಾಂಬರು, ಒಂದು ಅಡಿಗೂ ಹೆಚ್ಚು ಆಳದ ಮಾರಣಾಂತಿಕ ಗುಂಡಿಗಳು ಮತ್ತು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಾಗಿ, ಇಲ್ಲಿನ ಸಂಚಾರವು ಸವಾರರಿಗೆ ನಿತ್ಯ ನರಕಯಾತನೆಯಾಗಿದೆ. ಈ ರಸ್ತೆಯ ದಯನೀಯ ಸ್ಥಿತಿಯ ಕುರಿತು 'ದ ಫೆಡರಲ್ ಕರ್ನಾಟಕ' ನಡೆಸಿದ 'ರಿಯಾಲಿಟಿ ಚೆಕ್' ಇಲ್ಲಿದೆ.
ಪ್ರಾಣ ಪಣಕ್ಕಿಟ್ಟು ಪಯಣ
ಈ ರಸ್ತೆಯ ಸುತ್ತಮುತ್ತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಮತ್ತು ಚರ್ಚ್‌ಗಳಿವೆ. ಪ್ರತಿನಿತ್ಯ ಸಾವಿರಾರು ವಾಹನಗಳು ಮತ್ತು ಪಾದಚಾರಿಗಳು ಇಲ್ಲಿ ಓಡಾಡುತ್ತಾರೆ. ಆದರೆ, ಈ ಮಾರ್ಗದಲ್ಲಿ ಸಾಗುವುದೆಂದರೆ, ಪ್ರಾಣವನ್ನು ಕೈಯಲ್ಲಿ ಹಿಡಿದು ಸಾಗಿದಂತೆ. ಮಳೆಗಾಲಕ್ಕೂ ಮುನ್ನ ಸಣ್ಣದಾಗಿದ್ದ ಗುಂಡಿಗಳು, ಈಗ ಬೃಹತ್ ಹೊಂಡಗಳಾಗಿ ಮಾರ್ಪಟ್ಟಿವೆ. ಈ ಹೊಂಡಗಳನ್ನು ತಪ್ಪಿಸಲು ಹೋಗಿ, ಸವಾರರು ಪ್ರತಿದิน ಹರಸಾಹಸ ಪಡುತ್ತಿದ್ದಾರೆ. ವಾಹನಗಳು ಆಮೆ ವೇಗದಲ್ಲಿ ಚಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಟ್ರಾಫಿಕ್ ಜಾಮ್ ಇಲ್ಲಿನ ಸಾಮಾನ್ಯ ದೃಶ್ಯವಾಗಿದೆ.
ಸವಾರರ ಅಳಲು: 'ತೆರಿಗೆ ಕಟ್ತೀವಿ, ಆದ್ರೆ ಬೆನ್ನು ನೋವು ಗ್ಯಾರಂಟಿ!'
ಈ ರಸ್ತೆಯ ದುಃಸ್ಥಿತಿಯ ಬಗ್ಗೆ 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಆಟೋ ಚಾಲಕ ಅಸ್ಗರ್ ಆಲಿ, "ರಸ್ತೆಯ ತುಂಬಾ ಹೊಂಡಗಳೇ ತುಂಬಿವೆ. ವಾಹನ ಚಲಾಯಿಸುವುದೇ ಕಷ್ಟವಾಗಿದೆ. ಮುಖ್ಯವಾಗಿ ವಯಸ್ಸಾದ ಗ್ರಾಹಕರನ್ನು ಕರೆದುಕೊಂಡು ಹೋಗುವಾಗ, ಅವರಿಗೆ ಬೆನ್ನು ನೋವು ಬಂದು ಆಸ್ಪತ್ರೆಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಮಳೆ ಬಂದರೆ ಹೊಂಡಗಳು ಕಾಣಿಸದೆ, ಅಪಘಾತಗಳಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ಗಾಬರಿಗೊಂಡು ಗ್ರಾಹಕರು ಆಟೋ ಹತ್ತಲು ಹಿಂದೇಟು ಹಾಕುತ್ತಾರೆ. ನಮ್ಮ ವಾಹನಗಳೂ ಹಾಳಾಗುತ್ತಿವೆ. ನಾವು ತೆರಿಗೆ ಪಾವತಿಸಿದರೂ, ನಮಗೆ ಉತ್ತಮ ರಸ್ತೆಗಳಿಲ್ಲ," ಎಂದು ತಮ್ಮ ನೋವನ್ನು ತೋಡಿಕೊಂಡರು.
