Save Lalbagh| ಲಾಲ್‌ಬಾಗ್ ಬಂಡೆಯೊಳಗೆ ಸುರಂಗ ರಸ್ತೆ; ಅಪಾಯ ಬಂಡೆಗೋ, ಬೆಂಗಳೂರಿಗೋ ?
ಲಾಲ್‌ಬಾಗ್ ಬಂಡೆಯು 300 ಕೋಟಿ ವರ್ಷಗಳಷ್ಟು ಹಳೆಯ ಬಂಡೆಯಾಗಿದೆ. ವಿಶ್ವದ ಅತ್ಯಂತ ಉದ್ದ ಹಾಗೂ ಎತ್ತರದ ಪರ್ವತಗಳ ಸರಣಿಯಾದ ಹಿಮಾಲಯ ಹಾಗೂ ಡೈನೋಸಾರ್‌ಗಳ ಕಾಲಕ್ಕಿಂತಲೂ ಅತ್ಯಂತ ಹಳೆಯದಾದ ಶಿಲಾರಚನೆಯಾಗಿದೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರವು ಅವಳಿ ಸುರಂಗ ರಸ್ತೆ (Twin Tunnel Road) ನಿರ್ಮಿಸಲು ಉದ್ದೇಶಿಸಿದೆ. ಬರೋಬ್ಬರಿ 18 ಸಾವಿರ ಕೋಟಿ ರೂ.ವೆಚ್ಚದ ಸುರಂಗ ರಸ್ತೆ ಯೋಜನೆಗೆ ಜಾಗತಿಕ ಟೆಂಡರ್ ಸಹ ಕರೆದಿದೆ. ಆದರೆ, ಈ ಸುರಂಗ ಮಾರ್ಗವು ಸಿಲಿಕಾನ್ ಸಿಟಿಯ ಶ್ವಾಸತಾಣ ಲಾಲ್‌ಬಾಗ್ ಪರಿಸರಕ್ಕೆ ಹೆಚ್ಚು ಹಾನಿ ಮಾಡಲಿದೆ ಎಂಬ ಆತಂಕ ಕಾಡುತ್ತಿದ್ದು, ಪರಿಸರವಾದಿಗಳು, ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಲಾಲ್‌ಬಾಗ್‌ನಲ್ಲಿ ಭೂಮಿಯ ಮೇಲಿನ ಅತ್ಯಂತ ಹಳೆಯ ಹಾಗೂ 3 ಶತಕೋಟಿ ವರ್ಷಗಳ ಹಿಂದೆ ಸಂರಚನೆಗೊಂಡಿರುವ ಬಂಡೆಯನ್ನು(ಪೆನಿನ್ಸುಲರ್ ನೀಸ್) ಕೊರೆದು ಸುರಂಗ ನಿರ್ಮಿಸಲು ಡಿಪಿಆರ್( ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸಿರುವುದು ಬೆಂಗಳೂರಿಗರಲ್ಲಿ ಆತಂಕ ಮೂಡಿಸಿದೆ. ಏಕೆಂದರೆ ಇಡೀ ಬೆಂಗಳೂರು ಬಂಡೆಗಳ ಮೇಲೆ ನಿಂತಿದೆ. ಲಾಲ್‌ಬಾಗ್ ಹಾಗೂ ಬಸವನಗುಡಿಯಲ್ಲಿ (ಬ್ಯೂಗಲ್ ರಾಕ್) ಮೇಲ್ಭಾಗದಲ್ಲಿ ಪೆನಿನ್ಸುಲರ್ ನೀಸ್ ಭೂಕಂಪ ನಿರೋಧಕ ಬಂಡೆಯೂ ಆಗಿದೆ. ಪೆನಿನ್ಸುಲರ್ ನೀಸ್( ಬಂಡೆ) ಕೊರೆಯುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಪರಿಸರಾಸಕ್ತರ ದುಗುಡವಾಗಿದೆ.
