Save Lalbagh|ಹೋರಾಟದ ಕಿಚ್ಚು ಹೊತ್ತಿಸಿದ ಸುರಂಗ ರಸ್ತೆ ಯೋಜನೆ ; ಶ್ವಾಸತಾಣದ ಉಳಿವಿಗೆ ಪರಿಸರಾಸಕ್ತರ ಗರ್ಜನೆ

ಲಾಲ್‌ಬಾಗ್‌ ಬಳಿ ಹಾದು ಹೋಗಲಿರುವ ಸುರಂಗ ಮಾರ್ಗದಿಂದ ಪುರಾತನ ಬಂಡೆಗೆ ಆಗುವ ಅನಾಹುತಗಳ ಕುರಿತು ಅಧ್ಯಯನ ನಡೆಸುವಂತೆ ಪುರಾತತ್ತ್ವ ಇಲಾಖೆಗೆ ರಾಜ್ಯ ಸರ್ಕಾರ ಮಾಹಿತಿಯೇ ನೀಡಿಲ್ಲ ಎಂಬುದು ಪರಿಸರವಾದಿಗಳ ಆಕ್ಷೇಪವಾಗಿದೆ.

Update: 2025-10-26 03:30 GMT
Click the Play button to listen to article

ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಸದ್ದು ಹೋರಾಟದ ಕಿಡಿ ಹೊತ್ತಿಸಿದೆ. ಹೆಬ್ಬಾಳ-ಸಿಲ್ಕ್‌ಬೋರ್ಡ್‌ ನಡುವಿನ ಅವಳಿ ಸುರಂಗ ಅಥವಾ ಟನಲ್ ರಸ್ತೆ ಯೋಜನೆಯು ಲಾಲ್ ಬಾಗ್ ಮೂಲಕ ಹಾದು ಹೋಗುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ.

ಲಾಲ್ ಬಾಗ್ ಬಳಿ ಉದ್ದೇಶಿತ ಅವಳಿ ಸುರಂಗ ಮಾರ್ಗ ವಿರೋಧಿಸಿ ಪರಿಸರವಾದಿಗಳು, ನಾಗರಿಕ ಸಂಘಟನೆಗಳು, ಲಾಲ್ ಬಾಗ್ ನಡಿಗೆದಾರರ ಸಂಘ, ವಿವಿಧ ರಾಜಕೀಯ ಪಕ್ಷಗಳು ಸೇರಿದಂತೆ ನಗರ, ಪರಿಸರ ತಜ್ಞರು ಈಗ ಹೋರಾಟದ ಹಾದಿ ತುಳಿದಿದ್ದಾರೆ. ಈ ಮಧ್ಯೆ, ಟನಲ್ ರಸ್ತೆ ಯೋಜನೆಯ ವಿರುದ್ಧ ಕಾನೂನು ಸಮರವೂ ಆರಂಭವಾಗಿದೆ.  

