ಬೆಂಗಳೂರು-ಮುಂಬೈ ಮಧ್ಯೆ ʼಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ʼ ; ʼಉದ್ಯಾನ್‌ʼ ಮೀರಿಸಲಿದೆಯೇ ಹೊಸ ರೈಲು

ಬೆಂಗಳೂರು ಹಾಗೂ ಮುಂಬೈ ಸಂಚರಿಸುವ ʼಉದ್ಯಾನ ಎಕ್ಸ್‌ಪ್ರೆಸ್ʼ ರೈಲನ್ನು ಸೂಪರ್‌ಫಾಸ್ಟ್ ಎಂದು ಕರೆದರೂ 1,153 ಕಿ.ಮೀ ದೂರ ಕ್ರಮಿಸಲು ಬರೋಬ್ಬರಿ 23 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

Update: 2025-09-27 12:58 GMT

ಸಿಲಿಕಾನ್‌ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್‌ ರೈಲು ಆರಂಭಿಸಬೇಕೆಂಬ ದಶಕಗಳ ಕೂಗಿಗೆ ಕೊನೆಗೂ ಕೇಂದ್ರ ರೈಲ್ವೆ ಸಚಿವಾಲಯ ಸ್ಪಂದಿಸಿದೆ.

ಬೆಂಗಳೂರು ಹಾಗೂ ಮುಂಬೈ ಸಂಚರಿಸುವ ʼಉದ್ಯಾನ ಎಕ್ಸ್‌ಪ್ರೆಸ್ʼ ರೈಲನ್ನು ಸೂಪರ್‌ಫಾಸ್ಟ್ ಎಂದು ಕರೆದರೂ 1,153 ಕಿ.ಮೀ ದೂರ ಕ್ರಮಿಸಲು ಬರೋಬ್ಬರಿ 21 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತದೆ. ಹಾಗಾಗಿ ತಾಂತ್ರಿಕವಾಗಿ ʼಉದ್ಯಾನ್‌ ಎಕ್ಸ್‌ಪ್ರೆಸ್‌ʼ ಸೂಪರ್‌ಫಾಸ್ಟ್ ಮಾನದಂಡಕ್ಕೆ ಪೂರಕವಾಗಿಲ್ಲ ಎಂಬ ವಾದವೂ ಇದೆ.

ಇದೀಗ ಹೊಸ ಸೂಪರ್‌ಫಾಸ್ಟ್‌ ರೈಲು ಸೇವೆಯಿಂದ ಪ್ರಯಾಣದ ಅವಧಿ ಕಡಿಮೆಯಾಗುವ ಜತೆಗೆ ಉದ್ಯಮಿಗಳು, ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಜತೆಗೆ ಎರಡು ಮಹಾನಗರಗಳ ಮಧ್ಯೆ ಆರ್ಥಿಕ–ಸಾಮಾಜಿಕ ಬಾಂಧವ್ಯ ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.

"ಬೆಂಗಳೂರು ಮತ್ತು ಮುಂಬೈ ನಗರ ಎರಡೂ ಪ್ರಮುಖ ಆರ್ಥಿಕ ಕೇಂದ್ರಗಳಾಗಿವೆ. ನಿಲ್ದಾಣಗಳ ಸಾಮರ್ಥ್ಯ ವಿಸ್ತರಣೆ ಹಿನ್ನೆಲೆಯಲ್ಲಿ ಸೂಪರ್​​ಫಾಸ್ಟ್​ ರೈಲು ಪ್ರಾರಂಭಿಸಲು ಅವಕಾಶ ದೊರೆತಿದೆ” ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, "ಕಳೆದ ವರ್ಷ 26 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಇದನ್ನು ಗಮನಿಸಿದರೆ ಬೆಂಗಳೂರಿನಿಂದ ಮುಂಬೈಗೆ ಸೂಪರ್‌ ಫಾಸ್ಟ್‌ ರೈಲು ಅಗತ್ಯತೆ ಎಷ್ಟಿದೆ ಎಂಬುದು ತಿಳಿಯುತ್ತದೆ. ಹೊಸ ರೈಲು ಸೇವೆಯು ಕೈಗೆಟುಕುವ ದರದಲ್ಲಿ ವೇಗದ ಪ್ರಯಾಣ ಒದಗಿಸಲಿದೆ. ಆ ಮೂಲಕ ಬಸ್ ಮತ್ತು ವಿಮಾನಗಳಿಗೆ ಪರ್ಯಾಯವಾಗಲಿದೆ" ಎಂದು ಅಭಿಪ್ರಾಯಪಟ್ಟರು.

ʼಉದ್ಯಾನ್‌ ಎಕ್ಸ್‌ಪ್ರೆಸ್ʼ ಏನು, ಎತ್ತ?

