ಅಮೆರಿಕನ್ನರಿಗೆ ವಂಚನೆ: ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಮೇಲೆ ಸೈಬರ್ ಪೊಲೀಸರ ದಾಳಿ, 21 ಮಂದಿ ಬಂಧನ
ಸೈಬರ್ ಕಮಾಂಡ್ ಯೂನಿಟ್‌ನ ಡಿಜಿಪಿ ಡಾ. ಪ್ರಣಬ್ ಮೊಹಾಂತಿ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಸಿ. ಬಾಲಕೃಷ್ಣ ಮತ್ತು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ಕೆ. ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾವು 'ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್' ಸಿಬ್ಬಂದಿ ಎಂದು ನಂಬಿಸಿ, ಅಮೆರಿಕದ ಪ್ರಜೆಗಳಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಕರ್ನಾಟಕ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ. ವೈಟ್‌ಫೀಲ್ಡ್‌ನ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 'ಮಸ್ಕ್ ಕಮ್ಯುನಿಕೇಷನ್ಸ್' ಎಂಬ ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿದ ಪೊಲೀಸರು, 21 ಉದ್ಯೋಗಿಗಳನ್ನು ಬಂಧಿಸಿದ್ದಾರೆ.
ಸೈಬರ್ ಕಮಾಂಡ್ ಯೂನಿಟ್‌ಗೆ ಲಭಿಸಿದ ಖಚಿತ ಮಾಹಿತಿಯ ಆಧಾರದ ಮೇಲೆ, ಈ ವಂಚಕ ಜಾಲದ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 66, 66(ಸಿ) ಮತ್ತು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ (Cr. No. 669/2025) ದಾಖಲಿಸಲಾಗಿತ್ತು. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದ ನಂತರ, ವಿಶೇಷ ಸೈಬರ್ ಸೆಲ್‌ನ ಎಸ್‌ಪಿ ಸವಿತಾ ಶ್ರೀನಿವಾಸ್ ಅವರ ನೇತೃತ್ವದಲ್ಲಿ, ನವೆಂಬರ್ 14ರ ರಾತ್ರಿ 9 ಗಂಟೆಗೆ ದಾಳಿ ನಡೆಸಲಾಯಿತು.
ರಾತ್ರಿಯಿಡೀ ನಡೆದ ಕಾರ್ಯಾಚರಣೆ
ಸೈಬರ್ ಕಮಾಂಡ್ ಯೂನಿಟ್‌ನ ಡಿಜಿಪಿ ಡಾ. ಪ್ರಣಬ್ ಮೊಹಾಂತಿ ಅವರ ಮಾರ್ಗದರ್ಶನದಲ್ಲಿ, ಎಸಿಪಿ ಸಿ. ಬಾಲಕೃಷ್ಣ ಮತ್ತು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಯ ಇನ್ಸ್‌ಪೆಕ್ಟರ್ ಕೆ. ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವೈಟ್‌ಫೀಲ್ಡ್ ಮುಖ್ಯರಸ್ತೆಯ ವರ್ತೂರು ಕೋಡಿ ಬಳಿಯಿರುವ ಸಿಗ್ಮಾ ಟೆಕ್ ಪಾರ್ಕ್‌ನ ಡೆಲ್ಟಾ ಬಿಲ್ಡಿಂಗ್‌ನ 6ನೇ ಮಹಡಿಯಲ್ಲಿ ಈ ನಕಲಿ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಸುಮಾರು 4,500 ಚದರ ಅಡಿ ವಿಸ್ತೀರ್ಣದ ಈ ಕಚೇರಿಯನ್ನು ಇದೇ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆರಂಭಿಸಲಾಗಿತ್ತು.
21 ಉದ್ಯೋಗಿಗಳ ಬಂಧನ, ಕಂಪ್ಯೂಟರ್‌ಗಳು ವಶಕ್ಕೆ
ದಾಳಿಯ ವೇಳೆ, ಅಮೆರಿಕನ್ನರಿಗೆ ವಂಚಿಸುವ ಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದ 21 ಉದ್ಯೋಗಿಗಳನ್ನು ಬಂಧಿಸಲಾಯಿತು. ಕೃತ್ಯಕ್ಕೆ ಬಳಸಲಾಗುತ್ತಿದ್ದ ಹಲವಾರು ಕಂಪ್ಯೂಟರ್‌ಗಳು, ಡಿಜಿಟಲ್ ಸಾಧನಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸೈಬರ್ ಕಮಾಂಡ್ ಯೂನಿಟ್ ತಿಳಿಸಿದೆ.