ಇದೇ ದನಿಗೆ ದ್ವಿಚಕ್ರ ವಾಹನ ಸವಾರರೊಬ್ಬರು ದನಿಗೂಡಿಸಿದರು. "ರಸ್ತೆಯಲ್ಲಿ ಗುಂಡಿಗಳ ದರ್ಶನ ಸಾಮಾನ್ಯವಾಗಿದೆ. ನಾವು ಈ ಸರ್ಕಾರಕ್ಕೆ ಮತ ಹಾಕಿ ತಪ್ಪು ಮಾಡಿದ್ದೇವೆ. ರಸ್ತೆ ತೆರಿಗೆಯನ್ನು ಸರಿಯಾಗಿ ಕಟ್ಟಿದರೂ, ಸರ್ಕಾರ ನಮಗೆ ಗುಣಮಟ್ಟದ ರಸ್ತೆಗಳನ್ನು ನೀಡುತ್ತಿಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ದರ್ಬಾರ್!
"ಕಳೆದ ಹಲವು ತಿಂಗಳುಗಳಿಂದ ರಸ್ತೆಯ ಸಮಸ್ಯೆ ತೀವ್ರವಾಗಿದೆ. ಮಳೆ ಬಂದಾಗ ನೀರು ತುಂಬಿ, ಗುಂಡಿಗಳು ಕಾಣಿಸದೆ ರಾತ್ರಿ ವೇಳೆ ಹಲವು ಅಪಘಾತಗಳು ಸಂಭವಿಸಿವೆ. ಆದರೆ, ಇಲ್ಲಿಯವರೆಗೆ ಯಾವುದೇ ಅಧಿಕಾರಿಯೂ ಇತ್ತ ತಲೆಹಾಕಿಲ್ಲ. ಪ್ರತಿ ಬಾರಿಯೂ ತಾತ್ಕಾಲಿಕ ಪ್ಯಾಚ್‌ವರ್ಕ್ ಮಾಡಿ ಕೈತೊಳೆದುಕೊಳ್ಳುತ್ತಾರೆ. ನಮಗೆ ಶಾಶ್ವತ ಪರಿಹಾರ ಬೇಕು," ಎಂದು ಸ್ಥಳೀಯ ನಿವಾಸಿ ರಾಜ್ ಆಗ್ರಹಿಸಿದರು.
"ರಸ್ತೆಗಳ ಈ ದುಃಸ್ಥಿತಿಗೆ ಕಳಪೆ ಕಾಮಗಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಸರ್ಕಾರ ಹಣ ನೀಡಿದರೂ, ಗುತ್ತಿಗೆದಾರರು ಟೆಂಡರ್ ಹಿಡಿದು ಸುಮ್ಮನೆ ಕುಳಿತುಕೊಳ್ಳುತ್ತಾರೆ. ಇಂತಹ ಜನಪ್ರತಿನಿಧಿಗಳಿಗೆ ನಾವು ಮತ ಹಾಕಬಾರದು," ಎಂದು ಮತ್ತೊಬ್ಬ ನಾಗರಿಕರಾದ ಅಕ್ಷಯ್ ವಿ.ವೈ ಬೇಸರ ವ್ಯಕ್ತಪಡಿಸಿದರು.
ಕಾನ್ವೆಂಟ್ ರಸ್ತೆಯು ಕೇವಲ ಒಂದು ರಸ್ತೆಯ ಸಮಸ್ಯೆಯಾಗಿ ಉಳಿದಿಲ್ಲ. ಇದು 'ಬ್ರ್ಯಾಂಡ್ ಬೆಂಗಳೂರು' ಹೆಸರಿನಲ್ಲಿ ನಡೆಯುತ್ತಿರುವ ಆಡಳಿತ ವ್ಯವಸ್ಥೆಯ ವೈಫಲ್ಯ, ಭ್ರಷ್ಟಾಚಾರ ಮತ್ತು ಸಾರ್ವಜನಿಕರ ಬಗ್ಗೆಗಿನ ತಾತ್ಸಾರ ಮನೋಭಾವದ ಪ್ರತೀಕವಾಗಿದೆ.