ಸದ್ಯ ಬೆಂಗಳೂರಿನಿಂದ ಮುಂಬೈಗೆ ಸಂಚರಿಸುವ ʼಉದ್ಯಾನ್ ಎಕ್ಸ್‌ಪ್ರೆಸ್‌ʼ ಗಂಟೆಗೆ ಸರಾಸರಿ 52 ಕಿ.ಮೀ. ವೇಗದಲ್ಲಿ ಪ್ರಯಾಣಿಸಲಿದೆ. ಒಟ್ಟು 1,153 ಕಿ.ಮೀ. ದೂರ ಕ್ರಮಿಸಲು 21 ಗಂಟೆ 50 ನಿಮಿಷ ಸಮಯ ತೆಗೆದುಕೊಳ್ಳಲಿದೆ. ಮುಂಬೈ ನಡುವೆ ಒಟ್ಟು 30 ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ. ಇದು ಸೂಪರ್‌ಫಾಸ್ಟ್‌ ರೈಲಿನ ವೇಗಕ್ಕೆ ಅರ್ಹವಾಗದಷ್ಟು ಕಡಿಮೆ ವೇಗ ಇರುವುದರಿಂದ ಸೂಪರ್‌ ಫಾಸ್ಟ್‌ ಎಂದು ಪರಿಗಣಿಸಲು ಸಾಧ್ಯವಾಗಿಲ್ಲ. ಪ್ರಸ್ತುತ, 11301 ಸಂಖ್ಯೆಯ ರೈಲು ಮುಂಬೈನಿಂದ ಬೆಂಗಳೂರಿಗೆ ಹೊರಟರೆ, 11302 ಸಂಖ್ಯೆಯ ರೈಲು ಬೆಂಗಳೂರಿನಿಂದ ಮುಂಬೈಗೆ ಬರಲಿದೆ.

ಸಿಕಂದರಾಬಾದ್-ಮೈಸೂರು ರೈಲು ಸೇವೆಗೆ ಬೇಡಿಕೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸೆ.6 ರಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಬೆಂಗಳೂರು, ಕಲಬುರಗಿ ಮತ್ತು ಬೀದರ್ ಮೂಲಕ ಮೈಸೂರು ಮತ್ತು ಸಿಕಂದರಾಬಾದ್ ನಡುವೆ ದೈನಂದಿನ ರೈಲು ಆರಂಭಿಸುವಂತೆ ಮನವಿ ಮಾಡಿದ್ದರು. ಇದೇ ವೇಳೆ ಬೆಂಗಳೂರು ಮತ್ತು ಮುಂಬೈ ನಡುವೆ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಆರಂಭಿಸಲು ಒತ್ತಾಯಿಸಿದ್ದರು.

ಮೈಸೂರು-ಬೆಂಗಳೂರು-ಕಲಬುರಗಿ-ಬೀದರ್-ಸಿಕಂದರಾಬಾದ್ ಸಂಪರ್ಕಿಸುವ ರೈಲು ಸೇವೆಗೆ ತಕ್ಷಣ ಅನುಮೋದನೆ ನೀಡಲು ಅಗತ್ಯ ಕ್ರಮ ಕ್ರಮ ವಹಿಸಲು ನೈರುತ್ಯ ರೈಲ್ವೆ, ಕೇಂದ್ರ ರೈಲ್ವೆ ಮತ್ತು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಮಂತ್ರಾಲಯಕ್ಕೆ ಹೆಚ್ಚು ಉಪಯುಕ್ತ

ಮೈಸೂರು-ಸಿಕಂದರಾಬಾದ್ ದೈನಂದಿನ ರೈಲು ಹಾಗೂ ಬೆಂಗಳೂರು-ಮುಂಬೈ ಸೂಪರ್‌ಫಾಸ್ಟ್‌ ರೈಲು ಸಂಚಾರದಿಂದ ರಾಯಚೂರಿನ ಮಂತ್ರಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಹೆಚ್ಚು ಉಪಯುಕ್ತವಾಗಲಿದೆ.

ಪ್ರಸ್ತುತ, ಮೈಸೂರು ಮತ್ತು ಬೀದರ್ ನಡುವೆ ಯಾವುದೇ ನೇರ ರೈಲು ಸೇವೆ ಇಲ್ಲ. ಕಲಬುರಗಿಯಂತಹ ಇತರ ಪ್ರಮುಖ ಸ್ಥಳಗಳಿಗೆ ಒಂದೇ ರೈಲು ಸಂಪರ್ಕ ಕಲ್ಪಿಸುವುದರಿಂದ ಮಂತ್ರಾಲಯಕ್ಕೆ ಭೇಟಿ ನೀಡುವವರಿಗೂ ಪ್ರಯೋಜನವಾಗಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ.

