The Federal Explainer | KIADB ನಿವೇಶನ ಹಿಂತಿರುಗಿಸಿದ ಖರ್ಗೆ ಟ್ರಸ್ಟ್ ; ಏನಿದು ವಿವಾದ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿಯ ಪುತ್ರ ರಾಹುಲ್ ಖರ್ಗೆ ಸೇರಿದಂತೆ ಅವರ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟಿಗೆ ಏರೋಸ್ಪೇಸ್ ಉದ್ಯಮಕ್ಕೆ ಮೀಸಲಿಟ್ಟಿದ್ದ ಕೆಐಎಡಿಬಿ ಜಾಗವನ್ನು ಹಂಚಿಕೆ ಮಾಡಿದ್ದು ವಿವಾದಕ್ಕೀಡಾಗಿದೆ. ಈ ವಿವಾದದ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು ಇಲ್ಲಿವೆ..;
ಬೆಂಗಳೂರಿನ ಹೈ-ಟೆಕ್ ಡಿಫೆನ್ಸ್ ಅಂಡ್ ಏರೋ ಸ್ಪೇಸ್ ಪಾರ್ಕಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಟ್ರಸ್ಟ್ 5 ಎಕರೆ ಸಿಎ(ನಾಗರಿಕ ಬಳಕೆ) ನಿವೇಶನ ಪಡೆದಿರುವುದು ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಈ ನಡುವೆ, ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಎಜುಕೇಷನಲ್ ಟ್ರಸ್ಟ್, ಕೆಐಎಡಿಬಿಗೆ ವಿವಾದಿತ ನಿವೇಶನ ಹಿಂತಿರುಗಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರರಾದ ರಾಜ್ಯ ಪಂಚಾಯತ್ ರಾಜ್ ಮತ್ತು ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಾಕಷ್ಟು ಮುಜಗರ ತಂದೊಡ್ಡಿದ ಈ ಕೆಐಎಡಿಬಿ ನಿವೇಶನ ವಿವಾದವೇನು? ಪ್ರತಿಪಕ್ಷಗಳ ಆರೋಪವೇನು? ಸರ್ಕಾರದ ಸಮರ್ಥನೆ ಏನು? ಅಂತಿಮವಾಗಿ ನಿವೇಶನ ವಾಪಸ್ ಮಾಡಿದ ಖರ್ಗೆ ಕುಟುಂಬದ ನಿರ್ಧಾರದ ಹಿಂದೆ ಏನಿದೆ? ಎಂಬ ಮಾಹಿತಿ ಸೇರಿದಂತೆ ಇಡೀ ವಿವಾದದ ಕುರಿತು ನಿಮಗೆ ಗೊತ್ತಿರಬೇಕಾದ ಸಂಗತಿಗಳು ಇಲ್ಲಿವೆ...
ಏನಿದು ಸಿಎ ನಿವೇಶನ ವಿವಾದ?
ಏರೋಸ್ಪೇಸ್ ಪಾರ್ಕ್ನಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗಾಗಿ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ ಸಿಇಒ ರಾಹುಲ್ ಖರ್ಗೆ ಅವರು ಕೆಐಎಡಿಬಿಗೆ 5 ಎಕರೆ ಜಮೀನು ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಅದರಂತೆ ಕೆಐಎಡಿಬಿಯು ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮೂಲಕ 2024 ಮೇ 30ರಂದು 5 ಎಕರೆಯ ನಾಗರಿಕ ಬಳಕೆಯ ನಿವೇಶನ(ಸಿಎ ನಿವೇಶನ) ಮಂಜೂರು ಮಾಡಿತ್ತು.
