26 ಜಂಕ್ಷನ್‌ ಮರು ವಿನ್ಯಾಸ, ಪಿಪಿಪಿ ಮಾದರಿಯಲ್ಲಿ 103 ಕಡೆ ಸ್ಕೈವಾಕ್‌; ಪೊಲೀಸ್‌ ಜಂಟಿ ಆಯುಕ್ತ ಕಾರ್ತಿಕ್‌ ರೆಡ್ಡಿ

ನಗರದಲ್ಲಿ ಒಟ್ಟು 78 ಸ್ಕೈವಾಕ್, 35 ಪರ್ಯಾಯ ರಸ್ತೆಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಜಿಬಿಎ ಅಧಿಕಾರಿಗಳು ಸ್ಪಂದಿಸಿದ್ದು, ಪಿಪಿಪಿ ಮಾದರಿಯಲ್ಲಿ ಸ್ಕೈವಾಕ್‌ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕಾರ್ತಿಕ್‌ ರೆಡ್ಡಿ ತಿಳಿಸಿದರು.

Update: 2025-10-27 04:30 GMT

ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಅತಿಯಾದ ವಾಹನ ದಟ್ಟಣೆಯೊಂದಿಗೆ ಕುಖ್ಯಾತಿ ಅಂಟಿದೆ. ಸಂಚಾರ ದಟ್ಟಣೆ, ರಸ್ತೆ ಗುಂಡಿ ಸಮಸ್ಯೆ ಹಾಗೂ ಮೂಲ ಸೌಕರ್ಯ ಕೊರತೆಯಿಂದಾಗಿ ಸರ್ಕಾರ ಟೀಕೆಗೆ ಗುರಿಯಾಗಿದೆ. ಐಟಿ ಉದ್ಯಮವು ಕೂಡ ಆಕ್ರೋಶ ಹೊರಹಾಕಿದ ನಂತರ ಬೆಂಗಳೂರಿನ ಮೂಲ ಸೌಕರ್ಯ ವಿಚಾರವು ತೀವ್ರ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.

ಐಟಿ ಉದ್ಯಮಿಗಳಾದ ಮೋಹನ್‌ದಾಸ್‌ ಪೈ, ಕಿರಣ್ ಮಜುಮ್ದಾರ್ ಶಾ ಅವರು ಸರ್ಕಾರದ ವಿರುದ್ಧ ನಿರಂತರ ಟೀಕಾಪ್ರಹಾರ ನಡೆಸಿದ ಪರಿಣಾಮ ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ. ಈ ಮಧ್ಯೆ, ಬೆಂಗಳೂರು ಸಂಚಾರ ಪೊಲೀಸರು ಕೂಡ ವಾಹನ ದಟ್ಟಣೆ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ, ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಸಂಚಾರಿ ಪೊಲೀಸರು ಹಲವು ಉಪಕ್ರಮಗಳ ಮೊರೆ ಹೋಗಿದ್ದಾರೆ. ವಿವಿಧ ಸಂಸ್ಥೆಗಳ ಜತೆಗೂಡಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಕುರಿತು ಜಂಟಿ ಪೊಲೀಸ್ ಆಯುಕ್ತ (ಬೆಂಗಳೂರು ಸಂಚಾರ ಪೊಲೀಸ್ ) ಕಾರ್ತಿಕ್ ರೆಡ್ಡಿ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ್ದಾರೆ.