ರಾಜ್ಯ ಸರ್ಕಾರವು ಲಾಲ್‌ಬಾಗ್‌ ಬಳಿ ಬಂಡೆ ಕೊರೆದು ಸುರಂಗ ನಿರ್ಮಿಸುವ,  ಅದರಿಂದಾಗುವ ಅನಾಹುತಗಳು ಹಾಗೂ ಒಟ್ಟಾರೆ ಯೋಜನೆ ಕುರಿತು ಪರಿಸರ ಪರಿಣಾಮ ಮೌಲ್ಯಮಾಪನ ನಡೆದಿರುವುದು, ಬೆಂಗಳೂರು‌ ಮಹಾನಗರ ಭೂ ಸಾರಿಗೆ ಪ್ರಾಧಿಕಾರ( BMLTA) ಹಾಗೂ  ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆಯದೇ ಡಿಪಿಆರ್ (ವಿಸ್ತೃತ ಯೋಜನಾ ವರದಿ) ತಯಾರಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಲಾಲ್ ಬಾಗ್ ಬಳಿ ಸುರಂಗ ಹಾಗೂ ರ‍್ಯಾಂಪ್ ನಿರ್ಮಿಸುವ ಕುರಿತು ಕನಿಷ್ಠ ತೋಟಗಾರಿಕಾ ಇಲಾಖೆಗೂ ಮಾಹಿತಿ ನೀಡಿಲ್ಲ. ಹೀಗಾಗಿ ಸರ್ಕಾರದ ಏಕಪಕ್ಷಿಯ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಂಗಳೂರಿನ ಅತಿದೊಡ್ಡ ಪರಿಸರ ಮತ್ತು ಪಾರಂಪರಿಕ ತಾಣ ಲಾಲ್ ಬಾಗ್ ಗೆ ಅಪಾಯ ಇದೆ. 3 ಶತಕೋಟಿ ವರ್ಷಗಳ ಹಿಂದೆ‌ ಸಂರಚನೆಯಾಗಿರುವ ಬಂಡೆ ಸಮೀಪವೇ ಸುರಂಗ ರಸ್ತೆ ನಿರ್ಮಿಸುವ ಮುನ್ನ ಬಂಡೆಗೆ ಆಗುವ ಹಾನಿ ಕುರಿತು ವಿಸ್ತೃತ ಅಧ್ಯಯನ ಅತ್ಯಗತ್ಯ ಎಂಬುದು ಪರಿಸರವಾದಿಗಳ ಒತ್ತಾಯವಾಗಿದೆ.

ಪಕ್ಷಿ ಸಂಕುಲಕ್ಕೆ ಸಂಕಷ್ಟ

ಸುರಂಗ ಮಾರ್ಗ ಯೋಜನೆಯು ಲಾಲ್‌ಬಾಗ್‌ ಪರಿಸರ ವ್ಯವಸ್ಥೆಯ ಜತೆಗೆ ಪಕ್ಷಿ ಸಂಕುಲಕ್ಕೆ ದೊಡ್ಡ ಬೆದರಿಕೆಯಾಗಲಿದೆ. ಲಾಲ್‌ಬಾಗ್‌ನಲ್ಲಿ  ವರ್ಷವಿಡೀ 100 ಕ್ಕೂ ಹೆಚ್ಚು ಸ್ಥಳೀಯ ಮತ್ತು ವಲಸೆ ಪಕ್ಷಿಗಳು ಬಂದು ನೆಲೆಸುತ್ತವೆ. ವಿಶೇಷವಾಗಿ ಬೂದಿ ಕಾಗೆ, ಮೈನಾ, ಸನ್ಬರ್ಡ್‌, ಬಾರ್ಬೆಟ್‌, ಕಿಂಗ್‌ಫಿಷರ್‌, ಹೂಪೋ ಮುಂತಾದ ಪ್ರಭೇದಗಳು ಇಲ್ಲಿನ ಹಸಿರು ವಾತಾವರಣ ಹಾಗೂ ಸರೋವರದ ಸುತ್ತಲಿನ ಆಹಾರ ವ್ಯವಸ್ಥೆಯ ಮೇಲೆ ಅವಲಂಬಿತವಾಗಿವೆ. ಸುರಂಗ ಮಾರ್ಗದಿಂದ ಇವುಗಳಿಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಸುರಂಗ ಮಾರ್ಗದ ಕಾಮಗಾರಿ ಕೈಗೊಂಡರೆ ಭೂಗರ್ಭದಲ್ಲಿ ಭಾರೀ ಯಂತ್ರೋಪಕರಣಗಳ ಚಟುವಟಿಕೆ, ಬಂಡೆ ಕೊರೆಯುವ ಟನಲ್ ಬೋರಿಂಗ್ ಯಂತ್ರದಿಂದ ಉಂಟಾಗುವ ಕಂಪನ,  ಶಬ್ದ ಮಾಲಿನ್ಯದಿಂದ ಪಕ್ಷಿಗಳ ಅವಾಸ ಸ್ಥಾನಕ್ಕೆ ಧಕ್ಕೆಯಾಗುವ ಸಂಭವ ಇರಲಿದೆ. ಲಾಲ್‌ಬಾಗ್‌ ಕೆರೆಯಲ್ಲಿನ ನೀರಿನ ಮಟ್ಟ ಹಾಗೂ ಜಲಚರಗಳು  ಕುಸಿಯಬಹುದು. ಟನಲ್ ರಸ್ತೆ ಕಾಮಗಾರಿಯಿಂದ ಪಕ್ಷಿಗಳು ವಲಸೆ ಹೋಗುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞ ಕೇಶವಮೂರ್ತಿ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಬೆಂಗಳೂರು ಕೇಂದ್ರ ಭಾಗ ಈಗಾಗಲೇ ಅತಿಯಾದ ನಗರೀಕರಣಕ್ಕೆ ಒಡ್ಡಿಕೊಂಡಿದೆ. ಇನ್ನು ಯಾವುದೇ ಅಭಿವೃದ್ಧಿ ಕಾರ್ಯಗಳು ಬೇಡ, ಹೊರವಲಯ ಕೇಂದ್ರೀಕರಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