ಆ ಸಂದರ್ಭದಲ್ಲಿ ಏರೋಸ್ಪೇಸ್ ಪಾರ್ಕಿನಲ್ಲಿ ಸಿಎ ನಿವೇಶನ ಕೋರಿ ಕೆಐಎಡಿಬಿಗೆ ಒಟ್ಟು 193 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅವುಗಳ ಪೈಕಿ 43 ಸಂಸ್ಥೆಗಳು ಆಯ್ಕೆಯಾಗಿದ್ದವು. ಅಂತಿಮವಾಗಿ ಸಿದ್ಧಾರ್ಥ ವಿಹಾರ ಎಜುಕೇಷನಲ್ ಟ್ರಸ್ಟ್‌ಗೆ ಸಿ.ಎ ನಿವೇಶನ ನೀಡಲಾಗಿತ್ತು. ಆದರೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಾಗಿರುವ ಲೋಪಗಳ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವರು ತಗಾದೆ ತೆಗೆದ ಬಳಿಕ ವಿವಾದ ಸೃಷ್ಟಿಯಾಗಿತ್ತು.
ಆಟೊ ಮೊಬೈಲ್ ಕ್ಷೇತ್ರದಲ್ಲಿ ಕಾರ್ಯಾನುಭವ ಇಲ್ಲದ ಟ್ರಸ್ಟ್‌ಗೆ ಅಧಿಕಾರ ದುರುಪಯೋಗ, ನಿಯಮ ಉಲ್ಲಂಘಿಸಿ ನಿವೇಶನ ಹಂಚಲಾಗಿದೆ. ನಿವೇಶನ ಹಂಚಿಕೆ ನ್ಯಾಯಸಮ್ಮತವಾಗಿಲ್ಲ ಎಂಬುದು ದಿನೇಶ್ ಕಲ್ಲಹಳ್ಳಿ ಆರೋಪವಾಗಿತ್ತು.
ವಿವಾದ ರಾಜಕೀಯ ಮುನ್ನೆಲೆಗೆ ಬಂದಿದ್ದು ಹೇಗೆ?
ದಿನೇಶ್ ಕಲ್ಲಹಳ್ಳಿ ದೂರು ಬಹಿರಂಗವಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ನಿವೇಶನ ಹಂಚಿಕೆ ಪ್ರಕ್ರಿಯೆ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಅಧಿಕೃತವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಪ್ರಸ್ತಾವಿತ ಯೋಜನೆ ಕಾರ್ಯಗತ ವಿಚಾರದಲ್ಲಿ ಟ್ರಸ್ಟ್ ಸಾಮರ್ಥ್ಯ ಮತ್ತು ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಕುರಿತು ಆಕ್ಷೇಪಿಸಿದ್ದರು.
ತಮ್ಮ ಟ್ರಸ್ಟ್ ವಿರುದ್ಧ ದೂರು ನೀಡಿದ ಲೆಹರ್ ಸಿಂಗ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನೀವೊಬ್ಬ ರಾಜಸ್ಥಾನಿ, ಇಲ್ಲಿನ ವಿಚಾರ ನಿಮಗೇನು ಗೊತ್ತು ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಲೆಹರ್ ಸಿಂಗ್, ರಾಜಸ್ಥಾನ ಪಾಕಿಸ್ತಾನದಲ್ಲಿಲ್ಲ. ನಾನು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದೇನೆ. ಕನ್ನಡ ಮಾತನಾಡುತ್ತೇನೆ, ಬರೆಯುತ್ತೇನೆ ಎಂದು ತಿರುಗೇಟು ನೀಡಿದ್ದರು.
ಲೆಹರ್ ಸಿಂಗ್ ದೂರಿನ ಆಧಾರದ ಮೇಲೆ ಸ್ಪಷ್ಟನೆ ಕೋರಿ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದರು.
ಟ್ರಸ್ಟ್ ಯಾವ ಉದ್ದೇಶಕ್ಕೆ ಜಾಗ ಪಡೆದಿತ್ತು?
