ಮರಣದಂಡನೆ ಶಿಕ್ಷೆ ಬೆನ್ನಲ್ಲೇ ಶೇಖ್ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಪತ್ರ ಬರೆದ ಬಾಂಗ್ಲಾ ಸರ್ಕಾರ

ಕಳೆದ ವರ್ಷ ನಡೆದ ವಿದ್ಯಾರ್ಥಿ ಹೋರಾಟದ ವೇಳೆ ನಡೆದ ದೌರ್ಜನ್ಯ ಮತ್ತು ನರಮೇಧದ ಆರೋಪದಡಿ ಹಸೀನಾ ಅವರಿಗೆ ಶಿಕ್ಷೆ ಪ್ರಕಟವಾಗಿದೆ.

Update: 2025-11-24 01:50 GMT
Click the Play button to listen to article

ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ವಿಶೇಷ ನ್ಯಾಯಮಂಡಳಿ ಮರಣದಂಡನೆ ವಿಧಿಸಿದ ಬೆನ್ನಲ್ಲೇ, ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಕೋರಿ ಅಲ್ಲಿನ ಮಧ್ಯಂತರ ಸರ್ಕಾರ ಭಾರತಕ್ಕೆ 'ಅಧಿಕೃತ ಪತ್ರ' ರವಾನಿಸಿದೆ.

ಕಳೆದ ವರ್ಷ ನಡೆದ ವಿದ್ಯಾರ್ಥಿ ಹೋರಾಟದ ವೇಳೆ ನಡೆದ ದೌರ್ಜನ್ಯ ಮತ್ತು ನರಮೇಧದ ಆರೋಪದಡಿ ಹಸೀನಾ ಅವರಿಗೆ ಶಿಕ್ಷೆ ಪ್ರಕಟವಾಗಿದ್ದು, ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿರುವ ಅವರನ್ನು ಕೂಡಲೇ ಹಸ್ತಾಂತರಿಸಬೇಕೆಂದು ಬಾಂಗ್ಲಾ ಸರ್ಕಾರ ಒತ್ತಾಯಿಸಿದೆ.

ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಎಂಡಿ ತೌಹಿದ್ ಹೊಸೈನ್, "ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿ ಮೊನ್ನೆಯಷ್ಟೇ ಭಾರತಕ್ಕೆ ಪತ್ರವನ್ನು ಕಳುಹಿಸಲಾಗಿದೆ," ಎಂದು ದೃಢಪಡಿಸಿದ್ದಾರೆ. ನವದೆಹಲಿಯಲ್ಲಿರುವ ಬಾಂಗ್ಲಾದೇಶದ ಹೈಕಮಿಷನ್ ಮೂಲಕ ಈ ರಾಜತಾಂತ್ರಿಕ ಟಿಪ್ಪಣಿಯನ್ನು (Note Verbale) ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಪತ್ರದ ಸಂಪೂರ್ಣ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.

ಮರಣದಂಡನೆ ಮತ್ತು ಹಿನ್ನೆಲೆ

ನವೆಂಬರ್ 17 ರಂದು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ICT-BD), 78 ವರ್ಷದ ಶೇಖ್ ಹಸೀನಾ ಹಾಗೂ ಅಂದಿನ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಅವರಿಗೆ ಗೈರುಹಾಜರಿಯಲ್ಲಿಯೇ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿತ್ತು. ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ನರಮೇಧದ ಆರೋಪದಡಿ ಈ ತೀರ್ಪು ನೀಡಲಾಗಿತ್ತು. ಹಸೀನಾ ಪ್ರಸ್ತುತ ಭಾರತದಲ್ಲಿದ್ದರೆ, ಕಮಲ್ ಕೂಡ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಕಳೆದ ವರ್ಷ ಆಗಸ್ಟ್ 5 ರಂದು ನಡೆದ 'ಜುಲೈ ಕ್ರಾಂತಿ' ಎಂದೇ ಕರೆಯಲ್ಪಡುವ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಪರಿಣಾಮವಾಗಿ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನಗೊಂಡಿತ್ತು. ವಿಶ್ವಸಂಸ್ಥೆಯ ವರದಿಗಳ ಪ್ರಕಾರ, ಜುಲೈ 15 ರಿಂದ ಆಗಸ್ಟ್ 15 ರ ನಡುವೆ ನಡೆದ ಈ ಸಂಘರ್ಷದಲ್ಲಿ ಸುಮಾರು 1,400 ಜನರು ಪ್ರಾಣ ಕಳೆದುಕೊಂಡಿದ್ದರು. ನಂತರ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

ಭಾರತದ ನಿಲುವೇನು?

ಈ ಹಿಂದೆಯೂ ಡಿಸೆಂಬರ್‌ನಲ್ಲಿ ಬಾಂಗ್ಲಾ ಸರ್ಕಾರ ಹಸ್ತಾಂತರಕ್ಕೆ ಕೋರಿತ್ತು, ಆಗ ಭಾರತ ಮನವಿಯನ್ನು ಸ್ವೀಕರಿಸಿತೇ ವಿನಃ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಹಸೀನಾ ಅವರಿಗೆ ಮರಣದಂಡನೆ ತೀರ್ಪು ಪ್ರಕಟವಾದ ಬಳಿಕ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, "ನಾವು ತೀರ್ಪನ್ನು ಗಮನಿಸಿದ್ದೇವೆ. ಹತ್ತಿರದ ನೆರೆಯ ರಾಷ್ಟ್ರವಾಗಿ, ಬಾಂಗ್ಲಾದೇಶದ ಜನರ ಹಿತಾಸಕ್ತಿ, ಶಾಂತಿ, ಪ್ರಜಾಪ್ರಭುತ್ವ ಮತ್ತು ಸ್ಥಿರತೆಗೆ ಭಾರತ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಾಲುದಾರರೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿದ್ದೇವೆ," ಎಂದು ಹೇಳಿದೆ. 

Tags:    

Similar News