ಕಲಾಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕನವರ ಅಂತ್ಯ ಸಂಸ್ಕಾರ, ಕುಶಾಲು ತೋಪು ಸಿಡಿಸಿ ವೃಕ್ಷಮಾತೆಗೆ ನಮನ
ಸಾಲುಮರದ ತಿಮ್ಮಕ್ಕ ರಸ್ತೆಯ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಅಪ್ರತಿಮ ಪರಿಸರವಾದಿ. ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದ್ದರ ಹಿನ್ನೆಲೆ ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.
ಸಾಲುಮರದ ತಿಮ್ಮಕ್ಕನವರ ಪಾರ್ಥಿವ ಶರೀರಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಂತಿಮ ನಮನ ಸಲ್ಲಿಸಿದರು.
ಸಾವಿರಾರು ಸಸಿಗಳನ್ನು ನೆಟ್ಟು, ಮಕ್ಕಳಂತೆ ಪೋಷಿಸಿ, ಜಗತ್ತಿಗೆ ಪರಿಸರ ಪ್ರೇಮದ ಪಾಠ ಹೇಳಿದ ಪದ್ಮಶ್ರೀ ಪುರಸ್ಕೃತೆ, 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕ (114) ಅವರು ಶನಿವಾರ ಪಂಚಭೂತಗಳಲ್ಲಿ ಲೀನವಾದರು. ಬೆಂಗಳೂರಿನ ಜ್ಞಾನಭಾರತಿ ಬಳಿಯ ಕಲಾಗ್ರಾಮ ಆವರಣದಲ್ಲಿ, ನೂರಾರು ಅಭಿಮಾನಿಗಳು, ಗಣ್ಯರು ಮತ್ತು ಕುಟುಂಬಸ್ಥರ ಅಶ್ರುತರ್ಪಣದ ನಡುವೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು.
ಶುಕ್ರವಾರ (ನ. 14) ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದ ತಿಮ್ಮಕ್ಕನವರ ಪಾರ್ಥಿವ ಶರೀರವನ್ನು, ಶನಿವಾರ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು, ಕಲಾವಿದರು ಮತ್ತು ಸಾವಿರಾರು ಸಾರ್ವಜನಿಕರು ಆಗಮಿಸಿ, ಹಸಿರು ತಾಯಿಗೆ ಅಂತಿಮ ನಮನ ಸಲ್ಲಿಸಿದರು.
ಸ್ವಗ್ರಾಮದಿಂದ ರಾಜಧಾನಿಯವರೆಗೆ ಅಂತಿಮ ಯಾತ್ರೆ
ಅಂತಿಮ ದರ್ಶನಕ್ಕೂ ಮುನ್ನ, ಅವರ ಪಾರ್ಥಿವ ಶರೀರವನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮ ಹಾಗೂ ಹಾಸನ ಜಿಲ್ಲೆಯ ಬೇಲೂರಿಗೆ ಕೊಂಡೊಯ್ದು, ಅಲ್ಲಿನ ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ, ಬೆಳಿಗ್ಗೆ 8 ಗಂಟೆಯ ವೇಳೆಗೆ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ತರಲಾಯಿತು.
ಕಲಾಗ್ರಾಮದಲ್ಲಿ ಸರ್ಕಾರಿ ಗೌರವ
ಮಧ್ಯಾಹ್ನದ ಬಳಿಕ, ಮಲ್ಲತಹಳ್ಳಿಯಲ್ಲಿರುವ ಕಲಾಗ್ರಾಮಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಅಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸರ್ಕಾರದ ಪರವಾಗಿ ಅಂತಿಮ ಗೌರವ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ 'ವೃಕ್ಷಮಾತೆ'ಗೆ ಗೌರವ ವಂದನೆ ಸಲ್ಲಿಸಿದರು. ನಂತರ, ಅವರ ಕುಟುಂಬಸ್ಥರು ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ, ಅಂತ್ಯಕ್ರಿಯೆ ನೆರವೇರಿಸಿದರು.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದ ಅನಕ್ಷರಸ್ಥೆ ತಿಮ್ಮಕ್ಕ, ಮಕ್ಕಳಿಲ್ಲದ ಕೊರಗನ್ನು ಮರೆಯಲು ಸಸಿಗಳನ್ನು ನೆಡುವುದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ರಸ್ತೆ ಬದಿಗಳಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು, ಅವುಗಳನ್ನೇ ಮಕ್ಕಳಂತೆ ಪೋಷಿಸಿ, ಜಗತ್ತಿಗೆ ಮಾದರಿಯಾದರು. ಅವರ ಈ ನಿಸ್ವಾರ್ಥ ಪರಿಸರ ಸೇವೆಗೆ ಪದ್ಮಶ್ರೀ, ನಾಡೋಜ, ರಾಷ್ಟ್ರೀಯ ಪೌರ ಪ್ರಶಸ್ತಿ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ನಾಡಿನ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