ಸಿದ್ಧಾರ್ಥ ವಿಹಾರ ಟ್ರಸ್ಟ್, ಏರೋಸ್ಪೇಸ್ ಪಾರ್ಕಿನಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಉದ್ದೇಶಕ್ಕಾಗಿ ಜಾಗ ನೀಡುವಂತೆ ಕೋರಿತ್ತು. ಅದರಲ್ಲಿ ಆಟೊಮೊಬೈಲ್ ಉತ್ಪಾದನೆ ಹಾಗೂ ಸಾಫ್ಟ್‌ವೇರ್ ಕೌಶಲ್ಯ ತರಬೇತಿ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿತ್ತು. ಒಟ್ಟು 25 ಕೋಟಿ ವೆಚ್ಚದ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಪ್ರವರ್ತಕರಿಂದ 10 ಕೋಟಿ, ಬ್ಯಾಂಕ್ ಸಾಲವಾಗಿ 10 ಕೋಟಿ ಹಾಗೂ ಸ್ಥಿರ ಬಂಡವಾಳವಾಗಿ 5 ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.
ಕೌಶಲ್ಯಾಭಿವೃದ್ಧಿ ಕೇಂದ್ರದ ಕಟ್ಟಡವನ್ನು 2026 ಅ.29 ರೊಳಗೆ ಪೂರ್ಣಗೊಳಿಸಿ, 2027 ಡಿ.30 ರಂದು ಕಾರ್ಯಾರಂಭ ಮಾಡುವುದಾಗಿಯೂ ಟ್ರಸ್ಟ್ ಹೇಳಿತ್ತು. 150 ಜನರಿಗೆ ಉದ್ಯೋಗ ನೀಡುವುದಾಗಿ ಟ್ರಸ್ಟ್ ವಾಗ್ದಾನ ನೀಡಿ ಸರ್ಕಾರದಿಂದ ಜಾಗ ಹಂಚಿಕೆ ಮಾಡಿಸಿಕೊಂಡಿತ್ತು.
ನಿವೇಶನ ಹಂಚಿಕೆಗೆ ಸರ್ಕಾರದ ಸಮರ್ಥನೆ ಏನು?
ಸಿದ್ಧಾರ್ಥ ವಿಹಾರ ಟ್ರಸ್ಟಿಗೆ 5 ಎಕರೆ ಭೂಮಿ ಹಂಚಿಕೆ ಮಾಡಿದ ಪ್ರಕರಣ ವಿವಾದ ಸ್ವರೂಪ ಪಡೆಯುತ್ತಿದ್ದಂತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟೀಕರಣ ನೀಡಿದ್ದರು.
ಏರೋಸ್ಪೇಸ್‌ನ ಸಿಎ ನಿವೇಶನವನ್ನು ರಾಹುಲ್ ಖರ್ಗೆ ಅವರಿಗೆ ಕೆಐಎಡಿಬಿಯ ನಿಗದಿತ ಬೆಲೆಗೇ ನೀಡಲಾಗಿದೆಯೇ ಹೊರತು ಯಾವುದೇ ವಿನಾಯ್ತಿ ನೀಡಿಲ್ಲ. ರಾಹುಲ್ ಒಬ್ಬ ಐಐಟಿ ಪದವೀಧರ. ಆರ್ ಅಂಡ್ ಡಿ(ಸಂಶೋಧನೆ ಮತ್ತು ಅಭಿವೃದ್ಧಿ) ಘಟಕ ಸ್ಥಾಪಿಸುವ ಉದ್ದೇಶದಿಂದ ನಿವೇಶನ ಕೇಳಿದ್ದರು. ಖರ್ಗೆ ಅವರ ಕುಟುಂಬ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆಸಕ್ತಿ ಇರುವವರು, ಅರ್ಹರು ಯಾರು ಬೇಕಾದರೂ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಮೂಲಕ ಸಿಎ ನಿವೇಶನ ಪಡೆಯಬಹುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದರು.
