ಬೆಳಗಾವಿಯಲ್ಲಿ ಮುಂದುವರೆದ GoBack ಅಭಿಯಾನ: ಶೆಟ್ಟರ್ ವಿರುದ್ಧ ವ್ಯಂಗ್ಯ ಪೋಸ್ಟರ್ ಪ್ರದರ್ಶನ
''ಬರ್ರಿ ಶೆಟ್ಟರ್-ಉಂಡು ಹೋಗ್ರಿ... ಬೆಳಗಾವಿ ನಿಮ್ಮಂಥವರಿಗೆ ಬಿಟ್ಟಿ ಬಿದ್ದೈತಿ'' ಎನ್ನುವ ಬ್ಯಾನರ್ ಹಾಕಿ ವ್ಯಂಗ್ಯ ಬರಹದ ಮೂಲಕ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.;
ʼಬರ್ರಿ ಶೆಟ್ಟರ್-ಉಂಡು ಹೋಗ್ರಿ... ಬೆಳಗಾವಿ ನಿಮ್ಮಂಥವರಿಗೆ ಬಿಟ್ಟಿ ಬಿದ್ದೈತಿ', ʼಗೋ ಬ್ಯಾಕ್ ಶೆಟ್ಟರ್ʼ ಎನ್ನುವ ಬ್ಯಾನರ್‌ಗಳನ್ನು ಬೆಳಗಾವಿ ನಗರದಲ್ಲಿ ಹಾಕಲಾಗಿದೆ. ಇದು ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಲು ಬಿಜೆಪಿಯೊಳಗಿನವರೇ ಹಾಕಿದ ಬ್ಯಾನರ್‌ಗಳು ಎಂದು ಹೇಳಲಾಗುತ್ತಿದೆ.
ಹೌದು, ಚಿಕ್ಕಮಗಳೂರು-ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದೊಳಗಿನವರೇ ಗೋಬ್ಯಾಕ್ ಅಭಿಯಾನ ಆರಂಭಿಸಿದ್ದರು ಎಂದು ಹೇಳಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪರ್ಧೆಗೂ ವಿರೋಧ ವ್ಯಕ್ತವಾಗುತ್ತಿದೆ.
ಮೇ 2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ- ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆನಂತರ ಅವರನ್ನು ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತ್ತು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಶೆಟ್ಟರ್, ಸದ್ದಿಲ್ಲದೆ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಮತ್ತೆ ಬಿಜೆಪಿ ಸೇರಿದ್ದರು. ಈ ಮೂಲಕ ಅವರು ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿ ಘರ್ ವಾಪ್ಸಿ ಆಗಿದ್ದರು.
ಮೂಲಗಳ ಪ್ರಕಾರ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಘರ್ ವಾಪ್ಸಿ ಆಗುವ ವೇಳೆ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು. ಅದರಲ್ಲೂ ಕೇಂದ್ರ ಸಚಿವರಾಗಿರುವ ಪ್ರಹ್ಲಾದ್ ಜೋಶಿಯವರ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಶೆಟ್ಟರ್ ಕಣ್ಣಿಟ್ಟಿದ್ದರು. ಅದಾಗದಿದ್ದರೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟನ್ನಾದರೂ ನೀಡಬೇಕು ಎಂದು ಷರತ್ತು ಒಡ್ಡಿದ್ದರು. ಆರಂಭದಲ್ಲಿ ಶೆಟ್ಟರ್ ಮಾತಿಗೆ ಒಪ್ಪಿದ್ದ ಬಿಜೆಪಿ ನಾಯಕರು, ಆನಂತರ ಎರಡೂ ಕ್ಷೇತ್ರಗಳಲ್ಲಿ ಶೆಟ್ಟರ್‌ಗೆ ಟಿಕೆಟ್ ನೀಡದೆ ನಿರಾಸೆಗೊಳಿಸಿದ್ದರು. ಇದರಿಂದ ಅಸಮಾಧಾನ ಸ್ಪೋಟಗೊಂಡಿತ್ತು.
ಆ ಬಳಿಕ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಶೆಟ್ಟರ್‌ಗೆ ಬಿಜೆಪಿ ಕೇಂದ್ರ ನಾಯಕರು ಸೂಚನೆ ನೀಡಿದ್ದರು ಎನ್ನಲಾಗಿದೆ. ಆದರೆ ಹೊರಗಿನವರು ಬೆಳಗಾವಿಯ ಅಭ್ಯರ್ಥಿಯಾಗುತ್ತಿರುವುದಕ್ಕೆ ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡಲು ಆರಂಭವಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ''ಗೋ ಬ್ಯಾಕ್ ಶೆಟ್ಟರ್'' ಅಭಿಯಾನ ತೀವ್ರಗೊಂಡಿತು. ಇದೀಗ ಬೆಳಗಾವಿ ನಗರದಲ್ಲಿ ಬಹಿರಂಗವಾಗಿಯೇ ಶೆಟ್ಟರ್ ವಿರೋಧಿ ಬ್ಯಾನರ್‌ಗಳು ಬುಧವಾರದಿಂದ ಪ್ರತ್ಯಕ್ಷವಾಗಿವೆ.
