Manipur violence| ನ್ಯಾಯ-ಶಾಂತಿಗೆ ಆಗ್ರಹ, ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮಣಿಪುರದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಭಾಯಿಸುವುದರಲ್ಲಿ ವೈಫಲ್ಯವನ್ನು ಖಂಡಿಸಿ, ವಿದ್ಯಾರ್ಥಿಗಳು ಸೋಮವಾರ ರಾಜಭವನಕ್ಕೆ ಮೆರವಣಿಗೆ ನಡೆಸಿದರು.


ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡಿರುವ ನಡುವೆಯೇ, ವಿದ್ಯಾರ್ಥಿಗಳು ನ್ಯಾಯ ಮತ್ತು ಶಾಂತಿಗಾಗಿ ಒತ್ತಾಯಿಸಿ ಬೀದಿಗಿಳಿದಿದ್ದಾರೆ.

ಕಳೆದ ಒಂದು ವರ್ಷದಿಂದ ಎರಡು ಸಮುದಾಯಗಳಾದ ಬಹುಸಂಖ್ಯಾತ ಮೈತಿಗಳು ಮತ್ತು ಕುಕಿಗಳ ನಡುವೆ ರಕ್ತಸಿಕ್ತ ಸಂಘರ್ಷಕ್ಕೆ ಮಣಿಪುರ ಸಾಕ್ಷಿಯಾಗಿದೆ. ಇಂಫಾಲ್‌ನ ಶಾಲೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಸೋಮವಾರ ರಾಜಭವನಕ್ಕೆ ಮೆರವಣಿಗೆ ನಡೆಸಿ, ರಾಜ್ಯಪಾಲ, ಪೊಲೀಸ್ ಮಹಾನಿರ್ದೇಶಕ ಮತ್ತು ಭದ್ರತಾ ಸಲಹೆಗಾರರ ರಾಜೀನಾಮೆಗೆ ಒತ್ತಾಯಿಸಿದರು.

ಸರ್ಕಾರದ ಪುನರಾವರ್ತಿತ ವೈಫಲ್ಯ ಮತ್ತು ನಿರಂತರ ಹಿಂಸಾಚಾರದ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಗಳು, ಅರೆಸೇನಾ ಪಡೆಗಳನ್ನು ಹಿಂಪಡೆಯಬೇಕು ಮತ್ತು ನೈತಿಕ ಹಿನ್ನೆಲೆಯಲ್ಲಿ 50 ಶಾಸಕರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಹಿಂಸಾಚಾರ ಉಲ್ಬಣ: ಕಳೆದ ವಾರದಿಂದ ಹಿಂಸಾಚಾರ ಮಿತಿಮೀರಿದೆ. ನಾಗರಿಕರು ಮತ್ತು ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗಿದೆ. ಕೇವಲ ಒಂಬತ್ತು ದಿನಗಳಲ್ಲಿ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉದ್ವಿಗ್ನತೆ ಹೆಚ್ಚಳ ಮತ್ತು ರಾಜ್ಯದ ನಿಷ್ಕ್ರಿಯತೆಯಿಂದಾಗಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ.

ʻಪ್ರಸ್ತುತ ಪಂಜರದಲ್ಲಿ ವಾಸ ಮತ್ತು ಇಂಫಾಲ ಕಣಿವೆಯಲ್ಲಿ ವಾಸಿಸುವುದರ ನಡುವೆ ಯಾವುದೇ ವ್ಯತ್ಯಾಸವಿಲ್ಲಎಂದು ಅಧಿಕಾರಿಗಳಿಗೆ ತಿಳಿಸುವುದು ಮೆರವಣಿಗೆಯ ಉದ್ದೇಶ,ʼ ಎಂದು ಧನಮಂಜೂರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಸೆಪ್ಟೆಂಬರ್ 1 ರಂದು ಇಂಫಾಲ್ ಪಶ್ಚಿಮ ಜಿಲ್ಲೆಯ ಕೌಟ್ರುಕ್ ಗ್ರಾಮದಲ್ಲಿ ಡ್ರೋನ್ ಮತ್ತು ರಾಕೆಟ್ ಬಾಂಬ್‌ಗಳ ಬಳಕೆಯಾಗಿದೆ. ಇದರಿಂದ ಇಬ್ಬರು ಮೃತಪಟ್ಟು, ಒಂಬತ್ತು ಮಂದಿ ಗಾಯಗೊಂಡರು. ಮರುದಿನ, ಸೆಂಜಮ್ ಚಿರಾಂಗ್‌ನಲ್ಲಿ ಡ್ರೋನ್‌ ದಾಳಿಯಿಂದ ಮೂವರು ಗಾಯಗೊಂಡರು. ರಾಜ್ಯ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ನಿಯೋಜಿಸಿತು.

ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ಅಸ್ಸಾಂ ರೈಫಲ್ಸ್ ಮತ್ತು ಕೇಂದ್ರ ಪಡೆಗಳನ್ನು ನಿಯಂತ್ರಿಸಲು, ಮುಖ್ಯಮಂತ್ರಿಗೆ ಅಧಿಕಾರ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ʻಅವರು ಅಸ್ಸಾಂ ರೈಫಲ್ಸ್ ನ್ನು ನಿಯಂತ್ರಿಸಬೇಕು. ಏಕೆಂದರೆ, ಅವರು ದುಷ್ಕೃತ್ಯದ ಆರೋಪ ಎದುರಿಸುತ್ತಿದ್ದಾರೆ,ʼ ಎಂದು ವಿದ್ಯಾರ್ಥಿಯೊಬ್ಬ ಹೇಳಿದರು.

ಮಣಿಪುರ ಸಿಎಂ ಮತ್ತು ಶಾಸಕರು ರಾಜ್ಯಪಾಲರನ್ನು ಭೇಟಿಯಾಗಿ, ಏಕೀಕೃತ ಕಮಾಂಡ್ ಕಂಟ್ರೋಲ್ ಗೆ ಒತ್ತಾಯಿಸಿದ್ದಾರೆ. ಆದರೆ, ಕೇಂದ್ರ ಸ್ಪಂದಿಸಿಲ್ಲ.

ಜನರು ಮೊಂಬತ್ತಿ ಮೆರವಣಿಗೆ ಮತ್ತು ಮಾನವ ಸರಪಳಿ ಮೂಲಕ ಶಾಂತಿಯ ಭರವಸೆಯಲ್ಲಿದ್ದಾರೆ.

Read More
Next Story