ಯಾದಗಿರಿ| ಸಮಾಜ ಕಲ್ಯಾಣಾಧಿಕಾರಿ ಮೇಲೆ ದಾಳಿ: ಚಿಕಿತ್ಸೆ ಫಲಿಸದೆ ಸಾವು; ನಾಲ್ವರ ಬಂಧನ

ಅಧಿಕಾರಿಯ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸರು ಯಲ್ಲಪ್ಪ, ಕಾಶಿನಾಥ, ದತ್ತಾತ್ರೇಯ ಮತ್ತು ಜಗದೀಶ್ ಎಂಬ ನಾಲ್ವರು ಆರೋಪಿಗಳನ್ನು ವಿಜಯಪುರದಲ್ಲಿ ಬಂಧಿಸಿದ್ದಾರೆ.

Update: 2025-11-15 13:05 GMT
ಸಮಾಜ ಕಲ್ಯಾಣಾಧಿಕಾರಿ ಮೇಲೆ ದಾಳಿ ಮಾಡಿದ ಆರೋಪಿಗಳು
Click the Play button to listen to article

ಕಿಡಿಗೇಡಿಗಳ ದಾಳಿಯಿಂದ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾದಗಿರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ದ್ವಿತೀಯ ದರ್ಜೆ ಸಹಾಯಕಿ ಶನಿವಾರ ಮೃತಪಟ್ಟಿದ್ದಾರೆ. 

ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸರು ಯಲ್ಲಪ್ಪ, ಕಾಶಿನಾಥ, ದತ್ತಾತ್ರೇಯ ಮತ್ತು ಜಗದೀಶ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳು ಸ್ವಿಫ್ಟ್ ಕಾರಿನಲ್ಲಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಅವರನ್ನು ಸೆರೆ ಹಿಡಿದಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಶಹಾಬಾದ್ ಮೂಲದ ಆರೋಪಿಗಳಾದ ವಿಜಯ್ ಮತ್ತು ಶಂಕರ್ ಯಾದಗಿರಿ ತಾಲೂಕು ಸಮಾಕ ಕಲ್ಯಾಣಾಧಿಕಾರಿ ಅಂಜಲಿ ಹತ್ಯೆಗೆ ಸುಪಾರಿ ನೀಡಿದ್ದ ಸಂಗತಿ ಬೆಳಕಿಗೆ ಬಂದಿದೆ. ಈ ಇಬ್ಬರು ಆರೋಪಿಗಳು ನಾಲ್ಕು ವರ್ಷಗಳ ಹಿಂದೆ ಅಂಜಲಿಯ ಪತಿ ಗಿರೀಶ್ ಅವರನ್ನೂ ಹತ್ಯೆಗೈದಿದ್ದರು ಎನ್ನಲಾಗಿದೆ.

ಗಿರೀಶ್ ಹತ್ಯೆಯ ನಂತರ ಅಂಜಲಿ ಅವರು ಎಸ್ಸಿ\ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆದಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಶಂಕರ್ ಮೇಲೆ ಕೆಲವರು ದಾಳಿ ನಡೆಸಿದ್ದರು. ಇದಕ್ಕೆ ಅಂಜಲಿ ಅವರೇ ಕುಮ್ಮಕ್ಕು ನೀಡಿರಬಹುದೆಂದು ಭಾವಿಸಿ ಆರೋಪಿಗಳಾದ ಶಂಕರ್‌ ಹಾಗೂ ವಿಜಯ್‌ ಪ್ರತೀಕಾರ ತೀರಿಸಿಕೊಳ್ಳಲು ಸುಫಾರಿ ನೀಡಿದ್ದರು ಎನ್ನಲಾಗಿದೆ. 

ಪ್ರಮುಖ ಆರೋಪಿಗಳಾದ ವಿಜಯ್ ಮತ್ತು ಶಂಕರ್ ಪರಾರಿಯಾಗಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸುಫಾರಿ ಪಡೆದಿದ್ದ ನಾಲ್ವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಅಂಜಲಿ ಅವರು ಯಾದಗಿರಿ ಗ್ರೀನ್ ಸಿಟಿ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಕಚೇರಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ, ಗಾಜು ಒಡೆದು ಮಾರಣಾಂತಿಕವಾಗಿ ದಾಳಿ ನಡೆಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಚಾಲಕ ಮೊದಲು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿ, ನಂತರ ಹೈದರಾಬಾದ್‌ ಆಸ್ಪತ್ರೆಗೆ ದಾಖಲು ಮಾಡಿದ್ದರು. ಶನಿವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

Tags:    

Similar News