ಬಿಗ್‌ಬಾಸ್ ಮಾಜಿ ಸ್ಪರ್ಧಿಗೆ ಲೈಂಗಿಕ ಕಿರುಕುಳ: ರಿಯಲ್ ಎಸ್ಟೇಟ್ ಉದ್ಯಮಿ ಬಂಧನ
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿ ಶ್ರೀಲಂಕಾಗೆ ತೆರಳಲು ಯತ್ನಿಸುತ್ತಿದ್ದ ವೇಳೆ ಶನಿವಾರ ಬೆಳಗಿನ ಜಾವ ಬಂಧಿಸಲಾಗಿದೆ.
ಅರವಿಂದ್ ವೆಂಕಟೇಶ್ ರೆಡ್ಡಿ ಬಂಧನ
ಕನ್ನಡದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ಕಿರುತೆರೆ ನಟಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ ವೆಂಕಟೇಶ ರೆಡ್ಡಿ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
2021ರಲ್ಲಿ ಪರಿಚಯವಾಗಿದ್ದ ನಟಿಗೆ ಬಲವಂತವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ಅರೆಸ್ಟ್
ಆರೋಪಿ ಅರವಿಂದ್ ವೆಂಕಟೇಶ್ ರೆಡ್ಡಿ ಶ್ರೀಲಂಕಾಗೆ ತೆರಳಲು ಯತ್ನಿಸುತ್ತಿದ್ದ ವೇಳೆ ಶನಿವಾರ ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈತನ ಬಂಧನಕ್ಕಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಎಸಿಪಿ ಚಂದನ್ ಮತ್ತು ಸುಬ್ರಹ್ಮಣಿ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ಅರವಿಂದ್ ವೆಂಕಟೇಶ ರೆಡ್ಡಿ ಎವಿಆರ್ ಗ್ರೂಪ್ ಮಾಲೀಕನಾಗಿದ್ದು, ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾನೆ.
ಪರಿಚಯದಿಂದ ಕಿರುಕುಳದವರೆಗೆ
2021ರಲ್ಲಿ ನಟಿ ಮತ್ತು ಉದ್ಯಮಿ ಅರವಿಂದ್ ರೆಡ್ಡಿ ಅವರಿಗೆ ಪರಿಚಯವಾಗಿತ್ತು. ಶ್ರೀಲಂಕಾದಲ್ಲಿ ನಡೆದ 'ಲಾರ್ಸ್ ಕ್ರಿಕೆಟ್ ಕಪ್' ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿಯನ್ನು ಅತಿಥಿಯಾಗಿ ಆಹ್ವಾನಿಸಿದ್ದಾಗ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆರಂಭದಲ್ಲಿ ಕಾಳಜಿ ಮತ್ತು ಪ್ರೀತಿ ತೋರಿಸುತ್ತಿದ್ದ ಅರವಿಂದ್ ರೆಡ್ಡಿ, 2022ರ ಆಗಸ್ಟ್‌ನಲ್ಲಿ ನಟಿಯ ಜೊತೆ ಸಂಪರ್ಕ ಕಡಿತಗೊಳಿಸಿದ್ದ.
ಆನಂತರ, ಅರವಿಂದ್ ಅವರ ಮಾನಸಿಕ ಸ್ಥಿತಿ ಮತ್ತು ಕುಡಿತದ ಚಟದ ಬಗ್ಗೆ ಅರಿತ ನಟಿ ಆತನಿಂದ ದೂರವಿದ್ದರು. ಆದರೆ, ಉದ್ಯಮಿ ನಟಿಯ ಹಿಂದೆ ಬಿದ್ದು ಕಾಡಲು ಶುರು ಮಾಡಿದ್ದ. ನಟಿಯ ಲೋಕೇಷನ್ ಟ್ರ್ಯಾಕ್ ಮಾಡುವುದು, ಇನ್ಸ್ಟಾಗ್ರಾಮ್‌ನಲ್ಲಿ ಅವರ ಮಾರ್ಫ್ ಮಾಡಿದ ಫೋಟೋಗಳನ್ನು ಪೋಸ್ಟ್ ಮಾಡುವುದು, ಮತ್ತು ಮನೆ ಬಳಿ ಹುಡುಗರನ್ನು ಕಳುಹಿಸಿ ನಟಿಯ ತಂದೆ-ತಾಯಿಗೆ ಬೆದರಿಕೆ ಹಾಕುವುದು ಮುಂತಾದ ಕೃತ್ಯ ಎಸಗಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ನಟಿ
2024ರ ಏಪ್ರಿಲ್‌ನಲ್ಲಿ ಕಿರುಕುಳ ಹೆಚ್ಚಾದಾಗ, ಅರವಿಂದ್ ಕರೆ ಮಾಡಿ "ಮನೆಗೆ ಬಾ, ನಾಳೆಯೇ ನಿನ್ನನ್ನ ಮದುವೆಯಾಗ್ತೀನಿ" ಎಂದು ಬೆದರಿಸಿದ್ದ ಎನ್ನಲಾಗಿದೆ. ಆತನ ದೈಹಿಕ ಮತ್ತು ಮಾನಸಿಕ ಕಿರುಕುಳ ತಾಳಲಾರದೆ ನಟಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಒಂದು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.
ಜೂನ್ 14, 2024 ರಂದು ನಟಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದರು. ನಂತರ ಅಕ್ಟೋಬರ್ 2025ರಲ್ಲಿ ನಟಿ ವಾಸಿಸುವ ಮನೆ ಮಾಲೀಕನಿಗೆ ಪತ್ರ ಬರೆದು 'ಈಕೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಳೆ' ಎಂದು ಆರೋಪಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಬಂಧಿತ ಅರವಿಂದ್ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವುದರ ಜೊತೆಗೆ 'ಮಹಾರಾಜ ಬಳ್ಳಾರಿ ಟಸ್ಕರ್ಸ್' ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ. ಅಲ್ಲದೆ, ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾ ಕಲಾವಿದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಹಲವು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಿದ್ದ ಮತ್ತು ದುಬೈ, ಶ್ರೀಲಂಕಾ ಟೂರ್ನಮೆಂಟ್‌ಗಳಿಗೆ ಪ್ರಮುಖ ಪ್ರಾಯೋಜಕರಾಗಿದ್ದರು.
ಈ ಕುರಿತು ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಗೋವಿಂದರಾಜನಗರ ಠಾಣೆಗೆ ವರ್ಗಾಯಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.