2-3 ತಿಂಗಳಲ್ಲಿ ಜಂಕ್ಷನ್‌ಗಳ ಮರು ವಿನ್ಯಾಸ ಪೂರ್ಣ

ಅವೈಜ್ಞಾನಿಕ ಜಂಕ್ಷನ್‌ಗಳ ನಿರ್ಮಾಣದಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ʼಸುರಕ್ಷಾ-75’ ಎಂಬ ಯೋಜನೆ ಜಾರಿಗೊಳಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಬಿಬಿಎಂಪಿ) ಕೈಗೆತ್ತಿಕೊಂಡಿರುವ ಈ ಯೋಜನೆಯಡಿ ದಟ್ಟಣೆಗೆ ಕಾರಣವಾಗಿರುವ 75 ಜಂಕ್ಷನ್‌ಗಳನ್ನು ಮರು ವಿನ್ಯಾಸಗೊಳಿಸಲಾಗುತ್ತಿದೆ. ವಾಹನಗಳ ಸುಗಮ ಕಾರ್ಯಾಚರಣೆಗೆ ಅನುವು ಮಾಡಿಕೊಡುವಂತೆ ಮರು ನಿರ್ಮಿಸಲಾಗುತ್ತಿದೆ. ಈಗಾಗಲೇ 26 ಜಂಕ್ಷನ್‌ಗಳಲ್ಲಿ ಕಾಮಗಾರಿ ಆರಂಭವಾಗಿದೆ. ಉಳಿದ ಜಂಕ್ಷನ್‌ಗಳ ಕಾಮಗಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಾರ್ಯಾದೇಶ ನೀಡಿದ್ದು, ಎರಡು-ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಜಂಟಿ ಪೊಲೀಸ್ (ಸಂಚಾರ ಪೊಲೀಸ್) ಆಯುಕ್ತ ಕಾರ್ತಿಕ್ ರೆಡ್ಡಿ ತಿಳಿಸಿದರು.

ಏನಿದು ಸುರಕ್ಷಾ-75 ಯೋಜನೆ?

ಪಾದಚಾರಿಗಳ ಸುರಕ್ಷತೆಗೆ ಒತ್ತು ನೀಡುವ, ಅಪಘಾತರಹಿತ ಮಾರ್ಗ ಒಳಗೊಂಡ ಜಂಕ್ಷನ್‌ಗಳನ್ನು ಮರು ವಿನ್ಯಾಸಗೊಳಿಸುವ ಯೋಜನೆ. ಸಾರ್ವಜನಿಕರು ವಿಶೇಷವಾಗಿ ಪಾದಚಾರಿಗಳಿಗೆ ನಾಗರಿಕ ಸ್ನೇಹಿ ರಸ್ತೆ ಒದಗಿಸುವುದು ಇದರ ಉದ್ದೇಶ. ಬೆಂಗಳೂರಿನಲ್ಲಿ ಈ ಯೋಜನೆಯನ್ನು 2023ರಲ್ಲಿ ಆರಂಭಿಸಲಾಯಿತು. ಒಟ್ಟು 100 ಕೋಟಿ ವೆಚ್ಚದಲ್ಲಿ ಜಂಕ್ಷನ್‌ಗಳನ್ನು ಮರು ವಿನ್ಯಾಸಗೊಳಿಸಲಾಗುತ್ತಿದೆ.

ಈಗಾಗಲೇ ಟೌನ್ ಹಾಲ್, ಮೌರ್ಯ ವೃತ್ತ ಮತ್ತು ಬಾಳೇಕುಂದ್ರಿ ಜಂಕ್ಷನ್‌ಗಳನ್ನು ಸುರಕ್ಷಾ-75 ಯೋಜನೆಯಡಿ ಮರು ವಿನ್ಯಾಸ ಮಾಡಲಾಗಿದೆ. ಯೋಜನೆಯನ್ನು 2026 ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

ಬೆಂಗಳೂರು ಸಂಚಾರ ಪೊಲೀಸ್, WRI ಭಾರತ (World Resources Institute) ಮತ್ತು BIGRS (Bloomberg Initiative for Global Road Safety) ಸಂಸ್ಥೆಗಳ ಸಹಯೋಗದಲ್ಲಿ ಜಂಕ್ಷನ್ ಮರುವಿನ್ಯಾಸ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ನಿರ್ಮಾಣಕ್ಕೆ ಸಲಹೆ

ವಾಹನ ದಟ್ಟಣೆಗೆ ಕಾರಣರಾಗುತ್ತಿರುವ ಪಾದಚಾರಿಗಳಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ನಗರದಲ್ಲಿ ಪರ್ಯಾಯ ರಸ್ತೆಗಳ ಅಭಿವೃದ್ಧಿ, ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣ ಮಾಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಪತ್ರ ಬರೆಯಲಾಗಿದೆ.