ಇನ್ನು ಲಾಲ್‌ಬಾಗ್ ಐತಿಹಾಸಿಕ ಬಂಡೆಯನ್ನು 1975 ರಲ್ಲಿ ಭೂವೈಜ್ಞಾನಿಕ ಸಮೀಕ್ಷೆಯು (GSI) ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದೆ. ಇಂತಹ ಸ್ಮಾರಕವನ್ನು ಯಾವುದೇ ಅನುಮತಿ ಪಡೆಯದೇ ಕೊರೆಯುವುದು ಎಷ್ಟು ಸರಿ, ಟನಲ್ ರಸ್ತೆಯಿಂದ ಸಂಚಾರ ದಟ್ಟಣೆ ನಿವಾರಣೆಯಾಗುವುದೇ, ಟನಲ್ ರಸ್ತೆಗೆ ಪರ್ಯಾಯವಾದ ಆಯ್ಕೆಗಳಿಲ್ಲವೇ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದರಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಸಿನ ಸುರಂಗ ರಸ್ತೆ ಯೋಜನೆಗೆ ಆರಂಭಕ್ಕೂ ಮುನ್ನವೇ ವಿಘ್ನ ಎದುರಾಗಿದೆ.
ಲಾಲ್‌ಬಾಗ್ ಬಂಡೆ ವಿಶೇಷತೆ ಏನು?
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿರುವ ಪೆನಿನ್ಸುಲರ್ ನೀಸ್ ಬಂಡೆಯು ಭೂಮಿಯ ಮೇಲಿನ ಅತಿ ಪುರಾತನ ಶಿಲೆಗಳಲ್ಲಿ ಒಂದು. 300 ಕೋಟಿ ವರ್ಷಗಳಷ್ಟು ಹಳೆಯ ಬಂಡೆಯಾಗಿದೆ. ವಿಶ್ವದ ಅತ್ಯಂತ ಉದ್ದ ಹಾಗೂ ಎತ್ತರದ ಪರ್ವತಗಳ ಶ್ರೇಣಿಯಾದ ಹಿಮಾಲಯ ಹಾಗೂ ಡೈನೋಸಾರ್‌ಗಳ ಕಾಲಕ್ಕಿಂತಲೂ ಅತ್ಯಂತ ಹಳೆಯ ಶಿಲಾ ಭಾಗ ಎನಿಸಿದೆ. ಈ ಬಂಡೆಯನ್ನು ʼಪೆನಿನ್ಸುಲಾರ್ ನೀಸ್ʼ ಎಂದು ಕರೆಯಲಾಗುತ್ತದೆ.
1916ರಲ್ಲಿ ಮೈಸೂರು ಭೂವೈಜ್ಞಾನಿಕ ಇಲಾಖೆಯ ಡಾ. ಡಬ್ಲ್ಯೂ.ಎಫ್. ಸ್ಮೀತ್ ಅವರು ದಕ್ಷಿಣ ಭಾರತದ ನೀಸ್ ಶಿಲೆಗಳನ್ನು ಅಧ್ಯಯನ ಮಾಡಿದ ನಂತರ ʼಪೆನಿನ್ಸುಲಾರ್ ನೀಸ್ʼ ಎಂಬ ಹೆಸರು ನೀಡಿದ್ದರು.
ಇದು ಕರ್ನಾಟಕದ ದಖ್ಖನ್ ಪ್ರಸ್ಥಭೂಮಿಯ ಪ್ರಾಚೀನ ಭೂಪದರದ ಭಾಗವಾಗಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು (Geological Survey of India) 1975ರಲ್ಲಿ ಬಂಡೆಯನ್ನು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವೆಂದು ಘೋಷಿಸಿದೆ.