ಸ್ಥಳೀಯ ಬಿಜೆಪಿ ನಾಯಕರು, ʼʼವಲಸಿಗರ ಬದಲು ಸ್ಥಳೀಯರಿಗೇ ಟಿಕೆಟ್ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆಯೇ ''ಗೋಬ್ಯಾಕ್ ಶೆಟ್ಟರ್'' ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ತೀವ್ರಗೊಂಡಿದೆ.
'ಬರ್ರಿ ಶೆಟ್ಟರ್-ಉಂಡು ಹೋಗ್ರಿ, ಬೆಳಗಾವಿ ಬಿಟ್ಟಿ ಬಿದ್ದೈತಿʼ: ಗೋಬ್ಯಾಕ್ ಅಭಿಯಾನದ ವ್ಯಂಗ್ಯ ಬರಹ
ಬೆಳಗಾವಿಯಲ್ಲಿ ಶೆಟ್ಟರ್ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾದ ಕೆಲ ಬಿಜೆಪಿ ಕಾರ್ಯಕರ್ತರು ʼʼಗೋಬ್ಯಾಕ್ ಶೆಟ್ಟರ್, ಸ್ಥಳೀಯ ಅಭ್ಯರ್ಥಿಗಳಿಗೇ ಟಿಕೆಟ್ ನೀಡಿʼʼ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಈ ನಡುವೆಯೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಶೆಟ್ಟರ್ ಸ್ಪರ್ಧೆ ವಿರೋಧಿಸಿ ಬ್ಯಾನರ್‌ಗಳು ಪ್ರತ್ಯಕ್ಷವಾಗಿವೆ.
ಗೋ ಬ್ಯಾಕ್ ಅಭಿಯಾನದ ಭಾಗವಾಗಿ, ''ಬರ್ರಿ ಶೆಟ್ಟರ್-ಉಂಡು ಹೋಗ್ರಿ... ಬೆಳಗಾವಿ ನಿಮ್ಮಂಥವರಿಗೆ ಬಿಟ್ಟಿ ಬಿದ್ದೈತಿ'' ಎನ್ನುವ ಬ್ಯಾನರ್ ಹಾಕಿ ವ್ಯಂಗ್ಯ ಬರಹದ ಮೂಲಕ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ.
ಉತ್ತರ ಕರ್ನಾಟಕ ಶೈಲಿ ಊಟ ಮೆನು ಸಹ ಬ್ಯಾನರ್ ನಲ್ಲಿದೆ. ಹೊಳಿಗೆ, ಸಾವಗಿ ಪಾಯಸ್, ರೈಸ್, ಪಲಾವ್ ಬಾಜಿ ಚಿತ್ರದ ಬ್ಯಾನರ್ ನಲ್ಲಿ ಶೆಟ್ಟರ್ ಸ್ಪರ್ಧೆಗೆ ವ್ಯಂಗ್ಯವಾಗಿ ವಿರೋಧಿಸಿದ್ದಾರೆ.
ಇಷ್ಟೊಂದು ವಿರೋಧದ ನಡುವೆ ಶೆಟ್ಟರ್‌ಗೆ ಟಿಕೆಟ್ ಸಿಗುತ್ತಾ?
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ? ಬಿಜೆಪಿಯ ಅಂತಿಮ ಪಟ್ಟಿಯಲ್ಲಿ ಯಾರ ಹೆಸರು ಗಟ್ಟಿಯಾಗಿ ಉಳಿದುಕೊಳ್ಳುತ್ತದೆ ಎನ್ನುವುದು ಇದೀಗ ಎಲ್ಲರಲ್ಲೂ ಕೌತುಕ ಹುಟ್ಟುಹಾಕಿದೆ.
ಈ ಕ್ಷಣದವರೆಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹಾಲಿ ಸಂಸದೆ ಮಂಗಳಾ ಅಂಗಡಿಯವರು ಈ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಕ್ಷೇತ್ರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿರುವುದರ ಹಿಂದೆ ನಾಯಕರ ಕೈವಾಡ ಇರಬಹುದೇ ಎನ್ನುವ ಪ್ರಶ್ನೆಗಳು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿವೆ.
ಶೆಟ್ಟರ್ ಅವರನ್ನು ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿ ಮಾಡುವ ವಿಚಾರಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಶೆಟ್ಟರ್ ಅವರನ್ನು ಬಿಜೆಪಿ ಕೊನೆಯ ಘಳಿಗೆಯಲ್ಲಿ ಕೈಬಿಟ್ಟರೆ ಅವರ ಬದಲಿಗೆ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ.
ಮಾಜಿ ಸಂಸದ ರಮೇಶ್ ಕತ್ತಿ ಮಾಜಿ ಶಾಸಕ ಸಂಜಯ್ ಪಾಟೀಲ, ಮಹಾಂತೇಶ್ ಕವಟಗಿಮಠ ಅವರ ಹೆಸರುಗಳು ಚರ್ಚೆಯಲ್ಲಿವೆ. ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇವರಾಗ್ತಾರೆ, ಅವರಾಗ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಲೇ ಇವೆ, ಆದರೆ ಅಧಿಕೃತವಾಗಿ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವವರೆಗೆ ಈ ರೀತಿಯ ಉಹಾಪೋಹಗಳು ನಡೆಯುತ್ತವೆ.