ನಗರದಲ್ಲಿ ಒಟ್ಟು 78 ಸ್ಕೈವಾಕ್, 35 ಪರ್ಯಾಯ ರಸ್ತೆಗಳ ನಿರ್ಮಾಣಕ್ಕೆ ಮನವಿ ಮಾಡಲಾಗಿದೆ. ಹೊರ ವರ್ತುಲ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ದಾಟುವುದಕ್ಕೆ ಕನಿಷ್ಠ 25 ರಿಂದ 30 ಸೆಕೆಂಡ್ ಒದಗಿಸಲಾಗಿದೆ. ಈ ಅವಧಿಯಲ್ಲಿ ಸುಮಾರು ಅರ್ಧ ಕಿ.ಮೀ. ವಾಹನಗಳ ದಟ್ಟಣೆ ಉಂಟಾಗಲಿದೆ. ಹಾಗಾಗಿ ಪಾದಚಾರಿ ಮೇಲ್ಸೇತುವೆಗಳ ನಿರ್ಮಾಣಕ್ಕೆ ಸಲಹೆ ನೀಡಲಾಗಿದೆ. ಜಿಬಿಎ ಅಧಿಕಾರಿಗಳು ಕೂಡ ಸ್ಪಂದಿಸಿದ್ದು, ಪಿಪಿಪಿ ಮಾದರಿಯಲ್ಲಿ (ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ) ನಿರ್ಮಿಸುವ ಭರವಸೆ ನೀಡಿದೆ.

ಇದಲ್ಲದೇ ಸಮಾನಾಂತರ ರಸ್ತೆಗಳು ಮತ್ತು ಪರ್ಯಾಯ ರಸ್ತೆಗಳ ಅಗಲೀಕರಣಕ್ಕೆ ಮನವಿ ಮಾಡಲಾಗಿದೆ. ವಾಹನಗಳನ್ನು ಸಮಾನಾಂತರ ಅಥವಾ ಪರ್ಯಾಯ ರಸ್ತೆಗಳತ್ತ ತಿರುಗಿಸಿದರೆ, ಬಹುಪಾಲು ದಟ್ಟಣೆ ಕಡಿಮೆಯಾಗಲಿದೆ. ಅದಕ್ಕಾಗಿ 35 ಪರ್ಯಾಯ ರಸ್ತೆಗಳನ್ನು ಗುರುತಿಸಿ ಕೊಡಲಾಗಿದೆ ಎಂದು ಕಾರ್ತಿಕ್ ರೆಡ್ಡಿ ವಿವರಿಸಿದ್ದಾರೆ.

ಎಐ ಸಿಗ್ನಲ್‌ಗಳ ಅಳವಡಿಕೆ

ಬೆಂಗಳೂರಿನಾದ್ಯಂತ 125 ಕ್ಕೂ ಹೆಚ್ಚು ಜಂಕ್ಷನ್‌ಗಳಲ್ಲಿ ಎಐ ಆಧಾರಿತ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಸ್ವಲ್ಪ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದಾಗ್ಯೂ, ಹೊರ ವರ್ತುಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ.