ಬೆಂಗಳೂರು ಮುಖ್ಯವಾಗಿ ದ್ವೀಪಕಲ್ಪದ ಬಂಡೆ (Peninsular Gneiss) ಎಂಬ ಶಿಲಾ ರಚನೆಯಿಂದ ಕೂಡಿದೆ. ಈ ಬಂಡೆ ಸಂರಚನೆಯಲ್ಲಿ ಗ್ರಾನೈಟ್‌ಗಳು, ನೀಸ್‌ಗಳು (gneisses) ಮತ್ತು ಮಿಗ್ಮಾಟೈಟ್‌ಗಳು (migmatites) ಸಾಮಾನ್ಯ ಶಿಲೆಗಳಿವೆ.
ಎಲ್ಲೆಲ್ಲಿದೆ ಈ ಬಂಡೆ?
ಬಸವನಗುಡಿಯಲ್ಲಿರುವ ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಬೆಂಗಳೂರಿನ ಪ್ರಮುಖ ಶಿಲಾ ಪ್ರದೇಶಗಳಲ್ಲಿ ಒಂದು. ಪುರಾತನ ಶಿಲೆಗಳ ರಚನೆಯನ್ನು ಇಲ್ಲಿ ಕಾಣಬಹುದು. ನಗರದ ಸುತ್ತಲಿನ ಪ್ರದೇಶಗಳಲ್ಲಿ ಗ್ರಾನೈಟ್ ಶಿಲಾಖಂಡಗಳು ಸಿಗಲಿವೆ. ಈ ಬಂಡೆಯ ವ್ಯಾಪ್ತಿಯಲ್ಲಿ ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ಲೋಸ್‌ಪೆಟ್ ಗ್ರಾನೈಟ್‌ಗಳನ್ನು ಕಾಣಬಹುದಾಗಿದೆ.
ಲಾಲ್‌ಬಾಗ್‌ನಲ್ಲಿರುವ ಪೆನಿನ್ಸುಲರ್ ಬಂಡೆಯು ಮಲೆಮಹದೇಶ್ವರ ಬೆಟ್ಟ, ಕನಕಪುರ, ಬೆಂಗಳೂರು, ಬಳ್ಳಾರಿವರೆಗೂ ಹರಡಿದೆ. ಸಣ್ಣ ಪ್ರಮಾಣದ ಭೂ ಕಂಪನಗಳು ಸಂಭವಿಸಿದರೂ ಅವನ್ನು ಈ ಬಂಡೆ ನಿಯಂತ್ರಿಸಲಿದೆ. ಇಂತಹ ಸೂಕ್ಷ್ಮ ಹಾಗೂ ಪುರಾತನ ಬಂಡೆಗಲ್ಲಿಗೆ ಹಾನಿ ಮಾಡಿದರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭೂಕಂಪ ನಿರೋಧಕ ಬಂಡೆ
ಬೆಂಗಳೂರು ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಅರ್ಕಾವತಿ ಭೂ ಕವಚಗಳು ಚಲಿಸುತ್ತಿರುವುದರಿಂದ ಕಡಿಮೆ ತೀವ್ರತೆಯ ಭೂಕಂಪಗಳು ಇಲ್ಲಿ ಸಂಭವಿಸುತ್ತವೆ. 2018 ನವೆಂಬರ್ 13ರಂದು ಚಿತ್ರದುರ್ಗದ ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆಯ ಭೂಕಂಪನ ದಾಖಲಾಗಿದೆ. ಐದು ವರ್ಷಗಳ ಮೊದಲು 2013 ರಲ್ಲಿ ಚಿತ್ರದುರ್ಗ ವ್ಯಾಪ್ತಿಯಲ್ಲೇ ಏಳು ಭೂಕಂಪನಗಳು ದಾಖಲಾಗಿದ್ದವು.