ಹಿಂದಿನ ಬಿಜೆಪಿ ಸರ್ಕಾರ ಕೈಗಾರಿಕಾ ಪ್ರದೇಶದಲ್ಲಿ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೇವಲ 50 ಕೋಟಿ ರೂ.ಗಳಿಗೆ 116 ಎಕರೆ ಮಂಜೂರು ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹137 ಕೋಟಿ ನಷ್ಟವಾಗಿದೆ. ಇದೆಲ್ಲಾ ಲೆಹರ್ ಸಿಂಗ್ ಅವರಿಗೆ ಒಳ್ಳೆಯದಾ ಎಂದು ಕೂಡ ಪಾಟೀಲ್ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದರು.
ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯಿಸಿ, ಅಲ್ಪಜ್ಞಾನಿಗಳು ಎಂದಿಗೂ ಅಪಾಯಕಾರಿ ಎಂದು ಹೇಳಿದ್ದರು. ನಿಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯವ್ಯಾಪಿ ಆರ್‌ಎಸ್‌ಎಸ್ ಅಧೀನದ ರಾಷ್ಟ್ರೋತ್ಥಾನ ಹಾಗೂ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಜಾಗ ನೀಡಿಲ್ಲವೇ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದ್ದರು.
ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಮತ್ತೆಲ್ಲಿ ಜಾಗ ಮಂಜೂರು ?
ಕಳೆದ ಒಂದು ದಶಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಒಡೆತನದ ಸಿದ್ದಾರ್ಥ ವಿಹಾರ ಟ್ರಸ್ಟ್ಗೆ 24 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಪಾಳಿ, ಸಂಸ್ಕೃತಿ ಹಾಗೂ ತುಲನಾತ್ಮಕ ತತ್ವಶಾಸ್ತ್ರದ ಅಂತರಾಷ್ಟ್ರೀಯ ಸಂಸ್ಥೆ ಸ್ಥಾಪನೆಗಾಗಿ ಕಲಬುರುಗಿಯಲ್ಲಿ 2014 ಹಾಗೂ 2017 ರಲ್ಲಿ ಒಟ್ಟು 19 ಎಕರೆ ಮಂಜೂರು ಮಾಡಲಾಗಿತ್ತು. ಉಳಿದ ಐದು ಎಕರೆಯನ್ನು 2024 ರಲ್ಲಿ ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಆರ್ ಅಂಡ್ ಡಿ ಸ್ಥಾಪನೆಗಾಗಿ ಮಂಜೂರು ಮಾಡಲಾಗಿತ್ತು.
ಟ್ರಸ್ಟಿಗೆ ನೀಡಿರುವ ಈ ಜಮೀನಿನ ಬಗ್ಗೆ ಸಿಎಜಿ ವರದಿಯಲ್ಲಿ ಕೂಡ ಉಲ್ಲೇಖಿಸಲಾಗಿದ್ದು, ಸಾರ್ವಜನಿಕ ಉದ್ದೇಶಕ್ಕಿಂತ ಖಾಸಗಿ ಹಿತಾಸಕ್ತಿ ಈ ನಿವೇಶನ ಹಂಚಿಕೆಯಲ್ಲಿ ಕಾಣಿಸುತ್ತದೆ ಎಂದು ಸಿಎಜಿ ಆಕ್ಷೇಪವೆತ್ತಿತ್ತು
ಸಿದ್ಧಾರ್ಥ ಟ್ರಸ್ಟಿನಲ್ಲಿ ಯಾರೆಲ್ಲಾ ಇದ್ದಾರೆ?
ಪ್ರಸ್ತುತ, ಸಿದ್ದಾರ್ಥ ವಿಹಾರ ಟ್ರಸ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ರಾಧಾಬಾಯಿ ಖರ್ಗೆ, ಅಳಿಯ ಹಾಗೂ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಪುತ್ರರಾದ ಪ್ರಿಯಾಂಕ್ ಖರ್ಗೆ ಹಾಗೂ ರಾಹುಲ್ ಖರ್ಗೆ ಇದ್ದಾರೆ. ಖರ್ಗೆ ಅವರ ಹಿರಿಯ ಪುತ್ರ ರಾಹುಲ್ ಖರ್ಗೆ ಟ್ರಸ್ಟಿನ ಅಧ್ಯಕ್ಷರಾಗಿದ್ದಾರೆ.