ಎಐ ಆಧಾರಿತ ಸಿಗ್ನಲ್‌ಗಳನ್ನು ಒಂದಕ್ಕೊಂದು ಪೂರಕವಾಗಿ ಸಮನ್ವಯದಿಂದ ಕೆಲಸ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಈ ಸಿಗ್ನಲ್‌ಗಳು ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತವೆ. ಕೆಂಪು ಮತ್ತು ಹಸಿರು ದೀಪಗಳ ಅವಧಿಯು ವಾಹನಗಳ ದಟ್ಟಣೆ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸಂಕೇತಗಳನ್ನು ನೀಡಲಿವೆ. ಇದರಿಂದ ವಾಹನ ಸವಾರರು ಹೆಚ್ಚಿನ ಸಮಯ ಕಾಯುವುದು ತಪ್ಪಲಿದೆ. ಜತೆಗೆ ದಟ್ಟಣೆಯೂ ತಹಬದಿಗೆ ಬರಲಿದೆ. ಕೇಂದ್ರೀಕೃತ ಸಂಚಾರ ನಿರ್ವಹಣಾ ಕೇಂದ್ರದ ಮೂಲಕ ಎಐ ಆಧರಿತ ಸಿಗ್ನಲ್ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.

ಹೊರ ವರ್ತುಲ ರಸ್ತೆಯಲ್ಲಿ ಸರ್ವೀಸ್ ರಸ್ತೆಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗದ ಅವೈಜ್ಞಾನಿಕ ನಿರ್ಮಾಣದಿಂದಾಗಿ ಸಂಚಾರ ದಟ್ಟಣೆ ಉಸಿರುಗಟ್ಟಿಸುವಂತಾಗಿದೆ. ಈ ಬಗ್ಗೆ ಇಲಾಖೆ ಅಧ್ಯಯನ ನಡೆಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಈ ಹಿಂದೆ ಬಿಬಿಎಂಪಿ) ಪತ್ರ ಬರೆಯಲಾಗಿದೆ. ಜಿಬಿಎ ಅಧಿಕಾರಿಗಳು ಈ ಮಾರ್ಗವನ್ನು ಸರಿಪಡಿಸಿಕೊಟ್ಟರೆ ದಟ್ಟಣೆ ಪ್ರಮಾಣ ಶೇ 30-40 ರಷ್ಟು ಕಡಿತವಾಗುತ್ತದೆ ಎಂದಿದ್ದಾರೆ.

ವಿಪ್ರೋ ಕ್ಯಾಂಪಸ್‌ನಲ್ಲಿ ಪ್ರವೇಶ ಕಲ್ಪಿಸಿದರೆ ದಟ್ಟಣೆ ಕಡಿಮೆ

ಪ್ರಸ್ತುತ, ಇಬ್ಬಲೂರು ಜಂಕ್ಷನ್‌ನಲ್ಲಿ ಹೆಚ್ಚು ದಟ್ಟಣೆ ಇರುತ್ತದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ವಿಪ್ರೋ ಸಂಸ್ಥೆಗೆ ಪತ್ರ ಬರೆದು ಕ್ಯಾಂಪಸ್ ಒಳ ಸೀಮಿತ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಕೋರಿದ್ದರು. ಒಂದು ವೇಳೆ ವಿಪ್ರೋ ಸಂಸ್ಥೆಯವರು ಪ್ರವೇಶ ನೀಡಿದ್ದರೆ, ಕೊಂಚ ಮಟ್ಟಿಗೆ ದಟ್ಟಣೆ ಕಡಿಮೆಯಾಗುತ್ತಿತ್ತು. ಇಬ್ಬಲೂರು ಜಂಕ್ಷನ್‌ನಿಂದ ಸರ್ಕಾಪುರ ಕಡೆಗೆ ಹೋಗಲು 5.ಕಿ. ಮೀ ಕ್ರಮಿಸಬೇಕು. ವಿಪ್ರೋ ಕ್ಯಾಂಪಸ್ ಒಳಗಡೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದರೆ 1.1 ಕಿ.ಮೀ ಅಂತರದಲ್ಲೇ ಇಕೋ ವರ್ಲ್ಡ್ ಹಿಂಭಾಗದ ಗೇಟ್ ಮೂಲಕ ಸರ್ಜಾಪುರ ರಸ್ತೆಗೆ ತಲುಪಬಹುದಾಗಿತ್ತು. ವಿಪ್ರೊ ಅವಕಾಶ ನೀಡದ ಕಾರಣ ಈಗ ಎಲ್ಲರೂ ಇಬ್ಬಲೂರು ಜಂಕ್ಷನ್ ಬಳಸಿಕೊಂಡೇ ಸರ್ಜಾಪುರದ ಕಡೆಗೆ ಹೋಗಬೇಕಾಗಿದೆ.