1507ರಲ್ಲಿ ಸಂಭವಿಸಿತ್ತು ಭೂಕಂಪ
1507 ರಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು ಎಂಬುದಕ್ಕೆ ಪುರಾವೆಗಳು ಲಭ್ಯವಿವೆ. ಬೆಂಗಳೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ನೆಲಮಂಗಲದ ಬಿಲ್ಲನಕೋಟೆ ಶಾಸನವನ್ನು ಬ್ರಿಟಿಷ್ ಇತಿಹಾಸಕಾರ ಬಿ.ಎಲ್. ರೈಸ್ ಈ ಬಗ್ಗೆ ವಿವರಿಸಿದ್ದಾರೆ. "ಆ ಶಾಸನದಲ್ಲಿ, ವೀರಯ್ಯ ಎಂಬುವರು ಭೂಕಂಪ ಸಂಭವಿಸಿದ ಬಗ್ಗೆ ಬರೆದಿದ್ದರು. ಆದರ, ಪರ್ಯಾಯ ದ್ವೀಪದ ನೀರ್ಗಲ್ಲು ಕಾರಣ ಏನೂ ಆಗಲಿಲ್ಲ" ಎಂದು ಉಲ್ಲೇಖಿಸಿದ್ದರು.
ನಗರೀಕರಣದಿಂದಲೂ ಬಂಡೆಗೆ ಹಾನಿ
ಬೆಂಗಳೂರಿನ ಪ್ರತಿ ಮೂಲೆಯಲ್ಲಿ ನಗರೀಕರಣ ವಿಪರೀತವಾಗಿದೆ. ಬೃಹತ್ ಕಟ್ಟಡಗಳು, ಮೆಟ್ರೋ ರೈಲು ಸುರಂಗಗಳು, ಫ್ಲೈಓವರ್‌ಗಳು ಮತ್ತು ಸಬ್‌ವೇಗಳ ನಿರ್ಮಾಣ ವೇಗವಾಗಿ ನಡೆಯುತ್ತಿವೆ. ಸುರಂಗಗಳು ಮತ್ತು ಎತ್ತರದ ಕಟ್ಟಡಗಳನ್ನು ನಿರ್ಮಿಸುವುದಕ್ಕಾಗಿ ಅಡಿಪಾಯ ಭದ್ರಗೊಳಿಸಲು ಕಲ್ಲನ್ನು ಸ್ಫೋಟಿಸಲಾಗುತ್ತದೆ. ಇದು ಪುರಾತನ ಬಂಡೆಯನ್ನು ದುರ್ಬಲಗೊಳಿಸುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಭೂಕಂಪ ನಿರೋಧ ದಖನ್ ಶಿಲೆ
ದಖನ್ ಪ್ರದೇಶದ ಸ್ತಂಭಾಕಾರದ ಬಸಾಲ್ಟ್ ಲಾವಾದಿಂದ ( ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಕಡಿಮೆ ಸ್ನಿಗ್ಧತೆಯ ಲಾವಾದಿಂದ ರೂಪುಗೊಂಡ ಗಟ್ಟಿ ಅಗ್ನಿಶಿಲೆ) ಸೇಂಟ್ ಮೇರಿ ದ್ವೀಪಗಳು, ಕರ್ನಾಟಕದ ಉಡುಪಿ ಜಿಲ್ಲೆ ಡೆಕ್ಕನ್ ಬಲೆಯ ಶಿಲೆಗಳು ರಚನೆಯಾಗಿವೆ. ಕರ್ನಾಟಕದಲ್ಲಿ ನೀರಿನ ಅಡಿಯಲ್ಲಿ ಲಾವಾ ಹೊರತೆಗೆಯುವಿಕೆ ಅಥವಾ ಸಬ್‌ಕ್ವೀಯಸ್ ಹೊರತೆಗೆಯುವಿಕೆಗೆ ಕಾರಣವಾದ ದಿಂಬಿನ ಆಕಾರದ ರಚನೆಗಳನ್ನು ಪಿಲ್ಲೋ ಲಾವಾ (ಕರಗಿದ ಬಂಡೆಯು ನೀರಿನಡಿ ಹೊರಹೊಮ್ಮಿದಾಗ ರೂಪುಗೊಳ್ಳುವ ಉಬ್ಬು ಶಿಲೆ ) ವಿಶ್ವದ ಅತ್ಯುತ್ತಮ ಮತ್ತು ಭೂಕಂಪ ನಿರೋಧಕ ಬಂಡೆಗಳಾಗಿವೆ.
