Breast Cancer | ಬದಲಾದ ಜೀವನಶೈಲಿ ಸ್ತನ ಕ್ಯಾನ್ಸರ್‌ಗೆ ಕಾರಣ;  ಕಿದ್ವಾಯಿ ನಿರ್ದೇಶಕ ಡಾ. ನವೀನ್‌ ಟಿ. ಎಚ್ಚರಿಕೆ
x

Breast Cancer | ಬದಲಾದ ಜೀವನಶೈಲಿ ಸ್ತನ ಕ್ಯಾನ್ಸರ್‌ಗೆ ಕಾರಣ; ಕಿದ್ವಾಯಿ ನಿರ್ದೇಶಕ ಡಾ. ನವೀನ್‌ ಟಿ. ಎಚ್ಚರಿಕೆ

ಕ್ಯಾನ್ಸರ್‌ನಲ್ಲಿ ಎಂಟು ವಿಧಗಳಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಸ್ತನ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಇನ್ನುಳಿದಂತೆ ಶ್ವಾಸಕೋಶ, ಕರಳು, ಗರ್ಭಕಂಠ, ಥೈರಾಯಿಡ್‌, ತುಟಿ ಹಾಗೂ ಬಾಯಿ, ಅಂಡಾಶಯ ಹಾಗೂ ಗುದನಾಳದ ಕ್ಯಾನ್ಸರ್‌ಗಳಿವೆ.


Click the Play button to hear this message in audio format

ಬೆಂಗಳೂರು ನಗರ ಕ್ಯಾನ್ಸರ್‌ಪೀಡಿತರ ರಾಜಧಾನಿಯಾಗುತ್ತಿದೆ. ಅದರಲ್ಲೂ, ಕಳೆದ ಒಂದು ದಶಕದಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಅಗ್ರಸ್ಥಾನ ಕಾಯ್ದುಕೊಂಡಿದೆ. ಸ್ತನ ಕ್ಯಾನ್ಸರ್‌ ಚಿಕಿತ್ಸೆ ಲಭ್ಯವಿದ್ದರೂ ನಿರ್ಲಕ್ಷ್ಯ ಹಾಗೂ ಸಂಕುಚಿತ ಮನೋಭಾವದಿಂದ ಬಹುತೇಕರು ಸಾವಿನ ಕದ ತಟ್ಟುತ್ತಿದ್ದಾರೆ.

2024-25 ನೇ ಸಾಲಿನಲ್ಲಿ ರಾಜ್ಯಾದ್ಯಂತ 87,855 ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗಿವೆ. ಇವುಗಳಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಶೇ.31 ಎಂಬುದು ಕಳವಳಕಾರಿ ಸಂಗತಿ. ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು ಶರವೇಗದಲ್ಲಿ ಏರಿಕೆಯಾಗುತ್ತಿವೆ ಎಂಬುದು ಆರೋಗ್ಯ ಇಲಾಖೆಯ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ.

ಸಾವಿರಾರು ಜನರಿಗೆ ಜೀವಭಾಗ್ಯ

ಕ್ಯಾನ್ಸರ್‌ ಕಾಯಿಲೆಗಳಲ್ಲಿ ಎಂಟು ವಿಧಗಳಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ತನ ಕ್ಯಾನ್ಸರ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಉಳಿದವು ಶ್ವಾಸಕೋಶ, ಕರುಳು, ಗರ್ಭಕಂಠ, ಥೈರಾಯಿಡ್‌, ತುಟಿ ಹಾಗೂ ಬಾಯಿ, ಅಂಡಾಶಯ, ಗುದನಾಳದ ಕ್ಯಾನ್ಸರ್‌ ಪ್ರಕರಣಗಳಿವೆ. ಅಕ್ಟೋಬರ್‌ ತಿಂಗಳಲ್ಲಿ ಸ್ತನ ಕ್ಯಾನ್ಸರ್‌ ಜಾಗೃತಿ ಮಾಸಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಅದರಂತೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಜಾಗೃತಿ ಮೂಡಿಸುತ್ತಿವೆ.
ಕ್ಯಾನ್ಸರ್‌ಗೆ ದೇಶದಲ್ಲೇ ಅತ್ಯುತ್ತಮ ಚಿಕಿತ್ಸೆ ನೀಡುವ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಸಾವಿರಾರು ರೋಗಿಗಳಿಗೆ ಜೀವ ಹಾಗೂ ಜೀವನ ಭಾಗ್ಯ ಕಲ್ಪಿಸುತ್ತಿದೆ. ರಾಜ್ಯದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳು, ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಚಿಕಿತ್ಸೆ, ಕ್ಯಾನ್ಸರ್‌ ಪೀಡಿತರ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಅಂಶಗಳು ಇನ್ನಿತರ ಅಂಶಗಳ ಕುರಿತು ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ನವೀನ್‌ ಟಿ. ಅವರು ʼ
ದ ಫೆಡರಲ್‌ ಕರ್ನಾಟಕʼದ
ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲೇ ಸ್ತನ ಕ್ಯಾನ್ಸರ್‌ ಹೆಚ್ಚು

