ಪಣಂಬೂರು: ಸಿಗ್ನಲ್‌ನಲ್ಲಿ ನಿಂತಿದ್ದ ಆಟೋಗೆ ಟ್ಯಾಂಕರ್ ಡಿಕ್ಕಿ; ಸರಣಿ ಅಪಘಾತದಲ್ಲಿ ಮೂವರ ದುರ್ಮರಣ

ಪಣಂಬೂರು ಸಿಗ್ನಲ್‌ನಲ್ಲಿ ಕೆಂಪು ದೀಪ ಬಿದ್ದಿದ್ದರಿಂದ ವಾಹನಗಳು ಸಾಲಾಗಿ ನಿಂತಿದ್ದವು. ಒಂದು ಟ್ಯಾಂಕರ್‌ನ ಹಿಂಭಾಗದಲ್ಲಿ, ಪ್ರಯಾಣಿಕರಿದ್ದ ಆಟೋ ರಿಕ್ಷಾವೊಂದು ನಿಂತಿತ್ತು. ಈ ವೇಳೆ, ವೇಗವಾಗಿ ಬಂದ ಮತ್ತೊಂದು ಟ್ಯಾಂಕರ್, ಆಟೋ ರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.

Update: 2025-11-15 10:59 GMT
Click the Play button to listen to article

ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ನಿಂತಿದ್ದ ಆಟೋ ರಿಕ್ಷಾಕ್ಕೆ ಹಿಂಬದಿಯಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಸಂಭವಿಸಿದೆ.

ಪಣಂಬೂರು ಸಿಗ್ನಲ್‌ನಲ್ಲಿ ಕೆಂಪು ದೀಪ ಬಿದ್ದಿದ್ದರಿಂದ ವಾಹನಗಳು ಸಾಲಾಗಿ ನಿಂತಿದ್ದವು. ಒಂದು ಟ್ಯಾಂಕರ್‌ನ ಹಿಂಭಾಗದಲ್ಲಿ, ಪ್ರಯಾಣಿಕರಿದ್ದ ಆಟೋ ರಿಕ್ಷಾವೊಂದು ನಿಂತಿತ್ತು. ಈ ವೇಳೆ, ವೇಗವಾಗಿ ಬಂದ ಮತ್ತೊಂದು ಟ್ಯಾಂಕರ್, ಆಟೋ ರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಮುಂದಕ್ಕೆ ಚಿಮ್ಮಿ, ತನ್ನ ಮುಂದೆ ನಿಂತಿದ್ದ ಟ್ಯಾಂಕರ್‌ಗೆ ಬಲವಾಗಿ ಅಪ್ಪಳಿಸಿದೆ. ಎರಡು ಬೃಹತ್ ಟ್ಯಾಂಕರ್‌ಗಳ ನಡುವೆ ಸಿಲುಕಿದ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಈ ಭೀಕರ ಅಪಘಾತದಲ್ಲಿ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಮತ್ತು ಸ್ಥಳೀಯರು ಹರಸಾಹಸ ಪಡಬೇಕಾಯಿತು.

ಮೃತದೇಹಗಳನ್ನು ನಗರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

Tags:    

Similar News