ನಾಯಕತ್ವ ಬದಲಾವಣೆ ಚರ್ಚೆ: ದೆಹಲಿಗೆ ತೆರಳಿದ ಡಿಕೆಶಿ, ಹೈಕಮಾಂಡ್‌ ಜತೆ ಮಹತ್ವದ ಚರ್ಚೆ ಸಾಧ್ಯತೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೆ ಡಿ.ಕೆ.ಶಿವಕುಮಾರ್ ಅವರು ಸಮಯಾವಕಾಶ ಕೇಳಿದ್ದು, ಭೇಟಿಯ ವೇಳೆ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಚರ್ಚಿಸುವ ಸಾಧ್ಯತೆ‌ ಇದೆ ಮೂಲಗಳು ತಿಳಿಸಿವೆ.

Update: 2025-10-27 04:45 GMT

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆಗಳು ಬಿರುಸುಗೊಂಡಿವೆ.

ಸಿಎಂ ಉತ್ತಾಧಿಕಾರಿ ಕುರಿತು‌ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಸಂಜೆ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಕೆರಳಿಸಿದೆ. ಜತೆಗೆ ನವೆಂಬರ್ ಕ್ರಾಂತಿಯ ಹೇಳಿಕೆಗಳಿಗೆ ಪುಷ್ಠಿ‌ ನೀಡುವಂತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಗೆ ಡಿ.ಕೆ.ಶಿವಕುಮಾರ್ ಅವರು ಸಮಯಾವಕಾಶ ಕೇಳಿದ್ದು, ಭೇಟಿಯ ವೇಳೆ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಕುರಿತು ಚರ್ಚಿಸುವ ಸಾಧ್ಯತೆ‌ ಇದೆ ಮೂಲಗಳು ತಿಳಿಸಿವೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷ‌ ಮುನ್ನಡೆಸಲು ಸೈದ್ಧಾಂತಿಕವಾಗಿ ಬದ್ಧತೆ ಇರುವ ವ್ಯಕ್ತಿ. ಸಿಎಂ ಸಿದ್ದರಾಮಯ್ಯ ಅವರು ರಾಜಕೀಯದ ಅಂತಿಮ ಘಟ್ಟದಲ್ಲಿ ಇದ್ದಾರೆ. ಅವರ ನಂತರ ಸತೀಶ್ ಅವರು ಪಕ್ಷದ ನಾಯಕತ್ವ ವಹಿಸಲಿದ್ದಾರೆ‌ ಎಂದು ಯತೀಂದ್ರ ಹೇಳುವ ಮೂಲಕ ಚರ್ಚೆ ಹುಟ್ಟುಹಾಕಿದ್ದರು. ಸತೀಶ್ ಜಾರಕಿಹೊಳಿ ಅವರನ್ನು ಸಿಎಂ ಉತ್ತರಾಧಿಕಾರಿ ಎಂಬ ವಿಶ್ಲೇಷಣೆಗಳು ಕೇರಳ ಬಂದಿದ್ದವು. ಈ ಬೆಳವಣಿಗೆಯು ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಸಂಚಲನ ಸೃಷ್ಟಿಸಿದೆ.

ಡಿಕೆಶಿಗೆ ಸಂಪುಟ ಪುನಾರಚನೆ ಟೆನ್ಷನ್

ಸಿಎಂ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಸಚಿವರು ಸಂಪುಟ ಪುನಾರಚನೆ ಕುರಿತು ಹೇಳಿಕೆಗಳು ನೀಡುತ್ತಿರುವುದು ಡಿ.ಕೆ.ಶಿವಕುಮಾರ್ ಅವರಿಗೆ ತಲೆ ಬಿಸಿ ತಂದಿದೆ.

ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಿದರೆ ಅವರ ಸ್ಥಾನ ಅಭಾದಿತವಾಗಲಿದೆ. ನಾಯಕತ್ವ ಬದಲಾವಣೆಯ ಪ್ರಸಂಗವೂ ಬರುವುದಿಲ್ಲ ಎಂಬುದು ಡಿಕೆಶಿ ಟೆನ್ಷನ್ ಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಭೇಟಿ ನಿಯಮಿತವಲ್ಲ, ರಾಜಕೀಯ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಮಹತ್ವದ ಭೇಟಿಯಾಗಿದೆ ಎಂದು ಮೂಲಗಳು ಹೇಳಿವೆ.

ರಾಹುಲ್ ಗಾಂಧಿ ಅವರೊಂದಿಗೆ ಡಿಕೆಶಿ ನಡೆಸುವ ಮೂತುಕತೆ, ಕೈಗೊಳ್ಳುವ ತೀರ್ಮಾನದತ್ತ ಎಲ್ಲರ ಚಿತ್ತ ನೆಟ್ಟಿದೆ.

ನ.15ಕ್ಕೆ ಸಿಎಂ ದೆಹಲಿಗೆ ?

ತಮ್ಮ ಪುತ್ರ ಯತೀಂದ್ರ ನೀಡಿದ ಉತ್ತರಾಧಿಕಾರಿ ಹೇಳಿಕೆ ಪಕ್ಷದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನ.20ಕ್ಕೆ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದು, ನ.15 ರಂದು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಯಾಗುವ ಸಾಧ್ಯತೆ ಇದೆ.

ಸಂಪುಟ ಪುನಾರಚನೆಗೆ ಈಗಾಗಲೇ ಹೈಕಮಾಂಡ್ ತಾತ್ವಿಕ ಒಪ್ಪಿಗೆ ನೀಡಿದೆ. ಇದನ್ನು ಖಚಿತಪಡಿಸಿಕೊಳ್ಳಲು ಸಿಎಂ ದೆಹಲಿಗೆ ತೆರಳಿದ್ದಾರೆ. ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಪಡೆದು, ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.  

Tags:    

Similar News