ರಾಜ್ಯದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ 2024ರಲ್ಲಿ ಸುಮಾರು 15,359 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಬೆಂಗಳೂರಿನಲ್ಲಿ 2,610 ಸ್ತನ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ನಗರ ಪ್ರದೇಶದಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಕ್ಯಾನ್ಸರ್ ಪ್ರಕರಣಗಳ ನೋಂದಣಿಯು ವಾರ್ಷಿಕವಾಗಿ ಶೇ.3 ರಿಂದ ಶೇ.4 ರಷ್ಟು ಹೆಚ್ಚುತ್ತಿವೆ. ಇದು ಕಳೆದ ದಶಕಕ್ಕಿಂತ ಹೆಚ್ಚಾಗಿದೆ.

ಹೆಚ್ಚಳಕ್ಕೆ ಪ್ರಮುಖ ಕಾರಣಗಳು

ಪ್ರಮುಖವಾಗಿ ನಗರೀಕರಣ ಮತ್ತು ಜೀವನಶೈಲಿಯು ಬೆಂಗಳೂರಿನಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು ಮುಖ್ಯ ಕಾರಣವಾಗಿದೆ. ಸರಿಯಾದ ಆಹಾರ ಕ್ರಮ ಅನುಸರಿಸದೇ ಇರುವುದು. ಅತಿಯಾದ ಕೊಬ್ಬಿನ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಆಹಾರಗಳನ್ನು ಸೇವಿಸುವುದು. ಹಾರ್ಮೋನುಗಳ ಚಿಕಿತ್ಸೆ ಮತ್ತು ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು. ತಡವಾಗಿ ಮದುವೆ ಹಾಗೂ ಮಕ್ಕಳನ್ನು ಪಡೆಯುವುದು ನಗರ ಪ್ರದೇಶದಲ್ಲಿ ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣ ಎಂಬುದು ಕಿದ್ವಾಯಿ ಆಸ್ಪತ್ರೆ ನಿರ್ದೇಶಕರ ಎಚ್ಚರಿಕೆಯಾಗಿದೆ.

ಯಾವ ವಯಸ್ಸಿನವರಲ್ಲಿ ಹೆಚ್ಚು ?

ಸಾಮಾನ್ಯವಾಗಿ 40 ರಿಂದ 50ರ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳಲಿದ್ದು, ವಯಸ್ಸಾದಂತೆ ಕ್ಯಾನ್ಸರ್ ಸಾಧ್ಯತೆಗಳು ಹೆಚ್ಚುತ್ತವೆ. ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಇಲ್ಲದಿರುವುದು. ಬೊಜ್ಜು, ಹಾರ್ಮೋನುಗಳ ಬದಲಾವಣೆಯೂ ಕ್ಯಾನ್ಸರ್‌ಗೆ ಕಾರಣವಾಗಿದೆ. ಶೇ.3 ಪ್ರಕರಣಗಳಲ್ಲಿ ಆನುವಂಶಿಕ ಅಂಶಗಳು ಪ್ರಮುಖ ಕಾರಣವಾಗಿದೆ.

