Bidadi Township Project | ಡಿಕೆಶಿ - ದೊಡ್ಡಗೌಡರ ಕಾದಾಟ; ರೈತರ ನರಳಾಟ; ಏನಿದು ಟೌನ್‌ಶಿಪ್‌ ಯೋಜನೆಯ ಆಟ?

ಟೌನ್‌ಶಿಪ್‌ ಯೋಜನೆ ಜಾರಿಗೆ ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಬೆಂಬಲಕ್ಕೆ ಗೋಡೆಯಂತೆ ನಿಂತಿರುವ ಜೆಡಿಎಸ್‌, ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಶಪಥ ಮಾಡಿದೆ

Update: 2025-10-01 12:42 GMT

ಬೆಂಗಳೂರು ಹೊರವಲಯದ ಬಿಡದಿಯಲ್ಲಿ ದೇಶದ ಮೊದಲ ಕೃತಕ ಬುದ್ಧಿಮತ್ತೆಯ (ಎಐ) ನಗರ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗ್ರೇಟರ್‌ ಬೆಂಗಳೂರು ಸಂಯೋಜಿತ ನಗರ (ಜಿಬಿಐಟಿ) ಅಥವಾ ಬಿಡದಿ ಟೌನ್‌ಶಿಪ್‌ ಹೆಸರಿನ ಈ ಯೋಜನೆ ಇದೀಗ ರಾಜಕೀಯ ಕಾರಣಗಳಿಂದ ಜಂಗೀಕುಸ್ತಿಯ ಅಖಾಡವಾಗಿ ಬದಲಾಗಿದೆ. ಬಿಡದಿ ಟೌನ್‌ಶಿಪ್‌ ಸ್ಥಾಪನೆ ವಿಚಾರ ಡಿಕೆಶಿ ಹಾಗೂ ಎಚ್‌ಡಿಕೆ ನಡುವೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ.       

 ಟೌನ್‌ಶಿಪ್‌ ಯೋಜನೆ ಜಾರಿಗೆ ಪಟ್ಟು ಹಿಡಿದಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರಿಗಳ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಬೆಂಬಲಕ್ಕೆ ಗೋಡೆಯಂತೆ ನಿಂತಿರುವ ಜೆಡಿಎಸ್‌, ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಶಪಥ ಮಾಡಿದೆ. ಡಿಕೆಶಿ ಹಾಗೂ ದೇವೇಗೌಡರ ಕುಟುಂಬದ ಮಧ್ಯೆ ʼಬಿಡದಿ ಟೌನ್‌ಶಿಪ್‌ʼ ಯೋಜನೆ ಪರಸ್ಪರ ವಾಗ್ದಾಳಿ, ನಿಂದನೆ ಹಾಗೂ ಪ್ರತಿಷ್ಠೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆ ಕಣ್ಣು ಬಿಡುವ ಮುನ್ನವೇ ವಿವಾದ, ವಿರೋಧಗಳಿಂದ ವಿಳಂಬ ಎದುರಿಸುತ್ತಿದೆ. 

ಏನಿದು ಟೌನ್‌ಶಿಪ್‌ ಯೋಜನೆ?

ಬಿಡದಿಯಲ್ಲಿ ಕೆಲಸ, ವಾಸ, ಮನರಂಜನೆ( Work-Live –Play) ಪರಿಕಲ್ಪನೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವುದೇ ಟೌನ್‌ಶಿಪ್‌ ಯೋಜನೆ. ಕೃತಕ ಬುದ್ದಿಮತ್ತೆ ಆಧರಿತ ಮೊದಲ ನಗರ ಕೂಡ ಟೌನ್‌ಶಿಪ್‌ ವ್ಯಾಪ್ತಿಯಲ್ಲಿ ಬರಲಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ 26 ಗ್ರಾಮಗಳ 9,650 ಎಕರೆ ಭೂಮಿ ಸ್ವಾಧೀನಕ್ಕೆ ಮುಂದಾಗಿದೆ. 