ಎಲ್ಲಿಂದ ಎಲ್ಲಿಗೆ ಟನಲ್ ರಸ್ತೆ
ಉತ್ತರ ಹಾಗೂ ದಕ್ಷಿಣ ಸಂಪರ್ಕಿಸುವ ಹೆಬ್ಬಾಳ-ಸಿಲ್ಕ್‌ಬೋರ್ಡ್ ನಡುವಿನ 16.7 ಕಿ.ಮೀ ಉದ್ದದ ಅವಳಿ ಸುರಂಗ ರಸ್ತೆಯು ಸಸ್ಯಕಾಶಿ ಲಾಲ್‌ಬಾಗ್ ಮೂಲಕ ಹಾದು ಹೋಗಲಿದೆ. ಎರಡು ಪ್ಯಾಕೇಜ್‌ಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಮೊದಲ ಪ್ಯಾಕೇಜ್‌ನಲ್ಲಿ ಹೆಬ್ಬಾಳದಿಂದ ರೇಸ್ ಕೋರ್ಸ್ ಜಂಕ್ಷನ್‌ವರೆಗಿನ 8.748 ಕಿ.ಮೀ., ಎರಡನೇ ಪ್ಯಾಕೇಜ್‌ನಲ್ಲಿ ರೇಸ್ ಕೋರ್ಸ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ 8.0 ಕಿ.ಮೀ., ಸುರಂಗ ರಸ್ತೆ ನಿರ್ಮಿಸಲಾಗುತ್ತದೆ. ಆದರೆ, ನಗರದ ಜಲಮೂಲಗಳು ಹಾಗೂ ಶ್ವಾಸತಾಣವಾದ ಲಾಲ್‌ಬಾಗ್‌ಗೆ ಈ ಸುರಂಗದಿಂದ ಹಾನಿಯಾಗಲಿದೆ ಎಂಬ ಆತಂಕವು ಪರಿಸರ ಪ್ರೇಮಿಗಳನ್ನು ಹೋರಾಟಕ್ಕೆ ಇಳಿಯುವಂತೆ ಮಾಡಿದೆ.
ಟನಲ್ ರಸ್ತೆ ವಿರೋಧಿಸಲು ಕಾಣವೇನು?
ಟನಲ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 18 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಈವರೆಗೆ ಕೇವಲ ನಾಲ್ಕು ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಪೀಕ್ ಅವರ್‌ನಲ್ಲಿ ದಟ್ಟಣೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಕನಿಷ್ಠ 25 ವರ್ಷ ಬಾಳಿಕೆ ಬರುವಂತೆ ಯೋಜನೆ ರೂಪಿಸಬೇಕು. ಆದರೆ, ಸರ್ಕಾರ ರೂಪಿಸಿರುವ ಟನಲ್ ರಸ್ತೆ ಯೋಜನೆಯು ಕೇವಲ ಮುಂದಿನ 10 ವರ್ಷ ಬಾಳಿಕೆ ಬರುವಂತಿದೆ. ಪಾದಚಾರಿ, ಒಳಚರಂಡಿ, ನೈಸರ್ಗಿಕ ವಿಪತ್ತುಗಳ ನಿರ್ವಹಣೆ ಬಗ್ಗೆ ಉಲ್ಲೇಖಿಸಿಲ್ಲ.
ಸುರಂಗ ರಸ್ತೆ, ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಉಲ್ಲೇಖಿಸಿಲ್ಲ. ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜಿಬಿಎಯಿಂದ ಡಿಪಿಆರ್ ಸಿದ್ಧಪಡಿಸಲಾಗಿದೆ. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಪರಿಶೀಲನೆ ನಡೆಸಿಲ್ಲ. ಹೆಬ್ಬಾಳ ಹಾಗೂ ಸಿಲ್ಕ್‌ಬೋರ್ಡ್ ನಡುವೆ ರೆಡ್‌ಲೈನ್ ಮೆಟ್ರೋ ಹಾದುಹೋಗಲಿದೆ. ಲಾಲ್‌ಬಾಗ್ ಬಳಿ ಮೆಟ್ರೋ ಲೈನ್ ಇರಬೇಕಾದರೆ ಸುರಂಗ ಮಾರ್ಗ ಏಕೆ ಎಂಬುದು ತಜ್ಞರು ಪ್ರಶ್ನೆಯಾಗಿದೆ.