ಪುರುಷರಲ್ಲೂ ಇದೆ ಸ್ತನ ಕ್ಯಾನ್ಸರ್‌

ಈ ಮೊದಲು ಮಹಿಳೆಯರಲ್ಲಿ ಮಾತ್ರ ಸ್ತನ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಒಟ್ಟು ಪ್ರಕರಣಗಳಲ್ಲಿ ಶೇ.2 ರಷ್ಟು ಪುರುಷರಲ್ಲೂ ಸ್ತನ ಕ್ಯಾನ್ಸರ್‌ ಪ್ರಕರಣಗಳು ಕಂಡು ಬರುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ಹೋಗಲಾಡಿಸಬಹುದು.

ಪೌಷ್ಟಿಕಾಂಶದ ಕೊರತೆ

ಕಳೆದ ದಶಕದಿಂದೀಚೆಗೆ ನಾವು ಸೇವಿಸುವ ಆಹಾರ ಕ್ರಮದಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿ ಕಾಣುತ್ತಿದೆ. ಮಹಿಳೆಯರು ಹೆರಿಗೆ ನಂತರ ತಮ್ಮ ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಅವಧಿ ಕೇವಲ ಆರು ತಿಂಗಳಿಗೆ ಇಳಿದಿರುವುದು ಅಪಾಯಕಾರಿ ಅಂಶವಾಗಿದೆ. ಈ ಮೊದಲು ಮಹಿಳೆಯರು ತಮ್ಮ ಮಕ್ಕಳಿಗೆ ಕನಿಷ್ಠ ಎರಡು ವರ್ಷ ಹಾಲುಣಿಸುತ್ತಿದ್ದರು. ಆದರೆ ಈಗ ಹಾಲುಣಿಸುವುದು ಕಡಿಮೆ ಮಾಡಿರುವುದು ಸ್ತನ ಕ್ಯಾನ್ಸರ್‌ಗೆ ಕಾರಣವಾಗಿದೆ.

ಕಾಯಿಲೆ ಪತ್ತೆ ಹೇಗೆ, ಚಿಕಿತ್ಸೆ ಏನು?

ಸ್ತನ ಕ್ಯಾನ್ಸರ್ ಕುರಿತು ಹೆದರಿಕೆಯ ಬದಲು ಮಹಿಳೆಯರಲ್ಲಿ ಮುಖ್ಯವಾಗಿ ಅರಿವು ಮೂಡಬೇಕು. ಈ ಕಾಯಿಲೆಯು 3 ಅಥವಾ 4ನೇ ಹಂತದಲ್ಲಿದ್ದರೂ ಸಹ ಗುಣಪಡಿಸುವಿಕೆ ಪ್ರಮಾಣ ಶೇ.60 ಇದೆ. ಬೇರೆ ಕ್ಯಾನ್ಸರ್‌ ರೋಗಗಳಿಗೆ ಹೋಲಿಸಿದರೆ ಸ್ತನ ಕ್ಯಾನ್ಸರ್‌ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಬದುಕುಳಿಯಲಿದ್ದು ರೋಗಿಗಳು ಭಯಪಡುವ ಅಗತ್ಯವಿಲ್ಲ ಎಂದು ಡಾ. ನವೀನ್‌ ಟಿ. ಹೇಳಿದರು.

ಆಧುನಿಕ ಚಿಕಿತ್ಸಾ ವಿಧಾನ ಏನಿದೆ?

ಪ್ರಸ್ತುತ ಜಗತ್ತಿನಲ್ಲಿರುವ ಎಲ್ಲಾ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ನಮ್ಮ ದೇಶದಲ್ಲಿ ಲಭ್ಯವಿದೆ. ರೋಬೋಟಿಕ್, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ, ವಿಕಿರಣ ಆಂಕೊಲಾಜಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವಂತೆಯೇ ಕಿದ್ವಾಯಿ ಆಸ್ಪತ್ರೆಯಲ್ಲೂ ಇದೆ. ಅತ್ಯಾಧುನಿಕ ಯಂತ್ರಗಳು ಲಭ್ಯವಿವೆ. ಕೀಮೋಥೆರಪಿಯಲ್ಲಿ ಇಮ್ಯುನೊಥೆರಪಿ ಮತ್ತು ಹಾರ್ಮೋನ್ ಥೆರಪಿಯಂತಹ ಸುಧಾರಿತ ಔಷಧಗಳು ಕೂಡ ಲಭ್ಯವಿವೆ.