ಅಂದಾಜು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಈ ಯೋಜನೆಯನ್ನು 2031 ರ ವೇಳೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಆದರೆ, ಭೂಸ್ವಾಧೀನವು ಹಗ್ಗಜಗ್ಗಾಟಕ್ಕೆ ಕಾರಣವಾಗಿರುವುದರಿಂದ ಯೋಜನೆ ವಿಳಂಬವಾಗುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರಸ್ತುತ, 8,493 ಎಕರೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಈ ಪೈಕಿ 2 ಸಾವಿರ ಎಕರೆಯಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕೈಗಾರಿಕೆಗಳು, ಅದರ ಸಂಬಂಧಿತ ಘಟಕಗಳಿಗೆ ಮೀಸಲಿರಿಸಲಾಗಿದೆ. ಎಐ ಆಧಾರಿತ ಕೈಗಾರಿಕೆಗಳಿಗೆ ತಕ್ಕಂತೆ ಕಾರ್ಮಿಕರನ್ನು ತರಬೇತಿಗೊಳಿಸಲು ವಿಶೇಷ ಕೌಶಲ ಕೇಂದ್ರಗಳು ಸ್ಥಾಪಿಸಲಾಗುತ್ತಿದೆ. 1,100 ಎಕರೆಗಿಂತ ಹೆಚ್ಚು ಪ್ರದೇಶವನ್ನು ಉದ್ಯಾನ ಹಾಗೂ ಹಸಿರು ವಲಯಕ್ಕೆ ಮೀಸಲಿಡಲಾಗಿದೆ.

ಪರಿಹಾರ ಪ್ಯಾಕೇಜ್‌ ಏನು?

9 ಗ್ರಾಮಗಳಲ್ಲಿ 6,731 ಎಕರೆ ಖಾಸಗಿ ಭೂಮಿಯನ್ನು ಸರ್ಕಾರವು 2013 ರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನ್ಯಾಯಯುತ, ಪಾರದರ್ಶಕ ಪರಿಹಾರ, ಪುನರ್ವಸತಿ ಕಾಯ್ದೆಯಡಿ ಪರಿಹಾರ ಘೋಷಿಸಿದೆ.

ಇದರ ಮೊದಲ ಭಾಗವಾಗಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಕ್ಷಣದಿಂದ ಪೂರ್ಣ ಪ್ರಮಾಣದ ಪರಿಹಾರ ಒದಗಿಸುವವರೆಗೆ ಜೀವನೋಪಾಯಕ್ಕಾಗಿ ವಿಶೇಷ ಪ್ಯಾಕೇಜ್‌ ಕೂಡ ಘೋಷಿಸಿದೆ. ಖುಷ್ಕಿ ಭೂ ಮಾಲೀಕರಿಗೆ ಪ್ರತಿ ಎಕರೆ ವರ್ಷಕ್ಕೆ 30 ಸಾವಿರ, ತರಿ ಭೂಮಿ ಪ್ರತಿ ಎಕರೆ ವರ್ಷಕ್ಕೆ 40 ಸಾವಿರ, ಭಾಗಾಯತ್‌ ಭೂಮಿ ಪ್ರತಿ ಎಕರೆ ವರ್ಷಕ್ಕೆ 50 ಸಾವಿರ ಹಾಗೂ ಭೂರಹಿತ ಕುಟುಂಬಗಳಿಗೆ ವಾರ್ಷಿಕ 25 ಸಾವಿರ ಪರಿಹಾರ ನೀಡಲು ನಿರ್ಧರಿಸಿದೆ. ಜತೆಗೆ ರೈತರಿಗೆ ತಮ್ಮ ಜಮೀನಿನಲ್ಲೇ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಉದ್ದೇಶಿಸಿದೆ.

ಟೌನ್‌ಶಿಪ್‌ ಯೋಜನೆಗೆ ಹೇಗಿದೆ ಸಂಪರ್ಕ ವ್ಯವಸ್ಥೆ?