ಬಸ್ ನಿಲ್ದಾಣಗಳ ಸ್ಥಳಾಂತರ

ಇನ್ನು ಜಂಕ್ಷನ್‌ಗಳ ಬಳಿ ಬಿಎಂಟಿಸಿ ಬಸ್ ನಿಲ್ದಾಣ ನಿರ್ಮಿಸಿರುವುದೂ ಕೂಡ ದಟ್ಟಣೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಹಾಗೂ ಬಿಎಂಟಿಸಿಯವರು ಅಧ್ಯಯನ ಮಾಡಿದ್ದೇವೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಜಂಕ್ಷನ್‌ಗಳ ಬಳಿ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ತೆರವುಗೊಳಿಸಲಾಗುತ್ತಿದೆ. ಒಟ್ಟು 103 ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಇದು ಪೂರ್ಣಗೊಂಡ ಬಳಿಕ ಸಂಚಾರ ಸಮಸ್ಯೆ ಕೊಂಚ ಮಟ್ಟಿಗೆ ಸುಧಾರಿಸಬಹುದು ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.

ವಾಹನ ಹೆಚ್ಚು ಹೊತ್ತು ನಿಲ್ಲಿಸಿದರೆ ಕೇಸ್

ಮೆಜೆಸ್ಟಿಕ್‌ನಲ್ಲಿ ಖಾಸಗಿ ಬಸ್‌ಗಳು ಮತ್ತು ಇತರ ವಾಹನಗಳಿಂದಾಗಿ ವಾರದಲ್ಲಿ ಮೂರ್ನಾಲ್ಕು ದಿನ ದಟ್ಟಣೆ ಆಗಲಿದೆ. ಎಲ್ಲಾ ಬಸ್‌ಗಳು ಒಟ್ಟಿಗೆ ಬರುವುದರಿಂದ ಸಮಸ್ಯೆ ಆಗುತ್ತಿದೆ. ದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಒಂದು ವಾಹನ ಕೇವಲ 20-30 ಸೆಕೆಂಡ್ ಮಾತ್ರ ನಿಲ್ಲಬೇಕು. ಇಲ್ಲವಾದರೆ ಆ ವಾಹನದ ಮೇಲೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.

ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಪೊಲೀಸರ ಆರೋಗ್ಯ ಹದಗೆಡುತ್ತಿದೆ. ಬಹುತೇಕ ಸಿಬ್ಬಂದಿ ಕಷ್ಟಪಡುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 1.2 ಕೋಟಿ ವಾಹನಗಳು ಸಂಚರಿಸುತ್ತಿವೆ. ಪ್ರತಿದಿನ 2-3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ಜನಸಂಖ್ಯೆಯಷ್ಟೇ ವಾಹನಗಳ ಸಂಖ್ಯೆಯೂ ಬೆಳೆಯುತ್ತಿದೆ. 18 ವರ್ಷ ವಯಸ್ಸಿನ ಪ್ರತಿ ವ್ಯಕ್ತಿಯೂ ಒಂದೊಂದು ವಾಹನ ಹೊಂದಿದ್ದಾರೆ ಎಂದು ವಿವರಿಸಿದ್ದಾರೆ.

ಸಂಚಾರ ಪೊಲೀಸರು ಕೊರತೆ ಇದೆ. ಖಾಲಿ ಉಳಿದಿರುವ ಸ್ಥಾನಗಳಿಗೆ ಪರ್ಯಾಯವಾಗಿ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಸಂಚಾರ ದಟ್ಟಣೆ ನಿಯಂತ್ರಿಸಲಾಗತ್ತಿದೆ ಎಂದು ಹೇಳಿದ್ದಾರೆ. 

Tags:    

Similar News