ಅನಧಿಕೃತ 'ಮೆಡಿಕಲ್ ಸ್ಪಾ'ಗಳ ವಿರುದ್ಧ ಸಮರ: ನೋಂದಣಿ ಕಡ್ಡಾಯ, ಉಲ್ಲಂಘಿಸಿದರೆ ಕಠಿಣ ಕ್ರಮ
ಇನ್ನು ಮುಂದೆ ಇಂತಹ ಎಲ್ಲಾ ಕೇಂದ್ರಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ ಅನ್ವಯ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್
ರಾಜ್ಯಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ 'ಮೆಡಿಕಲ್ ಸ್ಪಾ' (Medical Spa) ಮತ್ತು ಸೌಂದರ್ಯವರ್ಧಕ ಕೇಂದ್ರಗಳಿಗೆ ಲಗಾಮು ಹಾಕಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸೌಂದರ್ಯ ವರ್ಧನೆಯ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಹಾಗೂ ಹಣ ಮಾಡುವುದನ್ನೇ ಗುರಿಯಾಗಿಸಿಕೊಂಡಿರುವ ಇಂತಹ ಕೇಂದ್ರಗಳ ವಿರುದ್ಧ ಸಾರ್ವಜನಿಕರಿಂದ ಮತ್ತು ಮಾಧ್ಯಮಗಳಿಂದ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇನ್ನು ಮುಂದೆ ಇಂತಹ ಎಲ್ಲಾ ಕೇಂದ್ರಗಳು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ (KPME Act, 2007) ಅನ್ವಯ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಯಾವೆಲ್ಲಾ ಸೇವೆಗಳು ವ್ಯಾಪ್ತಿಗೆ?
ಸರ್ಕಾರದ ಹೊಸ ಆದೇಶದನ್ವಯ, ಬೊಟಿಕ್ಸ್ (Botox), ಡರ್ಮಲ್ ಫಿಲ್ಲರ್ಸ್, ಲೇಸರ್ ಸ್ಕಿನ್ ಚಿಕಿತ್ಸೆಗಳು, ಕೂದಲು ಕಸಿ (Hair Transplant), ಲಿಪೊಸೆಕ್ಷನ್ (Liposuction), IV ಹೈಡ್ರೇಷನ್ ಥೆರಪಿ, ಮತ್ತು ರಾಸಾಯನಿಕ ಪೀಲಿಂಗ್ (Chemical Peels) ಮುಂತಾದ ಕ್ಲಿನಿಕಲ್ ಪ್ರಕ್ರಿಯೆಗಳನ್ನು ನಡೆಸುವ ಯಾವುದೇ ಸಲೂನ್, ಸ್ಪಾ ಅಥವಾ ಕ್ಲಿನಿಕ್ ಇನ್ನು ಮುಂದೆ 'ಖಾಸಗಿ ವೈದ್ಯಕೀಯ ಸಂಸ್ಥೆ' ಎಂದು ಪರಿಗಣಿಸಲ್ಪಡುತ್ತದೆ. ಇಂತಹ ಕೇಂದ್ರಗಳು ಆರೋಗ್ಯ ಇಲಾಖೆಯ ನೇರ ನಿಯಂತ್ರಣಕ್ಕೆ ಒಳಪಡಲಿದ್ದು, ನಿಗದಿತ ಮಾನದಂಡಗಳನ್ನು ಪೂರೈಸದಿದ್ದರೆ ಅವುಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ನಕಲಿ ವೈದ್ಯರ ಹಾವಳಿಗೆ ಕಡಿವಾಣ
ಅನೇಕ ಕಡೆ ಅರ್ಹತೆ ಇಲ್ಲದ ಸಿಬ್ಬಂದಿ (Quacks) ಅಪಾಯಕಾರಿ ಕೆಮಿಕಲ್ ಬಳಸಿ ಚಿಕಿತ್ಸೆ ನೀಡುತ್ತಿರುವುದು, ಮತ್ತು ವೃದ್ಧರ ಮೂಳೆ-ಕೀಲು ನೋವುಗಳಿಗೆ ಅವೈಜ್ಞಾನಿಕ ಪರಿಹಾರ ನೀಡುವ ಮೂಲಕ ವಂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಯಲು, ಅಲೋಪತಿ ಅಥವಾ ಆಯುರ್ವೇದ ವೈದ್ಯರು ತಮ್ಮ ಕ್ಷೇತ್ರಕ್ಕೆ ಸಂಬಂಧಪಡದ ಕಾಸ್ಮೆಟಿಕ್ ಚಿಕಿತ್ಸೆ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಶ್ರವಣಶಾಸ್ತ್ರಜ್ಞರು (Audiologists), ಡಯಟಿಷಿಯನ್ಸ್, ಫಿಸಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್ ಸೇರಿದಂತೆ ಎಲ್ಲಾ 'ಅಲೈಡ್ ಹೆಲ್ತ್ ಪ್ರೊಫೆಷನಲ್ಸ್' (Allied Health Professionals) ಕೂಡ ಈ ಕಾಯ್ದೆಯ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದರಿಂದ ವೈದ್ಯಕೀಯ ಕ್ಷೇತ್ರದ ವಂಚಕರ ಹಾವಳಿಗೆ ಬ್ರೇಕ್ ಬೀಳಲಿದೆ.
ಸಾರ್ವಜನಿಕರಿಗೆ ಎಚ್ಚರಿಕೆ
ಜನರ ಆರೋಗ್ಯ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸಾರ್ವಜನಿಕರು ಕೂಡ ಇಂತಹ ಕೇಂದ್ರಗಳಿಗೆ ಭೇಟಿ ನೀಡುವ ಮುನ್ನ ಎಚ್ಚರ ವಹಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ. ಕೊರಿಯನ್ ಸ್ಕಿನ್ ಕೇರ್, ಮಸಾಜ್ ಸೆಂಟರ್ ಅಥವಾ ಥೆರಪಿ ಕೇಂದ್ರಗಳಲ್ಲಿ ಅನುಮಾನಾಸ್ಪದ ಚಿಕಿತ್ಸೆಗಳು ಕಂಡುಬಂದರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವ ಅನಧಿಕೃತ ಕೇಂದ್ರಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.