ಸುರಂಗದಿಂದ ಬಂಡೆಗೆ ಅಪಾಯವಿಲ್ಲ
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಪ್ರಧಾನ ಉಪ ವ್ಯವಸ್ಥಾಪಕ ಡಾ. ಪ್ರಕಾಶ್ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ಲಾಲ್‌ಬಾಗ್‌ನಲ್ಲಿರುವ ಬಂಡೆಯು ಸುಮಾರು 300ಕೋಟಿ ವರ್ಷಗಳ ಹಿಂದಿನ ಶಿಲೆಯಾಗಿದೆ. ಸುಮಾರು 2-3 ಕಿ.ಮೀ ಆಳವಾಗಿ ಬೇರೂರಿದೆ. ಇಡೀ ಬೆಂಗಳೂರು ನಗರ ಇಂತಹ ಬಂಡೆಗಳ ಮೇಲೆಯೇ ನಿಂತಿದೆ. ಈ ಮೊದಲು ಲಾಲ್‌ಬಾಗ್ ಸುತ್ತಮುತ್ತ ಕಲ್ಲು ಕ್ವಾರಿಗಳಿದ್ದವು, ಆಗ ಸ್ಪೋಟಕಗಳನ್ನು ಬಳಸುತ್ತಿದ್ದರಿಂದ ಬಂಡೆಗೆ ಅಪಾಯವಾಗುವ ಸಾಧ್ಯತೆ ಇತ್ತು. ಈಗ ಎಲ್ಲಾ ಕ್ವಾರಿಗಳನ್ನು ಮುಚ್ಚಿಸಲಾಗಿದೆ. ಸರ್ಕಾರದ ಟನಲ್ ರಸ್ತೆ ಯೋಜನೆಯಲ್ಲಿ ಯಾವುದೇ ಸ್ಫೋಟಕ ಬಳಸದ ಕಾರಣ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.
ಅಶೋಕ ಪಿಲ್ಲರ್ ಬಳಿ ನಿಲ್ದಾಣವಾದರೆ ಅನುಕೂಲ
ರಾಜ್ಯ ಸರ್ಕಾರ ಲಾಲ್‌ಬಾಗ್‌ನಲ್ಲಿ ವಾಹನಗಳ ಪ್ರವೇಶ, ನಿರ್ಗಮನಕ್ಕೆ ರ‍್ಯಾಂಪ್ ನಿರ್ಮಿಸಲು ಉದ್ದೇಶಿಸಿದೆ. ಇದರಿಂದ ಲಾಲ್‌ಬಾಗ್‌ನಲ್ಲಿರುವ ಮರಗಳಿಗೆ ಹಾನಿಯಾಗಲಿದೆ. ಲಾಲ್‌ಬಾಗ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರ‍್ಯಾಂಪ್‌ಗಳನ್ನು ಅಶೋಕ ಪಿಲ್ಲರ್ ಬಳಿ ನಿರ್ಮಿಸಿದರೆ ಲಾಲ್‌ಬಾಗ್‌ಗೆ ಯಾವುದೇ ತೊಂದರೆ ಇರುವುದಿಲ್ಲ. ಇದರಿಂದ ಮರಗಳಿಗೂ ಪೆಟ್ಟು ಬೀಳುವುದಿಲ್ಲ ಎಂದು ಜೀವವೈವಿಧ್ಯ ಮತ್ತು ಪರಿಸರ ವಿಜ್ಞಾನ ತಜ್ಞ ಕೇಶವಮೂರ್ತಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.