Breast Cancer | ಗ್ರಾಮೀಣ ಮಹಿಳೆಯರಿಗೆ ಉಚಿತ ಮ್ಯಾಮೋಗ್ರಫಿ ; ಸಂಕೋಚ ಬದಿಗಿರಿಸಿ ಚಿಕಿತ್ಸೆ ಪಡೆಯಲು ಕ್ಯಾನ್ಸರ್ ತಜ್ಞೆ ಡಾ. ಸ್ಮಿತಾ ಸಾಲ್ಡಾನ ಸಲಹೆ
ಈ ಮೊದಲು ಕೇವಲ 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮಾತ್ರ ಸ್ತನ ಕ್ಯಾನ್ಸರ್ ಕಾಣಿಸುತ್ತಿತ್ತು. ಆದರೆ ಈಗ 30 ರಿಂದ 45 ವರ್ಷದ ಮಹಿಳೆಯರಲ್ಲಿಯೂ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ.
“ಸಂಕೋಚ ತೊರೆದು, ಸಮಯಕ್ಕೆ ಸರಿಯಾಗಿ ತಪಾಸಣೆಗೆ ಒಳಗಾದರೆ ಸ್ತನ ಕ್ಯಾನ್ಸರ್ ಪ್ರಾಣಹಾನಿಯಲ್ಲ. ಆರಂಭದಲ್ಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗಮುಕ್ತ, ಭಯಮುಕ್ತ ಜೀವನ ನಿಮ್ಮದಾಗಲಿದೆ"...
ಹೀಗೆ ಹೇಳುತ್ತಲೇ ಸ್ತನ ಕ್ಯಾನ್ಸರ್ ಅಪಾಯ, ಆತಂಕಗಳ ಜೊತೆಗೆ ಜಾಗೃತಿಯ ಪಾಠ ಹೇಳಿಕೊಟ್ಟಿದ್ದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಸಾಲ್ಡಾನ.
ಸ್ತನ ಕ್ಯಾನ್ಸರ್ ಕುರಿತು ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
“ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಸ್ತನ ಕ್ಯಾನ್ಸರ್ ಹೆಚ್ಚಾಗಿದೆ. ಆದರೆ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ತುಸು ಹೆಚ್ಚು. ಈ ಮೊದಲು 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಮಾತ್ರ ಸ್ತನ ಕ್ಯಾನ್ಸರ್ ಕಾಣಿಸುತ್ತಿತ್ತು. ಆದರೆ, ಈಗ 30 ರಿಂದ 45 ವರ್ಷದ ಮಹಿಳೆಯರಲ್ಲಿ ಪ್ರಕರಣಗಳು ಹೆಚ್ಚು ಕಂಡು ಬರುತ್ತಿವೆ ಎಂದರು.
ಬದಲಾದ ಜೀವನಶೈಲಿ
ಕಳೆದ ಮೂರು ದಶಕಕ್ಕೆ ಹೋಲಿಸಿದರೆ ಇತ್ತೀಚಿನ ಜೀವನಶೈಲಿ, ತಡವಾಗಿ ವಿವಾಹ ಮತ್ತು ಸಂತಾನೋತ್ಪತ್ತಿ ಪ್ರಕ್ರಿಯೆ, ವಯಸ್ಸಿನ ಬದಲಾವಣೆ, ಸ್ತನ್ಯಪಾನದ ಅವಧಿಯ ಕಡಿತ, ಮದ್ಯಪಾನ ಹಾಗೂ ಧೂಮಪಾನ ಹೆಚ್ಚಳ ಇವೆಲ್ಲವೂ ಸ್ತನ ಕ್ಯಾನ್ಸರ್‌ಗೆ ಅಪಾಯಕಾರಕ ಅಂಶಗಳಾಗಿವೆ. ಹತ್ತು ಮಹಿಳೆಯರ ಜೀವಿತಾವಧಿಯಲ್ಲಿ ಮೂವರಿಗೆ ಸ್ತನ ಕ್ಯಾನ್ಸರ್ ಬಾಧಿಸುವ ಸಾಧ್ಯತೆ ಇದೆ. ಜೀವನಶೈಲಿ ಬದಲಿಸಿಕೊಂಡರೆ ಅಪಾಯ ಕಡಿಮೆಯಾಗಲಿದೆ” ಎಂಬುದು ಡಾ. ಸ್ಮಿತಾ ಅವರು ನೀಡುವ ಸಲಹೆ.