ಉಚಿತ, ರಿಯಾಯಿತಿ ದರದ ಚಿಕಿತ್ಸೆ

ಬಿಪಿಎಲ್‌ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು. ಬಿಪಿಎಲ್‌ ಕಾರ್ಡ್‌ ಇಲ್ಲದಿರುವವರಿಗೂ ಕಡಿಮೆ ಖರ್ಚಿನಲ್ಲಿ ಹಾಗೂ ರಿಯಾಯಿತಿ ದರವನ್ನು ನಿಗದಿಪಡಿಸಲಾಗಿದ್ದು, ರೋಗಿಗಳಿಗೆ ಆರ್ಥಿಕ ಹೊರೆಯಾಗುವುದಿಲ್ಲ.

ಜಾಗೃತಿ ಕ್ರಮಗಳು

ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್‌ನ್ನು ಸ್ವಯಂ ಪರೀಕ್ಷೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಪತ್ತೆ ಹಚ್ಚಬಹುದು. ಸ್ತನಗಳ ಗಾತ್ರದಲ್ಲಿ ಬದಲಾವಣೆ, ಗಂಟುಗಳಾಗಿರುವುದು. ಚರ್ಮದ ಬಣ್ಣದಲ್ಲಿ ಬದಲಾವಣೆಯಾದರೆ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅಗತ್ಯ. ಕಿದ್ವಾಯಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಕ್ಯಾನ್ಸರ್‌ ಪತ್ತೆ ಹಚ್ಚುವಿಕೆ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ನೆರವಾಗಲು ಬಸ್‌ನಲ್ಲಿ ಮ್ಯಾಮೊಗ್ರಫಿ ಯಂತ್ರವನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗುತ್ತಿದೆ.

3 ಲಕ್ಷ ರೋಗಿಗಳಿಗೆ ಪ್ರತಿ ವರ್ಷ ಚಿಕಿತ್ಸೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ 1973 ರಲ್ಲಿ ಆರಂಭವಾಯಿತು. ಅಂದಿನಿಂದ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಆಸ್ಪತ್ರೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕ ಸರ್ಕಾರದ ಪ್ರೋತ್ಸಾಹ ಹಾಘೂ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಿಂದಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

ಒಟ್ಟು 23 ಎಕರೆ ವಿಸ್ತೀರ್ಣದಲ್ಲಿರುವ ಕಿದ್ವಾಯಿ ಆಸ್ಪತ್ರೆಯು ಜಗತ್ತಿನಾದ್ಯಂತದ ಪ್ರಮುಖ ಕ್ಯಾನ್ಸರ್ ಆರೈಕೆ ಕೇಂದ್ರಗಳಿಗೆ ಸಮನಾದ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ. ಚಿಕಿತ್ಸೆಯಲ್ಲದೇ ಕ್ಯಾನ್ಸರ್ ಸಂಶೋಧನೆ, ಶಿಕ್ಷಣ, ಜಾಗೃತಿ, ತಡೆಗಟ್ಟುವಿಕೆ ಮತ್ತು ಆರಂಭಿಕವಾಗಿ ರೋಗ ಪತ್ತೆಯಲ್ಲೂ ತೊಡಗಿಸಿಕೊಂಡಿದೆ.

ಸ್ತನ ಕ್ಯಾನ್ಸರ್‌ ಕುರಿತು ʼದ ಫೆಡರಲ್‌ ಕರ್ನಾಟಕʼ ಕಿದ್ವಾಯಿ ಆರೊಗ್ಯ ಗಂಥಿ ಸಂಸ್ಥೆ ನಿರ್ದೇಶಕ ಡಾ. ನವೀನ್‌ ಟಿ. ಅವರೊಂದಿಗೆ ನಡೆಸಿದ ಸಂದರ್ಶನದ ವಿಡಿಯೋ ಇಲ್ಲಿದೆ.



Read More
Next Story