ಲಾಲ್ ಬಾಗ್ ನಲ್ಲಿ‌ ಉದ್ದೇಶಿತ ಟನಲ್ ರಸ್ತೆ ಯೋಜನೆಯ ನಕ್ಷೆ               

ಆಧಾರ:ಡಿಪಿಆರ್, ಕೃಪೆ: ರಾಜಕುಮಾರ್ ದುಗಾರ್

ಕಬ್ಬನ್‌ಪಾರ್ಕ್‌ ನಡಿಗೆದಾರರ ಸಂಘದ ಅಧ್ಯಕ್ಷ ಎಸ್‌.ಉಮೇಶ್‌ಕುಮಾರ್‌ 'ದ ಫೆಡರಲ್‌ ಕರ್ನಾಟಕ' ಜತೆ ಮಾತನಾಡಿ,  ಲಾಲ್‌ಬಾಗ್‌ ಬಂಡೆಗೆ ಐತಿಹಾಸಿಕತೆ ಇದೆ. ಬೆಂಗಳೂರು ಸುರಕ್ಷತೆಗೆ ಬಂಡೆಯ ಕೊಡುಗೆ ಸಾಕಷ್ಟು ಇದೆ. ಸುರಂಗ ಮಾರ್ಗದಿಂದ ಬಂಡೆ ಹಾಗೂ ಕೆರೆಗೂ ಪೆಟ್ಟು ಬೀಳಲಿದೆ. ಸರ್ಕಾರಕ್ಕೆ ಸುರಂಗ ಮಾರ್ಗ ಮಾಡಲೇಬೇಕು ಎಂಬ ಇಚ್ಛೆ ಇದ್ದರೆ ಬೇರೆ ಸ್ಥಳಗಳಲ್ಲಿ ಮಾಡಿಕೊಳ್ಳಲಿ. ಈ ಯೋಜನೆಯು ದುಡ್ಡು ಮಾಡುವ ಯೋಜನೆಯಾಗಿದೆ. ಹೀಗಾಗಿಯೇ ಹೆಚ್ಚಿನ ಆಸಕ್ತಿ ತೋರಲಾಗುತ್ತಿದೆ. ಯಾವುದೇ ಕಾರಣಕ್ಕೂ ಲಾಲ್‌ಬಾಗ್‌ ಬಳಿ ಸುರಂಗ ಮಾರ್ಗಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಖಾಸಗಿ ಭೂಮಿ ಖರೀದಿಸಿ ಸುರಂಗ ಮಾರ್ಗ ಮಾಡಲಿ. ಹೀಗಾಗಿ ಸುರಂಗ ಮಾರ್ಗವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. 

ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ

ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥೆಯ ಮುಖ್ಯಸ್ಥ ರಾಜಕುಮಾರ್‌ ದುಗಾರ್‌ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿ, ಲಾಲ್‌ಬಾಗ್‌ನಲ್ಲಿರುವ ಬಂಡೆಯನ್ನು 1975 ರಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವೆಂದು ಘೋಷಿಸಿದೆ. ಅದರಲ್ಲಿ 16ನೇ ಶತಮಾನದ ಕೆಂಪೇಗೌಡ ಕಾವಲು ಗೋಪುರವಿದ್ದು, ಬೆಂಗಳೂರಿನ ಆರಂಭಿಕ ಗಡಿಯ ಗುರುತಾಗಿದೆ. ಇದು ನೈಸರ್ಗಿಕ ಮತ್ತು ಪಾರಂಪರಿಕ ಕುರುಹು ಕೂಡ ಆಗಿದೆ. ಸುರಂಗ ಮಾರ್ಗದಲ್ಲಿ ಬಂಡೆಯ ಒಡೆಯಬೇಕಾಗಬಹುದು. ಅಲ್ಲದೆ, ಇಲ್ಲಿ ಬಂಡೆಯ ನಡುವೆ ನೀರು ಕೂಡ ಇದೆ. ಬಂಡೆಗೆ ಹಾನಿಯಾದರೆ, ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯೂ ಉಂಟಾಗಬಹುದು ಎಂದು ಹೇಳಿದ್ದಾರೆ. 

ಲಾಲ್‌ಬಾಗ್‌ನಲ್ಲಿ ಅಂದಾಜು ಮೂರು ಸಾವಿರ ಸಸ್ಯ ಪ್ರಭೇದಗಳಿವೆ.  ಯೋಜನೆಗೆ ಮೀಸಲಾಗಿರುವ ಆರು ಎಕರೆ ಪ್ರದೇಶದೊಳಗಿನ ಒಂದೇ ಒಂದು ಮರವನ್ನೂ ತೆಗೆಯಬಾರದು. ಅಲ್ಲದೆ, ಈ ಯೋಜನೆಯು ಸುತ್ತಲಿನ ಪರಿಸರಕ್ಕೆ ದೀರ್ಘಕಾಲದಲ್ಲಿ ಭಾರೀ ಅಪಾಯ ಉಂಟು ಮಾಡಲಿದೆ. ಹಸಿರು ಹೊದಿಕೆ ಕಡಿಮೆಯಾಗಲಿದೆ. ಯೋಜನೆ ವಿರೋಧಿಸಿ ಈಗಾಗಲೇ ಪ್ರತಿಭಟನೆ ನಡೆಸುವುದರ ಜತೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸುಮಾರು ಆರು ಸಾವಿರ ಆನ್‌ಲೈನ್ ಸಹಿ ಸಂಗ್ರಹ ಕೂಡ ಮಾಡಿದ್ದೇವೆ. ಯೋಜನೆಯಿಂದ ಲಾಲ್‌ಬಾಗ್‌ಗೆ ಹಾನಿಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. 

ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ಮಾಹಿತು ನೀಡಿಲ್ಲ  

ಲಾಲ್‌ಬಾಗ್‌ ಬಳಿ ಕೈಗೊಳ್ಳುವ ಸುರಂಗ ಮಾರ್ಗದ ಕಾಮಗಾರಿಯಿಂದ ಲಾಲ್‌ಬಾಗ್‌ನಲ್ಲಿನ ಬಂಡೆಗೆ ಏನಾದರೂ ಅನಾಹುತವಾಗಲಿದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸುವಂತೆ ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ,ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ಸರ್ಕಾರ ಮಾಹಿತಿ ನೀಡಬೇಕಿತ್ತು. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೂರಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರು ದ ಫೆಡರಲ್‌ ಕರ್ನಾಟಕದ ಜತೆ ಮಾತನಾಡಿ, ಸುರಂಗ ಮಾರ್ಗದ ಯೋಜನೆ ಕುರಿತು ಮಾಧ್ಯಮಗಳಲ್ಲಿ ಗಮನಿಸಲಾಗಿದೆ. ಆದರೆ, ಇಲಾಖೆಗೆ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಸರ್ಕಾರ ನೀಡಿಲ್ಲ. ಬಂಡೆಯು ಐತಿಹಾಸಿಕವಾಗಿದ್ದು, ಹಾನಿಯಾಗಲಿದೆಯೇ ಎಂಬುದರ ಕುರಿತು ಅಧ್ಯಯನ ನಡೆಸಿದ ಬಳಿಕವೇ ಗೊತ್ತಾಗಲಿವೆ. ಯೋಜನೆಯನ್ನು ಯಾವ ರೀತಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಸರ್ಕಾರವು ಅಧ್ಯಯನ ನಡೆಸುವಂತೆ ಹೇಳಿದ ಬಳಿಕ ಇಲಾಖೆಯು ಮುಂದಿನ ಕ್ರಮ ಕೈಗೊಳ್ಳಲಿದೆ. ಅಲ್ಲಿಯವರೆಗೆ ಇಲಾಖೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಯೋಜನೆ ಕುರಿತು ಸಮಗ್ರ ವಿಸ್ತೃತ ವರದಿ (ಡಿಪಿಆರ್‌) ಸಲ್ಲಿಕೆಯಾಗಿದೆ ಎಂಬುದು ಮಾಧ್ಯಮಗಳ ಮೂಲಕ ಮಾಹಿತಿ ಪಡೆದುಕೊಳ್ಳಲಾಗಿದೆ. ಅಲ್ಲದೇ, ಡಿಪಿಆರ್‌ನಲ್ಲಿಯೂ ಹಲವು ಲೋಪದೋಷಗಳಿಂದ ಕೂಡಿದೆ ಎಂಬುದರ ಬಗ್ಗೆಯೂ ಸರ್ಕಾರ ರಚಿಸಿದ ಸಮಿತಿ ವರದಿ ನೀಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿರಬಹುದು. ಇಲಾಖೆಗೆ ಸರ್ಕಾರ ಅಧ್ಯಯನ ನಡೆಸುವಂತೆ ಸೂಚನೆ ನೀಡಿದರೆ ಮಾತ್ರ ಅಧ್ಯಯನ ನಡೆಸಿ ವರದಿ ನೀಡುತ್ತೇವೆ. ಸುರಂಗ ರಸ್ತೆ ಯೋಜನೆಯು ಲಾಲ್‌ಬಾಗ್‌ನಿಂದ 300 ಮೀಟರ್‌ ದೂರದಲ್ಲಿದ್ದರೆ ಪರಿಶೀಲನೆ ನಡೆಸಬಹುದು. ಅದಕ್ಕಿಂತ ಕಡಿಮೆ ಅಂತರ ಇದ್ದರೆ ಯೋಜನೆ ಕೈಬಿಡಬೇಕಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   

ಲಾಲ್ ಬಾಗ್ ನಲ್ಲಿ ಟನಲ್ ರಸ್ತೆ ಹಾದು ಹೋಗುವ ನಕ್ಷೆ  ಕೃಪೆ: ರಾಜಕುಮಾರ್ ದುಗಾರ್

 ಸರ್ಕಾರದ ಗಮನಕ್ಕೆ ತರಲಾಗಿದೆ

ಲಾಲ್‌ಬಾಗ್‌ ಬಳಿ ಸುರಂಗ ಮಾರ್ಗದಿಂದಾಗುವ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುವಂತೆ ತೋಟಗಾರಿಕೆ ಇಲಾಖೆಯು ರಾಜ್ಯ ಸರ್ಕಾರದ ಗಮನಕ್ಕೆ ತಂದಿದೆ. ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು. ಈ ವೇಳೆ ಲಾಲ್‌ಬಾಗ್‌ ನೋಡಿಕೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಸರವಾದಿಗಳ ಆತಂಕವನ್ನು ಗಮನಕ್ಕೆ ತಂದಿದ್ದಾರೆ.