ಸ್ವಯಂ ಸ್ತನ ಪರೀಕ್ಷೆಯ ಮಹತ್ವ
"ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಕುರಿತು ಅನುಮಾನಗಳಿದ್ದರೆ, ವೈದ್ಯರ ಬಳಿ ಹೋಗಲು ಸಂಕೋಚವಾದರೆ ತಾವೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಇಪ್ಪತ್ತು ವರ್ಷ ದಾಟಿದ ಪ್ರತಿ ಮಹಿಳೆಯೂ ತಿಂಗಳಿಗೊಮ್ಮೆ ಸ್ನಾನದ ನಂತರ ಕೈಯಿಂದ ಸ್ತನದ ಭಾಗವನ್ನು ಪರಿಶೀಲಿಸಬೇಕು. ತುಟಿಯಂತೆ ಮೃದುವಾಗಿದ್ದರೆ ಸಾಮಾನ್ಯ, ಮೂಗಿನಂತೆ ಗಟ್ಟಿಯಾಗಿದ್ದರೆ ಭಾಗಶಃ ಸಾಮಾನ್ಯ. ಹಣೆಯಂತೆ ಕಠಿಣವಾಗಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಅಥವಾ ಕ್ಲಿನಿಕಲ್ ಪರೀಕ್ಷೆ ಮಾಡಿಸಬೇಕು” ಎಂದು ಸಲಹೆ ನೀಡಿದರು.
ಚಿಕಿತ್ಸೆ ಮತ್ತು ಗುಣಮುಖ ಪ್ರಮಾಣ
“ಸ್ತನ ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿ ಪತ್ತೆಯಾದರೆ ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆ ಶೇ.80 ರಿಂದ90 ರಷ್ಟು ಇರುತ್ತದೆ. ತೃತೀಯ ಹಂತದಲ್ಲಿ ಶೇ.50 ರಷ್ಟು ಗುಣಮುಖ ಸಾಧ್ಯತೆ ಇರಲಿದೆ. 1 ಮತ್ತು 2 ಹಂತಗಳಲ್ಲಿ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ರೇಡಿಯೇಷನ್ ಮೂಲಕ ಉತ್ತಮ ಫಲಿತಾಂಶ ಕಾಣಬಹುದು. ಆದರೆ, ನಾಲ್ಕನೇ ಹಂತದಲ್ಲಿ ಕಾಯಿಲೆ ಗುಣಮುಖವಾಗುವ ಪ್ರಮಾಣ ಕೇವಲ ಶೇ. 20 ಮಾತ್ರ ಇರಲಿದೆ. ಆದ್ದರಿಂದ ಮಹಿಳೆಯರು ಸ್ತನ ಕ್ಯಾನ್ಸರ್ ಪತ್ತೆಯಾದ ಆರಂಭದಲ್ಲೇ ವೈದ್ಯರ ಸಲಹೆ ಪಡೆದರೆ ಬದುಕುವ ಪ್ರಮಾಣ ಹೆಚ್ಚಾಗಿರಲಿದೆ. ಕ್ಯಾನ್ಸರ್ ಕುರಿತು ಮಹಿಳೆಯರು ಸಕಾರಾತ್ಮಕ ಮನೋಭಾವದಿಂದ ಚಿಕಿತ್ಸೆ ಸ್ವೀಕರಿಸಿದರೆ ಫಲಿತಾಂಶ ಉತ್ತಮವಾಗಿರುತ್ತದೆ. ಕುಟುಂಬದ ಬೆಂಬಲ ಮತ್ತು ಮನೋಸ್ಥೈರ್ಯವೂ ರೋಗಿಗಳನ್ನು ಪುನಃಚೇತನಗೊಳಿಸಲು ನೆರವಾಗಲಿದೆ ಎಂದು ಡಾ.ಸ್ಮಿತಾ ತಿಳಿಸಿದರು.
ವಂಶವಾಹಿನಿಯೂ ಕಾರಣ
ಸ್ತನ ಕ್ಯಾನ್ಸರ್‌ಗೆ ವಂಶವಾಹಿನಿಯು ಶೇ.40 ರಷ್ಟು ಪರಿಣಾಮ ಬೀರಲಿದೆ. ಹಾಲಿವುಡ್ ನಟಿ ಆಂಜೆಲಿನಾ ಜೋಲಿ ತಮಗೆ ಸ್ತನ ಕ್ಯಾನ್ಸರ್ ಪಾಸಿಟಿವ್ ಬಂದ ನಂತರ ಮುನ್ನೆಚ್ಚರಿಕೆಯಾಗಿ ಶಸ್ತ್ರಚಿಕಿತ್ಸೆಗೊಳಗಾದರು. ಅದನ್ನು ‘ಜೋಲಿ ಎಫೆಕ್ಟ್’ ಎಂದು ಕರೆಯಲಾಗುತ್ತದೆ,” ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳು
ಕಿದ್ವಾಯಿ ಆಸ್ಪತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಮ್ಯಾಮೋಗ್ರಫಿ ಘಟಕಗಳ ಮೂಲಕ ಮಹಿಳೆಯರಿಗೆ ಉಚಿತ ಪರೀಕ್ಷೆ, ಜಾಗೃತಿ ಹಾಗೂ ಸ್ಕ್ರೀನಿಂಗ್ ಶಿಬಿರಗಳನ್ನು ಆಯೋಜಿಸುತ್ತಿದೆ. ಈ ಮೊಬೈಲ್ ಕ್ಲಿನಿಕ್‌ಗಳು ಗ್ರಾಮಗಳಲ್ಲೇ ಪರೀಕ್ಷೆ ನಡೆಸಿ, ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ಕಿದ್ವಾಯಿ ಆಸ್ಪತ್ರೆಗೆ ರವಾನಿಸುತ್ತವೆ. “ಗ್ರಾಮದ ಮಹಿಳೆಯರು ಹಿಂಜರಿಯದೆ ಪರೀಕ್ಷೆಗೆ ಮುಂದಾಗಬೇಕು. ಕ್ಯಾನ್ಸರ್ ಕುರಿತು ಅಜಾಗರೂಕತೆ ವಹಿಸಿದರೆ ಜೀವಕ್ಕೆ ಅಪಾಯಕಾರಿಯಾಗಬಹುದು. ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರು ನಾಚಿಕೆ, ಭಯಗಳನ್ನು ಬದಿಗಿಟ್ಟು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಬೇಕು" ಎಂದು ಪರೀಕ್ಷೆಯ ಮಹತ್ವ ತಿಳಿಸಿದರು.
