ಅಮೆರಿಕದಲ್ಲಿ ಕನ್ನಡಿಗನ ಬರ್ಬರ ಹತ್ಯೆ: ವಾಷಿಂಗ್ ಮಷಿನ್ ವಿಚಾರಕ್ಕೆ ಶುರುವಾದ ಜಗಳ, ಶಿರಚ್ಛೇದದಲ್ಲಿ ಅಂತ್ಯ

ಚಂದ್ರಮೌಳಿ ನಾಗಮಲ್ಲಯ್ಯ ಮೃತಪಟ್ಟ ಕನ್ನಡಿಗ. ಈ ಕೃತ್ಯ ಎಸಗಿದ ಆರೋಪಿ, 37 ವರ್ಷದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್‌ ಎಂಬುವನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.;

Update: 2025-09-12 07:21 GMT

ಮೃತ ನಾಗಮಲ್ಲಯ್ಯ, ಆರೋಪಿ ಮಾರ್ಟಿನೇಜ್ 

Click the Play button to listen to article

ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಹೋಟೆಲ್​ ಒಂದರಲ್ಲಿ, ಕರ್ನಾಟಕ ಮೂಲದ ಮ್ಯಾನೇಜರ್ ಒಬ್ಬರನ್ನು ಅವರ ಉದ್ಯೋಗಿಯೇ ಮಚ್ಚಿನಿಂದ ಕೊಚ್ಚಿ, ಶಿರಚ್ಛೇದ ಮಾಡಿರುವ ಘೋರ ಘಟನೆ ನಡೆದಿದೆ. ಕೇವಲ ಹಾಳಾದ ವಾಷಿಂಗ್ ಮಷಿನ್ ಬಳಸದಂತೆ ಹೇಳಿದ ವಿಚಾರಕ್ಕೆ ಈ ಬರ್ಬರ ಕೃತ್ಯ ನಡೆದಿದೆ.

50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಮೃತಪಟ್ಟ ಕನ್ನಡಿಗ. ಈ ಕೃತ್ಯ ಎಸಗಿದ ಆರೋಪಿ, 37 ವರ್ಷದ ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್‌ ಎಂಬುವನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಬುಧವಾರ, ನಾಗಮಲ್ಲಯ್ಯ ಅವರು ತಮ್ಮ ಉದ್ಯೋಗಿಯಾಗಿದ್ದ ಕೋಬೋಸ್-ಮಾರ್ಟಿನೆಜ್‌ಗೆ, ಹಾಳಾಗಿದ್ದ ವಾಷಿಂಗ್ ಮಷಿನ್ ಬಳಸದಂತೆ ಸೂಚಿಸಿದ್ದರು. ನಾಗಮಲ್ಲಯ್ಯ ಅವರು ನೇರವಾಗಿ ತನಗೆ ಹೇಳದೆ, ಮತ್ತೊಬ್ಬ ಉದ್ಯೋಗಿಯ ಮೂಲಕ ಸೂಚನೆಯನ್ನು ಭಾಷಾಂತರಿಸಿ ಹೇಳಿದ್ದಕ್ಕೆ ಕೋಬೋಸ್-ಮಾರ್ಟಿನೆಜ್ ಕೋಪಗೊಂಡಿದ್ದ.

ಇದರಿಂದ ಕುಪಿತಗೊಂಡ ಆರೋಪಿ, ಮಚ್ಚೊಂದನ್ನು ತಂದು ನಾಗಮಲ್ಲಯ್ಯ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ದಾಳಿಯಿಂದ ತಪ್ಪಿಸಿಕೊಳ್ಳಲು ನಾಗಮಲ್ಲಯ್ಯ ಅವರು ಪಾರ್ಕಿಂಗ್ ಸ್ಥಳದಿಂದ ಫ್ರಂಟ್ ಆಫೀಸ್ ಕಡೆಗೆ ಓಡಲು ಯತ್ನಿಸಿದರೂ, ಆರೋಪಿ ಅವರನ್ನು ಬೆನ್ನಟ್ಟಿ ಹಲ್ಲೆ ಮುಂದುವರಿಸಿದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಪತ್ನಿ-ಪುತ್ರನ ಎದುರೇ ಕೃತ್ಯ

ಈ ಸಂದರ್ಭದಲ್ಲಿ, ಫ್ರಂಟ್ ಆಫೀಸ್‌ನಿಂದ ಹೊರಬಂದ ನಾಗಮಲ್ಲಯ್ಯ ಅವರ ಪತ್ನಿ ಮತ್ತು 18 ವರ್ಷದ ಮಗ, ಆರೋಪಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ಅವರನ್ನು ದೂಡಿ, ಅಂತಿಮವಾಗಿ ನಾಗಮಲ್ಲಯ್ಯ ಅವರ ಶಿರಚ್ಛೇದ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಬೇರ್ಪಟ್ಟ ತಲೆಯನ್ನು ಕಾಲಿನಿಂದ ಒದ್ದು, ನಂತರ ಅದನ್ನು ಕಸದ ತೊಟ್ಟಿಗೆ ಎಸೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ರಕ್ತಸಿಕ್ತ ಸ್ಥಿತಿಯಲ್ಲಿ, ಕೈಯಲ್ಲಿ ಮಚ್ಚು ಹಿಡಿದು ಕಸದ ತೊಟ್ಟಿಯ ಬಳಿಯಿಂದ ಹೋಗುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.

ಭಾರತೀಯ ದೂತಾವಾಸದಿಂದ ನೆರವು

ಈ "ಘೋರ ಮತ್ತು ದುರಂತ" ಘಟನೆಯ ಬಗ್ಗೆ ಭಾರತೀಯ ದೂತಾವಾಸ ಕಚೇರಿ ಸಂತಾಪ ಸೂಚಿಸಿದ್ದು, "ನಾವು ಸಂತ್ರಸ್ತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅಗತ್ಯವಿರುವ ಎಲ್ಲಾ ನೆರವು ನೀಡುತ್ತಿದ್ದೇವೆ. ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದು, ನಾವು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ," ಎಂದು 'X' ನಲ್ಲಿ ಪೋಸ್ಟ್ ಮಾಡಿದೆ. ವರದಿಗಳ ಪ್ರಕಾರ, ಆರೋಪಿ ಕೋಬೋಸ್-ಮಾರ್ಟಿನೆಜ್ ಈ ಹಿಂದೆಯೂ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆಯಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

Tags:    

Similar News