ರಾಜ್ಯದಲ್ಲಿ ಬಹುತೇಕ ಟೌನ್‌ಶಿಪ್‌ ಯೋಜನೆಗಳು ಸಂಪರ್ಕ ವ್ಯವಸ್ಥೆಯ ಕೊರತೆಯಿಂದ ವಿಫಲವಾಗಿವೆ. ಆದರೆ, ಬಿಡದಿಯಲ್ಲಿ ಸ್ಥಾಪನೆಗೆ ಉದ್ದೇಶಿಸಿರುವ ಟೌನ್‌ಶಿಪ್ ಯೋಜನೆಯಲ್ಲಿ 300 ಮೀ. ಅಗಲದ ಬಿಸಿನೆಸ್ ಕಾರಿಡಾರ್ ಹಾಗೂ ಎಲ್ಲಾ ದಿಕ್ಕುಗಳಲ್ಲಿ 90 ಮೀ. ಅಗಲದ ರಸ್ತೆ ನಿರ್ಮಿಸಲಾಗುವುದು. ಪ್ರತಿ ರಸ್ತೆಯನ್ನು ಶೂನ್ಯ ಸಂಚಾರ ದಟ್ಟಣೆ ಪರಿಕಲ್ಪನೆಯಲ್ಲಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. 

ಟೌನ್‌ಶಿಪ್‌ ಯೋಜನೆಯು ಉಪನಗರ ವರ್ತುಲ ರಸ್ತೆ(STRR)ಯಿಂದ 9 ಕಿ.ಮೀ, ನೈಸ್ ರಸ್ತೆಯಿಂದ 11 ಕಿ.ಮೀ, ಮೈಸೂರು–ಬೆಂಗಳೂರು ಹೆದ್ದಾರಿಯಿಂದ 5 ಕಿ.ಮೀ ಹಾಗೂ ಬೆಂಗಳೂರು–ದಿಂಡಿಗಲ್ ಹೆದ್ದಾರಿಯಿಂದ 2.2 ಕಿ.ಮೀ ಅಂತರದಲ್ಲಿ ನೆಲೆಯಾಗಿದೆ. ಹಾಗಾಗಿ ಬಿಡದಿ ಟೌನ್‌ಶಿಪ್‌ ಸುಸಜ್ಜಿತ ಹಾಗೂ ಬೆಂಗಳೂರಿಗೆ ಪರ್ಯಾಯವಾದ ನಗರವಾಗಿ ಬೆಳೆಯಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಬೈರಮಂಗಲ ಕೆರೆಯನ್ನು 750 ರಿಂದ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಿ, ಮನರಂಜನಾ ಸೌಲಭ್ಯಗಳನ್ನು ಒದಗಿಸಲು  ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಸಹಭಾಗಿತ್ವದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲಿವೆ.  

ರೈತರ ವಿರೋಧ ಏಕೆ?

ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಹಾಗೂ ಬೈರಮಂಗಲ ಪಂಚಾಯ್ತಿ ವ್ಯಾಪ್ತಿಯ 9,650 ಎಕರೆ ವ್ಯಾಪ್ತಿಯಲ್ಲಿ ಟೌನ್‌ಶಿಪ್‌ ನಿರ್ಮಿಸಲು ಸರ್ಕಾರ ಮುಂದಾಗಿದೆ. ಆದರೆ, ಎರಡೂ ಪಂಚಾಯ್ತಿ ವ್ಯಾಪ್ತಿಯ 26 ಗ್ರಾಮಗಳಲ್ಲಿ ಶೇ 80ಕ್ಕೂ ಹೆಚ್ಚು ರೈತರು ಫಲವತ್ತಾದ ಕೃಷಿ ಭೂಮಿ ಒಳಗೊಂಡಿದ್ದು, ಅಡಿಕೆ, ತೆಂಗು, ರೇಷ್ಮೆ ಸೇರಿದಂತೆ ತರಕಾರಿ ಬೆಳೆಯುತ್ತಾರೆ. ಇಂತಹ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಂಡರೆ ಎಲ್ಲಿ ಹೋಗಬೇಕು ಎಂಬುದು ರೈತರ ಪ್ರಶ್ನೆಯಾಗಿದೆ. ಈಗಾಗಲೇ ಭೈರಮಂಗಲದಲ್ಲಿ 21 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಕೂಡ ನಡೆಯುತ್ತಿದೆ. ಜೆಡಿಎಸ್‌ ಹಾಗೂ ಬಿಜೆಪಿ ಪ್ರತಿಭಟನೆ ಬೆಂಬಲಿಸಿದ್ದು, ಡಿಕೆಶಿ ವಿರುದ್ಧ ಹೋರಾಟ ತೀವ್ರಗೊಳಿಸಿವೆ. 