ಪುರುಷರಲ್ಲಿಯೂ ಸ್ತನ ಕ್ಯಾನ್ಸರ್
ಈ ಹಿಂದೆ ಸ್ತನ ಕ್ಯಾನ್ಸರ್ ಕೇವಲ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಇತ್ತೀಚೆಗೆ ಪುರುಷರಲ್ಲಿಯೂ ವಿರಳ ಪ್ರಕರಣಗಳು ಕಂಡುಬರುತ್ತಿವೆ. ದೇಹದಲ್ಲಿ ನಡೆಯುವ ಹಾರ್ಮೋನ್‌ಗಳ ಅಸಮತೋಲನ, ಅಪೌಷ್ಠಿಕ ಆಹಾರ, ಸ್ಥೂಲಕಾಯ, ವ್ಯಾಯಾಮ ಇಲ್ಲದೇ ಇರುವುದು ಹಾಗೂ ಮದ್ಯಪಾನ ಹಾಗೂ ಧೂಮಪಾನ ಸೇವನೆ ಪ್ರಮುಖ ಕಾರಣಗಳಾಗಿವೆ.
ಸ್ತನ ಕ್ಯಾನ್ಸರ್ ತಡೆಗಟ್ಟವ ಕ್ರಮಗಳು
ಸ್ವಲ್ಪ ಪ್ರಮಾಣದಲ್ಲಿ ಮದ್ಯಪಾನ ಮಾಡಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾವುದೇ ಪ್ರಮಾಣದ ಅಲ್ಕೊಹಾಲ್ ಕೂಡ ‘ಗ್ರೇಡ್ 1 ಕಾರ್ಸಿನೋಜೆನ್’ ಆಗಿದೆ. ‘ಸ್ವಲ್ಪ ಕುಡಿದರೆ ಹಾನಿಯಿಲ್ಲ’ ಎಂಬ ನಂಬಿಕೆ ತಪ್ಪು. ಮದ್ಯಪಾನ ಸೇವನೆ ಸಂಪೂರ್ಣವಾಗಿ ತಪ್ಪಿಸಬೇಕು. ಮಹಿಳೆಯರು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಆರೋಗ್ಯಕರ ಆಹಾರ ಪದ್ಧತಿ ಪಾಲಿಸಬೇಕು, ತೂಕ ನಿಯಂತ್ರಿಸಬೇಕು ಮತ್ತು ಜನನ ವಿಳಂಬ, ಗರ್ಭನಿರೋಧಕ ಹಾರ್ಮೋನ್‌ಗಳ ಅತಿಯಾದ ಬಳಕೆ ತಪ್ಪಿಸಬೇಕು ಎಂದು ಡಾ. ಸ್ಮಿತಾ ಸಾಲ್ಡಾನ ಸಲಹೆ ನೀಡಿದರು.
ಮಹಿಳೆಯರು ಅನುಸರಿಸಬೇಕಾದ ಕ್ರಮಗಳು
ಮಹಿಳೆಯರು ಪ್ರತಿ ತಿಂಗಳು ಒಂದು ಬಾರಿ, ವಿಶೇಷವಾಗಿ ಮಾಸಿಕ ಋತು ಚಕ್ರ ಮುಗಿದ ಒಂದು ವಾರದ ನಂತರ ಸ್ವಯಂ ತಪಾಸಣೆ ಮಾಡಿಕೊಳ್ಳಬೇಕು. ತಜ್ಞ ವೈದ್ಯರ ಬಳಿ ನಿಯಮಿತವಾಗಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಹಾಗೂ 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಮ್ಯಾಮೋಗ್ರಫಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ತನ ಕ್ಯಾನ್ಸರ್ ಕುರಿತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಸಾಲ್ಡಾನ ಜೊತೆ ʼದ ಫೆಡರಲ್ ಕರ್ನಾಟಕʼ ನಡೆಸಿದ ಸಂದರ್ಶನ ಇಲ್ಲಿದೆ.