ಏರೋಸ್ಪೇಸ್‌ನಲ್ಲಿ ಜಾಗ ಪಡೆದ ಇತರೆ ಸಂಸ್ಥೆಗಳು ಯಾವುವು?
ಒಟ್ಟು 45.94 ಎಕರೆ ವಿಸ್ತೀರ್ಣ ಏರೋಸ್ಪೇಸ್ ಪಾರ್ಕಿನಲ್ಲಿ 11 ಕಂಪನಿಗಳು ಜಾಗ ಪಡೆದುಕೊಂಡಿವೆ. ಒಟ್ಟು 1208 ಕೋಟಿ ಹೂಡಿಕೆ ಮಾಡಿವೆ. ಇದೇ ಜಾಗದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟಿಗೆ ಪರಿಶಿಷ್ಟ ಜಾತಿ ಕೋಟಾದಡಿ 5 ಎಕರೆ ಜಾಗವನ್ನು ಕೆಐಎಡಿಬಿ ಮಂಜೂರು ಮಾಡಿದೆ.
ಎಸ್‌ಸಿ/ ಎಸ್‌ಟಿ ಕೋಟಾದಡಿ ಎಆರ್‌ಎಂ ಸ್ಕ್ವೇರ್ ಕಂಪನಿಗೆ 2.41 ಎಕರೆ ಜಮೀನು ನೀಡಲಾಗಿದೆ. ಈ ಜಾಗದಲ್ಲಿ ಅದು ₹17.50 ಕೋಟಿ ವೆಚ್ಚದಲ್ಲಿ ಹೋಟೆಲ್, ರೆಸಾರ್ಟ್, ಕಾಟೇಜ್ ಅಭಿವೃದ್ಧಿಪಡಿಸುತ್ತಿದೆ. ಅದ್ವಿಕ್ ಗೇಟ್‌ವೇ ಕಂಪನಿಗೆ 2.17 ಎಕರೆ ನೀಡಿದೆ. ವಸತಿಗೃಹ ನಿರ್ಮಾಣಕ್ಕಾಗಿ ಈ ಸಂಸ್ಥೆ ₹47.92 ಕೋಟಿ ಹೂಡಿಕೆ ಮಾಡುತ್ತಿದೆ.
ಸಿಎ ನಿವೇಶನ ಹಿಂತಿರುಗಿಸಲು ಪತ್ರ
ಏರೋಸ್ಪೇಸ್ ಪಾರ್ಕಿನಲ್ಲಿ ಸಿಎ ನಿವೇಶನವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಪ್ರತಿಪಕ್ಷ ಮೈತ್ರಿ ಕಾನೂನು ಮತ್ತು ಬೀದಿ ಹೋರಾಟವನ್ನು ಚುರುಕುಗೊಳಿಸಿದ ಬೆನ್ನಲ್ಲೇ ಇದೀಗ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ ಕುಟುಂಬ ವಿವಾದಿತ ಜಾಗ ಹಿಂತಿರುಗಿಸಿ, ಕೆಐಎಡಿಬಿಗೆ ಸೆ.20 ರಂದು ಪತ್ರ ಬರೆದಿದೆ. ಅ.13 ರಂದು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಈ ಕುರಿತು ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ, "ಮನುಸ್ಮೃತಿ ಮನಸ್ಸಿನವರಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಬೇಕಾಗಿಲ್ಲ. ಬಿಜೆಪಿಯವರ ಆರೋಪದಲ್ಲಿ ಕಿಂಚಿತ್ತು ಹುರುಳಿದ್ದರೆ ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಅವರೇ ಬಂದು ನೋಡಲಿ. ಈ ವಿವಾದದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಸುಮ್ಮನಿರುವುದು ಏಕೆ? ಕಲಬುರಗಿವರೆಗೆ ಪಾದಯಾತ್ರೆ ಮಾಡಲಿ" ಎಂದು ಕಿಡಿಕಾರಿದ್ದಾರೆ.