ಪತಿಯ ಚಿತ್ರಹಿಂಸೆ; 3ನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆಗೆ ಯತ್ನ

ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪತಿ ನಿಕ್ಸನ್ ವಿರುದ್ಧ ಬಾಣವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Update: 2025-10-27 04:33 GMT
ಸಾಂದರ್ಭಿಕ ಚಿತ್ರ
Click the Play button to listen to article

ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತಾವು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ದಾರುಣ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ. ಪ್ರೀತಿಸಿ ಮದುವೆಯಾಗಿದ್ದರೂ, ಮಕ್ಕಳಿಲ್ಲವೆಂಬ ಕಾರಣಕ್ಕೆ ಶುರುವಾದ ಚಿತ್ರಹಿಂಸೆ, ಮಗು ಜನಿಸಿದ ಬಳಿಕವೂ ಮುಂದುವರಿದಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಸಂತ್ರಸ್ತೆಯನ್ನು ಪ್ರಿಯಾ ಎಂದು ಗುರುತಿಸಲಾಗಿದ್ದು, ಪತಿಯ ಹಿಂಸೆಯಿಂದಾಗಿ ಅವರು ತೆಗೆದುಕೊಂಡ ಈ ಕಠಿಣ ನಿರ್ಧಾರದಿಂದ ಅವರ ಬೆನ್ನುಮೂಳೆ ಮತ್ತು ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಸದ್ಯ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪ್ರೀತಿಸಿ ಮದುವೆಯಾದರೂ ತಪ್ಪದ ಹಿಂಸೆ

ಪ್ರಿಯಾ ಹಾಗೂ ನಿಕ್ಸನ್ ಎಂಬುವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವಿವಾಹವಾಗಿ ಏಳು ವರ್ಷಗಳಾದರೂ ಮಕ್ಕಳಾಗದ ಕಾರಣಕ್ಕೆ ಪತಿ ನಿಕ್ಸನ್ ಪ್ರತಿನಿತ್ಯ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಕೊನೆಗೆ, ದಂಪತಿ ಸೂಕ್ತ ಚಿಕಿತ್ಸೆ ಪಡೆದ ನಂತರ ಇತ್ತೀಚೆಗೆ ಅವರಿಗೆ ಹೆಣ್ಣು ಮಗು ಜನಿಸಿತ್ತು.

ಮಗು ಜನಿಸಿದರೂ ನಿಲ್ಲದ ನರಕ

ಮಗು ಜನಿಸಿದ ನಂತರವಾದರೂ ಪತಿಯ ವರ್ತನೆ ಬದಲಾಗಬಹುದು ಎಂದು ಪ್ರಿಯಾ ನಿರೀಕ್ಷಿಸಿದ್ದರು. ಆದರೆ, ನಿಕ್ಸನ್‌ನ ಹಿಂಸೆ ಮತ್ತಷ್ಟು ಹೆಚ್ಚಾಗಿತ್ತು. ಪ್ರತಿದಿನ ಕುಡಿದು ಬಂದು, "ಎಲ್ಲಿಯಾದರೂ ಹೋಗಿ ಸಾಯಿ" ಎಂದು ನಿಂದಿಸುತ್ತಾ ಹಲ್ಲೆ ನಡೆಸುವುದನ್ನು ಮುಂದುವರಿಸಿದ್ದ. ಈ ನಿರಂತರ ಚಿತ್ರಹಿಂಸೆಯನ್ನು ಸಹಿಸಲಾಗದೆ, ಜೀವನದಲ್ಲಿ ಜಿಗುಪ್ಸೆಗೊಂಡ ಪ್ರಿಯಾ, ಸೋಮವಾರ ತಾವು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪತಿ ನಿಕ್ಸನ್ ವಿರುದ್ಧ ಬಾಣವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

Tags:    

Similar News