ತೋಟಗಾರಿಕೆ ಇಲಾಖೆ (ಲಾಲ್‌ಬಾಗ್‌) ಜಂಟಿ ನಿರ್ದೇಶಕ ಎಂ. ಜಗದೀಶ್‌ ಮಾತನಾಡಿ, ಲಾಲ್‌ಬಾಗ್‌ ಬಳಿ ಸುರಂಗ ಮಾರ್ಗ ಮಾಡಲು ಸರ್ಕಾರ ಮುಂದಾಗಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರಕ್ಕೆ ತೇಜಸ್ವಿ ಸೂರ್ಯ ಪತ್ರ

ಕಾಂಗ್ರೆಸ್‌ ಸರ್ಕಾರದ  ಸುರಂಗ ಮಾರ್ಗ ಯೋಜನೆಯು ಲಾಲ್​ಬಾಗ್​ನ ಕೆಳಗೆ ಹಾದುಹೋಗುವುದು ಖಚಿತವಾಗಿರುವುದರಿಂದ ಇದರ ಸಾಧಕ ಬಾಧಕಗಳ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದು ಕೇಂದ್ರ ಗಣಿ ಸಚಿವ ಕಿಶನ್‌ರೆಡ್ಡಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ.

ಪತ್ರ ಬರೆದಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದಲ್ಲದೇ ಕಳೆದ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದ ತೇಜಸ್ವಿಸೂರ್ಯ, ಲಾಲ್ ಬಾಗ್ ನ ಆರು ಎಕರೆಯಲ್ಲ, ಆರು ಇಂಚು ಭೂಮಿಯನ್ನೂ ಟನಲ್ ರಸ್ತೆ ಯೋಜನೆಗೆ ಬಿಡುವುದಿಲ್ಲ.ಆಗೊಮ್ಮೆ ಸರ್ಕಾರ ಬಲವಂತವಾಗಿ ಭೂಮಿ‌ ಕಿತ್ತುಕೊಳ್ಳಲು ಮುಂದಾದರೆ ಸಾರ್ವಜನಿಕ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೈಕೋರ್ಟ್ ಮೆಟ್ಟಿಲೇರಿದ ಟನಲ್ ರಸ್ತೆ ಯೋಜನೆ

ವಿವಾದಾತ್ಮಕ ಟನಲ್ ರಸ್ತೆ ಯೋಜನೆ ಪ್ರಶ್ನಿಸಿ ಸಂಸದ ತೇಜಸ್ವಿ ಸೂರ್ಯ, ನಟ ಪ್ರಕಾಶ್ ಬೆಳವಾಡಿ ಅವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರು ಶನಿವಾರ ಅರ್ಜಿ ವಿಚಾರಣೆ ನಡೆಸಿದ್ದು, ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸರ್ಕಾರಿ ವಕೀಲರಿಗೆ (AGA) ಯೋಜನೆಯೊಂದಿಗೆ ಸಂಬಂಧಿಸಿದ ಮರಗಳನ್ನು ಕಡಿಯುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದ್ದಾರೆ. ಜತೆಗೆ ಪರಿಸರ ಪರಿಣಾಮ ಮೌಲ್ಯಮಾಪನದ ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (Geological Survey of India) ಯಿಂದಲೂ ಅಭಿಪ್ರಾಯ ಕೋರಿದೆ. ಮುಂದಿನ ವಿಚಾರಣೆಯನ್ನು ಅ. 28ಕ್ಕೆ ನಿಗದಿ ಮಾಡಲಾಗಿದೆ.

Tags:    

Similar News