"ಬಿಡದಿ ಹೋಬಳಿಯಲ್ಲಿ ಈಗಾಗಲೇ ಏಳು ಬಾರಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ನೈಸ್, ಟೊಯೊಟಾ ಕಿರ್ಲೋಸ್ಕರ್‌ ಹಂತ ೧ ಹಾಗೂ ೨, ಬಾಷ್‌ ಕಂಪನಿಗಳು ಭೂಮಿ ಪಡೆದಿವೆ. ಈಗ ಅರೆ ಮಲೆನಾಡಿನಂತಿರುವ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ" ಎಂದು ಚಿಕ್ಕಬೈರಮಂಗಲದ ಗ್ರಾಮಸ್ಥ ನಾಗರಾಜು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"26 ಗ್ರಾಮಗಳಲ್ಲಿ ಸುಮಾರು 5 ಲಕ್ಷ ಜಾನುವಾರುಗಳಿವೆ. ಪ್ರತಿನಿತ್ಯ 6 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಅಡಿಕೆ, ತೆಂಗು, ತರಕಾರಿ ಬೆಳೆಗಳಿಂದ ನಳನಳಿಸುತ್ತಿರುವ ಈ ಪ್ರದೇಶದಲ್ಲಿ ಟೌನ್‌ ಶಿಪ್‌ ಮಾಡಬೇಕೆಂದು ನಾವೇನು ಕೇಳಿಲ್ಲ, ಸರ್ಕಾರ ಏಕಾಏಕಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ" ಎಂದು ಆರೋಪಿಸಿದರು.

ಮತ್ತೊಬ್ಬ ರೈತ ರಾಜು ಮಾತನಾಡಿ, "ನಾವು ಹಸಿರು ಶಾಲು ಹಿಡಿದು ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಪಕ್ಷಗಳು ನಮ್ಮ ಪ್ರತಿಭಟನೆ ಬೆಂಬಲಿಸಿವೆ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡದೇ ಹೋದರೆ ಕಾನೂನು ಹೋರಾಟ ನಡೆಸಲಾಗುವುದು. ಆದರೂ ಸರ್ಕಾರ ಮಣಿಯದಿದ್ದರೆ ಸಾಮಾಹಿಕವಾಗಿ ವಿಷ ಸೇವಿಸುತ್ತೇವೆ. ನಮ್ಮ ಸಮಾಧಿಗಳ ಮೇಲೆ ಟೌನ್‌ಶಿಪ್‌ ನಿರ್ಮಾಣ ಮಾಡಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಹೇಳುವುದೇನು?

ಬಿಡದಿ ಟೌನ್‌ಶಿಪ್‌ ಯೋಜನೆ ಆರಂಭಿಸಲು 2006-07 ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಚಾಲನೆ ನೀಡಿದ್ದರು. ಭೂಸ್ವಾಧೀನಕ್ಕೆ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು. ಕಾಲಾನಂತರ ಯೋಜನೆ ಸ್ಥಗಿತಗೊಂಡಿತ್ತು. ಈಗ ಆ ಯೋಜನೆಯನ್ನು ನಾವು ಮುಂದುವರಿಸುತ್ತಿದ್ದೇವೆ. ಟೌನ್‌ಶಿಪ್‌ ಯೋಜನೆಗೆ ಕುಮಾರಸ್ವಾಮಿ ಹಾಗೂ ದೇವೇಗೌಡರೇ ಪಿತಾಮಹರು ಎಂದು ಡಿ.ಕೆ. ಶಿವಕುಮಾರ್‌ ಕಿಡಿಕಾರಿದ್ದರು. 

ಈಗಾಗಲೇ ಅಧಿಸೂಚನೆಗೆ ಒಳಪಟ್ಟಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಡಿನೋಟಿಫೈ ಮಾಡುವುದಿಲ್ಲ, ಒಂದು ವೇಳೆ ಡಿನೋಟಿಫೈ ಮಾಡಿದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಂತೆ ನಾನು ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ನಾನು ಸಿದ್ಧನಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದರು. 