ಯಾವ ರೈಲು ಮಾದರಿ, ಎಷ್ಟು ವೇಗ?

ಬೆಂಗಳೂರು ಮತ್ತು ಮುಂಬೈ ಮಧ್ಯೆ 17 ರೈಲುಗಳು ಸಂಚರಿಸಿದರೂ ಇವೆಲ್ಲವೂ ʼಎಕ್ಸ್‌ಪ್ರೆಸ್ ಹಾಗೂ ಮೇಲ್ʼ ಆಗಿವೆ. ಸಾಮಾನ್ಯವಾಗಿ ಪ್ಯಾಸೆಂಜರ್‌ ರೈಲು ಸರಾಸರಿ ಗಂಟೆಗೆ 50 ಕಿ.ಮೀ. ವೇಗವಾಗಿ ಸಂಚರಿಸಲಿವೆ. ಎಲ್ಲಾ ನಿಲ್ದಾಣಗಳಲ್ಲೂ ನಿಲುಗಡೆ ಇರುತ್ತದೆ.

ಎಕ್ಸ್‌ಪ್ರೆಸ್/ ಮೇಲ್‌ ರೈಲುಗಳು ಗಂಟೆಗೆ 50-55 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಕೆಲವೇ ನಿಲ್ದಾಣಗಳಲ್ಲಿ ನಿಲುಗಡೆ ವ್ಯವಸ್ಥೆ ಇರಲಿದೆ.

ಸೂಪರ್‌ಫಾಸ್ಟ್‌ ರೈಲುಗಳು ಗಂಟೆಗೆ ಸರಾಸರಿ 55 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಕೆಲವೇ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಇನ್ನು ಪ್ರಯಾಣಿಕರಿಗೆ ಟೆಕೆಟ್ನಲ್ಲಿ ಸೂಪರ್‌ ಫಾಸ್ಟ್‌ ಸರ್ ಚಾರ್ಜ್ ಹಾಕಲಾಗುತ್ತದೆ. ಕರ್ನಾಟಕ ಹಾಗೂ ಉದ್ಯಾನ್ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಕ್ಕೆ ಸೂಪರ್‌ಫಾಸ್ಟ್‌ ಸರ್‌ಚಾರ್ಜ್‌ ಪಡೆಯಲಾಗುತ್ತದೆ.

ಪ್ರೀಮಿಯಂ ಸೂಪರ್‌ಫಾಸ್ಟ್ ರೈಲುಗಳಾದ ರಾಜಧಾನಿ, ಶತಾಬ್ದಿ, ಡುರಾಂಟೊ, ವಂದೇ ಭಾರತ್‌, ಗಾಟಿಮಾನ್ ರೈಲುಗಳು ಪ್ರತಿ ಗಂಟೆಗೆ 65-70 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಇವುಗಳಲ್ಲಿ ಕೆಲ ರೈಲುಗಳು 100-130 ಕಿ.ಮೀ ವೇಗದಲ್ಲೂ ಸಂಚರಿಸಲಿವೆ. ಅತಿ ಕಡಿಮೆ ಸಂಖ್ಯೆಯ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ವ್ಯವಸ್ಥೆ ಇರಲಿದೆ.

ಹೊಸ ರೈಲಿನಿಂದ ಯಾವ ನಗರಗಳಿಗೆ ಲಾಭ?

ಬೆಂಗಳೂರಿನಿಂದ ಮುಂಬೈಗೆ ಘೋಷಣೆಯಾಗಿರುವ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ಮುಂಬೈನಿಂದ ಪ್ರಯಾಣ ಆರಂಭಿಸಿ ಕಲಬುರಗಿ, ಶಹಾಬಾದ್‌, ವಾಡಿ ಜಂಕ್ಷನ್, ನಲ್ವಾರ್‌, ಯಾದಗಿರಿ, ಸೈದಾಪುರ, ಕೃಷ್ಣಾ, ರಾಯಚೂರು ಜಂಕ್ಷನ್‌, ಮಂತ್ರಾಲಯ ರಸ್ತೆ, ಹಿಂದೂಪುರ, ಗೌರಿಬಿದನೂರು, ದೊಡ್ಡಬಳ್ಳಾಪುರ, ಯಲಹಂಕ ಜಂಕ್ಷನ್‌, ಬೆಂಗಳೂರು ಉತ್ತರ, ಬೆಂಗಳೂರು ಕಂಟೋನ್ಮೆಂಟ್, ಬೆಂಗಳೂರು ಸಿಟಿ ರೈಲು ನಿಲ್ದಾಣ ತಲುಪಲಿದೆ. ಈ ನಿಲ್ದಾಣಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

Tags:    

Similar News