ಭೂಸ್ವಾಧೀನಕ್ಕೆ ಜೆಡಿಎಸ್‌ ತೀವ್ರ ವಿರೋಧ

ಟೌನ್‌ಶಿಪ್‌ ನಿರ್ಮಾಣಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಕೂಡ ಪತ್ರ ಬರೆದು ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ತಿರುಗೇಟು ನೀಡಿದ್ದ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವಧಿಯಲ್ಲೇ ಟೌನ್‌ಶಿಪ್‌ ಆರಂಭವಾಗಿದೆ. ನಾವೇನು ಮಾಡಿದ್ದಲ್ಲ ಎಂದು ಹೇಳಿದ್ದರು. ಅಂದಿನಿಂದ ಈ ವಿಚಾರ ಡಿಕೆಶಿ-ದೇವೇಗೌಡರ ಕುಟುಂಬದ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಕಂಚುಗಾರನಹಳ್ಳಿ ಹಾಗೂ ಭೈರಮಂಗಲ ಗ್ರಾಮಕ್ಕೆ ಭೇಟಿ ನೀಡಿದ್ದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರು ಕಳೆದ ೧೨೫೦ ದಿನಗಳಿಂದ ಹೋರಾಟ ನಡೆಸಿ, ಗೆಲುವು ಕಂಡಿದ್ದಾರೆ. ಅದೇ ರೀತಿ ಬಿಡದಿಯಲ್ಲೂ ರೈತರ ಪ್ರತಿಭಟನೆ ಸಾಗಬೇಕು. ಯೋಜನೆ ಕೈ ಬಿಡುವವರೆಗೂ ಸರ್ಕಾರದ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

ರಾಜ್ಯ ಸರ್ಕಾರ ಮೊದಲು ಕೆಐಎಡಿಬಿಯ 900 ಎಕರೆ ಪ್ರದೇಶದಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸಿ, ವಿಶ್ವಾಸ ಮೂಡಿಸಲಿ. ಯೋಜನೆಗೆ ಪರಿಸರ ಇಲಾಖೆಯಿಂದ ಯಾವುದೇ ಒಪ್ಪಿಗೆ ಪಡೆದಿಲ್ಲ. ಕನಿಷ್ಠ ರೈತರೊಂದಿಗೆ ಸಭೆ ನಡೆಸಿಲ್ಲ. ತರಾತುರಿಯಲ್ಲಿ ಟೌನ್ ಶಿಪ್ ಯೋಜನೆ ಜಾರಿ ಹಿಂದಿನ ಉದ್ದೇಶವೇನು ಎಂದು ನಿಖಿಲ್ ಪ್ರಶ್ನಿಸಿದ್ದರು.

ಡಿಕೆಶಿಗೆ ಪ್ರತಿಷ್ಠೆಯಾದ ಟೌನ್‌ಶಿಪ್‌ ನಿರ್ಮಾಣ

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವಲ್ಲಿ ಯಶಸ್ವಿಯಾದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬಿಡದಿ ಟೌನ್‌ಶಿಪ್‌ ಯೋಜನೆ ಅನುಷ್ಠಾನ ಪ್ರತಿಷ್ಠೆಯ ವಿಷಯವಾಗಿದೆ. ಟೌನ್‌ಶಿಪ್‌ ಮೂಲಕ ರಾಮನಗರ ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತರುವುದು ಡಿಕೆಶಿ ಮಹದಾಸೆಯಾಗಿದೆ. ಇದರ ಪೂರ್ವಾಪರದ ಮಾಹಿತಿ ಇದ್ದುದರಿಂದಲೇ ಯೋಜನೆ ಘೋಷಿಸುವಾಗ ಡಿ.ಕೆ.ಶಿವಕುಮಾರ್ ಅವರು, ಯಾರೂ ಕೂಡ ಭೂಮಿ ಮಾರಾಟ ಮಾಡಬೇಡಿ. ನಾನು ನಿಮಗೆ ನೇರವಾಗಿ ಹಣ ನೀಡುವುದಿಲ್ಲ. ಆದರೆ, ಆಸ್ತಿ, ಭೂಮಿ ಬೆಲೆ ಏರಿಕೆಯಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.

2031ಕ್ಕೆ ಟೌನ್‌ಶಿಪ್‌ ನಿರ್ಮಾಣ ಪೂರ್ಣ

ಬೆಂಗಳೂರು ನಗರದ ವಿಸ್ತರಣೆಯ ಭಾಗವಾಗಿ 2031ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಬಿಎಂಆರ್‌ಡಿಎ ಈ ಯೋಜನೆಯನ್ನು ರೂಪಿಸಿದೆ.

2005ರಲ್ಲೇ ಬಿಡದಿ ಟೌನ್‌ಶಿಪ್‌ ಯೋಜನೆಯ ರೂಪುರೇಷೆ ರೂಪಿಸಲಾಗಿತ್ತು. 2007ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಟೌನ್‌ಶಿಪ್‌ ನಿರ್ಮಿಸಲು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಸರಿಯಾದ ನೀತಿ ರೂಪಿಸಲು ಸಾಧ್ಯವಾಗದ ಕಾರಣ ಯೋಜನೆ ವಿಫಲಗೊಂಡಿತ್ತು. ಹಾಗಾಗಿ ಇದೇ ಯೋಜನೆಯನ್ನು ಮುಂದಿನ ಆರು ವರ್ಷಗಳಲ್ಲಿ ಮುಗಿಸಲು ತೀರ್ಮಾನಿಸಿ ಕಾರ್ಯಪ್ರವೃತ್ತವಾಗಿದೆ.

ಡಿಎಲ್ಎಫ್ ಹಿಂದೆ ಸರಿಯಲು ಕಾರಣವೇನು?

ಬಿಡದಿ ಟೌನ್‌ಶಿಪ್‌ ಯೋಜನೆ ಸಂಬಂಧ 2007 ರಲ್ಲಿ ಜಾಗತಿಕ ಟೆಂಡರ್‌ನಲ್ಲಿ ಡಿಎಲ್‌ಎಫ್‌ ಗುತ್ತಿಗೆ ಪಡೆದಿತ್ತು. ಸುಮಾರು 60 ಸಾವಿರ ಕೋಟಿ ವೆಚ್ಚದ ಯೋಜನೆ ಅನುಷ್ಠಾನಕ್ಕೆ 400 ಕೋಟಿ ಠೇವಣಿ ಇರಿಸಿತ್ತು. ಆದರೆ, ಕುಮಾರಸ್ವಾಮಿ ಅಧಿಕಾರದಿಂದ ಕೆಳಗಿಳಿಯುತ್ತಿದ್ದಂತೆ ಬಿಜೆಪಿ ಸರ್ಕಾರದಲ್ಲಿ ಯೋಜನೆ ನನೆಗುದಿಗೆ ಬಿದ್ದಿತು. ಆಗ ಡಿಎಲ್‌ಎಫ್‌ ಕಂಪನಿಯು ಆರ್ಥಿಕ ಕುಸಿತದ ಕಾರಣ ನೀಡಿ ಯೋಜನೆಯಿಂದ ಹಿಂದೆ ಸರಿಯಿತು. ಠೇವಣಿ ಹಣವನ್ನೂ ಹಿಂಪಡೆದಿತ್ತು.

ಯೋಜನೆಯಿಂದ ಹಿಂದೆ ಸರಿಯಲು ಡಿಎಲ್‌ಎಫ್‌ ಕಂಪನಿಯು ಆರ್ಥಿಕ ಕುಸಿತದ ಕಾರಣ ನೀಡಿದರೂ ಒಳಗಿನ ಅಸಲಿ ಕಾರಣವೇ ಬೇರೆ ಇತ್ತು. ಅಂದಿನ ಬಿಜೆಪಿ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. 9,178 ಎಕರೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದೊಂದಿಗೆ ರಿಯಾಯಿತಿ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿದ್ದರೂ ಸರ್ಕಾರ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಆಗ ನೆಪಮಾತ್ರಕ್ಕೆ ಆರ್ಥಿಕ ಕುಸಿತದ ಕಾರಣ ನೀಡಿ ಹಿಂದೆ ಸರಿಯಿತು ಎನ್ನಲಾಗಿದೆ.

Tags:    

Similar News